ಆಃ! ನಿಂತು ನೋಡಿಲ್ಲಿ:
ಸ್ವರ್ಗವರಳುತಿದೆ ಆ ಮರದ ಮೈಸಿರಿಯಲ್ಲಿ!
ಉರ್ವಶಿ ತಿಲೋತ್ತಮೆಯರೆಲ್ಲ ನರ್ತಿಪರಲ್ಲಿ
ಆ ಮರದ ಕೆಂದಳಿರಿನಿಂದ್ರನಾಸ್ಥಾನದಲಿ!
ನಿಂತ ಹಜ್ಜೆಯ ಕೀಳಲಾರದೆಯೆ ನಡೆಗೆಟ್ಟು
ನೋಡುತಿಹೆ ನಾನೊಂದು ಮರವಾಗಿ ಮರವಟ್ಟು!
ಅಯ್ಯೊ ಬೇಡುವೆ ನಾನು! ಆಃ! ನಿಂತು ನೋಡಿಲ್ಲಿ:
ಚೇತನದ ಚಿಲುಮೆ ಚಿಮ್ಮುತಿದೆ ಆ ಮರದಲ್ಲಿ!

ನಾ ಕಂಡ ಚೆಲುವೆಯರ ಚೆಂದುಟಿಗಳೆಲ್ಲ
ಸಂಮೇಲಗೈದಂತೆ ತೋರುತಿಹುದಿಲ್ಲಿ!
ಭೂಮಿ ತಾಯಿಯು ತನ್ನ ಹಸುಳೆಗಳನೆಲ್ಲ
ಶಿಶುಪ್ರದರ್ಶನಕೆಂದು ಕಳುಹಿಸಿಹಳಿಲ್ಲಿ!
ಮೃಣ್ಮಯದ ಹೃದಯದಲಿ ಚಿನ್ಮಯನಿಹನು ಎಂದು
ಜಡವನೆಂದೆಂದಿಗೂ ಚೇತನ ಗೆಲುವುದೆಂದು,
ಮಾಗಿ ಮುಗಿದೊಡನೆಯೇ ಸುಗ್ಗಿ ಬರುವುದು ಎಂದು
ನೆಚ್ಚುಗೆಡದೆಯೆ ಮುಂದು ಮುಂದಕೆ ನಡೆ ಎಂದು,-
ನಳನಳಿಸುತಿರೆ ಕೆಂದಳಿರಿನೈಸಿರಿಯ ಸಿರಿ
ಸಾರುತಿಹಳೀ ದಿವ್ಯ ತರುಕಲಾಸುಂದರಿ!

ಆಃ! ನಿಂತು ನೋಡಿಲ್ಲಿ:
ನೂರು ಋಷಿಗಳ ಬೋಧನೆಯ ಸಾರವಿಹುದಿಲ್ಲಿ;
ನೂರು ವೈರಾಗಿಗಳ ಸಂಸಾರವಿಹುದಿಲ್ಲಿ!
ಬುದ್ಧಿಯರಿಯದ ಸಿದ್ಧಿ ಭಾವಗೋಚರವಿಲ್ಲಿ!
ವ್ಯಕ್ತಿತ್ವವೇ ಜ್ವಾಲೆಯಾಗುರಿಯುವುದು ಇಲ್ಲಿ!
ಕೋಟಿ ಮೈಲಿಗಳಾಚೆ ಕಾಶಿಯಾತ್ರೆಗಳೇಕೆ?
ಇಲ್ಲಿಗೈತರು, ಯಾತ್ರಿಕನೆ, ಇದುವೆ ತರುಕಾಶಿ!
ರಸತೀರ್ಥದಲಿ ಮಿಂದವಗೆ ಭವದ ಭಯವೇಕೆ?
ಪುಣ್ಯದಾಲಯ ಪೃಥ್ವಿ! ಸ್ವರ್ಗವದು ಪರದೇಶಿ!

೯-೨-೧೯೩೩