ಸ್ವರ್ಗವನು ಬೇಟೆಯಾಡಲು ಹೊರಟೆ ಹೊತ್ತಾರೆ
ಹಸಿದ ಹೆಬ್ಬುಲಿಯಂತೆ, ಸೌಂದರ್ಯಧೇನುವಾ
ಎದೆಯ ನೆತ್ತರ ಹೀರುವಾತುರದಿ, ಹಸುರಿಡಿದ
ಮಲೆಯ ಕಣಿವೆಯ ಹೊದರು ಹುಲ್ಲಿನ ಬಯಲಿನಲ್ಲಿ!
ಹೋದಿರುಳು ಮಳೆಹೊಯ್ದು ತೊಪ್ಪನೆಯೆ ತೊಯ್ದ ತಿರೆ
ಭಾದ್ರಪದ ಮಾಸದಾ ಪ್ರಾತಃಸಮಯ ಸೂರ್ಯ
ಸುಂದರ ಮರೀಚಿಯಲಿ ಮಿಂದು, ತೃಣಗಣ ಶಿರದಿ
ಕುಣಿ ಕುಣಿವ ಹಿಮಮಣಿಯ ಸಾಸಿರ ಸೊಡರ್ಗಳಿಂ
ರಮಣೀಯವಾಗಿತ್ತು, ಹುಡಿಮಾಡಿ ಕಿಡಿಯಿಟ್ಟು
ಮಳೆಬಿಲ್ಲನವನಿಯೊಳೆರಚಿದಂತೆ! ಕಿಕ್ಕಿರಿದು
ಹಕ್ಕಿಯಿಂಚರವಿಳೆಯನಾಗಸಕೆ ಬೆಸೆದಿತ್ತು!
ತೇಲಿ ಕಬ್ಬಿಗನಾತ್ಮವಾನಂದ ವಾರ್ಧಿಯಲಿ
ಮುಳುಗಿ ಕರಗಿತತ್ತು! ಸಂಪೂರ್ಣತೆಯ ಸಂತೃಪ್ತಿ
ಜೀವ ಜಿಹ್ವೆಯ ಮೇಲೆ ಹೆಜ್ಜೇನ ಹೊಯ್ದಿತ್ತು!

ನಿಲ್ಲಿಲ್ಲಿ! ದಮ್ಮಯ್ಯ, ನಿಲ್ಲಿಲ್ಲಿ! ಕಾಲವೂ
ದೇಶವೂ ಸಂಧಿಸುವ “ಈಗಿಲ್ಲಿ!”-ಸ್ವರ್ಗವೈ
ಈ ಸ್ಥಳ-ಯಮುನೆಯನೀ ಕ್ಷಣ-ಗಂಗೆ ಸಂಗಮಿಸೆ
‘ಈಗಿಲ್ಲಿ’!-ನಿಂತಿಲ್ಲಿ ನಿಂತೀಗ ನೋಡಲ್ಲಿ:
ಹಸುರುಕ್ಕಿ ಹರಿಯುವಾ ಹುಲ್ಲೆಸಳ ಮುಡಿಯ ತುದಿ
ಮಣಿದೀಪವೆನೆ ಉರಿವ ಉಜ್ಜ್ವಲ ಹಿಮದ ಬಿಂದು!
ಸೌಂದರ್ಯದೇವತೆಯ ಮೂಗುತಿಯ ಹನಿಮುತ್ತು
ನೇಲುತಿದೆ, ಜೋಲುತಿದೆ, ಮಿರುಮಿರುಗುತಿದೆ ನೋಡು!
ಹೆಜ್ಜೆ ಮುಂದಿಡೆ ಸೊನ್ನೆ; ಹೆಜ್ಜೆ ಹಿಂದಿಡೆ ಸೊನ್ನೆ;
ಚಣ ಮುಂಚಿದರೆ ಸೊನ್ನೆ; ಚಣ ಹಿಂಚಿದರೆ ಸೊನ್ನೆ;
ಕಾಲ ದೇಶ ಪ್ರಯಾಗಕ್ಷೇತ್ರದೀಗಿಲ್ಲಿ
ಮೀಯದಿರೆ ದೊರಕದೈ ಹಿಮಮಣಿ ತಿಲೋತ್ತಮೆಯ
ಸಗ್ಗಸಿರಿ. ತಿರೆಯೊಳಿಹ ಚೆಲುವೆಯರ ಚೆಲುವೆಲ್ಲ
ಸೇರಿ ಮೈವೆತ್ತೊಡಂ ಹಿಮಮಣಿ ತಿಲೋತ್ತಮೆಯ ಮುಂದೆ…..

ಪೋ, ಸಾಕು ಬಣ್ಣನೆಮಾತು; ಹೋಲಿಕೆಯ
ಕಣ್ಣು ಕುರುಡಾದೀತು! ನಿಂತು ಸುಮ್ಮನೆ ನೋಡಿ
ಮೆಯ್ಯ ಮರೆ, ಆಲೋಚನೆಯನತ್ತಕಡೆ ತಳ್ಳಿ!

೫-೯-೧೯೩೫