ಶ್ರೀ ರಾಮಕೃಷ್ಣಾಶ್ರಮದ ನನ್ನ ಕೊಟಡಿಯಲಿ
ಕುಳಿತಿದ್ದೆ. ನೀರವತೆ ತುಂಬಿತ್ತು. ಮುಳುಗಿತ್ತು
ಧ್ಯಾನದಲಿ ಮಠವೆಲ್ಲ. ಪುಷ್ಯಪ್ರಭಾತ ರವಿ
ದಂತುರ ದಿಗಂತದಲಿ ಮೈದೋರಲನುವಾಗಿ
ಹಬ್ಬುತಿದ್ದತ್ತರುಣಕಾಂತಿ ಲಲಿತಾದ್ರಿಯಾ
ಹಿಂದಣ ದಿಶಾಭಿತ್ತಿಯಲಿ. ಇದ್ದಕಿದ್ದಂತೆ
ಬೆಚ್ಚಿಬಿದ್ದಾಲಿಸಿದೆ ಕಿವಿಯಾಗಿ: ಪರಿಚಯದ
ಕೊಂಚೆಯುಲಿ! ಕ್ರೌಂಚಪಕ್ಷಿಯ ಪಂಕ್ತಿ ಗಗನದಲಿ
ಹಾರುತಿದೆ ಎಂದರಿತು, ಜವದಿ ಬಾಗಿಲು ತೆರೆದು,
ದುಮುಕಿದೆನು ಹೊರಗೆ-ಮನೆಸೆರೆಯಿಂದ ಬಯಲಿಂಗೆ-  ೧೦
ಶೈಶವ ಸಹಜ ಕುತೂಹಲಿದಿಂದೆ; ಮೇಣ್ ಕವಿಗೆ
ಸಹಜವಾಗಿಹ ಮೋಹದಿಂದೆ.

ತಿಳಿಯಾಗಸದ
ನೀಲಪಟದಲಿ ಹಾರುತಿದ್ದತ್ತು ಸುಂದರಂ
ಕ್ರೌಂಚಪಂಕ್ತಿಯ ರೇಖೆ, ಕರಿಮಣಿಗಳಂ ವಿರಳದಿಂ
ಪೋಣಿಸಿದ ಸೂತ್ರದಂತೆ, ಒಂದಿಡಿಯ ಫರ್ಲಾಂಗು!
ಪುಂಖಾನುಪುಂಖತ್ವಮಂ ನಟಿಸಿ ತೋರ್ಪಂತೆ
ಒಂದಾದ ಮೇಲೊಂದು, ಒಂದರಾ ಹಿಂದೊಂದು,
ಒಂದೆ ಇಚ್ಛಾರಜ್ಜು ಬಂಧಿಸಿಹುದೆಂಬಂತೆ,
ನೀಲದಲಿ ನಿಸ್ತಂಭತೋರಣಂ ತೇಲ್ದುದೆನೆ
ಚಲಿಸಿತು ವಿಹಂಗಸಂಘಂ ವಿಯದ್ರಂಗದಲಿ,    ೨೦
ಯುವಕ ಕವಿ ಶಿಶುವಾಗಿ ಬಾಯ್ದೆರೆದು ಕಣ್ಮಲರೆ
ಮನವುಕ್ಕಿ ಎದೆಯುಬ್ಬಿ ಮಿಳ್ಮಿಳನೆ ಪೆಳ್ಪಳಿಸಿ
ನಿಷ್ಪಂದನಾಗಿ ನಿಲ್ವನ್ನೆಗಂ! ನೋಡುತಿರೆ,
ಹಾರುತಿರೆ, ನಿಮಿಷ ನಿಮಿಷಕೆ ದೂರದೂರಾಗಿ,
ಪಕ್ಷಿಗಳ ವಿರಳತೆ ನಿಬಿಡವಾಗಿ, ಬಾಂದಳದಿ
ನೀಳವಾಗಿಹ ಹೆಣೆದ ಜಡೆಯೊಂದು ತೇಲ್ದುದೆನೆ
ಋಜುಕುಟಿಲ ವಿನ್ಯಾಸದಿಂದೆ ತೆರೆತೆರೆಯಾಗಿ
ತೋರಿದತ್ತಾ ಮನೋಹರ ಕ್ರೌಂಚ ಖಗಪಂಕ್ತಿ!
ಮೆಲುಗಾಳಿಯಲಿ ತೇಲಿಬಹ ಊರ್ಣ ತನು ತಂತು
ಎಂತಲೆವುದೆಂತೊಲೆವುದಂತಂತು ಚಲಿಸಿತ್ತು ೩೦

ಕೊಂಚೆವಿಂಡಿನ ಗೆರೆ, ನಭೋ ನೀಲ ವಾರಿಧಿಯ
ವೀಚಿಮಯ ವಿಸ್ತಾರದಲಿ ಮೀಸುತಿರುವೊಂದು
ತಿಮಿರದ ಸಲಾಕೆಯಂದದ ಕರಿಯುರಗನಂತೆ!
ಚಲಿಸುತಿಹ ಡೊಂಕು ಕೊಂಕಿನ ಕೊಂಚೆ ಕರಿಗೀಟು
ಹಾರಿದರೆ, ಬಳುಕಿದರೆ, ತಿರುಗಿದರೆ, ಸುತ್ತಿದರೆ,
ಚಲನೆಯೊಂದೊಂದನೂ ಅಭಿನಯಿಸಿತೆನ್ನಾತ್ಮ,
ಕಲ್ಪನೆಯೊಳನುಭವಿಸಿ! ನೋಡುವೆನ್ನಾತ್ಮವೂ
ಕ್ರೌಂಚ ಖಗಪಂಕ್ತಿ ತಾನಾಗಿ ಹಾರಿತು ನಭದ
ನೀಲದಲಿ, ಮೈಯೆಲ್ಲ ನೀಲಿಯಪ್ಪನ್ನೆಗಂ.
ಬರಬರುತೆ ಕಿರಿದಾಗಿ, ದೂರ ಬಹುದೂರಾಗಿ,  ೪೦
ಕೂದಲೆಳೆಯಂತಾಗೆ, ಕೊನೆಗೆ ಕಲ್ಪನೆಯಿತ್ತ
ಗಾತ್ರಮಾತ್ರಂಬೆತ್ತು….ಏನಿಲ್ಲದಂತಾಗಿ
ನೋಡುವೆನ್ನಾತ್ಮವೂ ದೃಶ್ಯಲೀನತೆವೆತ್ತು
ಶೂನ್ಯ ಬೃಹದಾಕಾಶದಲಿ ಶೂನ್ಯದಂತಾಯ್ತು!…..

ಎಚ್ಚತ್ತು ನಿಡುಸುಯ್ದು ನಿಂತೆ. ಕಂಬನಿಯೊರಸಿ
ನೋಡಿದೆನು ಮೂಡಿದಿನನಂ. ನೀರಸತೆಯಾಂತು
ಮಂಕುಕವಿದಂತಿದ್ದ ದಿನವೆನೆಗೆ ರಂಜಿಸಿತು
ಸ್ವರ್ಗೀಯವಾಗಿ! ಏಂ ಗೈದುದೊ ಪವಾಡಮಂ
ಆ ಕ್ರೌಂಚಪಂಕ್ತಿ ನನ್ನೆದೆಯ ಸುರಲೋಕದಲಿ,
ಮೇಣಂತೆ ಹೊರಲೋಕದಲಿ! ವೆಚ್ಚವಿಲ್ಲದೆಯೆ,            ೫೦
ದಣಿವಿಲ್ಲದೆಯೆ, ಮೇಣು ಹೊತ್ತುಗೊಲೆಯಿಲ್ಲದೆಯೆ
ನೂರು ನಾಟಕ ಸಿನಿಮದಾಮೋದಗಳನೆಲ್ಲ
‘ಮಾಣು ಪೋ!’ ಎಂದೆಂಬ ದಿವ್ಯದರ್ಶನವಾಯ್ತು
ನನಗಿಂದು! ಕಿರಿಯ ದೃಶ್ಯದಿ ಹಿರಿಯ ಸಗ್ಗವನೆ
ಕಾಂಬಂತೆ ವರವನೆನಗಿತ್ತ ಗುರುವೆ, ನಮಸ್ತೇ!

ಇಡಿಯ ಮೈಸೂರು ನಗರದ ಮೇಲೆ ಹಾರಿತಾ
ಛದ್ಮವೇಷದ ಸ್ವರ್ಗವಾ ಕ್ರೌಂಚ ಖಗಪಂಕ್ತಿ.
ಆದರದು ಮೊಗವೆತ್ತಿ ನೋಡಿಲ್ಲ! ಅದಕಿಲ್ಲ
ಪುರಸತ್ತು! ಮನೆಬಾಗಿಲಿಗೆ ನಾಕವೊಲಿದು ಬರೆ
ನಾವ್ ಲೆಕ್ಕಿಸುವುದಿಲ್ಲ ಕಣ್ಣೆತ್ತಿ! ತರುವಾಯ     ೬೦
ಹುಡುಕುವೆವು ತೊಳತೊಳಲಿ ತೀರ್ಥಯಾತ್ರೆಗಳಲ್ಲಿ
ಸುತ್ತಿ. ತೇರೆಳೆದು ಬಳಲುವರು; ಜಾತ್ರೆಗಳಲ್ಲಿ
ನೂಕಲು ನುಗ್ಗಾಟದಲಿ ಬೆವರುವರು; ಬೀದಿಯಲಿ
ಮೆರವಣಿಗೆ ಬರೆ ನೋಡುವರು ಹೊರಹೊರಟು ನುಗ್ಗಿ;
ಕ್ರೌಂಚ ಸುಂದರ ಪಂಕ್ತಿ ಗಾನಗೈದಂಬರದಿ
ಮುಕ್ತಿ ಮಂತ್ರವ ಬರೆಯುತೈತರೆ ಕೊರಳನೆತ್ತಿ
ಕಾಣುವರೆ ಗತಿಯಿಲ್ಲ!

ಪ್ರಾರ್ಥಿಸುವೆನನುದಿನಂ
ನನಗೆ ಆ ವರವಿತ್ತ ನಿನ್ನಂ, ಪ್ರಕೃತಿಮಾತೆ,
ನನ್ನ ಕನ್ನಡ ಬಂಧುಗಳ ಮನಕದನು ನೀಡು!
ಪಲ್ಲವಿಸುವಂತೆ ಕಲೆಯೆಲ್ಲರಲಿ, ಕೃಪೆಮಾಡು!  ೭೦

೨೫-೧-೧೯೩೫