ದೃಷ್ಟಿದಿಗಂತದ ಮೇರೆಯ ದಾಟಿ
ಗಗನದ ಮೇಘವಿತಾನವ ಮೀಟಿ
ದೂರಕೆ ದೂರಕೆ ಸುದೂರ ದೂರಕೆ
ಹಬ್ಬಿದೆ ಪರ್ವತ ದಿಗಂತ ಶೈಲಿ,
ಮೈಲಿ ಮೈಲಿ!

ಪಶ್ಚಿಮ ಗಿರಿಶಿರದಲಿ ಸಂಧ್ಯೆಯ ರವಿ;
ನಿರ್ಜನ ಕವಿಶೈಲದೊಳೊಬ್ಬನೆ ಕವಿ;
ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ!

ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,
ಗಂತಿ ಗಂತಿ!

ತೆರೆ ತೆರೆ ತೆರೆಯೆದ್ದರಣ್ಯ ಶ್ರೇಣಿ,
ಬಿದ್ದಿದೆ ನಿದ್ದೆಯೊಳೋ ಎನೆ ಪ್ರಾಣಿ,
ಅಸಂಖ್ಯವರ್ಣದಿ ಅಪಾರ ಪರ್ಣದಿ
ತಬ್ಬಿದೆ ಭೂಮಿಯನೆರಂಕೆ ಚಾಚಿ,
ವೀಚಿ ವೀಚಿ!

ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!
ಕ್ಷುದ್ರಸ್ಪಷ್ಟತೆಗೆಡೆಯಿಲ್ಲೆಲ್ಲಿ?
ಭವ್ಯಾಸ್ಫುಟವಿದು-ಶರೀರ ಸೀಮಾ
ವಿಹೀನಧಾಮ!

ಆಲಿಸು! ಕೇಳುತಲಿದೆ ಓಂಕಾರ:
ನಿತ್ಯನಿರಂತರ ಅಲಿ ಝೇಂಕಾರ!
ಮನವೇ, ಧ್ಯಾನದಿ ಮುಳುಗು ವಿಧಾನದಿ:
ನುಂಗಲಿ ನಿನ್ನಂ ತಪಃ ಸುಷುಪ್ತಿ,
ಅನಂತ ತೃಪ್ತಿ!*

೧೭-೫-೧೯೩೩* ‘ಕವಿಶೈಲ’ ಶಿಖರವೇದಿಕೆಯ ಪರಿಚಯಕ್ಕೆ “ಮಲೆನಾಡಿನ ಚಿತ್ರಗಳು” ನೋಡಿ.