ಸಂಧ್ಯಾಶಿಲ್ಪಿಯ ಸುವರ್ಣಯಕ್ಷಣಿ
ಮೇಘ ಲೋಕಕೆ ಓಕುಳಿಯೆರಚಿದೆ
ವಿಧವಿಧರೂಪದ ವಿಧವಿಧ ವರ್ಣದ
ಚಿತ್ರರಥೋತ್ಸವಕೆ.
ಚಿಂತಾತೀತಂ ಭಾಷಾತೀತಂ
ಬುದ್ಧಿಗಸಾಧ್ಯಂ ಹೃತ್‌ಸಂವೇದ್ಯಂ
ಭಾವ ತರಂಗಗಳೇಳುತಿವೆ,
ವಿವಿಧಾಕಾರವ ತಾಳುತಿವೆ,
ಗಗನ ಮಹಾಮನದಿ!
ನಿಶ್ಚಳ ಪಕ್ಷ್ಮಂ ನಿಶ್ಚಳ ತಾರಂ
ನಿಷ್ಪಂದಿತ ತನು ತಾನ್,
ಕಾಯ್ದಾ ಕಬ್ಬುನ ನೀರಾಗುವವೋಲ್
ಹೊಮ್ಮಿದ ಗಾನಂ ದೂರಾಗುವವೋಲ್,
ಭಾವಸಮಾಧಿಯಿನಂತಸ್ಸಾರನ್
ಧ್ಯಾನಪ್ರಲಯಿತ ಕವಿ ತಾನಾದನ್
ಬೈಗಿನ ಬಾನ್!

೨೨-೧೧-೧೯೪೧