ಅನಂತದಿಂ,
ದಿಗಂತದಿಂ,
ಅನಂತತಾ ದಿಗಂತದಿಂ
ನೋಡೆ ನೋಡೆ ಮೂಡಿತೊಂದು
ಮೋಡ ಗೋಪುರ;
ಗಿರಿಯ ಬಿತ್ತರ;
ಶಿಖರದೆತ್ತರ;
ಅನುಭವಿಸುವ ರಸಋಷಿ ಮತಿಗತಿಮಹತ್ತರ!

ಭಾದ್ರಪದದ ಬಾನಿನಲ್ಲಿ
ನೀಲ ಪಟದ ಭಿತ್ತಿಯಲ್ಲಿ
ಸಂಜೆ ರವಿಯ ಚಿನ್ನ ಛವಿಯ ಕಲೆಯ ಕುಂಚಿಕೆ
ಸ್ವಲ್ಪದಲ್ಲಿ ಕಲ್ಪಗಳನೆ
ಕಲ್ಪಿಸುತ್ತ ಚಿತ್ರಿಸಿತೆನೆ
ಪ್ರಕಟವಾಯ್ತು ವರ್ಣಶಿಲ್ಪದೊಂದು ಮಹ ಸಂಚಿಕೆ!

ಸ್ತೂಪ ಸ್ತೂಪ ಸ್ತೂಪವೇರಿ
ಮೇಘದೇಗುಲ,
ವ್ಯೋಮಕೇಶ ಜಟಾಜೂಟ ಶೈಲಕೂಟ ಶೈಲಿಯೋಲ್,
ಬೃಹದ್ ಭೂಮ ಶೂಲದೋಲ್,
ಮನಃಕೋಶವನ್ನು ಮೀರಿ,
ಪ್ರಾಣಕೋಶವನ್ನು ತೂರಿ,
ಅಗಲ ಅಗಲ ಅಗಲವಾಗಿ
ಗಗನ ಗಗನ ಗಗನವಾಗಿ
ಬಿರಿದುದೆದೆಯ ಬಾಗಿಲ:
ತಟಸ್ಥವಾಯ್ತು ಮಿಥ್ಯೆಯೊಂದನೃತ ವಿಮರ್ಶನ;
ಇಂದ್ರಿಯತೆಯ ದಾಂಟಿದಾತ್ಮಕಾಯ್ತತೀತ ದರ್ಶನ!

ರಸಾನಂದ ತನ್ಮಯತೆಗೆ ಕಾಲವುಂಟೆ?
ಕಾಮರೂಪಿಯಾಗಿ ಬಂದು
ಕ್ಷಣಕ್ಷಣಕ್ಷಣಕ್ಕೊಂದು
ಪುನರ್ಜನ್ಮವಾಗಿ ನಿಂದು
ಕಣ್ಣ ಮುಂದೆ ವಿರಚಿತಂ,
ನವೋ ನವೋ ಪರಿಚಿತಂ,
ವಿಯದ್ದಿವ್ಯ ಕವಿಯ ಕಾವ್ಯರಸವನೀಂಟೆ
ಘಂಟೆ ಘಂಟೆ ಘಂಟೆ ಘಂಟೆ
ಕಳೆದೆನೆಂಬ ಮಾತಿಗೇನು ಅರ್ಥವುಂಟೆ?

ಮಾತಿಗೊಂದು ಅರ್ಥವೇಕೆ
ಅರ್ಥವಿದ್ದರರ್ಥ ಸಾಕೆ?
ಮೋಡಗಳನು ನೋಡಿ ಕಲಿ;
ಅರ್ಥ ಅಲ್ಪ ಎಂದು ತಿಳಿ!
ಮಾತು ಅರ್ಥ ಎರಡೂ ವ್ಯರ್ಥ ಸ್ವ-ಅರ್ಥವಿರದಿರೆ!
ನೋಡುತಿರೆಯಿರೆ,
ದೂರವಾಗುತರ್ಥ ಗಿರ್ಥವೆಂಬ ವ್ಯಾಧಿಗೆ
ಸಯ್ತೆನಾಂ ಸಮಾಧಿಗೆ:
ತಟಿಚ್ಚರಣದಗ್ನಿಹಂಸಕೃಪಾಂಭೋಧಿಗೆ!

೧೮-೯-೧೯೪೧