ಕದ್ದಿಂಗಳು; ಕಗ್ಗತ್ತಲು;
ಕಾರ್ಗಾಲದ ರಾತ್ರಿ.
ಸಿಡಿಲ್ಮಿಂಚಿಗೆ ನಡುಗುತ್ತಿದೆ
ಪರ್ವತ ವನಧಾತ್ರಿ.
ತುದಿಯಿಲ್ಲದೆ ಮೊದಲಿಲ್ಲದೆ
ಹಿಡಿದಂಬರವನು ತಬ್ಬಿದೆ
ಕಾದಂಬಿನಿ ರಾಶಿ;
ನಿರ್ದಯ ಕಠಿನಾಘಾತದಿ
ಕುಂಭಿನಿಯನು ಅಪ್ಪಳಿಸಿದೆ
ಘೀಳಿಟ್ಟುರೆ ಭೋರೆನ್ನುತೆ
ಬಿರುಗಾಳಿಯು ಬೀಸಿ!

ಹೊಂಬಳ್ಳಿಯು ಹೊಮ್ಮಿದವೊಲು
ಥಳ್ಳೆನೆ ಮುಗಿಲಂಚು,
ಇರುಳಲಿ ಹಗಲಿಣಿಕಿದವೊಲು
ಹಾವ್ನಾಲಗೆ ಮಿಂಚು
ನೆಕ್ಕುತಲಿದೆ ಕತ್ತಲೆಯನು;
ಕುಕ್ಕುತಲಿದೆ ಬುವಿಗಣ್ಣನು
ಮಿಂಚ್ಹಕ್ಕಿಯ ಚಂಚು!
ಆಕಾಶವೆ ನೀರಾಯ್ತೆನೆ
ಸುರಿಯುತ್ತಿದೆ ಭೋರ್ಭೋರೆನೆ
ಮುಂಗಾರ್ಮಳೆ ಧಾರೆ;
ಲಯ ಭೀಷಣ ಮಳೆಭೈರವ
ಮೈದೋರಲು ಮರೆಯಾಗಿವೆ
ಭಯದಲಿ ಶಶಿತಾರೆ!

ಲಯ ರುದ್ರನ ಜಯ ಡಿಂಡಿಮ
ಘನ ವಜ್ರದ ರಾವ;
ಭವ ವಿಪ್ಲವಕರ ಭೈರವ
ವರ ತಾಂಡವ ಭಾವ!
ದಿಗ್ದಿಕ್ಕಿಗೆ ಅದೊ ಹೊಕ್ಕಿದೆ
ಕಾರ್ಮುಗಿಲಿನ ಕೇಶ!
ಸಿಡಿಲ್ಮಿಂಚಲಿ ಹೊಮ್ಮುತ್ತಿದೆ
ಮಳೆ ಭೈರವ ರೋಷ!
ಮಳೆ ಎಂಬುದು ಬರಿ ಸುಳ್ಳಿದು!
ಮಳೆಯಲ್ಲಿದು! ಮಳೆಯಲ್ಲಿದು!
ಪ್ರಲಯದ ಆವೇಶ!

೨೬-೧-೧೯೩೪