ಇರುಳು ಕತ್ತಲೆಯಲ್ಲಿ ಮಿಣುಮಿಣುಕಿ ಮೆರೆದಲೆದ
ಮಿಂಚುಹುಳು, ಹಗಲು ಬರೆ ಹಕ್ಕಿಯಿಂಚರದೊಡನೆ,
ವೈರಿ ಖಗಕುಲಕಳುಕಿ, ನೀರುಹನಿ ವೇಷದಲಿ
ಹಸುರು ಗರುಕೆಯ ಹುಲ್ಲು ಹುಲುಸಾಗಿ ನಳನಳಿಸಿ
ಬೆಳೆದ ಈ ಹಚ್ಚನೆಯ ಹಸಲೆಯಾಶ್ರಯವಾಂತು
ಹುದುಗಿದ್ದರೂ, ರವಿಯ ಕದಿರಿನೊಡಗೂಡಿ ಕವಿ
ಹತ್ತಿರಕೆ ಬರೆ, ಚಪಲ ಚಂಚಲತೆಗೆಂಬಂತೆ
ಗಹಗಹಿಸಿ ನಡೆಸೊಡರ ಬೀರಿ ಕಣ್ಮಿಟುಕುತಿದೆ,
ಸರಸದೊಲ್ಮೆಗೆ ಸನ್ನೆಗೈಯುತೆ ಕರೆಯುವಂತೆ!
ಹನಿಮುತ್ತಿನುರಿಮುತ್ತಿನಿಂಪಿಂಗೆ ಕಬ್ಬಿಗನೊ     ೧೦
ರಸಮೃತಿಯನೈದಿಹನಮೃತರಸ ಸರಸಿಯಲ್ಲಿ!

ಇಂಥ ಪ್ರಾತಃಕಾಲ; ಹಸುರು ಗರುಕೆಯ ಹುಲ್ಲು
ಹಸನಾಗಿ, ಹುಲುಸಾಗಿ, ಇಂತು ಹಸಿಹಸಿಯಾಗಿ
ಹಬ್ಬಿ ಮನಮೋಹಿಪಿಂತಹ ಹಚ್ಚನೆಯ ಬಯಲು;
ಇನಿದಾದ ಬೆಚ್ಚನೆ ಹಸುಳೆಬಿಸಿಲು; ಬಾನ್ನೀಲಿ;
ಅಲ್ಲಲ್ಲಿ ಮುಗಿಲು; ಎಲ್ಲಕೆ ಮಿಗಿಲು ಏಕಾಂತ,
ನಿರ್ಜನತೆ; ಇವರೊಡನೆ-ಗರುಕೆ ಮೂಗುತಿಯಂತೆ,
ರನ್ನದ ಸೊಡರಿನಂತೆ ಚೆಲ್ವುರಿವ ಹುಲ್ಲುಹನಿ:
ಪೋ! ಇದರ ಮುಂದೆ ಅರಸನ ಸಿರಿಯೆ? ಕಬ್ಬಿಗನ
ಕಾಲ್ಗಳಡಿ ಚಕ್ರವರ್ತಿಯ ವಿಫುಲ ಸಂಪತ್ತು!     ೨೦

೧೯-೯-೧೯೩೫