ಹಿನ್ನೆಲೆಯನು ರಚಿಸಿರೆ ಸಂಜೆ
(ಹೆತ್ತಳೊ ಎನೆ ಬಂಜೆ!)
ನೋಡಾಗಿದೆ ಸಗ್ಗಕೆ ಹಾದಿ
ಸಾಧಾರಣ ಬೀದಿ!

ಬೇರೆಯ ಸಮಯದಿ ಈ ಬೀದಿ
ಬೆಳಕಿಲ್ಲದ ಬೂದಿ:
ಇಕ್ಕೆಲದಲಿ ತಂತಿಯ ಕಂಬ;
ಮಸಿಮುಸುಡಿಯ ಜಂಬ!
ಮನೆಗಳು ಕೆಲವಿವೆ, ಸಾಮಾನ್ಯ;
ಸೌಂದರ್ಯಕೆ ಅನ್ಯ!

ಪಡುವಣ ದೆಸೆಗೇರಿದೆ ರಸ್ತೆ;
ಅದೊ ಬರಿ ದುರವಸ್ಥೆ!
ಆದರೆ ಸಂಧ್ಯಾಕಾಲದಲಿ,
(ಬೆಕ್ಕಾದಂತೆ ಹುಲಿ!)
ಅತಿ ಸಾಮಾನ್ಯದ ಈ ಬೀದಿ,
ಕಾಣ್, ಸ್ವರ್ಗಕೆ ಹಾದಿ!