ಹಾಡಿದನು ಗಮಕಿ;
ನಾಡು ನಲಿದುದು ರಸದ ಕಡಲಿನಲಿ ದುಮುಕಿ:
ಆ ಅರಣ್ಯಾಕಾಶಗಳ ಬೃಹನ್ಮೌನದಲಿ,
ಕತ್ತಲಲಲಿ ಕನಸಾದ ವಿಸ್ತೀರ್ಣಧಾತ್ರಿಯಲಿ,
ಚೈತ್ರ ರಾತ್ರಿಯಲಿ,
ಮಸಗಿ ತೆರೆತೆರೆಯಾಗುತುಬ್ಬಿ
ಹಸರಿ ನೊರೆನೊರೆಯುಕ್ಕಿ ಹಬ್ಬಿ
ತೀರವನ್ನಪ್ಪಳಿಸಿ ಕೊಬ್ಬಿ
ಭೋರಿಡುವ ವಾರಿಧಿಯ ಘನಘೋಷದಂದದಲಿ ತಿರೆಯ ತಬ್ಬಿ
ಮೊಳಗಿ ಬರೆ ಕವಿ ಕುಮಾರವ್ಯಾಸನಾವೇಶವಾಣಿ
ರೋಮಾಂಚನದಿ ವಿಕಂಪಿಸಿತು ಸಹ್ಯಾದ್ರಿಶ್ರೇಣಿ!

 * ಗಮಕಿವರ್ಯ ಶ್ರೀ ಕೆ. ಕೃಷ್ಣರಾಯರು ಮಲೆನಾಡಿನಲ್ಲಿ ಭಾರತವಾಚನ ಮಾಡಿದ ಒಂದು ಸಂದರ್ಭದಲ್ಲಿ.