ಓ ನೋಡದೊ ರಂಜಿಸುತಿದೆ
ರಜನಿಯ ಕೈದೀಪ,
ನೀಲಧಿಯಲಿ ತೇಲುತ್ತಿಹ
ಜ್ಯೋತಿಯ ಸ್ವರ್ದೀಪ!
ತೆಳುತೆಳ್ಳನೆ ಬೆಳುಬೆಳ್ಳನೆ
ಮುಗಿಲುಣ್ಣೆಯ ರಾಶಿ
ಹೊಂಜೊನ್ನದಿ ಮಿಂದಂತಿದೆ
ಜೇನ್ಮಳೆಯನೆ ಸೂಸಿ!

ಸಹ್ಯಾದ್ರಿಯ ಗಿರಿಪಂಕ್ತಿಯ
ಕೊನೆಗಾಣದ ಲೀಲೆ;
ಬಹುಯೋಜನ ವಿಸ್ತೀರ್ಣದ
ವನರಾಜಿಯ ಮಾಲೆ.
ಬಾಂದಳದಿಂದಿಳಿಯುತ್ತಿರೆ
ಬೆಳ್ದಿಂಗಳ ಗಂಗೆ
ಹೊಳೆಯುತ್ತಿದೆ ಬರೆದಂದದಿ
ದೂರದಿ ನದಿ ತುಂಗೆ!

ಅಃ ಆಲಿಸು! ಆಕಾಶದಿ
ತೇನೆಯ ಸುರವಾಣಿ:
ಜುಮ್ಮೆಂದಿದೆ ಅದನಾಲಿಸಿ
ಸಹ್ಯಾದ್ರಿಯ ಶ್ರೇಣಿ!
ಸೌಂದರ್ಯದ ಮಧುಪಾನದಿ
ವಿಶ್ವವೆ ಉನ್ಮತ್ತ!
ಧ್ಯಾನದ ರಸದಾನಂದದಿ
ಸೃಷ್ಟಿ ಸಮಾಧಿಸ್ಥ!

ಏಂ ನೀರವಮೇಂ ನಿಶ್ಚಲ
ಮೀ ಹುಣ್ಣಿಮೆಯಿರುಳು;
ತಿಂಗಳ ಬೆಳಕಿಂಗಡಲಲಿ
ತೇಲಿದೆ ತಿರೆಯರಳು!
ಸುಧೆ ತುಂಬಿದ ವಿಧುಬಿಂಬದ
ಮಧು ಚಂದ್ರಿಕೆ ಮಾಯೆ
ನೆಲ ಬಾನ್ಗಳನೊಲಿದಪ್ಪಿರೆ
ದ್ವೈತವು ಬರಿ ಛಾಯೆ!

ಚೈತನ್ಯಕೆ ಜಡವೆಂಬುದು
ಕವಿಭಾವಕೆ ಭಾಷೆ;
ಈ ಭುವನದ ಭವ್ಯಾಕೃತಿ
ಆತ್ಮನ ಒಂದಾಶೆ!
ಓ ರಾತ್ರಿಯೆ, ಸಹ್ಯಾದ್ರಿಯೆ,
ಹುಣ್ಣಿಮೆ, ಶಶಿಕಾಂತಿ,
ನಿಮ್ಮೆಲ್ಲರ ಸಾನ್ನಿಧ್ಯವೆ
ಪರಮಾತ್ಮನ ಶಾಂತಿ!

೨೫-೯-೧೯೩೪