ಮಾಗಿಯ ಪ್ರಾತಃಕಾಲದ ಬಿಸಿಲಲಿ
ಲೋಕವೆ ಚಳಿ ಕಾಯಿಸುತಿತ್ತು.
ಕಾಮನ ಬಿಲ್ಲಿನ ಕಣ್ಗರಿ ನವಿಲೆನೆ
ಹೂವಿನ ಕೊಪ್ಪಲು ಕುಣಿದಿತ್ತು.
ನೀಲಿಯ ಕನಸಿನ ಮುಗಿಲನು ಹೋಲಿ
ಹೋದೆನು ನಾನಾಲಸ್ಯದಿ ತೇಲಿ.ಸ

ಮೆಲ್ಲಲರಾಟಕೆ ತಲೆಯೊಲೆದಿದ್ದ
ಜಿನಿಯಾ ಹೂವಿನ ತುದಿಯಲ್ಲಿ
ಕರಿಮೈ ಬಿಳಿರೆಕ್ಕೆಯ ಕೆಂಬೊಟ್ಟಿನ
ಚೆಲ್ವಿನ ಚಿಟ್ಟೆಯ ಕಂಡಲ್ಲಿ
ತಲ್ಲೀನತೆಯೊಳೆ ಚಲಿಸದೆ ನಿಂತೆ,
ಬಾಳಲರಂಚಲಿ ಹೊಂಬನಿಯಂತೆ!

ಅಹಹಾ ನಿಂತಿರೆ ದೃಷ್ಟಿಜಿಹ್ವೆಯೊಳೆ
ದೃಶ್ಯದ ಮಧುರಸವನು ಹೀರಿ,
ಬಾಳಿನ ಹೂವಿನ ಜೇನನು ನನ್ನೆದೆ
ನಲಿದೀಂಟಿತು ಚಿಟ್ಟೆಯ ಸೇರಿ:
ದರ್ಶನವೊಂದಿರೆ ಸಗ್ಗಕೆ ಬಟ್ಟೆ
ಹೂವಿನ ತುಟಿಯನು ಚುಂಬಿಪ ಚಿಟ್ಟೆ!

೮-೧-೧೯೩೬