ಪಡುವಲ ಕಡಲಿನ ಮಿಂಚನು ಗುಡುಗನು ನುಂಗಿ ಬಸಿರಿನಲಿ, ಮುಗಿಗೆದರಿ,
ಮುಂಗಾರಸುರಿಯು ರಕ್ಕಸವಜ್ಜೆಗಳಿಕ್ಕುತ ಬಂದಳು ಬಲು ಗದರಿ!
ಗುಟುರನು ಹಾಕಿತು ಮುಂಗಾರ್ ಗೂಳಿ!
ಘೀಳಿಟ್ಟೊರಲಿತು ಘನಘಟೆಯಾಳಿ!
ಬುಸುಗುಟ್ಟಿತು, ಬೀಸಿತು ಬಿರುಗಾಳಿ!
ಸುತ್ತಲು ಮುತ್ತಿತು ಕಾರ್ಮೋಡ!
ಹರಿಯುವ ಹಾವಿನ ತೆರದಲಿ ಕತ್ತಲೆ ಮೆಲ್ಲನೆ ನುಂಗಿತು ಮಲೆನಾಡ!

ಹಿಂಜರಿದುರಿಬಿಸಿಲಂಜುತಲಡಗಿತು, ರವಿಮಂಡಲ ಕಣ್ಮರೆಯಾಯ್ತು;
ಕಾಳಿಯ ಕೇಶದ ತಿಮಿರವು ಮುಸುಗಿತು, ಶಾಂತಿಯು ಗಲಭೆಗೆ ಸೆರೆಯಾಯ್ತು.
ಕಾಳಿಯ ಕಂಗಳ ಕೆಂಬೆಳಕಂತೆ,
ಕೈ ಹೊಂಬಳೆಗಳ ಹೊಸ ಹೊಗರಂತೆ,
ಝಳಪಿಪ ಖಡ್ಗದ ದೀಧಿತಿಯಂತೆ,
ಮಿಂಚುಗಳೆಸೆದುವು ಗೊಂಚಲಲಿ!
ಹೊಳೆದುವು, ಅಳಿದುವು, ಸುಳಿಸುಳಿದಲೆದುವು ಮುತ್ತುವ ಮೋಡಗಳಂಚಿನಲಿ!

ಹಾಡುವ ಹಕ್ಕಿಯು ಹಣ್ಣಿನ ಮರದಿಂದೋಡುತ ಹುಲ್ಲಿನ ಹಕ್ಕೆಯಲಿ
ಚಿಲಿಪಿಲಿ ದನಿ ಮಾಡವ್ವನ ಕರೆಯುವ ಮರಿಗಳನಪ್ಪಿತು ತಕ್ಕೆಯಲಿ.
ಬೆಚ್ಚನೆ ರೆಕ್ಕೆಯೊಳವುಗಳನಿಟ್ಟು,
ಹಸಿದಿಹ ಮಕ್ಕಳಿಗುಣಿಸನು ಕೊಟ್ಟು,
ಗೂಡಿನ ಬಾಯಲಿ ಮಂಡೆಯನಿಟ್ಟು
ದಿಟ್ಟಿಯನಟ್ಟಿತು ಯೋಗಿಯೊಲು,
ಕೊಂಬೆಯ ತೊಟ್ಟಿಲ ತೂಗುತ ಗಾಳಿಯು ಬುಸುಬುಸುಗುಡುತಿರೆ ಭೋಗಿಯೊಲು!

ಬನದಲಿ ಬಯಲಲಿ ಮೇಯುವ ತುರುಗಳು ಜವದಲಿ ಕೊಟ್ಟಿಗೆಗೋಡಿದುವು;
ಬಾಲವನೆತ್ತಿದ ಕರುಗಳು “ಅಂಬಾ” ಎನ್ನುತ ತಾಯ್ಗಳ ಕೂಡಿದುವು.
ಗುಡುಗಿನ ಸದ್ದಿಗೆ ಕಾಡುಗಳದುರಿ,
ಅಡವಿಯ ಮಿಗಗಳು ಸಿಡಿಲಿಗೆ ಬೆದರಿ,
ಕಿತ್ತೆದ್ದೋಡುತ ಹಿಂಡನು ಚೆದರಿ
ಪೊದೆಗಳ ಗುಹೆಯನು ಸೇರಿದುವು.
ತೊಳಲುವ ಕರ್ಮುಗಿಲಾಲಿಯ ಕಲ್ಗಳ ಮಿರುಗುವ ಮಳೆಯನು ಕಾರಿದುವು!

ವನಪರಿವೃತ ಗಿರಿಶಿರದಿಂದೊಯ್ಯನೆ ಮರದಲೆದಳಿರನು ತುಳಿತುಳಿದು
ಚೆಲುವಿನ ಹನಿಗಳು, ಸುರಶಿಶುಮಣಿಗಳು, ಬುವಿಗಿಳಿತಂದನು ನಲಿನಲಿದು.
ಬಳಿ ಸಾರುವ ದೂರದ ಸರ ಕೇಳೆ,
ಗಣನೆಗೆ ಸಿಲುಕದ ಮಳೆಹನಿ ಬೀಳೆ,
ಕಬ್ಬಿಗನೆದೆಯಲಿ ಮುದ ಮೊಳೆತೇಳೆ
ನೆನೆವುದು ಸೊಗದಲಿ ಬಗೆಗಣ್ಣು:
ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು!

ಮುಗಿಲಿನ ಮುತ್ತುಗಳಾಲಿಯ ಕಲ್ಲುಗಳುದುರಲು ಹೂಮಳೆಯಂದದಲಿ
ಹುಡುಗರು ಹುಡುಗಿಯರಾಯ್ದಾಯ್ದವುಗಳ ಕುಣಿದು ತಿಂದರಾನಂದದಲಿ.
ಸಗ್ಗದ ಕಂಬನಿ ತಿರೆಯನು ತೊಯ್ಯೆ,
ಬೆಂದಿಹದುರಿಯನು ಪರ ಬಂದೊಯ್ಯೆ,
ಲೋಕಕೆ ನಾಕವು ಬಿಜಯಂಗೆಯ್ಯೆ
ಕಿಸಲಯ ಸುಮ ಸೋಪಾನದಲಿ,
ಕವಿ ಹೃದಯದಿ ಮೋಹನ ಸುರಗಾನದ ಮಳೆಗರೆವುದು ಸುಮ್ಮಾನದಲಿ!

೨೨-೪-೧೯೨೯