ಮುಳುಗುತಿದೆ ವರುಣದಿಕ್ಕಿನಲಿ ಮೃಗಶಿರ ರಾಶಿ;
ತಳಿಸುತಿಹುದುಜ್ವಲೋತ್ತಮ ಮೃಗವ್ಯಾಧನುಂ
ಕಿರಣಸೂಜಿಯ ಬಾಣಗಳ ಪರಂಪರೆಯೆಚ್ಚು;
ಸಪ್ತರ್ಷಿಮಂಡಲಂ ಸ್ವಾತಿ ಚಿತ್ರೆಯರೊಡನೆ
ಗಗನ ಮಧ್ಯದಿ ನಿಂದು ರಂಜಿಸಿದೆ; ಶುಕ್ರನುಂ
ಮೂಡಲಿಂ ಬಹು ಮೇಲಕ್ಕೆತಂದು, ಬೆಳ್ಳಿಹನಿ
ಎಂಬಂತೆ, ತಿಂಗಳಿಲ್ಲದ ಬಾನ್ಗೊಡೆಯನಾಗಿ,
ಮಿಣುಕದೆಯೆ ಚೆಲ್ಲುತಿರುವನು ರಜತದೀಪ್ತಿಯಂ;
ಚಾಮುಂಡಿ ಗಿರಿಯಾಚೆ ಶಸ್ತ್ರಕಾಂತಿಯ ನಭದ
ಪಟದಲ್ಲಿ ಹೆಡೆಯೆತ್ತುತಿಹುದು ವೃಶ್ಚಿಕರಾಶಿ,     ೧೦
ಮಣಿಯ ತ್ರೈಫಣೆಯುರಗನಂತೆ, ಬಾಲವನಡಗಿ
ಬೆಟ್ಟದಾಚೆಯಲಿ; ಬಳಿಯಲ್ಲಿ ಗುರು ಬೆಳಗುತಿದೆ
ಬೆಳ್ಳಿಗೆರಡನೆಯಾಗಿ ಹೊಳಹಿನಲಿ. ತುಂಬಿಹುದು
ಶಾಂತಿ, ನಿಶ್ಚಲಗಗನದಾದ್ಯಂತಮಂ!

ಭೂಮಿ
ಪ್ರತಿಬಿಂಬಿಸಿದೆ ನಭಶ್ಯಾಂತಿಯನು, ಮೌನದಿಂ;
ಕಾಂತಿಯನು, ಅಗಣಿತ ತಟಿದ್ದೀಪ ರಾಜಿಯಿಂ.
ದೂರದಾ ಹಳ್ಳಿಯಿಂ ಬಹ ಭಜನೆ ಕೀರ್ತನೆಯ
ನಾದವೂ ಕೆಡಿಸದೀ ಮೋನಮಂ ಪೋಷಿಸಿದೆ.
ನಿಶ್ಚಲಂ ನೀರವಂ ರಮ್ಯಂ ಇಳಾ ನಿದ್ರೆ!

ಹಬ್ಬಿಹ ಸರೋವರಂ, ವನಸದೃಶ ತರುರಾಜಿ, ೨೦
ತರುಮಧ್ಯೆಯಲ್ಲಲ್ಲಿ ಭವ್ಯ ಸೌಧಾಗ್ರತತಿ,
ನಕ್ಷತ್ರಮಾಲೆಯಿಂ ಮೆರೆವುದೆನೆ ಚಾಮುಂಡಿ,
ಮೇಣಾಚೆ, ಮೆಲ್ಲಮೆಲ್ಲನೆ ಬೆಳ್ಳಗಾಗುತಿಹ
ಮೂಡಣದ ಬಾನು-ಒಂದಾದ ಮೇಲೊಂದೆಲ್ಲ
ಚಿತ್ರದಲಿ ಬರೆದಂತೆ ಮನವ ಸಂಮೋಹಿಸಿವೆ,
ಕವಿಮನವನದ್ದಿ ರಸ ಸುಖ ಮಧು ತಟಿನಿಯಲ್ಲಿ!

ಸರೋವರದೊಳೊಂದು ಕಿರುತೆರೆಯಿಲ್ಲ; ನಲ್‌ಕೆರೆಯ
ಮೇಲುಮೈ ನುಣ್ಪುವೆತ್ತೆಸೆಯುತಿದೆ, ಬಿತ್ತರದ
ಕನ್ನಡಿಯ ಹೋಲಿ. ಕಾಣ್ ಅದೊ: ಚೆಲ್ವಿ ಸರಸಿಯಾ
ಶೀತಲ ವಿಭಾ ರಮ್ಯ ಸಲಿಲ ಮುಖ ಮುಕುರದಲಿ         ೩೦
ಮರುಬಿಂಬಿಸಿಹ ಪೃಥಿವಿ, ರಸಲೋಕವನೆ ಮೀರಿ
ಶೋಭಿಸುತ್ತಿದೆ, ಬಾಳ್ಗೆ ತನಿರಸದಿಂಪನೂಡಿ!
ತಟಿಯಾ ತಟಿದ್ದೀಪರಾಜಿ, ಪಡಿನೆಳಲಿನಲಿ,
ಕರಗಿಸಿದ ಚಿನ್ನದುರಿ ಬೆಂಕೆಯ ಸಲಾಕೆಗಳ
ಸಾಲ್ಗಳಂದದಿ ವಿರಾಜಿಸಿದೆ, ಕಣ್ದಿಟ್ಟಿಯನು
ಚಿಟೆಗೈದಾಕರ್ಷಿಸಿ. ನೋಡು: ಮಾರ್ಪೊಳಪಿನಲಿ,
ಉಷೆಯ ಹೆಣ್ಣಿನ ಕೆನ್ನೆಯರಿಸಿನಕೆ ಕುಂಕುಮಂ
ನೆರೆದುದೆನೆ, ಸೂರ್ಯಸಾರಥಿಯರುಣನೈತರುವ
ತೇರ್ಗಾಲಿಯಿಂದೇಳ್ವ ಕೆಂಧೂಳಿ, ಮೂಡಲಲಿ
ಶೋಭಿಸುತ್ತಿಹುದೆಂತು ತುಂಬಿಹುದು ದಟ್ಟಯಿಸಿ!

-ಆಃ       ೪೦
ಆಲಿಸದೊ, ನಾರಾಚವೇಗದಿಂ ಸುಯ್ಯೆಂದು
ಹಾರಿ ಬಂದಂಬುವಿಂಗೆರಗುತಿಹ ತಿಂತಿಣಿಯ
ಕೊಳರ್ವಕ್ಕಿಗಳ ರೆಕ್ಕೆಸದ್ದು! ಅದೊ ಗೂಬೆದನಿ!
ಅದೂ ಕೂಡ, ಸನ್ನಿವೇಶದ ಮಹಿಮೆಯೆಂಬಂತೆ,
ವಿಕೃತವಾಗಿಲ್ಲ! ಮತ್ತಾಲಿಸದೊ ತೇನೆಯುಲಿ!
ಮಡಿವಾಳನಿಂಚಿಳ್ಳು! ಮಾಗಿಯಾದರು ಕೂಡ,
ಕೇಳು ಕೂಗಿತದೊ ಕೋಗಿಲೆ! ಸಂಪ್ರದಾಯವನು
ಮುರಿದು ನಡೆವ ನವೀನ ಯುಗವಲ್ತೆ ಈ ಕಾಲ?….

ನೋಡುತಿಹ ನೋಟದೊಳೆ ಅದೊ ಆ ದಿಂಗತದೆಡೆ
ಪೂರ್ವದಿಕ್ಕುರಿಯುತಿದೆ! ಸ್ಥೂಲ ಜಡ ಜಗವೆಲ್ಲ            ೫೦
ಧ್ಯಾನದೃಷ್ಟಿಗೆ ಭಾವವಿನ್ಯಾಸದಂದದಲಿ
ವೇದ್ಯವಾಗುತಿದೆ: ಕವಿದರ್ಶನಕೆ ಜಡವಿಲ್ಲ;
ಜಡವೆಂಬುದೆಲ್ಲ ಚೇತನದ ನಟನೆಯ ಲೀಲೆ.
ರಸವಲ್ಲದಿನ್ನಿಲ್ಲ ವಿಶ್ವದಲಿ. ಮಾನವನ
ಮೇಣಿತರ ಜೀವಿಗಳ ಮನಕೆ ಮೇಣನುಭವಕೆ
ಕಲ್ಲಾಗಿ, ಮಣ್ಣಾಗಿ, ನೀರು ಗಾಳಿಗಳಾಗಿ,
ಬೆಳಕು ಬೆಂಕಿಗಳಾಗಿ, ನಭವಾಗಿ ಗಿರಿಯಾಗಿ

ಗ್ರಹ ತಾರೆ ಶಶಿ ಸೂರ್ಯ ನೀಹಾರಿಕೆಗಳಾಗಿ,
ಕಾಲದೇಶಗಳೊಂದು ಮುರಿಯಾಗಿ ನಿರಿಯಾಗಿ
ಹೊನಲಾಗಿ, ಹೊರಗಾಗಿ ತೋರುವೀ ವಿಶ್ವಕ್ಕೆ  ೬೦
ತಳಹದಿಯದೊಂದೆ ಚೈತನ್ಯ; ಅದು ರಸದೃಷ್ಟಿ
ಸಂವೇದ್ಯ; ರಸಋಷಿಯ ಪ್ರತಿಭಾ ಸಮಾಧಿಗದು
ಪ್ರತ್ಯಕ್ಷ. ಆ ರಸ ಸಮಾಧಿಯಲಿ ಲಯನಾಗಿ
ಕವಿ ಸಚ್ಚಿದಾನಂದ ಮಧುವಿನಾ ಮಡುವಿನಲಿ
ಮುಳುಗಿ ಕರಗುವನು, ಬಾಳೆಲ್ಲ ನಾಲಗೆಯಾಗೆ!

ಕಾವ್ಯರತಿ, ಸುಂದರಿಯೆ, ಪ್ರತಿಭಾ ತಪಸ್ವಿನಿಯೆ,
ವಿಶ್ವಸಂಮೋಹಿನಿಯೆ, ಶೃಂಗಾರ ಮಂದಿರೆಯೆ,
ನಿನ್ನ ಮಿಂಚಪ್ಪುಗೆಗೆ ಕಗ್ಗಲ್ಲು ರಸದ ಕಿಡಿ:
ಜಡವೆಲ್ಲ ಚೈತನ್ಯದಗ್ನಿ ನದಿ! ತವ ಕೃಪೆಗೆ
ಶರಣು ಕವಿದರ್ಶನಂ: ಹೇ ದೇವಭೋಗಿನಿಯೆ,            ೭೦
ನಿನ್ನ ಚುಂಬನರಸದ ಪಾನದಿ ಕವಿಯೆ ಯೋಗಿ!

೧೧-೧-೧೯೩೬