ನಸು ನೀಲಿಯ ಮುಸುಗಾಂತಿಹ
ಮಾಗಿಯ ನಡುಹಗಲು;
ಅಲ್ಲಲ್ಲಿಯೆ ಬಾಂದಳದಲಿ
ಹಾಲ್ದೆರೆ ಕೆನೆಮುಗಿಲು!
ಬೆಳುದಿಂಗಳೆ ಬಿಸಿಲಾಗಿದೆ
ಎಂಬಂದದಿ ಮಾಗಿ
ಚಳಿಗಾಳಿಯ ಬೀಸುತಲಿದೆ
ಕಂಪಿಸೆ ಕುಳಿರಾಗಿ!

ಭೂಮಿಯ ತುಟಿಗಾಗಸ ತುಟಿ
ಮುತ್ತಿಡುವೆಡೆಯಲ್ಲಿ
ದೂರದ ಗಿರಿಪಂಕ್ತಿಯು ಬರಿ
ಕನಸಾಗಿಹುದಲ್ಲಿ!
ನೀಲಿಯ ಮಳಲೊಟ್ಟಿದವೊಲು
ಮುಗಿಲಿಗೆ ಮೊಗ ಚಾಚಿ
ಶಿಖರಂಗಳು ಸ್ಪರ್ಧಿಸುತಿವೆ
ವೀಚಿಯ ಮೇಲ್ ವೀಚಿ!

ಹಸುರ್ಬಯಲಲಿ ಮೇಯುತಲಿರೆ
ಹಸುಕರುಗಳ ಮುಂದೆ
ಬೆಳ್ವಕ್ಕಿಗಳೋಡುತಲಿವೆ
ಹುಳುಬೇಂಟೆಗೆ ಹಿಂದೆ.
ತುರುಗಾಯುವ ಕಿರುಹೈದನು
ಕರಿಯಾಕಳ ಮೇಲೆ;
ನಡೆವಳು ಬಳಿ ನಗುನಗುತಲಿ
ಅವನೋರಗೆ ಬಾಲೆ!
ನೀರಾಗಿಹ ಕನ್ನಡಿಯೊಲು
ನಲಿಯುತ್ತಿಹ ಕೊಳದಿ
ದಡದಲ್ಲಿಯ ಗಿಡು ಬಳ್ಳಿಯು
ನಡುಗುತ್ತಿವೆ ಜಲದಿ.
ಆ ನೀಲಿಯ ಮುಗಿಲೋಳಿಯ
ಪಡಿನೆಳಲೀ ಬಾನು;
ಕಾಣೆನು ನಾನಾದರು ಇದೆ
ಪ್ರತಿಬಿಂಬದ ‘ನಾನು!’

ಓ ಭೂಮಿಯೆ, ಓ ವ್ಯೋಮವೆ,
ಓ ಮಾಗಿಯ ಹಗಲೇ,
ಓ ಗಿರಿಗಳೆ, ಓ ತರುಗಳೆ,
ಓ ಬೆಳ್ಳಿಯ ಮುಗಿಲೇ,
ನಿಮಗಾಗಿಯೆ ನೀವ್ ವಂದ್ಯರು,
ನೀವ್ ಸೂಚಿಪುದಿರಲಿ!
ಏಕಾಂತತೆ ಸುಖಶಾಂತತೆ
ಶಿವಸತ್ಯವೊ ಸೌಂದರ್ಯವೊ
ಏನಾದರು ಇರಲಿ!

೨೦-೧-೧೯೩೪