ಯಾರೂ ನೋಡದ ಯಾರಿಗು ಬೇಡದ
ಹೂದೋಟದ ಈ ಮೂಲೆಯಲಿ
ನೋಡಿದೊ ಒಂದೆ ಗುಲಾಬಿಯ ಹೂವಿದೆ
ಸ್ವರ್ಗಸುಂದರಿಯ ಲೀಲೆಯಲಿ!
ಹೂವಿನ ಚೆಲುವಿಂದೀ ಮರುಭೂಮಿ
ನಂದನವಾದಂತಿರೆ, ಕವಿ ಕಾಮಿ!

ಮನ್ಮಥ ಚುಂಬನ ದಂತಕ್ಷತದಿಂ
ಬೆಚ್ಚನೆ ಕೆನ್ನೆತ್ತರು ಸೋರಿ
ರತಿಚೆಂದುಟಿಯಿಂದಿಳೆಗುರುಳುತೆ ತಾ
ಮತ್ತೆ ಗುಲಾಬಿಯವೊಲು ತೋರಿ,
ನೋಳ್ಪ ಕಂಗಳಿಗೆ ಕೊಡುತಿದೆ ಮುತ್ತು:
ಬಾ, ನೀನೂ ಮುದ್ದಿಸಿ ತುಟಿಯೊತ್ತು!

೧೩-೯-೧೯೩೫