ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ ಪೊರಗೆ
ಪೊಣ್ಮುತಿದೆ ಶಿಖರಕಂದರಮಯಂ ಸಹ್ಯಾದ್ರಿ.
ಸ್ಪಷ್ಟತರವಾಗುತಿರೆ ಭೂವ್ಯೋಮಗಳ ಸಂಧಿ,
ದೃಶ್ಯ ಚಕ್ರದ ನೇಮಿಯಂದದಿ ದಿಗಂತ ಫಣಿ
ಸುತ್ತುವರಿದಿದೆ ದೃಷ್ಟಿವಲಯಮಂ. ನಾಣ್ಗೆಂಪು
ಮೊಗದೊಳೇರುವ ಉಷಾ ಭೋಗಿನಿಯ ಫಣೆಯಲ್ಲಿ
ಬೆಳ್ಳಿ, ಉಜ್ಜ್ವಲ ತಾರೆ, ಕುಂಕುಮ ಹರಿದ್ರದಿಂ
ರಂಜಿಸುವ ಪೊಂಬಣೆಗೆ ರಜತ ತಿಲಕದ ಬಿಂದು
ತಾನೆನೆ ವಿರಾಜಿಸಿದೆ.

ಹಸುರು ತಳಿರನು ತುಳಿದು,
ನಲುಗಿ, ನಲಿಯಿಸಿ, ನಲಿದು, ಯೋಜನ ಸುವಿಸ್ತರದ      ೧೦
ಕಾಂತಾರ ಪರಿಮಳಂಬೊತ್ತ ತಣ್ಣನೆ ಗಾಳಿ
ಮಂದ ಮಂದಂ ತೀಡಿ ಬೀಸುತಿದೆ, ಸುಖವಾಗಿ,
ತಂಪಾಗಿ. ಕತ್ತಲೆಯ ಕಂಬಳಿಯನುಳಿಯೆ ತಿರೆ,
ನೀಲಿಯೊಳಹೊದಿಕೆ ತಾಂ ತೋರ್ದುದೆನೆ, ಹಸರಿಸಿದೆ
ಹೊಗೆಯ ಮಂಜಿನ ತೆಳ್ಳನೆಯ ಪರದೆ, ಭೂದೇವಿ
ಉಟ್ಟ ಹಸುರುಡೆಯ ಹೋಲುವ ಕಾಡುಗಳ ಮೇಲೆ,
ಲೋಕಮೋಹಕವಾಗಿ ನೀಲಿಯ ಕನಸಿನಂತೆ!
ಪೆಂಪುವಡೆದಿರಲಿಂತು ಕಣ್ಗೆ.

ಕಿವಿಗಿಂಪಾಗಿ
ಕೇಳುತಿದೆ ಮಲೆವಕ್ಕಿಗಳ ಕೊರಳಿನಿಂಚರಂ,
ನಾದದ ಮಧುರ ನಂದನದ್ವಾರ ತೆರೆದಂತೆ.   ೨೦
ಮರದ ತುದಿಗೋಡಿನಲಿ ಕಾಮಳ್ಳಿ; ಪೊದೆಗಳಲಿ
ಪಿಕಳಾರಿ; ಹಸುರು ಚಾಮರಗಳನೆ ನಭಕೆತ್ತಿ
ಹಿಡಿದಂತೆ ಉಷೆಯ ನಸುಕಿನೊಳೆಸೆವ ಗರಿಗರಿಯ
ಬಿದಿರು ಮೆಳೆಗಳ ಗಳುಗಣೆಯ ಚೆಲವುನೆತ್ತಿಯಲಿ
ಕೆಮ್ಮೊನೆಯ ಹಸುರು ಹಳದಿಯ ಮೆಯ್ಯ ಗಿಳಿವಿಂಡು;
ಹೊಸ ತಳಿರ ಮರೆಯ ಕೋಗಿಲೆ; ಹೆಸರೆ ಇಲ್ಲದಿಹ
ನೂರಾರು ಸುಮಧುರ ವಿಹಂಗಮ ಅಮರಗಾನ!
ಸಂಗೀತ ಸೌಧಕ್ಕೆ ಹೊಂಗಳಶವಿಟ್ಟಂತೆ,
ಆಲಿಸದೊ, ಸುರಗೇಯ ಗಂಗೆಯನು ಹರಿಸುತಿದೆ
ಕಾಜಾಣ! ಗಾನದಾನಂದಕ್ಕೆ ಝಮ್ಮೆಂದು       ೩೦
ಸ್ಪಂದಿಸುತ್ತಿದೆ ಶೈಲ ಕಾನನ ವಿರಾಟ್ ಪ್ರಾಣ!

ಅದೊ ನೋಡು, ಬಣ್ಣಗಳ ದಿಬ್ಬಣಂ! ಗಗನದಾ
ಶೈಲ ಶೈಲಿಯ ದಂತುರ ದಿಗಂತ ರಂಗದಲಿ
ದೇವತೆಗಳೆಲ್ಲರೂ ಅಪ್ಸರಿಯರೊಡಗೂಡಿ
ಇಂದ್ರನೈರಾವತದ ಹಿಂದುಗಡೆ ಮೆರವಣಿಗೆ
ಹೊರಟಿಹರೊ ಎನೆ ಶೋಭಿಸುತ್ತಿದೆ ಮನವನೊಲಿಸಿ!
ಶಿವನ ಮುಖಚಂದ್ರಿಕೆಯೆ ಸೌಂದರ್ಯ ರೂಪದಿಂ
ಪ್ರತ್ಯಕ್ಷವಾಗುತಿರೆ ಶಿವನೆ ಮೈದೋರ್ದಂತೆ
ಆಹ ನೋಡದೊ, ಮಲೆಗಳಾಚೆಯ ಸುದೂರದಲಿ
ಒಯ್ಯನಾವಿರ್ಭವಿಪನಮರ ತೇಜಸ್ವಿ ರವಿ!      ೪೦

ಹೃದಯಪ್ರಪಾತಕ್ಕೆ ಧುಮುಕುತಿದೆ ರಸದ ಧುನಿ
ಭಾವ ಜಲಪಾತದಿಂ! ಮೌನವೆ ಮಹಾ ಸ್ತೋತ್ರಂ
ಈ ಭೂಮ ಭವ್ಯ ಸೌಂದರ್ಯದಾರಾಧನೆಗೆ!
ನೋಡ, ಸುಮ್ಮನೆ ನೋಡ; ಮಾತಿಲ್ಲದೆಯೆ ನೋಡ:
ಈ ದೃಶ್ಯ ಮಾಧುರ್ಯದಿದಿರಿನಲಿ ಕರ್ಕಶಂ
ಕವಿಯ ವಾಣಿಯು ಕೂಡ!

ನೋಡು, ಸುಮ್ಮನೆ ನೋಡು;
ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು!
ಅದರೊಳೊಂದಾಗುವುದೆ ಪರಮ ರಸಿಕತೆ; ಅದಕೆ
ಮಿಗಿಲಹ ರಸಾನಂದ ಮತ್ತೆ ಬೇರೊಂದಿಲ್ಲ!*

೨೫-೫-೧೯೩೫* ‘ಮಲೆನಾಡಿನ ಚಿತ್ರಗಳು’ ಭಾವಪ್ರಬಂಧಗಳಲ್ಲಿ ‘ನವಿಲುಕಲ್ಲು’ ಎಂಬ ಶಿಖರಸ್ಥಾನದ ಪರಿಚಯ ದೊರೆಯುತ್ತದೆ.