“ನಿನಗೆ ನಾನು, ನನಗೆ ನೀನು,
ಸಣ್ಣ ಹಕ್ಕಿಯೆ;
ಹಾಡು, ಕೇಳಿ ನಲಿವೆ ನಾನು,
ಬಣ್ಣ ಚುಕ್ಕಿಯೆ.
ಕೇಳ್ದರೇನು ಬಿಟ್ಟರೇನು
ಉಳಿದ ಲೋಕವು?
ಉಲಿಯೆ ನೀನು, ನಲಿಯೆ ನಾನು,
ನಮಗೆ ನಾಕವು!”

ಆಗ ತಾನೆ ಮೂಡುತಿತ್ತು
ಪುಷ್ಯ ದಿನಮಣಿ.
ಕಟ್ಟುತಿದ್ದ ಮನೆಯ ಬಳಿ
ನೆಟ್ಟ ಬಿದಿರ ನೆತ್ತಿಯಲಿ
ಪುಟ್ಟದೊಂದು ಚಿಟ್ಟೆಹಕ್ಕ
(ಬಾನಿಗೆದುರು ಕರಿಯ ಚುಕ್ಕಿ!)
ನಲುಮೆ ಚಿಲುಮೆಯುಕ್ಕಿಯುಕ್ಕಿ
ತನ್ನ ಸುಖಕೆ ತಾನೆ ಮಿಕ್ಕಿ
ತನಗೆ ತಾನೆ ಹಾಡುತಿತ್ತು
ತನ್ನ ಮನದಣಿ!

ರಸ್ತೆಯಲ್ಲಿ ನಡೆವ ಮಂದಿ
(ಮುತ್ತಿನೆದುರು ಮುಂದೆ ಹಂದಿ!)
ಹಾಳು ಹರಟೆಹೊರೆಯ ಹೊತ್ತು
ಕೇಳದದನು ಸಾಗುತಿತ್ತು.
ಜನರು ಕೇಳಲಿಲ್ಲವೆಂದು
ನಾಣ್ಚಲಿಲ್ಲ, ಮುಳಿಯಲಿಲ್ಲ,
ನಿಲಿಸಲಿಲ್ಲ ತನ್ನ ಸೊಲ್ಲ;
ರವಿಗೆ ಗಾನದರ್ಘ್ಯವಿತ್ತು,
ಕವಿಗೆ ರಸದ ತೀರ್ಥವಿತ್ತು
ತನಗೆ ತಾನೆ ಹಾಡುತಿತ್ತು
ಹಕ್ಕಿ ಮನದಣಿ!

“ನಿನಗೆ ನಾನು ನನಗೆ ನೀನು…..”
ಎಂದು ಹಾಡುತಿರಲು ನಾನು,
ಕೆಂಕಮಾಗಿ ಮೂಡು ಬಾನು
ಆಗತಾನೆ ಮೂಡುತಿತ್ತು
ಪುಷ್ಯ ದಿನಮಣಿ!

೬-೧-೧೯೩೭