ಮನೆಯ ಮೆಯ್ಗೆ ಕಿಟಕಿ ಕಣ್ಣು;
ಕವಿ ಕೊಟಡಿಯ ಜೀವನು.
ಮನೆಯ ಗುಡಿಗೆ ಕಿಟಕಿ ಪಡಿಮೆ:
ಕಲೆಯ ಕಣ್ಣಿಗೇನು ಕಡಿಮೆ?
ಪ್ರತ್ಯಕ್ಷನು ದೇವನು!

ಕೊಟಡಿಯ ಕುರ್ಚಿಯೊಳಿದ್ದವನೇಕೊ
ಕಿಟಕಿಯ ಕಡೆ ನೊಡಿದೆನಕ್ಕೊ!-
ಬಿತ್ತರದಾಕಾಶದ ತಿಳಿನೀಲಿ
ದೂರದ ಶಾಂತ ಸಮುದ್ರವ ಹೋಲಿ
ಮೆರೆದಿದೆ, ಕಿಟಕಿಯ ಚೌಕವ ತುಂಬಿ,
ಗೆರೆಯೆಳೆದಂತಿರೆ ಸರಳಿನ ಕಂಬಿ,
ಶಾರದ ನೀರದವೊಂದಿನಿತಿಲ್ಲ;
ನೀಲಿಯೆ, ನೀಲಿಯೆ; ನೀಲಿಯ ಎಲ್ಲ.
ಕಾಯ್ದಿದ್ದಿತು ಬಿಸಿಲಿನ ಹಗಲು,
ಸದ್ದಿಲ್ಲದ ನಿದ್ದೆಯೆ ಹಗಲು!
ನಿಶ್ಚಲವಾಗಿರೆ ನೀಲಿಯೆ ನೀರಧಿ,
ನೀಲಾಕಾಶದ ಓ ಆ ದೂರದಿ
ಬೆಳ್ಳಿಯ ಮುಗಿಲಿನ ಚೂರುಗಳಂತೆ
ಬೆಳ್ಳಕ್ಕಿಯ ಜೊತೆ ಹಾರಾಡುತ್ತಿವೆ;
ಮುಕ್ತಿಯ ಪಡೆವಮಲಾತ್ಮಗಳಂತೆ
ಶೂನ್ಯದಂಚಿನೊಳೆ ಹೊಂಚಾಡುತ್ತಿವೆ!
ದೃಷ್ಟಿಯೆ ದಣಿವಂದದೊಳಾ ಹಕ್ಕಿ
ಏರುತ್ತೇರುತ್ತಾಗಿವೆ ಚುಕ್ಕಿ!
ಅಃ! ಇಲ್ಲಾದುವೆ ಶೂನ್ಯಂಬೊಕ್ಕು,
ಕಣ್ಣಾಚೆಗೆ ಕಲ್ಪನೆಗೂ ಮಿಕ್ಕು!
ನೋಡುತ ನೋಡುತ ನೋಡುತ ನಾನೂ
ಮೇಲ್‌ಮೇಲೇರಿದೆನಾದೆನು ಬಾನು…!

ಮನೆಯ ಮೆಯ್ಗೆ ಕಿಟಕಿ ಕಣ್ಣು;
ಕವಿ ಕೊಟಡಿಯ ಜೀವನು.
ಮನೆಯ ಗುಡಿಗೆ ಕಿಟಕಿ ಪಡಿಮೆ:
ಕಲೆಯ ಕಣ್ಣಿಗೇನು ಕಡಿಮೆ?
ಪ್ರತ್ಯಕ್ಷನು ದೇವನು!

೨೬-೯-೧೯೩೫