ಪಂಪ. ಈ ಎರಡಕ್ಷರದ ಹೆಸರು ಕಿವಿಗೆ ಎಷ್ಟೊಂದು ಇಂಪು! ಇದು ಕನ್ನಡದ ಬಹು ದೊಡ್ಡ ಕವಿಯೊಬ್ಬನ ಹೆಸರು. ಪಂಪ ಇದ್ದದ್ದು ಸಾವಿರ ವರ್ಷಕ್ಕೂ ಹಿಂದೆ. ಈಗಿನ ಆಂದ್ರಪ್ರದೇಶ ಇದೆಯಲ್ಲ, ಅಲ್ಲಿ ಕರೀಂನಗರ ಜಿಲ್ಲೆಯಲ್ಲಿ ವೇಮುಲವಾಡ ಎಂಬ ಊರಿದೆ. ಈ ಊರಿಗೆ ಸಾವಿರ ವರ್ಷಗಳ ಹಿಂದೆ ಲೆಂಬುಳ ಪಾಟಕ ಎಂದು ಕರೆಯುತ್ತಿದ್ದರು. ಲೆಂಬುಳ ಪಾಟಕ ಆಗ ಚಾಳಕ್ಯ ರಾಜ ಅರಿಕೇಸರಿಯ ರಾಜಧಾನಿಯಾಗಿತ್ತು. ಕನ್ನಡದ ಕವಿ ಪಂಪ ಅರಿಕೇಸರಿಯ ಆಸ್ಥಾನದಲ್ಲಿ ಕವಿಯಾಗಿದ್ದ.

ಪಂಪನ ಪೂರ್ವಿಕರು ಇದ್ದದ್ದು ವೆಂಗಮಂಡಲದ ವಂಗಿಪಳು ಎಂಬ ಅಗ್ರಹಾರದಲ್ಲಿ. ವೆಂಗಿ ಮಂಡಲವು ಕೃಷ್ಣಾ ಗೋದಾವರಿಗಳ ನಡುವಣ ನಾಡು. ಪಂಪನ ತಂದೆ ಭೀಮಪಯ್ಯ. ಈತ ತನ್ನ ಮನೆತನದಿಂದ ಬಂದ ವೈದಿಕ ಧರ್ಮವನ್ನು ಬಿಟ್ಟು ಜೈನ ಧರ್ಮವನ್ನು ಒಪ್ಪಿಕೊಂಡವನು. ಪಂಪನ ತಾಯಿ ಧಾರವಾಡದ ಹತ್ತಿರದ ಅಣ್ಣಿಗೇರಿ ಎಂಬ ಊರಿನಲ್ಲಿದ್ದ ಜೋಯಿಸ ಸಿಂಘನ ಮೊಮ್ಮಗಳು. ಆಕೆಯ ಹೆಸರು ಅಬ್ಬಣಬ್ಬೆ. ಪಂಪನ ತಮ್ಮ ಜಿನವಲ್ಲಭ. ಪಂಪ ಕವಿಯಾಗಿ ಬದುಕಿದ್ದು ಲೆಂಬುಳ ಪಾಟಕದಲ್ಲಿ; ರಾಜನಾದ ಅರಿಕೇಸರಿಯ ಆಸ್ಥಾನದಲ್ಲಿ.

ಆದಿಕವಿ

ಪಂಪನನ್ನು ಕನ್ನಡದ ಆದಿಕವಿ ಎಂದು ಕರೆಯುತ್ತಾರೆ. ಆದಿಕವಿ ಎಂದರೆ ಮೊಟ್ಟಮೊದಲು ಕಾವ್ಯ ರಚನೆ ಮಾಡಿದವನು ಎಂದು ಅರ್ಥ. ಹಾಗೆಂದರೆ ಪಂಪನಿಗಿಂತ ಮೊದಲು ಕನ್ನಡದಲ್ಲಿ ಯಾರೂ ಕಾವ್ಯಗಳನ್ನು ಬರದೇ ಇರಲಿಲ್ಲವೆಂದು ಈ ಮಾತಿನ ಅರ್ಥವಲ್ಲ. ಪಂಪನಿಗಿಂತ ಹಿಂದೆ ಅನೇಕ ಕವಿಗಳು ಕನ್ನಡದಲ್ಲಿ ಇದ್ದರು; ಇವರೂ ಅನೇಕ ಕಾವ್ಯಗಳನ್ನು ಬರೆದಿದ್ದರು ಎಂಬ ವಿಷಯ “ಕವಿತರಾಜಮಾರ್ಗ” ಎಂಬ ಗ್ರಂಥದಲ್ಲಿ ಉಲ್ಲೇಖಿತವಾಗಿದೆ. ಆದರೆ ಅವು ಯಾವುವೂ ಸಿಕ್ಕಿಲ್ಲ; ಸಿಕ್ಕಿರುವ ಕಾವ್ಯಗಳಲ್ಲಿ ಪಂಪನು ಬರೆದ “ವಿಕ್ರಮಾರ್ಜುನ ವಿಜಯ” ಮತ್ತು “ಆದಿಪುರಾಣ”ಗಳೇ ಮೊದಲನೆಯವು. ಆದ ಕಾರಣ ಪಂಪನನ್ನು ಕನ್ನಡದ ಆದಿಕವಿ ಎಂದು ಕರೆಯುತ್ತಾರೆ.

ಪಂಪ ತನ್ನ ಎರಡೂ ಕಾವ್ಯಗಳನ್ನು ಕೇವಲ ಆರು ತಿಂಗಳ ಅವಧಿಯಲ್ಲೇ ಮುಗಿಸಿದೆನೆಂದು ಹೇಳಿಕೊಂಡಿದ್ದಾನೆ. ಇಷ್ಟು ದೊಡ್ಡ ಎರಡು ಕೃತಿಗಳನ್ನು ಇಷ್ಟು ಸ್ವಲ್ಪ ಕಾಲದಲ್ಲಿ ಬರೆದು ಮುಗಿಸಬೇಕಾದರೆ, ಅವನ ಕಾವ್ಯನಿರ್ಮಾಣ ಸಾಮರ್ಥ್ಯ ಎಷ್ಟು ಮಹತ್ತಾದದ್ದಿರಬೇಕು!

ಕಾವ್ಯ ಬರೆದದ್ದರಿಂದ ಪ್ರಯೋಜನ ಏನು?”

ಹಿಂದಿನ ಕಾಲದಲ್ಲಿ ಕವಿಗಳು, ವಿದ್ವಾಂಸರು ಸಾಮಾನ್ಯವಾಗಿ ರಾಜರ ಆಸ್ಥಾನದಲ್ಲಿರುತ್ತಿದ್ದರು. ರಾಜರುಗಳು ಹೀಗೆ ಕವಿಗಳಿಗೆ, ವಿದ್ವಾಂಸರಿಗೆ ಆಶ್ರಯ ಕೊಡುವುದರಲ್ಲಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು. ಕವಿಯಾದ ಪಂಪ ಅರಿಕೇಸರಿಯ ಆಸ್ಥಾನವನ್ನು ಸೇರಿದ್ದು ಆಶ್ರಯಕ್ಕಾಗಿ ಮಾತ್ರವಲ್ಲ, ರಾಜನಾದ ಅರಿಕೇಸರಿಯೊಂದಿಗೆ ಅವನಿಗಿದ್ದ ಸ್ನೇಹದಿಂದಲೂ ಎಂದು ಕಾಣುತ್ತದೆ. ಪಂಪ ಸ್ವಭಾವತಃ ಅಭಿಮಾನಿ; ಯಾರನ್ನಾದರೂ ಹೊಗಳಿ, ಮೆಚ್ಚಿಸಿ ಅವರಿವರ ಹಂಗಿನಲ್ಲಿ ಬದುಕುವುದು ಅವನಿಗೆ ಪ್ರಿಯವಲ್ಲದ ಸಂಗತಿ.

ಅವನು ಬರೆದ “ಆದಿಪುರಾಣ” ಎಂಬ ಕಾವ್ಯದ ಮೊದಲಲ್ಲಿ ಹೀಗೆ ಹೇಳಿಕೊಂಡಿದ್ದಾನೆ; “ಕವಿಯಾದವನಿಗೆ ಕಾವ್ಯ ಬರೆದದ್ದರಿಂದ ದೊರೆಯುವ ಪ್ರಯೋಜನ ಏನು?” ಪೂಜೆ, ಕೀರ್ತಿ, ಲಾಭ- ಇಷ್ಟೆ ತಾನೆ?”

ಪೂಜೆ ಎಂದರೆ ಗೌರವ, ಸನ್ಮಾನ ಇತ್ಯಾದಿ. ಕವಿ ಒಂದು ಒಳ್ಳೆಯ ಕಾವ್ಯ ಬರೆದಾಗ ರಾಜರು ಅಂಥ ಕವಿಯನ್ನು ತಮ್ಮ ಆಸ್ಥಾನದಲ್ಲಿ ಎಲ್ಲರ ಎದುರಿಗೂ ಗೌತರವಿಸುತ್ತಿದ್ದರು. ಒಮ್ಮೊಮ್ಮೆ ಕವಿಯ ಕಾವ್ಯವನ್ನು, ಕವಿಯನ್ನೂ ಸಹ ಪಲ್ಲಕ್ಕಿಯಲ್ಲೋ, ಆನೆಯಂಬಾರಿಯಲ್ಲೊ ಕುಳ್ಳಿರಿಸಿ ಉತ್ಸವವನ್ನು ಮಾಡುತ್ತಿದ್ದರು. ಇದು ಕಾವ್ಯ ಬರೆದದ್ದರಂದ ಕವಿಗೆ ದೊರೆಯುತ್ತಿದ್ದ ಪ್ರಯೋಜನಗಳಲ್ಲಿ ಒಂದು. ಎರಡನೆಯದು ಕೀರ್ತಿ. ಕಾವ್ಯದಿಂದ ಕವಿ ಪ್ರಸಿದ್ಧನಾಗುತ್ತಿದ್ದ. ಅನೇಕ ಜನ ಓದಿ ಮೆಚ್ಚಿ ಕವಿಯನ್ನು ಕೊಂಡಾಡುತ್ತಾರೆ. ಮೂರನೆಯ ಪ್ರಯೋಜನ ಲಾಭ. ಎಂದರೆ ಹಣವೊ, ಬಿರುದೊ, ದಾನವೋ ಇತ್ಯಾದಿ.

ಪಂಪನಿಗೆ ತನ್ನ ರಾಜನಾದ ಅರಿಕೇಸರಿಯಿಂದ ಕೀರ್ತಿ, ಪೂಜೆ, ಲಾಭ ಈ ಮೂರೂ ಸಮೃದ್ಧವಾಗಿ ದೊರೆತವು. ಪಂಪನ ಕಾವ್ಯಗಳು ಹಿಂದಿನ ಕಾವ್ಯಗಳನ್ನು ಮೀರಿಸಿದವು. ಇವನ ಹಾಗೆ ಯಾರೂ ಬರೆಯಲಿಲ್ಲ ಎಂದು ಆ ಕಾಲದ ವಿದ್ವಾಂಸರು ಹೊಗಳಿದ್ದಲ್ಲದೆ, ಆತ “ನಾಡೋಜ” ಎಂದು ಹೆಸರಾದ. “ನಾಡೋಜ” ಎಂದರೆ ಇಡೀ ನಾಡಿಗೆ ಗುರು ಎಂದರ್ಥ. ಅರಿಕೇಸರಿ ಪಂಪನಿಗೆ “ಕವಿತಾ ಗುಣಾರ್ಣವ” ಎಂಬ ಬಿರುದನ್ನು ಕೊಟ್ಟದ್ದಲ್ಲದೆ, ಧರ್ಮಪುರ ಎಂಬ ಊರನ್ನು ಪಂಪನ ಹೆಸರಿಗೆ ಬರೆದುಕೊಟ್ಟನು. ಆದರೆ ಪಂಪ ಈ ಬಗೆಯ ಪ್ರಯೋಜನಗಳು ದೊಡ್ಡವೆಂದು ತಿಳಿದವನಲ್ಲ, ಅಲ್ಲದೆ ರಾಜರುಗಳ ಸ್ವಭಾವ ಏನು ಎಂಬುದನ್ನೂ ಬಲ್ಲವನಾಗಿದ್ದ. ಆದ್ದರಿಂದಲೇ ಇತರರನ್ನು ಆಶ್ರಯಿಸಿ ತನಗೆ ಆಗಬೇಕಾದ್ದು ಏನು ಎಂಬ ಅಭಿಮಾನ ಆತನದು. “ಬೇರೆಯವರು ಏನು ಕೊಟ್ಟಾರು, ಬೇರೆಯವರಿಂದ ಆಗುವುದೇನು” ಎಂದು ಆತನೇ ಒಂದೆಡೆ ಹೇಳಿಕೊಂಡಿದ್ದಾನೆ.

ಗುಣಾರ್ಣವ

ಇಂಥ ಸ್ವಭಾವದ ಪಂಪನನ್ನು ಅರಿಕೇಸರಿಯ ಆಸ್ಥಾನದಲ್ಲಿ ಇರುವಂತೆ ಮಾಡಿದ್ದು, ಅವನಿಗೂ ರಾಜನಾದ ಅರಿಕೇಸರಿಗೂ ಇದ್ದ ಸ್ನೇಹ. ಪಂಪನ ಪಾಲಿಗೆ ಈ ರಾಜ ಉಳಿದ ರಾಜರಂತೆ ಮಾತ್ರ ತೋರಲಿಲ್ಲ; ಆತ “ಗುಣಾರ್ಣವ” ನ ಹಾಗೆ -ಗುಣಗಳ ಸಮುದ್ರದ ಹಾಗೆ- ತೋರಿದ. ಇಂಥ ಸದ್ಗಣಗಳ ಗಣಿಯಾದಸ ರಾಜನ ಪ್ರೀತಿ-ವಿಶ್ವಾಸ ಪಂಪನ ಮನಸ್ಸನ್ನು ಸೊರೆಗೊಂಡಿತು. ಈ ರಾಜ ತನ್ನ ವಿಚಾರಕ್ಕೆ ಪ್ರತಿಯಾಗಿ ತಾನು ಏನು ಕೊಟ್ಟೇನು- ಅನ್ನಿಸಿತು. ಪಂಪನಿಗೆ. ಪರಾಕ್ರಮದಲ್ಲಿ, ನಡವಳಿಕೆಯಲ್ಲಿ ಈ ರಾಜ ಮಹಾಭಾರತದ ಅರ್ಜುನನಂತೆ ಇದ್ದಾನೆ ಎಂದು ಪಂಪನಿಗೆ ತೋರಿತು. ಹೀಗಿರುವಾಗ ತನ್ನ ರಾಜನನ್ನು ಮಹಾಭಾರತದ ಅರ್ಜುನನಿಗೆ ಹೋಲಿಸಿ, ಯಾಕೆ ಒಂದು ಕಾವ್ಯವನ್ನು ಬರೆದು ತನ್ನ ಮತ್ತು ಅರಿಕೇಸರಿಯ ಹೆಸರನ್ನು ಶಾಶ್ವತವನ್ನಾಗಿ ಮಾಡಬಾರದು ಎಂದು ಪಂಪನಿಗೆ ಅನ್ನಿಸಿದ್ದರ ಪರಿಣಾಮವೇ “ವಿಕ್ರಮಾರ್ಜುನ ವಿಜಯ” ಎಂಬ ಕಾವ್ಯ. ಪಂಪ ತೆಗೆದುಕೊಂಡ ಕತೆಯೇನೋ ಮಹಾಭಾರತದ್ದೆ. ಆದರೆ ಅದನ್ನು ಬರೆಯುವಾಗ, ತನ್ನ ರಾಜನಾದ ಅರಿಕೇಸರಿಯೇ ಅರ್ಜುನ, ಆ ಅರ್ಜುನನೇ ಈ ಅರಿಕೇಸರಿ ಎಂಬಂತೆ ಹೊಂದಿಸಿದ. ಅಷ್ಟೇ ಅಲ್ಲ, ಹಾಗೆ ಬರೆಯುವಲ್ಲಿ ತನ್ನ ಕಾಲದ ಜನರ ನಡವಳಿಕೆ, ತನ್ನ ಕಾಲದ ನಂಬಿಕೆಗಳು, ಆಚಾರ ವಿಚಾರಗಳು, ತನ್ನ ಕಾಲದ ದೊಡ್ಡ ದೊಡ್ಡ ವ್ಯಕ್ತಿಗಳು, ತನ್ನ ಕಾಲದ ಯುದ್ದಗಳು- ಎಲ್ಲವನ್ನೂ ತಾನು ಬರದ ಕಾವ್ಯದೊಳಗೆ ಜೋಡಿಸಿದ, ಕೂಡಿಸಿದ. ಅರ್ಜುನನ ಪರಾಕ್ರಮವನ್ನೇ ಗುರಿಯಾಗಿರಿಸಿಕೊಂಡ ಕಾವ್ಯಕ್ಕೆ ಪಂಪ “ವಿಕ್ರಮಾರ್ಜುನ ವಿಜಯ” ಎಂದು ಹೆಸರು ಕೊಟ್ಟ. ಆದರೆ ಬರಬರುತ್ತಾ ಇದಕ್ಕೆ ಜನರ ಬಾಯಲ್ಲಿ “ಪಂಪ ಭಾರತ” ಎಂದು ಹೆಸರಾಯಿತು.

ಆದಿಪುರಾಣ

ಪಂಪನ ತಂದೆ ಪೂರ್ವಿಕರಿಂದ ಬಂದ ವೈದಿಕ ಧರ್ಮವನ್ನು ಬಿಟ್ಟುಕೊಟ್ಟು ಜೈನಧರ್ಮಕ್ಕೆ ಮತಾಂತರ ಹೊಂದಿದವನು. ಜೈನ ಧರ್ಮಕ್ಕೆ ಸೇರಿದ ಪಂಪನಿಗೆ, ತಾನು ಆ ಧರ್ಮವನ್ನು ಕುರಿತು, ಆ ಧರ್ಮದ ಮಹಾವ್ಯಕ್ತಿಗಳನ್ನು ಕುರಿತು ಕಾವ್ಯ ಬರೆಯಬೇಕು ಎನ್ನಿಸಿತು. ಅದಕ್ಕಾಗಿ ಅವನು “ಅದಿಪುರಾಣ” ಎಂಬ ಕಾವ್ಯವನ್ನು ಬರೆದ. “ಆದಿಪುರಾಣ” ಜೈನರ ಮೊಟ್ಟಮೊದಲ ತೀರ್ಥಂಕರನಾದ ಆದಿದೇವ ಅಥವಾ ಪುರುದೇವನನ್ನುಸ ಕುರಿತದ್ದು. ಜೈನರ ಪ್ರಕಾರ ಇಪ್ಪತ್ನಾಲ್ಕು ಜನ ತೀರ್ಥಂಕರರು. ತೀರ್ಥಂಕರರು ಎಂದರೆ ಮುಕ್ತಿಯನ್ನು ಪಡೆದು ಪವಿತ್ರರಾದವರು. ಅವರಲ್ಲಿ  ಮೊದಲನೆಯ ತೀರ್ಥಂಕರ ಆದಿದೇವ ಅಥವಾ ಪುರುದೇವ. ಈ ಆದಿದೇವನ ಕತೆಯೇ “ಆದಿಪುರಾಣ” ದ ಕತೆ.

ಮನುಷ್ಯನ ಮನಸ್ಸು, ಈ ಲೋಕದ ಸುಖ-ಸಂಪತ್ತುಗಳನ್ನು ಬಿಟ್ಟು ವೈರಾಗ್ಯದ ಹಾದಿಯನ್ನು ಹಿಡಿದರೆ ಯಾವ ನಲುವಿಗೆ ಏರುವುದೆಂಬುದನ್ನು ಪಂಪ “ಆದುಪುರಾಣ”ದಲ್ಲಿ ಚಿತ್ರಿಸಿದ್ದಾನೆ. ಆದಿದೇವ ಅನೇಕ ಜನ್ಮಗಳಲ್ಲಿ ತೊಳಲಿ, ಪಾಪಗಳನ್ನು ಕಳೆದುಕೊಂಡು, ತೊಳಲಿಕೊಂಡು, ಗುರುವಿನ ಉಪದೇಶದಿಂದ ಸಾಧನೆ ಮಾಡುತ್ತಾ, ಕಡೆಗೆ ತೀರ್ಥಂಕರನಾಗುತ್ತಾನೆ.

ನನ್ನಂಥ ವೀರ ಯಾರು?”

ಭರತ ಮತ್ತು ಬಾಹುಬಲಿ ಆದಿದೇವನ ಮಕ್ಕಳು. ಅಣ್ಣನಾದ ಭರತ ಅಯೋಧ್ಯೆಯ ಚಕ್ರವರ್ತಿ; ತಮ್ಮನಾದ ಬಾಹುಬಲಿ ಪೌದನಪುರದ ರಾಜ. ಭರತ ಮಹಾವೀರ. ಅವನ ಆಯುಧಗಳನ್ನು ಇಟ್ಟಿದ್ದ ಮಂದಿರದಲ್ಲಿ ಒಂದು ಚಕ್ರ ಉದ್ಭವವಾಯಿತು. ಇದು ತುಂಬ ಶಕ್ತಿ ಇದ್ದ ಚಕ್ರ. ಇದು ಭರತನ ಸೈನ್ಯದ ಮುಂದೆ ದಾರಿ ತೋರಿಸುತ್ತ  ಸಾಗುತ್ತಿತ್ತು. ಭರತನಿಗೆ ಈ ಜಗತ್ತನ್ನೆಲ್ಲಾ ಗೆಲ್ಲುವ ಆಸೆ. ಅದರಿಂದಾಗಿ ಅವನು ಸೈನ್ಯವನ್ನು ತೆಗೆದುಕೊಂಡು ಇಡೀ ಭೂಮಂಡಲದ ರಾಜರನ್ನೆಲ್ಲ ಸೋಲಿಸುತ್ತಾ ಬಂದ. ಆರು ಖಂಡಗಳ ದೊರಗಳೆಲ್ಲ ಕಪ್ಪ ಕಾಣಿಕೆ ಒಪ್ಪಿಸಿ ಶರಣಾದರು. ಹೀಗೆ ಎಲ್ಲರನ್ನೂ ಗೆಲ್ಲುತ್ತಾ ಹೋದ ಹಾಗೆ ಭರತ ಚಕ್ರವರ್ತಿಗೆ ಅಹಂಕಾರ ತುಂಬಿಕೊಂಡಿತು. ತನ್ನಂಥ ವೀರಾಧಿವೀರರು ಹಿಂದೆ ಹುಟ್ಟಿರಲಿಲ್ಲ, ಮುಂದೆ ಹುಟ್ಟುವುದಿಲ್ಲ ಎಂದು ಅನ್ನಿಸತೊಡಗಿತು. ಹೀಗೆ ಅನ್ನಿಸಿದ ಮೇಲೆ, ಅದನ್ನು ಲೋಕಕ್ಕೆಲ್ಲಾ ತಿಳಿಸಬೇಡವೆ? ಹೇಗೆ ತಿಳಿಸುವುದು? ಈಗ ಇರುವವರಿಗೆ ಮಾತ್ರವಲ್ಲ, ಮುಂದೆ ಬರುವ ಜನಕ್ಕೂ ತನ್ನಂಥ ವೀರಾಧಿವೀರನ ವಿಚಾರ ತಿಳಿಯಬೇಕು.

ಭರತನಿಗೆ ಒಂದು ಆಲೋಚನೆ ಹೊಳೆಯಿತು. ತನ್ನಂಥ, ಎಂದರೆ ಭರತ ಚಕ್ರವರ್ತಿಯಂಥ, ವೀರಾಧಿವೀರನು ಹಿಂದೆ ಇರಲಿಲ್ಲ, ಮುಂದೆ ಬರುವುದಿಲ್ಲ ಎಂಬ ಅಥದ ಪ್ರಶಸ್ತಿಯನ್ನು ವಿಜಯಾರ್ಧ ಎಂಬ ಮಹಾಪರ್ವತದ ಬಂಡೆಗೋಡೆಗಳ ಮೇಲೆ ಕೆತ್ತಿಸಬೇಕು. ಅದನ್ನು ಇಂದು ಇರತಕ್ಕವರೂ ಮುಂದೆ ಬರತಕ್ಕವರೂ ಓದಿ ನೋಡುತ್ತಾರೆ. ಇಂಥ ಮಹಾವೀರನಿದ್ದನೇ ಎಂದು ಆಶ್ಚರ್ಯಪಡುತ್ತಾರೆ; ತಾವು ಇಂಥ ಮಹಾವೀರರಾಗಲಿಲ್ಲವಲ್ಲಾ ಎಂದು ಅಸೂಯೆಪಡುತ್ತಾರೆ. ಇಷ್ಟಾದರೆ ಸಾಕಲ್ಲ? ಹೀಗನ್ನಿಸಿ ವಿಜಯಾರ್ಧ ಪರ್ವತದ ತಪ್ಪಲಿನಲ್ಲಿ ಬೀಡು ಬಿಟ್ಟ ಭರತ ತನ್ನ ಮಂತ್ರಿಯನ್ನು ಕತೆದ. ತಾನು ಯೋಚಿಸಿದ ಶಾಸನವನ್ನು ಈ ಪರ್ವತದ ಬಂಡೆಗೋಡೆಗಳ ಮೇಲೆ ಕೆತ್ತಿಸಲು ತಕ್ಕ ಸ್ಥಳವನ್ನು ಹುಡುಕಿರಿ ಎಂದು ಅಪ್ಪಣೆ ಮಾಡಿದ.

ಬಂಡೆಗೋಡೆಗಳ ಮೇಲೆ ಸ್ಥಳವಿಲ್ಲ

ಮಂತ್ರಿ ಮೊದಲಾದವರು ಚಕ್ರವರ್ತಿಯ ಅಪ್ಪಣೆಯಂತೆ, ತಮ್ಮ ರಾಜನ ವಿಷಯವನ್ನು ಕೆತ್ತಿಸಲು ಪ್ರಶಸ್ತವಾದ ಸ್ಥಳಕ್ಕಾಗಿ ಹುಡುಕಾಡಿದರು. ಆದರೆ ಆ ಮಹಾಪರ್ವತದ ಬಂಡೆಗೋಡೆಗಳ ಮೇಲೆ ಒಂದಿಷ್ಟು ಸ್ಥಳವಿಲ್ಲದಂತೆ ಹಲವು ಕೋಟಿ ವರ್ಷಗಳಿಂದ ಹೀಗೆಯೇ ದಿಗ್ವಿಜಯ ಮಾಡಿಕೊಂಡು ಬಂದು, ತಮಗೆ ಸಮಾನರಾರು ಎಂಬ ಪಿತ್ತವನ್ನು ನೆತ್ತಿಗೇರಿಸಿಕೊಂಡ ಸಾವಿರಾರು ರಾಜರು ಆಗಲೇ ತಮ್ಮ ನಾಂಕಿತಗಳನ್ನು ಕೆತ್ತಿಸಿಬಿಟ್ಟಿದ್ದಾರೆ! ಭರತನ ಮಂತ್ರಿಗಳು ನೋಡುತ್ತಾರೆ, ತಮ್ಮ ಚಕ್ರವರ್ತಿಯ ಹೆಸರನ್ನು ಬರೆಯಿಸಲು ಒಂದಿಷ್ಟು ಸ್ಥಳವಿಲ್ಲದಂತೆ ಆ ಬೆಟ್ಟದ ಬಂಡೆಯ ಮೇಲೆ ಕಿಕ್ಕಿರಿದಿವೆ ಹಿಂದನ ಸಹಸ್ರಾರು ರಾಜರ ಶಾಸನಗಳು! ತಲೆ ಕೆಳಗೆ ಮಾಡಿಕೊಂಡ ಮಂತ್ರಿಗಳು ಅಂಜುತ್ತಾ ಈ ಸಂಗತಿಯನ್ನು ಭರತ ಚಕ್ರವರ್ತಿಯಲ್ಲಿ ಅರಿಕೆ ಮಾಡಿಕೊಂಡರು.

ಅರ್ಥವಾಯಿತುಆದರೂ…..

ಭರತ ಚಕ್ರವರ್ತಿಗೆ ಅರ್ಥವಾಯಿತು- ಈ ಜಗತ್ತನ್ನು ಗೆಲ್ಲಲು ಹೊರಟವರಲ್ಲಿ ತಾನೇ ಮೊದಲನೆಯವನಲ್ಲ; ತನ್ನಂತೆ ರಾಜಾಧಿರಾಜರನ್ನು ಗೆದ್ದು ತಮ್ಮ ಪ್ರತಾಪವನ್ನು ಹೀಗೆ ಶಾಸನರೂಪದಲ್ಲಿ ಬರೆಯಿಸಬೇಕೆಂಬ ಆಸೆಯಿದ್ದ ಜನ ಆಗಲೇ ಸಾವಿರಾರು ಆಗಿ ಹೋಗಿದ್ದಾರೆ ಎಂಬ ಸತ್ಯ. ಆದರೇನು? ಅಷ್ಟು ಸುಲಭವಾಗಿ ಸೋಲನ್ನೊಪ್ಪಿಕೊಂಡು ಸುಮ್ಮನಾಗಬಹುದೇ? ಇರಲಿ; ಹಿಂದೆ ವೀರಾಧಿವೀರರು ಇದ್ದಿರಬಹುದು; ಆದರೆ ಅವರಾರು ತನ್ನಷ್ಟು ಮಹಿಮಾಶಾಲಿಗಳು ಆಗಿರಲಾರರು. ಆದ್ದರಿಂದ ಹೇಗಾದರೂ ಮಾಡಿ ತನ್ನ ಹೆಸರನ್ನು ಈ ಪರ್ವತದ ಗೋಡೆಗಳ ಮೇಲೆ ಗೆತ್ತಿಸಲೇಬೇಕು ಅನ್ನಿಸಿತುಸ ಭರತನಿಗೆ. ಮಂತ್ರಿಗಳಿಗೆ ಹೇಳಿದ; “ನೋಡಿ, ನನ್ನ ಹೆಸರನ್ನು ಕೆತ್ತಲು ಸ್ಥಳವಿಲ್ಲದಂತೆ, ತಮ್ಮ ಹೆಸರುಗಳನ್ನು ಬರೆಯಿಸಿದ್ದಾರಲ್ಲ, ಆ ಹಿಂದಿನ ರಾಜರುಗಳು? ಅವರಲ್ಲಿ ಒಬ್ಬೊಬ್ಬರ ಹೆಸರನ್ನೂ ನನ್ನ ದಂಡರತ್ನದಿಂದ ಉಜ್ಜಿ ಅಳಿಸಿ ಹಾಕಿ; ನನ್ನ ಹೆಸರನ್ನು ಬರೆಯಿಸಿರಿ”. ಚಕ್ರವರ್ತಿಯ ಅಪ್ಪಣೆಗೆ ಎದುರಾಡಿದವರುಂಟೆ? ಹಿಂದಿನ ರಾಜರುಗಳ ಹೆಸರುಗಳನ್ನು ಉಜ್ಜಿ, ಅಳಿಸಿ ತನ್ನ ಹೆಸರನ್ನು ಕೆತ್ತಸಿ ತೃಪ್ತಿಪಟ್ಟುಕೊಂಡಿತು ಭರತನಸ ಮನಸ್ಸು!

ಚಕ್ರ ನಿಂತಿತು

ಆರು ಖಂಡಗಳನ್ನು ಗೆದ್ದ ಉಬ್ಬಿನಲ್ಲಿ ಸೈನ್ಯ ಸಮೇತ ಭರತ ಅಯೋಧ್ಯೆಗೆ ಹಿಂದಿರುಗಿದ. ಆದರೆ ಆತನ ಚಕ್ರ, ಅದುವರೆಗೂ ಸೈನ್ಯದ ಮುಂದೆ ಸಲೀಸಾಗಿ ದಾರಿ ತೋರಿಸಿಕೊಂಡು ಉರುಳಿ ಬಂದ ಚಕ್ರ, ಅಯೋಧ್ಯೆಯ ಬಾಗಿಲಿನಲ್ಲಿ ತಟ್ಟನೆ ನಿಂತುಬಿಟ್ಟಿತು. ಇದೇಕೆ ಹೀಗಾಯಿತು ಎಂದು ಪುರೋಹಿತರನ್ನು ಕೇಳಿದರೆ, ಅವರು ಹೇಳಿದರು; “ಅಯ್ಯಾ ಚಕ್ರವರ್ತಿ, ಈ ನಿನ್ನ ಚಕ್ರ ಹೀಗೆ ಊರ ಬಾಗಿಲಲ್ಲಿ ನಿಂತದ್ದನ್ನು ನೋಡಿದರೆ, ನಿನ್ನ ದಿಗ್ವಿಜಯ ಇನ್ನೂ ಪೂರ್ಣವಾಗಿಲ್ಲ; ನೀನು ಗೆಲ್ಲಬೇಕಾದವರು ಇನ್ನೂ ಇದ್ದಾರೆ ಎಂದು ಇದರ ಅರ್ಥ”.

ಭರತನಿಗೆ ಆಶ್ಚರ್ಯವಾಯಿತು. ನಾನು ಎಲ್ಲವನ್ನೂ ಗೆದ್ದಿದ್ದೇನೆ; ಆದರೂ ಇನ್ನು ನಾನು ಗೆಲ್ಲಬೇಕಾದವರು ಇದ್ದಾರೆಯೇ? ಇದ್ದರು ಅವರು ಯಾರಿರಬಹುದು- ಎಂಬ ಯೋಚನೆ ಹತ್ತಿತು. ಪುರೋಹಿತರು ಮತ್ತೆ ಹೇಳಿದರು; “ಇಷ್ಟೊಂದು ವರ್ಷ ಹೊರಗಿನ ರಾಜ್ಯಗಳನ್ನು ಗೆಲ್ಲುವುದರಲ್ಲೇ ನಿನ್ನ ಕಾಲ ಕಳೆದು ಹೋಯಿತು; ಇನ್ನು ಒಳಗೆ ಗೆಲ್ಲಬೇಕಾದದ್ದು ಹಾಗೇ ಇದೆ”. ಭರತನಿಗೆ ತಟ್ಟನೆ ಹೊಳೆಯಿತು; “ನಾನು ಎಲ್ಲವನ್ನು, ಎಲ್ಲರನ್ನು ಗೆದ್ದರೂ ನನ್ನ ತಮ್ಮಂದಿರನ್ನು ಇನ್ನೂ ಗೆದ್ದಿಲ್ಲ; ಅದರಲ್ಲಿ ಅವರಲ್ಲಿ ಹಿರಿಯನಾದ ಬಾಹುಬಲಿಯನ್ನು ಗೆದ್ದು ಇನ್ನೂ ಅಧೀನ ಮಾಡಿಕೊಂಡಿಲ್ಲ. ಆದ್ದರಿಂದಲೇ ಈ ಚಕ್ರರತ್ನ ರಾಜಧಾನಿಯ ಬಾಗಿಲಲ್ಲಿ ಹೀಗೆ ನಿಂತುಹೋಯಿತು”.

ಯುದ್ಧವೇ ತೀರ್ಮಾನಿಸಲಿ

ಪುರೋಹಿತರ ಸೂಚನೆಯ ಮೇರೆಗೆ ತನ್ನ ತಮ್ಮನಾದ ಬಾಹುಬಲಿಗೆ ಭರತ ಒಂದು ಪತ್ರವನ್ನು ಬರೆಯಿಸಿದ. “ಚಕ್ರವರ್ತಿಯಾದ ಬಾಹುಬಲಿಗೆ, ಪೌದನಪುರದ ರಾಜನಾದ ನೀನು ಬಂದು ಶರಣಾಗು” ಎಂದಿತ್ತು ಈ ಪತ್ರದ ಧಾಟಿ. ದೂತನ ಮೂಲಕ ಬಂದ ಪತ್ರವನ್ನು ಓದಿ ಬಾಹುಬಲಿ ಕೆರಳಿ ಕಿಡಿಕಿಡಿಯಾದ. ಅಣ್ಣನಾದವನು ತಮ್ಮನಾದವನಿಗೆ ಹೇಳುವ ಮಾತೆ ಇದು”? “ಭರತ ಚಕ್ರವರ್ತಿ ನನಗೆ ಅಣ್ಣ: ತಂದೆಗೆ ಸಮಾನ. ಅಣ್ಣನಾದವನಿಗೆ ತಮ್ಮನು ಮರ್ಯಾದೆ ತೋರಿಸಬೇಕಾದದ್ದು ನ್ಯಾಯ. ನಾನು ಭರತನನ್ನು ಅಣ್ಣ, ತಂದೆಗೆ ಸಮಾನ ಎಂದು ನಮಸ್ಕಾರ ಮಾಡತಕ್ಕವನು. ಆದರೆ, ಅಣ್ಣನಾದವನು ತಾನು ಮಹಾಚಕ್ರವರ್ತಿ, ಆದಕಾರಣ ತಮ್ಮನಾದವನು ಆಳಿನ ಹಾಗೆ ಬಂದು ನನ್ನ ಪಾದಕ್ಕೆ ಬೀಳಲಿ- ಎಂಬ ಧೋರಣೆಯಿಂದ ನಡೆಯಿಸಿಕೊಂಡರೆ, ಆಗ ನಾನು ತಲೆ ಬಾಗಿಸುವವನಲ್ಲ. ಬೇಕಾದರೆ ಭರತ ಚಕ್ರವರ್ತಿ ಯುದ್ಧದಲ್ಲಿ ನನ್ನನ್ನು ಗೆದ್ದು ಕಾಲಿಗೆ ಬೀಳಿಸಿಕೊಳ್ಳಲಿ” ಎಂದು ಬಾಹುಬಲಿ ಹೇಳಿ ಕಳುಹಿಸಿದ. ಭರತ ಚಕ್ರವರ್ತಿಗೆ ರೇಗಿತು.  ಈ ತಮ್ಮನ ಉತ್ತರ ಸೊಕ್ಕಿನದು ಎನ್ನಿಸಿತು. “ಹಾಗಾದರೆ ಯುದ್ಧವೇ ನಡೆಯಲಿ; ತಮ್ಮನಾದರೇನು, ಯಾರಾದರೇನು. ನನ್ನ ಪ್ರಭುತ್ವವನ್ನು ಒಪ್ಪಿಕೊಳ್ಳದವರು ಈ ಲೋಕದಲ್ಲಿ ಇರಬಾರದು” ಎಂದು ತೋರಿತು ಭರತನಿಗೆ. ಯುದ್ಧ ನಿಶ್ಚಯವಾಯಿತು.

ಯುದ್ಧ ಎಂದರೆ ರಕ್ತಪಾತ; ಪ್ರಾಣಹಾನಿ. ಇಬ್ಬರು ಅಣ್ಣ-ತಮ್ಮಂದಿರ ತಿಕ್ಕಾಟದಲ್ಲಿ ಉಳಿದ ನೂರಾರು ಜನ ಯುದ್ಧದಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಳ್ಳುವುದು ಯಾವ ನ್ಯಾಯ? ಆದ್ದರಿಂದ ಭರತ, ಬಾಹುಬಲಿ ಇಬ್ಬರೇ ಯುದ್ಧ ಮಾಡಲಿ ಎಂದು ಸೂಚಿಸಿದರು ಕುಲದ ಹಿರಿಯರು.

ಯುದ್ಧವೂ ಆಯಿತು

ಯುದ್ಧ ಶುರುವಾಯಿತು- ಅಣ್ಣ ತಮ್ಮಂದಿರಿಬ್ಬರಿಗೆ. ಮೊದಲು ದೃಷ್ಟಿಯುದ್ಧ. ಎವೆ ಇಕ್ಕದೆ ಒಬ್ಬರನ್ನೊಬ್ಬರು ನೋಡಬೇಕು. ಮೊದಲು ರೆಪ್ಪೆ ಮುಚ್ಚಿದವರು ಸೋತಂತೆ. ಭರತ ಅಣ್ಣ, ಬಾಹುಬಲಿ ತಮ್ಮ. ಆದರೆ ಬಾಹುಬಲಿಯೇ ಎತ್ತರ. ಆದುದರಿಂದ ದೃಷ್ಟಿಸಿ ನೋಡುವ ಸ್ಪರ್ಧೆಯಲ್ಲಿ ಭರತ ಸೋತ. ಎರಡನೆಯದು ಜಲಯುದ್ಧ. ಇಬ್ಬರೂ ನೀರಿನಲ್ಲಿ ನಿಲ್ಲಬೇಕು, ಒಬ್ಬರಿಗೊಬ್ಬರು ಬೀಸಿ ನೀರು ಎರಚಬೇಕು.ಮೊದಲು ನೀರಿನ ರಭಸಕ್ಕೆ ಆಯಾಸಗೊಂಡವರು ಸೋತಂತೆ. ಇದರಲ್ಲಿಯೂ ಬಾಹುಬಲಿ ಗೆದ್ದ. ಹೀಗೆ ದೃಷ್ಟಿಯುದ್ಧ, ಜಲಯುದ್ಧಗಳಲ್ಲಿ ಭರತ ಚಕ್ರವರ್ತಿಯೇ ಸೋತುಹೋದ. ಮಲ್ಲಯುದ್ಧದಲ್ಲಿ ತಮ್ಮನಾದ ಬಾಹುಬಲಿ ಅಣ್ಣನಾದ ಭರತನನ್ನು ಹಿಡಿದು ಮೇಲಕ್ಕೆ ಎತ್ತಿದ. ಅಲ್ಲಿಂದ ಆತನನ್ನು ಕೆಳಕ್ಕೆ ಎತ್ತಿ ಎಸೆಯಬೇಕು. ಆದರೆ ಬಾಹುಬಲಿಗೆ ಇಷ್ಟೊಂದು ಜನರ ಎದುರಿನಲ್ಲಿ ಕೈಗೆ ಸಿಕ್ಕ ಅಣ್ಣನನ್ನು ನೆಲಕ್ಕೆ ಎತ್ತಿಹಾಕಿ ಅವಮಾನ ಮಾಡುವುದು ಸರಿಯಲ್ಲ ಅನ್ನಿಸಿತು. ಎತ್ತಿದ ಭರತನನ್ನು ಹೂ ಇಳಿಸುವಂತೆ ಹಗುರವಾಗಿ ಮೆಲ್ಲಗೆ ನೆಲಕ್ಕೆ ಇಳಿಸಿದ. ಬಾಹುಬಲಿಯೆ ಗೆದ್ದನೆಂದು ಎಲ್ಲರೂ ಜಯಕಾರ ಮಾಡಿದರು. ಆರು ಖಂಡಗಳನ್ನು ಗೆದ್ದು, ವಿಜಯಾರ್ಧ ಪರ್ವತದಲ್ಲಿ ಹೆಸರು ಕೆತ್ತಿಸಿ ಬಂದ ತನ್ನಂಥ ಚಕ್ರವರ್ತಿಯನ್ನು, ತಮ್ಮನಾದ ಬಾಹುಬಲಿ ಎಲ್ಲರ ಎದುರಿಗೂ ಸೋಲಿಸಿದನಲ್ಲ ಎಂದು ಭರತ ಮಖ ಕೆಳಗೆ ಮಾಡಿದನು.ಜೊತೆಗೆ ಕೋಪವೂ ಬಂತು. ಕೂಡಲೇ ತನ್ನ ಚಕ್ರರತ್ನವನ್ನು ನಿರಾಯುಧನಾಗಿ ನಿಂತ ಬಾಹುಬಲಿಯ ಮೇಲೆ ಭರತ ಪ್ರಯೋಗ ಮಾಡಿದ. ಆದರೆ ಆ ಚಕ್ರ ಬಾಹುಬಲಿಯನ್ನು ಮೂರು ಸುತ್ತು ಸುತಿ ಅವನ ಬಲಭುಜದ ಬದಿಯಲ್ಲಿ ನಿಂತಿತು.

ಭರತನ ಚಕ್ರ ಬಾಹುಬಲಿಯ ಬಭುಜದ ಬಳಿ ನಿಂತಿತು

 ಗೆದ್ದವನ ವ್ಯಥೆ

ಭರತ ಚಕ್ರವರ್ತಿಯ ಸೋಲು ಎದ್ದುಕಾಣುವಂತಾಯಿತು. ಸೋತು ಅವಮಾನದಿಂದ ಚಕ್ರವರ್ತಿ ತಲೆ ತಗ್ಗಿಸಿದ. ಆದರೆ ಗೆದ್ದ ಬಾಹುಬಲಿಗೆ ಸಂತೋಷವಾಗಲಿಲ್ಲ; ಮನಸ್ಸಿನಲ್ಲಿ ವ್ಯಥೆಯಾಯಿತು. ಇದೆಲ್ಲಾ ಆದದ್ದು ಯಾಕೆ? ತಮ್ಮನಾದ ತಾನು ಹಿರಿಯಣ್ಣನಾದ ಭರತನನ್ನು ಸೋಲಿಸಿದ್ದು ಯಾಕೆ? ಒಂದು ಚೂರು ನೆಲಕ್ಕಾಗಿ ತಾನೆ? ಅವನಿಗಿಂತ ತಾನು ದೊಡ್ಡವನು ಎಂದು ತೋರಿಸುವುದಕ್ಕೆ ತಾನೆ? ಕೀರ್ತಿಗಾಗಿ, ಪ್ರತಿಷ್ಠೆಗಾಗಿ. ಅಧಿಕಾರಕ್ಕಾಗಿ ನಾನು ಎಂತಹ ಮಾಡಬಾರದಸ ಕಾರ್ಯವನ್ನು ಮಾಡಿದೆನಲ್ಲ? ಈ ಕ್ಷುದ್ರವಾದ ರಾಜ್ಯಕ್ಕಾಗಿ ನಾನು ಒಡಹುಟ್ಟಿದ ಅಣ್ಣನೊಡನೆ ಕಾದಾಡಿದೆನಲ್ಲ; ತುಂಬಿದ ಜನರೆದುರು ಅವಮಾನ ಮಾಡಿದೆನಲ್ಲ. ಈ ರಾಜ್ಯ, ಈ ಭೋಗ, ಈ ವೈಭವ ಮೂರು ದಿನದ್ದು. ಇದು ನನಗೆ ಬೇಕಾಗಿಲ್ಲ. ಇದೆಲ್ಲವನ್ನೂ ಮೀರಿದ ಮೋಕ್ಷದ ಸಂಪಾದನೆಗಾಗಿ ನಾನು ತಪಸ್ಸಿಗೆ ಹೋಗುತ್ತೇನೆ. ಅಣ್ಣನ ಮನಸ್ಸು ನೋಯಿಸಿದ ಅಪರಾಧವನ್ನು ತಪಸ್ಸಿನಲ್ಲಿ ತೊಳೆದುಕೊಳ್ಳುತ್ತೇನೆ. ಹೀಗೆಂದುಕೊಂಡ ಬಾಹುಬಲಿ, ತಾನು ಈ ಎಲ್ಲವನ್ನೂ ಬಿಟ್ಟುಕೊಟ್ಟು ತಪಸ್ಸಿಗೆ ಹೊರಡುವ ನಿರ್ಧಾರವನ್ನು ತಿಳಿಸಿದ. ಅಣ್ಣನ ಕ್ಷಮೆ ಕೇಳಿ, ಅವನ ಕಾಲನ್ನು ಕಣ್ಣೀರಿನಿಂದ ತೊಳೆದು ಬಾಹುಬಲಿ ತಪಸ್ಸಿಗೆ ಹೊರಟೇ ಬಿಟ್ಟ!

ಪ್ರಪಂಚದಲ್ಲಿ ಯಾವತ್ತಿನಿಂದಲೂ ಪೈಪೋಟಿ ಇದ್ದೇ ಇದೆ- ರಾಜ್ಯಕ್ಕೆ, ಅಧಿಕಾರಕ್ಕೆ, ಮತ್ತೊಂದಕ್ಕೆ. ಗೆದ್ದವರು ಡೋಲು ಬಜಾಯಿಸಿಕೊಂಡು ಹೋಗುತ್ತಾರೆ; ತಾವೇ ದೊಡ್ಡವರೆಂದು ತಿಳಿಯುತ್ತಾರೆ. ಸೋತವರನ್ನು ಸೆರೆಗೆ ಹಾಕುತ್ತಾರೆ; ಗಡೀಪಾಡು ಮಾಡುತ್ತಾರೆ; ಮತ್ತೆ ತಲೆಯೆತ್ತದಂತೆ ನೋಡಿಕೊಳ್ಳುತ್ತಾರೆ. ಆದರೆ ಗೆದ್ದವನು ಸೋತವನಿಗೆ ತಾನು ಗೆದ್ದ ಸಮಸ್ತ ರಾಜ್ಯವನ್ನೂ ಹಿಂದಕ್ಕೆ ಒಪ್ಪಿಸಿ, ಕ್ಷಮೆ ಕೇಳಿ ತಪಸ್ಸಿಗೆ ಹೋದದ್ದು ಪ್ರಪಂಚದ ಚರಿತ್ರೆಯಲ್ಲಿ ಬಹುಶಃ ಇದೇ ಮೊದಲು. ಬಾಹುಬಲಿಯೊಬ್ಬನೇ ಇಂಥವನು. ಅವನ ಈ ಉದಾತ್ತವಾದ ನಡವಳಿಕೆಯನ್ನು ಪಂಪ “ಆದಿಪುರಾಣ” ದಲ್ಲಿ ಚಿತ್ರಿಸಿದ್ದಾನೆ. ಈಗ ಶ್ರವಣಬೆಳಗೊಳದ ಬೆಟ್ಟದ ಮೇಲಿದೆಯಲ್ಲ, ಗೋಮಟೇಶ್ವರನ ವಿಗ್ರಹ, ಅದು ಈ ಬಾಹುಬಲಿಯದು. ಅದನ್ನು ಕೆತ್ತಿಸಿದವನು ಗಂಗರ ಮಂತ್ರಿಯಾದ ಚಾವುಂಡರಾಯ.

ಕನ್ನಡದ ಆದಿಕವಿ ಪಂಪ

ಇದು ಸಂಸಾರಹೀಗಿರಬೇಕು ಮನುಷ್ಯ

ಈ ಮನುಷ್ಯಜೀವಿಯ ಸ್ವಭಾವ ಏನು? ಅವನು ತಲುಪಬೇಕಾದ ನೆಲೆ ಯಾವುದು ಎಂಬ ಪ್ರಶ್ನೆಗಳನ್ನು ಪಂಪ ತನ್ನ ಆದಿಪುರಾಣದಲ್ಲಿ ಬಿಡಿಸಿದ್ದಾನೆ. ಮನಷ್ಯ ಆಸೆಗಳ ದಾಸ; ಅಹಂಕಾರಗಳ ಕೋಶ. ಭೋಗ, ವೈಭವ, ಪದವಿ, ಪ್ರತಿಷ್ಠೆಗಳೇ ಆತನಿಗೆ ರುಚಿ. ಆದರೂ ಎಲ್ಲೋ ಕೆಲವರು ಮಾತ್ರ ಈ ರುಚಿಯನ್ನು ಯಾವುದೋ ಒಂದು ಕ್ಷಣದಲ್ಲಿ ಕಳೆದುಕೊಂಡು, ವಿರಾಗಿಗಳಾಗಿ ಜನ್ಮಜನ್ಮಗಳಲ್ಲಿ ತೊಳಲಿ-ಬಳಲಿ ಶುದ್ಧರಾಗುತ್ತಾರೆ. ಇವರನ್ನು ಅರ್ಹತ್ ಪದವಿಗೇರಿದವರು ಎಂದು ಗೌರವಿಸುತ್ತಾರೆ. ಉಳಿದವರು ಕಾಲ ಕೂಡಿ ಬರುವವರೆಗೂ ಹೀಗೇ ಈ ಹುಟ್ಟು – ಬೇನೆ – ಸಾವುಗಳ ಚಕ್ರದಲ್ಲಿ ತಿರುಗುತ್ತಾರೆ. ಇದು ಸಂಸಾರ.

ಸಂಸಾರ ಎಂದರೆ ಏನೆಂಬುದನ್ನು ಪಂಪ ಚೆನ್ನಾಗಿ ತಿಳಿದವನಾಗಿದ್ದ. ಸಂಸಾರ ನಶ್ವರವಾದದ್ದು ಎಂಬುದೇನೋ ನಿಜವೆ. ಹಾಗೆಂದುಕೊಂಡು ಇರುವ ಸುಖ ಸಂತೋಷಗಳ ಕಡೆಗೆ ಮುಖ ತಿರುಗಿಸಲಿಲ್ಲ ಪಂಪ. ಇರುವ ಭೋಗ ವೈಭವಗಳನ್ನು ಮನುಷ್ಯ ಸಾಧ್ಯವಾದಷ್ಟು ಅನುಭವಿಸಬೇಕು; ಆದರೆ ಅವುಗಳೇ ಶಾಶ್ವತವೆಂದು ಭ್ರಮಿಸಬಾರದು. ಶಾಶ್ವತವಾದದ್ದು ಯಾವುದು. ಅದನ್ನು ಪಡೆಯುವುದು ಹೇಗೆ, ಎಂಬ ಬಗ್ಗೆ ಎಚ್ಚರಬೇಕು. ನಿರಂತರ ಪ್ರಯತ್ನಬೇಕು. ಇದು ಬಹುಶಃ ಪಂಪ ಈ ಜೀವನವನ್ನು ನೋಡಿದ ರೀತಿ.

ವಿಕ್ರಮಾರ್ಜುನ ವಿಜಯ

“ವಿಕ್ರಮಾರ್ಜುನ ವಿಜಯ” ದಲ್ಲಿ ಪಂಪ ಬರೆದಿರುವುದು ಮಹಾಭಾರತದ ಕತೆಯನ್ನೆ. ಸಂಸ್ಕೃತದಲ್ಲಿ ಮಹರ್ಷಿ ವ್ಯಾಸರು ಬರೆದ ಭಾರತ ಪ್ರಸಿದ್ಧವಾಗಿದೆ. ಪಂಪ ತನ್ನ “ವಿಕ್ರಮಾರ್ಜುನ ವಿಜಯ” ವನ್ನು ಬರೆಯುವಾಗ ವ್ಯಾಸ ಭಾರತವನ್ನು ಎದುರಿಗೆ ಇರಿಸಿಕೊಂಡು, ಅದನ್ನು ಕನ್ನಡದಲ್ಲಿ ಹೇಳಿದ್ದಾನೆ. ಹಾಗೆಂದರೆ ಮೂಲ ಸಂಸ್ಕೃತ ಭಾರತವನ್ನು ಹೇಗಿತ್ತೋ ಹಾಗೆ ಕನ್ನಡದಲ್ಲಿ ಇಳಿಸಿದ್ದಾನೆ ಎಂದು ಅರ್ಥವಲ್ಲ. ವ್ಯಾಸಭಾರತದ ಹರಹು ದೊಡ್ಡದು. ಅಷ್ಟು ವಿಸ್ತಾರವಾದ ಕತೆಯನ್ನು ಪಂಪ ಸಂಗ್ರಹಿಸಿ ಕನ್ನಡದಲ್ಲಿ ಹೇಳಿದ್ದಾನೆ. ಪಂಪನಿಗೆ ಗೊತ್ತು, ವ್ಯಾಸಭಾರತ ಒಂದು ವಿಸ್ತಾರವಾದ ಸಮುದ್ರದ ಹಾಗಿದೆ ಎಂದು. “ಈ ಸಮುದ್ರವನ್ನು ನಾನು ಈಜಿ ಮುಗಿಸುತ್ತೇನೆ, ನಾನೂ ಒಬ್ಬ ವ್ಯಾಸನೇ ಎಂಬ ಗರ್ವ ನನಗಿಲ್ಲ” ಎಂದು ಹೇಳಿಕೊಂಡ ಪಂಪ. ಈ ದೊಡ್ಡ ಕತೆಯನ್ನು ಕೆಡಿಸದೇ ಹೇಳುತ್ತೇನೆ ಎಂದು ಬರೆಯಲು ಕೂತಿದ್ದಾನೆ. ಮೂಲ ಮಹಾಭಾರತದ ಕತೆಯ ಚೌಕಟ್ಟನ್ನು ಇರಿಸಿಕೊಂಡು, ಅಲ್ಲಲ್ಲಿ ತನ್ನದೇ ಆಗ ಬದಲಾವಣೆಗಳನ್ನು ಮಾಡಿಕೊಂಡು, ಹೊಸ ಹೊಸ ಸನ್ನಿವೇಶಗಳನ್ನು ನಿರ್ಮಿಸುತ್ತ, ಇದು ಕನ್ನಡದಲ್ಲಿ ಮೂಡಿದ ಬೇರೆ ಒಂದು ಸ್ವತಂತ್ರ ಕೃತಿ ಎನ್ನಿಸುವಂತೆ ಬರೆದಿದ್ದಾನೆ ಪಂಪ.

ಮುಖ್ಯವಾಗಿ ಅವನು ಹೇಳಲು ಹೊರಟದ್ದು ಅರ್ಜುನನ ವಿಕ್ರಮವನ್ನು ಅಥವಾ ತನ್ನ ರಾಜನಾದ ಅರಿಕೇಸರಿಯ ಪಾತ್ರದಲ್ಲಿ ಕೂಡಿಸುವುದರ ಮೂಲಕ ತನ್ನ ರಾಜನ ಮಹಿಮಾತಿಶಯಗಳನ್ನು. ಹೀಗಾಗಿ ಪಂಪನ ಗಮನವೆಲ್ಲಾ ಅರ್ಜುನನ ಪಾತ್ರವನ್ನು ಮೆರೆಯಿಸುವುದರಲ್ಲಿ ಆಸಕ್ತವಾಗಿದೆ. ಆ ಕಾರಣದಿಂದ ಉಳಿದ ಪಾತ್ರಗಳ ನಡವಳಿಕೆಗಳನ್ನು ಚಿತ್ರಿಸುವಲ್ಲಿ ಅವನು ಉದಾಸೀನನಾಗಿಲ್ಲ. ಅದರಲ್ಲೂ ಭೀಷ್ಮ, ದುರ್ಯೋಧನ ಮತ್ತು ಕರ್ಣ ಇವರುಗಳ ಚಿತ್ರಣವಂತೂ ವಿಶೇಷವಾದದ್ದಾಗಿದೆ.

ಇವರ್ಗಿಳಿನೀ ಭಾರತಂ ಲೋಕಪೂಜ್ಯಂ

ತನ್ನ ಕಾವ್ಯದ ಕಡೆಯಲ್ಲಿ ತಾನು ಬರೆದ ಭಾರತದಲ್ಲಿ ಯಾವ ಯಾವ ಪಾತ್ರ ಯಾವ ಯಾವ ಗುಣವಿಶೇಷಗಳಿಗೆ ಹೆಸರಾದವರು ಎಂಬುದನ್ನು ಕುರಿತು ಹೀಗೆ ಹೇಳುತ್ತಾನೆ; “ಛಲದಲ್ಲಿ ದುರ್ಯೋಧನ, ಕೊಟ್ಟ ಮಾತನ್ನು ನಡೆಯಿಸುವುದರಲ್ಲಿ ಕರ್ಣ, ಗಂಡುತನದಲ್ಲಿ ಭೀಮಸೇನ, ಪರಾಕ್ಷಮದಲ್ಲಿ ಶಲ್ಯ, ಅತ್ಯುನ್ನತಿಯಲ್ಲಿ ಭೀರ್ಷ್ಮರು, ಬಿಲ್ಲು ವಿದ್ಯೆಯಲ್ಲಿ ಆಚಾರ್ಯ ದ್ರೋಣ, ಸಾಹಸದ ಮಹಿಮೆಯಲ್ಲಿ ಅರ್ಜುನ, ಧರ್ಮದಲ್ಲಿ ನಿರ್ಮಲ ಮನಸ್ಸಿನ ಧರ್ಮರಾಜ- ಇವರುಗಳಿಂದ ಮಹಾಭಾರತ ಲೋಕಪೂಜ್ಯವಾಗಿದೆ.” ಪಂಪ ಕೊಡುವ ಈ ಪಟ್ಟಿಯಲ್ಲಿ ಶ್ರೀ ಕೃಷ್ಣನ ಹೆಸರೇ ಬಿಟ್ಟು ಹೋಗಿದೆ! ಮಹಾಭಾರತದ ಕತೆಯಲ್ಲಿ ಶ್ರೀ ಕೃಷ್ಣ ಬಹುಮುಖ್ಯವಾದ ವ್ಯಕ್ತಿ. ಹೀಗಿದ್ದೂ ಪಂಪ ಶ್ರೀಕೃಷ್ಣನ ಹೆಸರನ್ನು ಹೇಳಿಲ್ಲವಲ್ಲ, ಯಾಕೆ? ಈ ಬಗ್ಗೆ ವಿದ್ವಾಂಸರು ಅನೇಕ ರೀತಿ ಊಹಿಸಿದ್ದಾರೆ.”ಪಂಪ ಜೈನ ಮತದವನು. ಜೈನ ಮತದವರಿಗೆ ಶ್ರೀ ಕೃಷ್ಣನ ವಿಚಾರದಲ್ಲಿ ಅಷ್ಟು ಭಕ್ತಿಯಿಲ್ಲ. ಯಾಕೆಂದರೆ ಅವನು ಪಾಂಡವರಿಗೆ ಬೆಂಬಲವಾಗಿ ನಿಂತು, ಕುರುಕ್ಷೇತ್ರದಂಥ ಯುದ್ಧಕ್ಕೆ ಪ್ರೋತ್ಸಾಹ ನೀಡಿ ಹಿಂಸೆಗೆ, ರಕ್ತಪಾತಕ್ಕೆ ಕಾರಣನಾದವನು. ಅಹಿಂಸೆಯಲ್ಲಿ ನಿಷ್ಠೆಯುಳ್ಳ ಜೈನ ಮತಕ್ಕೆ ಸೇರಿದ ಪಂಪ, ಅದೇ ಕಾರಣಕ್ಕಾಗಿ ಕೃಷ್ಣನ ಪಾತ್ರಕ್ಕೆ ಅಷ್ಟು ಪ್ರಾಧಾನ್ಯವನ್ನು ಕೊಟ್ಟಿಲ್ಲ” ಎಂದು ಕೆಲವರು ಭಾವಿಸುತ್ತಾರೆ. ಆದರೆ ಈ ಭಾವನೆ ಅಷ್ಟು ಸರಿಯಾದುದಲ್ಲ. ಏಕೆಂದರೆ ಪಂಪ ಕೃಷ್ಣ ಪಾತ್ರಕ್ಕೆ ಕುಂದು ಬರದಂತೆ ತನ್ನ ಕಾವ್ಯದಲ್ಲಿ ಚಿತ್ರಿಸಿದ್ದಾನೆ. ಆದರೆ ಉಳಿದ ಒಬ್ಬೊಬ್ಬ ವ್ಯಕ್ತಿಗಳನ್ನು ಹೆಸರಿಸುವಾಗ, ಅವರವರನ್ನು ಯಾವುದೋ ಒಂದು ನಿರ್ದಿಷ್ಟವಾದ ಗುಣಗಳಿಗೆ ಪ್ರತಿನಿಧಿಗಳೆಂದು ಹೇಳಲು ಸಾಧ್ಯವಿರುವಂತೆ, ಶ್ರೀ ಕೃಷ್ಣನನ್ನು ಯಾವುದೇ ಒಂದು ಲಕ್ಷಣಕ್ಕೆ ಒಳಪಡಿಸಲು ಬರುವುದಿಲ್ಲ; ಅವನದು ಅಷ್ಟು ವ್ಯಾಪಕವಾದ ವ್ಯಕ್ತಿತ್ವ. ಈ ಕಾರಣದಿಂದ ಪಂಪ ಶ್ರೀಕೃಷ್ಣನ ಹೆಸರನ್ನು ಹೇಳಿಲ್ಲ- ಎಂದು ಭಾವಿಸುವುದು ಸರಿ ಎಂದು ಕಾಣುತ್ತದೆ.

ಪಂಪನ ದುರ್ಯೋಧನ 

ಪಂಪ ತನ್ನ ಭಾರತವನ್ನು ಬರೆಯುವಲ್ಲಿ ದುರ್ಯೋಧನ ಮತ್ತು ಕರ್ಣ ಇವರ ಪಾತ್ರಗಳ್ನನು ಹೊಸ ರೀತಿಯಲ್ಲಿ ಚಿತ್ರಿಸಿದ್ದಾನೆ. ಪಂಪನ ದುರ್ಯೋಧನ ಉದಾತ್ತನಾದವನು; ಹಿಡಿದ ಛಲವನ್ನು ಕಡೆ ತನಕ ಸಾಧಿಸಿದವನು; ಮಹಾವೀರ; ಸ್ನೇಹಪರ. ಅದರಲ್ಲೂ ಕರ್ಣ ದುರ್ಯೋಧನ ಇವರ ಅಪೂರ್ವವಾದ ಸ್ನೇಹವನ್ನು ಪಂಪ ಮನಸ್ಸು ತುಂಬಿ ವರ್ಣಿಸಿದ್ದಾನೆ. ಅವರ ಸ್ನೇಹದ ಅಧಿಕ್ಯವನ್ನು ಸೂಚಿಸುವ ಒಂದು ಪ್ರಸಂಗ, ಪಂಪನೇ ಸ್ವಂತವಾಗಿ ಕಲ್ಪಿಸಿದ್ದು ಹೀಗಿದೆ;

ಒಂದು ದಿನ ದುರ್ಯೋಧನ ಕರ್ಣನನ್ನು ತನ್ನ ಅಂತಃಪುರಕ್ಕೆ ಕರೆದುಕೊಂಡು ಹೋದ. ಅಂತಃಪುರವೆಂದರೆ ರಾಣಿಯರೂ, ವಿಶೇಷವಾಗಿ ಸ್ತ್ರೀಯರೂ ಇರುವ ಸ್ಥಳ. ಇಲ್ಲಿಗೆ ರಾಜನಾದವನೊಬ್ಬನೇ ಹೋಗುತ್ತಾನೆ. ಉಳಿದ ಯಾರಿಗೂ ಪ್ರವೇಶವಿರುವುದಿಲ್ಲ. ಆದರೆ ರಾಜನಾದ ದುರ್ಯೋಧನ ಕರ್ಣನನ್ನು ಮಾತ್ರ ಅಲ್ಲಿಗೆ ಕರೆದುಕೊಂಡು ಹೋಗುವಷ್ಟು ಕರ್ಣನ ಬಗೆಗೆ ಸ್ನೇಹ.

ಒಂದು ದಿನ ದುರ್ಯೋಧನ ಅಂತಃಪುರಕ್ಕೆ ಕರ್ಣನನ್ನು ಕರೆದೊಯ್ದ. ಅಲ್ಲಿ ದುರ್ಯೋಧನನ ರಾಣಿಸ ಭಾನುಮತಿ ಇದ್ದಳು. ಬೇಸರ ಪರಿಹಾರಕ್ಕೆ ದುರ್ಯೋಧನನಿಗೆ ಪಗಡೆ ಆಡೋಣ ಅನ್ನಿಸಿತು. ಕರ್ಣನಿಗೆ ಹೇಳಿದ. “ನೀನೂ, ನನ್ನ ರಾಣಿ ಭಾನುಮತಿಯೂ ಪಗಡೆ ಆಡಿರಿ; ನಾನು ಕೂತು ನೋಡುತ್ತೇನೆ.” ಸರಿ, ಪಗಡೆ ಆಟ ಶುರುವಾಯಿತು. ಅದಕ್ಕೆ ಮೊದಲುಸ ಕರ್ಣ ಮತ್ತು ಬಾನುಮತಿಯರು ಮಾತಾಡಿಕೊಂಡರು. ಪಗಡೆಯಲ್ಲಿ ಸೋತವರು ಗೆದ್ದವರಿಗೆ ಏನಾದರೂ “ಪಣ” ಕೊಡಬೇಕು. ಭಾನುಮತಿ ತಾನು ಸೋತರೆ ತನ್ನ ಕೊರಳೊಳಗಿನ ಮುತ್ತಿನ ಹಾರವನ್ನು ಕರ್ಣನಿಗೆ ಪಣವಾಗಿ ಕೊಡುತ್ತೇನೆಂದು ಹೇಳಿದಳು. ಆಟ ಮೊದಲಾಯಿತು. ಸ್ನೇಹಿತನಾದ ಕರ್ಣ ಮತ್ತು ತನ್ನ ಪಟ್ಟದ ರಾಣಿ ಭಾನುಮತಿ ಪಗಡೆ ಆಡುತ್ತಿದ್ದಾರೆ. ದುರ್ಯೋಧನ ನೋಡುತ್ತಾ ಕೂತಿದ್ದಾನೆ.

ಆಟ ಮುಂದುವರಿದಂತೆ, ಕರ್ಣನೇ ಗೆದ್ದ; ಭಾನುಮತಿ ಸೋತಳು.

ಗೆದ್ದ ಸಂಭ್ರಮದಲ್ಲಿ, ಎದುರಿಗೆ ಕೂತವಳು ತನ್ನ ರಾಜನಾದ ದುಯೋಧನನ ಹೆಂಡತಿ ಎಂಬುದಾಗಲಿ, ರಾಜ ದುರ್ಯೋಧನ ಎದುರಿಗೆ ಕೂತಿದ್ದಾನೆಂದಾಗಲಿ ಕರ್ಣನಿಗೆ ಎಚ್ಚರಕ್ಕೆ ಬರಲಿಲ್ಲ. ನೇರವಾಗಿ ಬಾನುಮತಿಯ ಕೊರಳ ಮುತ್ತಿನ ಹಾರಕ್ಕೆ ಕೈಹಾಕಿ, “ಕೊಡು ನನ್ನ ಪಣವನ್ನು” ಎಂದು ಜಗ್ಗಿದ.

ಭಾನುಮತಿಯ ಕೊರಳಹಾರ ಹರಿದು, ಅದರಲ್ಲಿದ್ದ ಮುತ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಚದುರಿಹೋದವು.

ಹೀಗಾದೊಡನೆಯೆ ಕರ್ಣನಿಗೆ ಎಚ್ಚರ ಬಂತು. “ಅಯ್ಯೋ, ನಾನೆಂಥ ಕೆಲಸ ಮಾಡಿದೆನಲ್ಲ, ಚಕ್ರವರ್ತಿಯಾದ ದುರ್ಯೋಧನನ ಎದುರಿಗೇ ಅವನ ಹೆಂಡತಿಯ ಕೊರಳಿಗೆ ಕೈಹಾಕಿ ಮುತ್ತಿನ ಹಾರವನ್ನು ಎಳೆದೆನಲ್ಲಾ” ಎಂದು ಭಯವಾಯಿತು. ಗಾಬರಿಯಿಂದ ಮಂಕಾದ ಕರ್ಣನನ್ನು ನೋಡಿ, ದುರ್ಯೋಧನ ನಸುನಕ್ಕು, “ಏನಯ್ಯಾ, ನಿನಗೆ ಪಣವಾಗಿ ಬರಬೇಕಾದ ಮುತ್ತಿನ ಹಾರದ ಮುತ್ತುಗಳೆಲ್ಲಾ ಚದುರಿ ಹೋದುವಲ್ಲಾ, ಆರಿಸಿ ಕೊಡಲೇನು?” ಎಂದ.

ಎಂಥ ಸಂದರ್ಭದಲ್ಲೂ ಕರ್ಣನನ್ನು ತಪ್ಪು ತಿಳಿಯದೆ ಸ್ನೇಹವನ್ನೇ ದೊಡ್ಡದು ಮಾಡಿಕೊಂಡು ಬದುಕಿದ ದುರ್ಯೋಧನನ ದೊಡ್ಡತನಕ್ಕೆ ಈ ಒಂದು ಪ್ರಸಂಗ ಸಾಕ್ಷಿಯಾಗಿದೆ.

"ಕರ್ಣ" ಮುತ್ತುಗಳನ್ನು ಆರಿಸಿ ಕೊಡಲೇನು?" ಎಂದ ದುರ್ಯೋಧನ

 ಭೀಷ್ಮಕರ್ಣ

ಇದೇ ಕರ್ಣ ಒಂದು ಸಲ ಭೀಷ್ಮಾಚಾರ್ಯರನ್ನು ಮೂದಲಿಸಿದ. ಕುರುಕ್ಷೇತ್ರದ ಯುದ್ಧ ನಿಶ್ಚಯವಾಗಿದೆ. ಕೌರವರ ಕಡೆ ಯಾರಿಗೆ ಸೇನಾಧಿಪತಿಯ ಪಟ್ಟ ಕಟ್ಟೋಣ ಎಂದು ಆಲೋಚಿಸುವ ಸಲುವಾಗಿ ಸಭೆ ಸೇರಿದೆ. ಭೀಷ್ಮ, ದ್ರೋಣ, ಕೃಪ, ಶಲ್ಯ, ಅಶ್ವತ್ಥಾಮ ಮೊದಲಾದವರು ಸಭೆಯಲ್ಲಿದ್ದಾರೆ. ಕುಲಕ್ಕೆ ಹಿರಿಯರಾದ ಭೀಷ್ಮರಿಗೆ ಪಟ್ಟಕಟ್ಟೋಣ ಎಂದು ದ್ರೋಣಾಚಾರ್ಯರು ಸೂಚನೆ ಮಾಡಿದರು. ಈ ಸಲಹೆಗೆ ಕರ್ಣನೊಬ್ಬನ ಹೊರತು ಉಳಿದವರೆಲ್ಲ ಒಪ್ಪಿದರು. ಕರ್ಣ ಮಾತ್ರ ಅಸಮಾಧಾನದಿಂದ ಹಾರಾಡಿದ. “ಈ ಭೀಷ್ಮರು ಮುಪ್ಪಿನ ಮುದುಕರು. ಅವರ ಪರಾಕ್ರಮವೇನಿದ್ದರೂ ಗತಕಾಲಕ್ಕೆ ಸೇರಿದ್ದು. ಅದನ್ನು ನಂಬಿ ಈ ಹೊತ್ತೂ ಯುದ್ಧ ಮಾಡುತ್ತಾರೆಂದು ಪಟ್ಟ ಕಟ್ಟುವುದು ಸರಿಯಲ್ಲ. ಕಣ್ಣು ಕಾಣದ ಈ ಮುದುಕರ ಸೇನಾಧಿಪತ್ಯದಲ್ಲಿ ಯುದ್ಧಕ್ಕೆ ಹೋದರೆ ಶತ್ರುಗಳು ನಗುತ್ತಾರೆ. ಶತ್ರುಗಳನ್ನು ಬಗ್ಗುಬಡಿಯಬೇಕೆಂದು ಮನಸ್ಸಿದ್ದರೆ ನನಗೆ ಪಟ್ಟಕಟ್ಟಿ”. ಹೀಗೆಂದು ಭೀಷ್ಮರನ್ನು ತುಂಬಿದ ಸಭೆಯಲ್ಲಿ ಕರ್ಣ ಜರಿದು ನುಡಿದ. ದ್ರೋಣಾದಿಗಳು ಕರ್ಣನನ್ನು ಪ್ರತಿಯಾಗಿ ಮೂದಲಿಸಿದರು. ಮಾತಿಗೆ ಮಾತು ಮಸೆದಾಡ ಮನಸ್ಸು ಕದಡಿತು.

ಆ ಸಂದರ್ಭದಲ್ಲಿ ಅವರೆಲ್ಲರ ಮಾತಿನ ಮಸೆದಾಟವನ್ನು ಸದ್ದಿಲ್ಲದೆ ಗಂಭೀರವಾಗಿ ನೋಡುತ್ತಿದ್ದ ಭೀಷ್ಮರು ಹೇಳಿದರು: “ಅಪ್ಪಾ ಕರ್ಣ, ನೀನಿನ್ನೂಸ ಹರೆಯದವನು. ನಾವೇನೋ ಮುದುಕರು ನಿಜ. ಪರಾಕ್ರಮದ ಆಧಿಕ್ಯ, ಯೌವನದ ದೊಕ್ಕು, ನಿನ್ನ ಒಡೆಯನಾದ ದುರ್ಯೋಧನನು ನಿನ್ನ ಮೇಲಿರಿಸಿಕೊಂಡಿರುವ ನಂಬಿಕೆ ಮತ್ತು ಇನ್ನುಳಿದ ಬಾಹುಬಲದ ವಿಶೇಷತೆ- ತರುಣನಾದ ನಿನಗಿರುವಷ್ಟು ನನಗೆ ಎಲ್ಲಿಂದ ಬರಬೇಕು! ಆರೆ ಒಂದು ಮಾತನ್ನು ಹೇಳುತ್ತೇನೆ ಕೇಳು, ಈಗ ಮೊದಲಾಗುತ್ತಿರುವುದು ಯುದ್ಧ; ಮಹಾಯುದ್ಧ. ಎದುರಿಸುವವನು ವಿಕ್ರಮಾರ್ಜುನ. ಹೀಗಿರುವಾಗ ನನ್ನದಾದ ಮೇಲೆ ನಿನಗೂ ಸದರಿ ಬರುತ್ತದೆ. ಕಾಯುವುದನ್ನು ಕಲಿತುಕೋ”.

ಭೀಷ್ಮರ ಮಾತಿನಂತೆ ಮುಂದೆ ಕರ್ಣನಿಗೂ ಹೋರಾಡುವ ಸರದಿ ಬಂತು. ಕರ್ಣ ಸೇನಾಪತಿಯಾಗುವ ಮುನ್ನ ಭೀಷ್ಮರ ಪಾದಕ್ಕೆ ನಮಸ್ಕರಿಸಿ, “ಅಜ್ಜ, ಮಾತಾಡಲು ತಿಳಿಯದೇ ನಿಮಗೆ ನೋಯಿಸಿದೆ, ಕ್ಷಮಿಸಿ” ಎಂದು ಬೇಡಿದ. “ಭೀಷ್ಮರು ಅವನನ್ನು “ನೀನು ನನ್ನ ಮೊಮ್ಮಗನೇ” ಎಂದು ಸಂತೈಸಿಸ ಕಳುಹಿಸಿದರು.

ಕರ್ಣರಸಾಯನ

ಕರ್ಣ ತನ್ನ ಸ್ವಾಮಿಗಾಗಿ ಹೋರಾಡಿ ಮಡಿದ. ಆ ಸಂದರ್ಭದಲ್ಲಿ ಪಂಪ ಹೇಳುತ್ತಾನೆ.” ಮಹಾಭಾರತದ ಕತೆಯಲ್ಲಿ ಬೇರೆ ಯಾರನ್ನಾದರೂ ನೆನೆಯಿರಿ, ಅಥವಾ ನೆನೆಯದೆ ಇರಿ. ಆದರೆ ಕರ್ಣನನ್ನು ಮಾತ್ರ ನೆನೆಯದೆ ಇರಬೇಡವಣ್ಣ. ಕರ್ಣ ಮಾಡಿದಂಥ ಹೋರಾಟ, ಕರ್ಣನ ಸತ್ಯಸಂಧತೆ, ಕರ್ಣನ ತ್ಯಾಗ, ಕರ್ಣನ ವೀರ ಇವುಗಳಿಂದ ತುಂಬಿ ಮಹಾಭಾರತದ ಕತೆ ಕರ್ಣ ರಸಾಯನ ವಾಗಿದೆಯಲ್ಲವೆ?” ಕರ್ಣನ ಪಾತ್ರ ವಿಷಯಕ್ಕೆ ಪಂಪನಿಗೆ ಒಂದು ರೀತಿಯ ಪ್ರೀತಿ. ಕರ್ಣನ ದಾನಗುಣ, ಅವನ ವೀರ, ಅವನ ಸ್ವಾಮಿಭಕ್ತಿ ಪಂಪನ ಮನಸ್ಸನ್ನು ಸೋರೆಗೊಂಡಂತೆ ಕಾಣುತ್ತದೆ. ಆದ್ದರಿಂದ ತನ್ನ ಮುಖ್ಯ ಪಾತ್ರವಾದ ಅರ್ಜುನನ್ನೂ ಕೊಂಚ ಕಾಲ ಮರೆತು, ಮಹಾಭಾರತವೇ ಕರ್ಣನ ಕೀತಿಯಿಂದ, ಅವನನ್ನು ಕುರಿತ ಮಾತುಕತೆಗಳಿಂದ ಕರ್ಣರಸಾಯನವಾಗಿದೆಯಲ್ಲವೆ- ಎಂದು ಮೆಚ್ಚುಗೆಯನ್ನು ಘೊಷಿಸಿದ್ದಾನೆ.

ಪಂಪನ ರೂಪಸ್ವಭಾವ

ಪಂಪ ತನ್ನ ಆಕಾರ, ಅಭಿರುಚಿಗಳ ಚಿತ್ರವನ್ನು ತಾನೇ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ನಸುಗಪ್ಪಾದ ಮೈಬಣ್ಣ; ಮೃದುವಾದ ಗುಂಗುರು ಕೂದಲು; ದುಂಡಾದ ಕಮಲದಂತೆ ಸೊಗಸಾದ ಮುಖ; ದಪ್ಪವೂ ಅಲ್ಲದ, ತೀರ ತೆಳ್ಳಗೂ ಅಲ್ಲದ ಮೈಕಟ್ಟು; ಮಾತು ಹಿತವಾಗಿ, ಮಿತವಾಗಿ ಮೃದುವಾದದ್ದು; ಅವನ ವೇಷಭೂಷಣಗಳು ಲಲಿತವಾಗಿ ಮಧುರವಾಗಿದ್ದವು. ಯಾವ ಯಾವ ಕಾಲಕ್ಕೆ ಯಾವ ಯಾವ ಉಡುಗೆ-ತೊಡುಗೆಗಳನ್ನು ಧರಿಸಬೇಕು-ಬೇಸಿಗೆಯಲ್ಲಿ ಎಂಥದು, ಮಳೆಗಾಲದಲ್ಲಿ ಎಂಥದು, ಚಳಿಗಾಲದಲ್ಲಿ ಎಂಥದು- ಎಂಬುದನ್ನು ತಿಳಿದವನಾಗಿದ್ದನು. ಇಂಥ ಕವಿ ಜೀವನದಲ್ಲಿ ಏನೇನು ಸುಖ ಉಂಟೊ, ಚೆಲುವು ಉಂಟೊ ಅದನ್ನು ಚೆನ್ನಾಗಿ ಅನುಭವಿಸಿದನು. ರಾಜನಿಂದ ತನಗೆ ದೊರೆತ ಗೌರವ; ಕವಿಯಾದದ್ದರಿಂದ ಬಂದ ಕೀರ್ತಿ; ಸುತ್ತಣ ಜೀವನದಲ್ಲಿನ ಸುಖ ಇದೆಲ್ಲವನ್ನೂ ಪಂಪ ಒಪ್ಪಿಕೊಂಡನು.

ಮರ, ಗಿಡ, ಹೂವು, ಹಕ್ಕಿ, ಕಾಡು-ಮೇಡು, ಗುಡ್ಡ-ಬೆಟ್ಟಗಳೆಂದರೆ ಪಂಪನಿಗೆ ತುಂಬ ಇಷ್ಟ. ಪಂಪ ಇಂಥ ಪರಿಸರದಲ್ಲಿ ಸಾಕಷ್ಟು ಓಡಾಡಿರಬೇಕು. ಮಾವು-ಮಲ್ಲಿಗೆಗಳನ್ನು ಕಂಡರೆ ಪಂಪನಿಗೆ ವಿಶೇಷ ಆಸಕ್ತಿ. ಸೊಗಸಾಗಿ ಹೂ ಬಿಟ್ಟ ಮಾವಿನಮರ; ಗಮಗಮಿಸುವ ಸಂಪಿಗೆ; ಬಿರಿದ ಮಲ್ಲಿಗೆ; ಕುಹೂ ಕುಹೂ ಎಂದು ಕೂಗುವ ಕೋಗಿದೆ; ಹೂ ತುಂಬಿದ ಎಲೆಬಳ್ಳಿಗಳ ಸಂದಣಿ; ಬೆಟ್ಟದ ಪರಿಸರದಲ್ಲಿ ಗಂಡು ಹೆಣ್ಣುಗಳು ಕೈಕೈ ಹಿಡಿದುಕೊಂಡು ಅಲೆದಾಡುವ ಆನಂದ -ಇವೆಲ್ಲದರಿಂದ ತುಂಬಿದೆಯಂತೆ ಬನವಾಸಿಯ ನಾಡು. ಇಂಥ ಬನವಾಸಿಯ ಕಡೆಯಿಂದ ಗಾಳಿ ತೀಡಿದರೆ ಸಾಕು, ಒಂದು ಬಿರಿದ ಹೂವನ್ನು ಕಂಡರೆ ಸಾಕು, ತಟ್ಟನೆ ಪಂಪನಿಗೆ ಈ ಬನವಾಸಿಯ ನೆನಪು ಬರುತ್ತದಂತೆ. ಈ ಬನವಾಸಿಯ ಚೆಲುವಿನ ನಾಡಿನಲ್ಲಿ ಹುಟ್ಟಬೇಕಾದರೆ ಪಡೆದು ಬಂದಿರಬೇಕು. ಹಾಗೆ ಮನುಷ್ಯರಾಗಿ ಹುಟ್ಟಲು ಪುಣ್ಯ ಮಾಡಿರದಿದ್ದರೆ, ಕಡೆಗೆ ಒಂದು ಮರಿದುಂಬಿಯಾಗಿಸ ಅಥವಾ ಕೋಗಿಲೆಯಾಗಿ ಹುಟ್ಟಬೇಕಂತೆ ಬನವಾಸಿ ದೇಶದಲ್ಲಿ. ಯಾರು ಅಂಕುಶ ಹಾಕಿದರೂ, ಕಾಡಿಂದ ನಾಡಿಗೆ ಬಂದ ಆನೆ ಕಾಡನ್ನೇ ನೆನೆಯುವಂತೆ, ಪಂಪನ ಮನಸ್ಸು ಎಂಥ ನಿರ್ಬಂಧದಲ್ಲೂ ಬನವಾಸಿಯನ್ನೇ ನೆನೆದು ಹಂಬಲಿಸುತ್ತದಂತೆ.

ಪಂಪ ಇದ್ದದ್ದು ಆಂಧ್ರಪ್ರದೇಶದ ಲೆಂಬುಳ ಪಾಟಕದಲ್ಲಿ. ಬನವಾಸಿ ಇರುವುದು ದೂರದ ಕನ್ನಡ ನಾಡಿನಲ್ಲಿ. ಪಂಪ ಬನವಾಸಿಯನ್ನು ಕುರಿತು ತನ್ನ “ವಿಕ್ರಮಾರ್ಜುನ ವಿಜಯ”ದಲ್ಲಿ ಅರ್ಜುನನ ಪಾತ್ರದ ಮೂಲಕ ತೋಡಿಕೊಂಡ ಬನವಾಸಿಯ ಹಂಬಲವನ್ನು ನೋಡಿದರೆ, ಅವನ ಜೀವನದ ಮುಖ್ಯವಾದ ಭಾಗ ಕನ್ನಡ ನಾಡಿನಲ್ಲಿ ಬನವಾಸಿಯಲ್ಲಿ ಕಳೆದಿರಬೇಕು ಅನ್ನಿಸುತ್ತದೆ. ಪಂಪನ ತಾಯಿಯ ತವರುಮನೆ ಧಾರವಾಡದ ಹತ್ತಿರದ ಅಣ್ಣಿಗೇರಿ. ಪಂಪ ತನ್ನ ಬಾಲ್ಯದಲ್ಲಿ ಅಣ್ಣಿಗೇರಿಗೆ ದೂರವಲ್ಲದ ಬನವಾಸಿಯ ಪ್ರಾಂತ್ಯದಲ್ಲಿ ಸಾಕಷ್ಟು ಓಡಾಡಿರಬೇಕು, ಆ ಚೆಲುವನ್ನು ಹೀರಿರಬೇಕು.

ಪಂಪನಿಗೆ ಸುಖವಾಗಿರಲು ತಕ್ಕ ಅನುಕೂಲಗಳೆಲ್ಲ ಇದ್ದುವು. ರಾಜಾಶ್ರಯದ ಸುಖ; ಚೆಲುವನ್ನು ಕುರಿತ ಪ್ರೀತಿ; ಜನರಿಂದ ಬಂದ ಕೀರ್ತಿ- ಎಲ್ಲವೂ ಒದಗಿಬಂದವು. ಹಾಗೆಂದು ಕಷ್ಟ ಬಂದರೆ, ಯಾರಾದರೂ ಮೇಲೆ ಬೀಳುವ ಸಂದರ್ಭ ಬಂದರೆ ಸುಮ್ಮನೆ ಹೆದರಿ ತೂಕವನಲ್ಲ. ಅವನು ಕವಿ ಮಾತ್ರವಲ್ಲ. ಕಲಿಯೂ ಆಗಿದ್ದನು. ಕಲಿ ಎಂದರೆ ಶೂರ ಎಂದು ಅರ್ಥ. ಅವನು ಲೇಖನಿ ಹಿಡಿದು ಕಾವ್ಯ ಬರೆಯುವುದರಲ್ಲಿ ಮಾತ್ರ ನಿಪುಣನಲ್ಲಿ; ಸಮಯ ಬಂದರೆ ಕತ್ತಿಯನ್ನು ಹಿಡಿದು ಯುದ್ಧ ಮಾಡಲೂ ಬಲ್ಲವನಾಗಿದ್ದನು. ತನ್ನ ರಾಜನಾದ ಅರಿಕೇಸರಿಯ ಜತೆಗೂಡಿ ಆ ಕಾಲದಲ್ಲಿ ಅನೇಕ ಯುದ್ಧಗಳಲ್ಲಿ ಹೋರಾಡಿದ್ದನು. ತಾನು ಚತುರಂಗ ಸೈನ್ಯಕ್ಕೆ ಭಯಂಕರನಾಗಿದ್ದೆನೆಂದೂ, ಎಂದೆಂದೂ ಅಳ್ಳೆದೆಯವನಾಗಿರಲಿಲ್ಲವೆಂದೂ ಹೇಳಿಕೊಂಡಿದ್ದಾನೆ ಪಂಪ. ಯುದ್ಧದಲ್ಲಿ ಅನೇಕ ಮಹಾನಾಯಕರ ತಲೆಯನ್ನು ಹಾರಿಸಿದ ಕೀರ್ತಿ ಪಂಪನದು. ಪಂಪ ಇದ್ದುದ್ದು ವೀರಯುಗದಲ್ಲಿ. ಜನ ತಮ್ಮ ರಾಜರುಗಳಿಗಾಗಿ ಪ್ರಾಣವನ್ನು ಕೊಡಲು ಸಿದ್ಧರಾಗಿದ್ದು. ರಾಜನಿಗಾಗಿ ಹೋರಾಡಿ ಸಾಯುವುದು ಹೆಮ್ಮೆಯ ವಿಷಯವಾಗಿತ್ತು.

ಯುದ್ಧ ಚಿತ್ರಿಸುವಾಗಲೂ……..

ಪಂಪನಿಗೆ ಇಂಥ ವೀರರನ್ನು ಕಂಡರೆ ತುಂಬ ಇಷ್ಟ. ಹೇಡಿತನ ಆತನಿಗೆ ಪ್ರಿಯವಾದುದಲ್ಲ. ಅವನು ಬರೆದ “ವಿಕ್ರಮಾರ್ಜುನ ವಿಜಯ” ಕಾವ್ಯದಲ್ಲಿ ಪಂಪನು ತನ್ನ ಯುದ್ಧದ ಸ್ವಂತ ಅನುಭವಗಳನ್ನು ಚಿತ್ರಿಸಿದ್ದಾನೆ. ಕೌರವ ಪಾಂಡವರಿಗೆ ನಡೆದ ಕುರುಕ್ಷೇತ್ರದ ಯುದ್ಧವನ್ನು ವರ್ಣಿಸುವಾಗ ಪಂಪ ತನ್ನ ಕಾಲದಲ್ಲಿ ನಡೆದ, ಬಹುಶಃ ತಾನೇ ಭಾಗವಹಿಸಿದ ಯುದ್ಧಗಳ ಚಿತ್ರವನ್ನು ಕೊಟ್ಟಿದ್ದಾನೆ. ಪಂಪನ ಕಾಲದ ಜನ ಯುದ್ಧಕ್ಕೆ ಹೋಗುವ ಮೊದಲು ಏನೇನು ಸಿದ್ಧತೆ ಮಾಡಿಕೊಳ್ಳುತ್ತಿದ್ದರು, ಏನೇನು ಅಂದುಕೊಳ್ಳುತ್ತಿದ್ದರು, ಯುದ್ಧದ ಹಿಂದಿನ ದಿನದ  ಸಂಜೆ ಹೇಗಿರುತ್ತಿತ್ತು. ಯುದ್ಧ ಹೇಗೆ ನಡೆಯುತ್ತಿದ್ದಿತು- ಎಂಬ ವಿವರಗಳನ್ನೆಲ್ಲ ಸೊಗಸಾಗಿ ಚಿತ್ರಿಸಿದ್ದಾನೆ. ಅವುಗಳನ್ನು ಒಂಡೆರಡು ಚಿತ್ರ ಹೀಗಿವೆ:

ಕೌರವ ಪಾಂಡವರ ಯುದ್ಧ ನಿಶ್ಚಯವಾಗಿದೆ. ಎರಡೂ ಕಡೆಯ ಸೈನ್ಯಗಳು ಬಂದು ಕುರುಕ್ಷೇತ್ರವೆಂಬ ಸ್ಥಳದಲ್ಲಿ ಬೀಡುಬಿಟ್ಟಿವೆ. ಸಂಜೆಯಾಗಿದೆ. ಬೆಳಗಾದರೆ ಯುದ್ಧ, ಯುದ್ಧದಲ್ಲಿ ಗೆಲ್ಲುವವರು ಯಾರೋ, ಸೋಲುವವರು ಯಾರೋ; ಸಾಯುವವರು ಯಾರೋ, ಬದುಕಿ ಉಳಿಯುವವರು ಯಾರೋ. ಇಂಥ ಸಂದರ್ಭದಲ್ಲಿ ಬೆಳಗಾದರೆ ಯುದ್ಧಕ್ಕೆ ಹೋಗಿ ಹೋರಾಡಬೇಕಾದ ಸಾಮಾನ್ಯ ಸೈನಿಕನೊಬ್ಬ ತನ್ನ ಹೆಂಡತಿಗೆ ಹೇಳುತ್ತಾನೆ; “ಈ ಹೊತ್ತೇ ಹೊತ್ತು, ನಾಳೆ ಈ ವೇಳೆಗೆ ನಾನು ದೇವಲೋಕದ ಕನ್ಯಕೆಯರೊಂದಿಗೆ ಇರುತ್ತೇನೆ.” ಅದಕ್ಕೆ ಹೆಂಡತಿ ಹೇಳುತ್ತಾನೆ, “ಇಲ್ಲ, ಇಲ್ಲ, ಮತ್ತೆ ನಾಳೆಯೂ ನೀವು ಹಿಂದಿರುಗಿ ಬಂದು ನನ್ನನ್ನು ನೋಡುತ್ತೀರಿ.” ಗಂಡ ಕೇಳಿದ, “ಅದು ನಿನಗೆ ಹೇಗೆ ಗೊತ್ತು?” ಹೆಂಡತಿ ಹೇಳುತ್ತಾನೆ, “ನನಗೆ ಗೊತ್ತು. ನನಗೆ ಓಲೆಭಾಗ್ಯ ಇದೆ.” ಇನ್ನೊಂದು ಕಡೆ ಹೆಂಡತಿಯೊಬ್ಬಳಿಗೆ ಗೊತ್ತಾಯಿತು, ನಾಳೆ ಬೆಳಗಾದರೆ ಯುದ್ಧ, ಯುದ್ಧದಲ್ಲಿ ಗಂಡ ಬದುಕಿಬರುವುದು ಅಸಂಭವ ಎಂದು. ಅದನ್ನರಿತು ಗಂಡನಿಗೆ ಹೇಳುತ್ತಾಳೆ; “ನಾಳೆ ನೀವು ಯುದ್ಧದಲ್ಲಿ ಹೋರಾಡಿ ಸ್ವರ್ಗಕಕೆ ಹೋಗುತ್ತೀರಿ. ಹಾಗೆಂದು ನಾನೊಬ್ಬಳೇ ನಿಮ್ಮನ್ನು ಅಲ್ಲಿಗೆ ಕಳುಹಿಸಿ ಇಲ್ಲಿರುವಷ್ಟು ಬೆಪ್ಪಳೆ? ನೀವು ಅಲ್ಲಿಗೆ ಬರುವುದಕ್ಕೆ ಮೊದಲು ನಾನೇ ಅಲ್ಲಿಗೆ ಹೋಗಿ ನಿಮ್ಮನ್ನು ಎದುರುಗೊಳ್ಳುತ್ತೇನೆ.

ಈ ಎರಡು ಸಂದರ್ಭಗಳನ್ನು ನೋಡಿದರೆ ಯುದ್ಧದಂಥ ಘಟನೆಯ ಹಿನ್ನೆಲೆಯಲ್ಲಿಯೂ ಗಂಡ-ಹೆಂಡಿರ ಪ್ರೀತಿ, ಹಾರೈಕೆ, ನಿಶ್ವಯ, ಬದುಕನ್ನು, ಸಾವನ್ನು ಕುರಿತ ಅವರ ನಿಲುವು-ಇವುಗಳನ್ನು ಪಂಪ ಎಷ್ಟು ಸೊಗಸಾಗಿ ತಂದಿದ್ದಾನೆ ಅನ್ನಿಸುತ್ತದೆ.

ರಸಿಕರುಧೀರರು

ಯುದ್ಧ ನಡೆದ ದಿನದ ಸಂಜೆ: ಶಿಬಿರಗಳಲ್ಲಿ ಆಯಾಸಗೊಂಡ ಸೈನಿಕರಿಗಾಗಿ ಮನರಂಜನೆ ನಡೆದಿದೆ. ಹೆಂಗಸರ ಗಾಯನ, ನರ್ತನ, ಜಾಜಿಯ ಕಂಪು; ಮಧುವಿನಸ ಇಂಪು-ಸೈನಿಕರಿಗೆ ಸಂತೋಷವನ್ನು ತಂದಿವೆ. ರಣರಂಗದಲ್ಲಿ ಹೋರಾಡುವಾಗ ತಲೆಗೆ ಬಾಣಗಳು ನಾಟಿ ಮುರಿದು ಹೋಗಿವೆ. ಅಂಥವರು ಒಂದು ಕಡೆ ಕೂತಿದ್ದಾರೆ. ಅವರ ಅಕ್ಕಪಕ್ಕಗಳಲ್ಲಿ ಇಬ್ಬರು ಧಾಂಡಿಗರು ನಿಂತು ಇಕ್ಕುಳಗಳಿಂದ ತಲೆಯಲ್ಲಿ ನಾಟಿ ಮುರಿದ ಬಾಣಗಳನ್ನು ಚಕ್ಕನೆ ಕೀಳುತ್ತಾರೆ. ಹಾಗೆ ಕೀಳುವಾಗ ಆಗುವ ನೋವನ್ನು ಮಾತಿನಲ್ಲಿ ತೋರದೆ, ಮೈ ಅಲುಗಾಟದಿಂದ ತೋರಿಸದೆ, ಮುಖವನ್ನು ಸಪ್ಪದೆ ಕೂಡಾ ಮಾಡದೆ ಈ ವೀರರು ಸಹಿಸಿಕೊಳ್ಳುತ್ತಾರಂತೆ.

ಪಂಪನ ಕಾಲದ ಜನ ಇಂಥವರು. ಜೀವನದಲ್ಲಿ ರಸಿಕರು; ರಣರಂಗದಲ್ಲಿ ಧೀರರು. ಸ್ವಾಮಿಭಕ್ತಿಗಾಗಿ ಪ್ರಾಣವನ್ನು ತೃಣವನ್ನಾಗಿ ಎಣಿಸಿದವರು.

ಮಾನವತೆಯ ಪಂಚಸೂತ್ರ

ಮನುಷ್ಯ ಎಂದರೆ ಯಾರು? ಏನೇನಿದ್ದರೆ ಒಬ್ಬನನ್ನು ಮನುಷ್ಯ ಎಂದು ಕರೆಯಬಹುದು? ಪಂಪ ಹೇಳುತ್ತಾನೆ- ಮನುಷ್ಯರೆನಿಸಿಕೊಳ್ಳಬೇಕಾದರೆ ಈ ಐದು ಲಕ್ಷಣಗಳಿರಬೇಕು; “ಚಾಗದ, ಭೋಗದ, ಅಕ್ಕರದ, ಗೇಯದ, ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಿಸರೆ ಮಾನಿಸರ್.” ಇದು ಮಾನವತೆಯ ಪಂಚಸೂತ್ರ.

ಮೊದಲನೆಯದು “ಚಾಗ” ಎಂದರೆ ತ್ಯಾಗ. ಮನುಷ್ಯ ಮನುಷ್ಯನೆನ್ನಿಸಿಕೊಳ್ಳಬೇಕಾದರೆ ಇರಬೇಕಾದ ಮೊದಲ ಗುಣ ತ್ಯಾಗ ಮಾಡುವ ಬುದ್ಧಿ. ತಾನು ಪಡುವ ಸುಖದಲ್ಲಿ ಒಂದಷ್ಟನ್ನು ಇನ್ನೊಬ್ಬರಿಗಾಗಿ ತ್ಯಾಗ ಮಾಡಬೇಕು. ಎರಡನೆಯದು “ಭೋಗ” ಈ ಲೋಕದ ಸುಖ-ಸಂತೋಷಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳದೆ ಅನುಭವಿಸಬೇಕು, ಭೋಗಿಸಬೇಕು. ಈ ಜಗತ್ತು ನಶ್ವರ, ಇದು ಕ್ಷಣಿಕ, ಎಲ್ಲಕ್ಕಿಂತ ಪರಮಾರ್ಥವೊಂದೇ ದೊಡ್ಡದು ಎಂಬ ಭಾವನೆಗಳನ್ನು ತುಂಬಿಕೊಂಡು, ಕಣ್ಣೆದುರಿಗೆ ಕಾಣುವ ಇಹಲೋಕದ ಸುಖವನ್ನು ತಿರಸ್ಕರಿಸಬಾರದು. ಮೂರನೆಯದು “ಅಕ್ಕರ” ಎಂದರೆ ಅಕ್ಷರಜ್ಞಾನ, ವಿದ್ಯೆ; ಸಾಹಿತ್ಯ-ಶಾಸ್ತ್ರಾದಿಗಳ ಅಭ್ಯಾಸ. ಮನುಷ್ಯ “ಅಕ್ಕರಿಗ” ನಾಗದಿದ್ದರೆ, ವಿದ್ಯಾವಂತನಾಗದಿದ್ದರೆ ಅವನ ಬಹುದು ಅಪೂರ್ಣ. ನಾಲ್ಕನೆಯದು “ಗೇಯ”ದ ಆಸಕ್ತಿ. ಗೇಯ ಎಂದರೆ ಸಂಗೀತ. ಸಂಗೀತದ ಬಗ್ಗೆ ರುಚಿ ಇರಬೇಕು. ಒಳ್ಳೆಯದಾಗಿ ಹಾಡಲು ತನಗೆ ಬಂದರೆ ಸಂತೋಷ; ಬರದಿದ್ದರೆ ಹೋಗಲಿ, ಒಳ್ಳೆಯ ಸಂಗೀತವನ್ನು ಕೇಳಿ ಆನಂದಿಸುವ ಮನಸ್ಸಾದರೂ ಬೇಕು. ಐದನೆಯದು “ಗೊಟ್ಟಿಯ ಅಲಂಪು” ಜೊತೆಗೂಡಿ ಬದುಕುವುದರಿಂದ ದೊರೆಯುವ ಸಂತೋಷ. ಮನುಷ್ಯ ಒಂಟಿಯಾಗಿ, ಹೇಗೋ ಮೂಲೆಯಲ್ಲಿ ಮುದುರಿ ಕೂಡಬಾರದು. ಹತ್ತು ಜನರೊಂದಿಗೆ ಸ್ನೇಹ-ವಿಶ್ವಾಸದಿಂದ “ಗೋಷ್ಠಿ”ಯಾಗಿ, ಮೇಳವಾಗಿ, ಗುಂಪಾಗಿ ಬದುಕುವುದರಲ್ಲಿರುವ ಸುಖ ಏನೆಂಬುದನ್ನು ತಿಳಿಯಬೇಕು. ಹೀಗೆ ಈ ಐದು ಲಕ್ಷಣಗಳಿರುವ ಮನುಷ್ಯನೇ ನಿಜವಾದ ಮನುಷ್ಯ.

ಒಡೆಯಒಡವೆ

ಪಂಪ ಇಂಥ ನಿಜವಾದ ಮನುಷ್ಯನಾಗಿ ಬದುಕಿದವನು. ಹಿಂದಿನ ಕಾವ್ಯಗಳನ್ನು ಮೀರಿಸಿದ ಕಾವ್ಯಗಳನ್ನು ಬರೆದವನು. ಮುಂದಿನ ಕವಿಗಳಿಗೆ ಮಾರ್ಗದರ್ಶಿಯಾದವನು. ಮುಂದಿನ ಕವಿಗಳಿಂದ ಗೌರವವನ್ನು ಗಳಿಸಿಕೊಂಡವನು. ಹದಿನಾಲ್ಕನೆಯ ಶತಮಾನದ ನಾಗರಾಜನೆಂಬ ಕವಿ ಪಂಪನನ್ನು ಕುರಿತು “ಪಸರಿಪ ಕನ್ನಡಕ್ಕೆ ಒಡೆಯನ್ ಓರ್ವನೆ ಸತ್ಕವಿ ಪಂಪನ್ ಆವಗಂ” ಎಂದು ಸ್ತುತಿಸಿದ್ದಾನೆ. ಎಂದರೆ ಸಾವಿರ ವರ್ಷದಷ್ಟು  ವಿಸ್ತಾರವಾಗಿ ಹರಡಿಕೊಂಡಿರುವ ಕನ್ನಡ ಸಾಹಿತ್ಯಕ್ಕೆ ಸತ್ಕವಿಯಾದ ಪಂಪ ಎಂದಿಗೂ ಒಡೆಯನಾಗಿದ್ದಾನೆ. ಈ ಮಾತು ನಿಜ; ಇಂದಿಗೂ ನಿಜ, ಪಂಪನಂಥ ಕವಿ ಕನ್ನಡ ಸಾಹಿತ್ಯದ ಒಡೆಯನಾಗಿದ್ದಾನೆ, ಒಡವೆಯಾಗಿದ್ದಾನೆ.