ಓಂ! ಹಾಲು ಹಳ್ಳಹರಿಯಲಿ,
ಬೆಣ್ಣೆ ಬೆಟ್ಟವಾಗಲಿ!
ಜೇನುಮಳೆಯು ಸುರಿಯಲಿ,
ತೊಟ್ಟಿಲೊಲಿದು ತೂಗಲಿ!

ಓಂ! ಪೈರು ಪಚ್ಚೆ ಬೆಳೆಯಲಿ,
ತೆನೆಯ ಚಿನ್ನ ಹೊಳೆಯಲಿ!
ಹಕ್ಕಿ ಹೊಟ್ಟೆ ತಣಿಯಲಿ,
ಮಿಗವು ಸೊಗಸಿ ಕುಣಿಯಲಿ!

ಓಂ! ಮುಗಿದು ಸಮರ ನರಬಲಿ
ನರರು ನರರ ನಂಬಲಿ!
ಸ್ವಾಮಿಯಮೃತ ಕೃಪೆಯಲಿ
ಶಾಂತಿ ಜಗವ ತುಂಬಲಿ!

ಓಂ! ತರಣಿಯಾಗೆ ತಾರಣಂ
ದಡವ ಸೇರಲೀ ರಣಂ!
ಸಾರ್ಥಮಾಗೆ ಪಾರ್ಥಿವಂ
ಪೃಥ್ವಿಗಿಳಿಯಲಾ ದಿವಂ!

ಓಂ ಶಾಂತಿಃ ಶಾಂತಿಃ ಶಾಂತಿಃ!