ಬೆಟ್ಟದುದಿಯಲಿ ಗುಡಿಯ ಗೋಪುರಂ ನಿಂತಂತೆ
ನಿಂತೆ ನಾಂ ನೀರ್ಮನೆಯ ದಿಬ್ಬದಲಿ, ದೃಷ್ಟಿಯಿಂ
ಸೃಷ್ಟಿಯಂ ತಬ್ಬಿ, ಮೇಣಾತ್ಮಭಾವದಿ ಹಬ್ಬಿ
ಭೂವ್ಯೋಮಮೆಲ್ಲಮಂ. ತಂಗಾಳಿ ಚಳಿಯಾಗಿ
ಬೀಸಿದುದು. ತೇಲಿದುವು ವಾಯುಮಂಡಲದಲ್ಲಿ
ವಿವಿಧ ಪಕ್ಷಿಗಳುಲಿಗಳಿಂಪಾಗಿ. ನಾದವೂ
ದೃಶ್ಯವೂ ಚಿತ್ತದಲಿ ಚಿತ್ರಗತವಾದಂತೆ
ಹಿನ್ನೆಲೆಯ ರಚಿಸಿರಲು, ಸಿತ ಚೈತ್ರಪಂಚಮಿಯ
ಸೂರ್ಯನಾವಿರ್ಭಾವಮಂ, ಪ್ರಿಯನ ಪ್ರೇಯಸಿಯು
ನಿಡುಬಯಸುವಂದದಲಿ, ದರ್ಶನೋತ್ಕಂಠಿತಂ           ೧೦
ತಾನಾಗಿ ಹಾರೈಸಿರಲು ತುದಿಬೆರಳ ಮೇಲೆ,
ಕಣ್ಣನರೆ ತೆರೆದಂತೆ ನೀಲಿಹೊಗೆ ಮುಸುಗಿರ್ದ
ದೇವೆಂದ್ರ ದಿಕ್ಕಿನ ದಿಗಂತದಿಂ ಮೂಡಿದನು
ಕಿರಣವಿಲ್ಲದ ರಕ್ತಬಿಂಬದ ದಿವಾಕರಂ-
ಕುಂಕುಮದ ಪುಣ್ಯೋದಕದಿ ಮಿಂದುಬಂದಂತೆ,
ಯಜ್ಞಕುಂಡದಿನೆದ್ದ ಕೆಂಡ ದೇವತೆಯಂತೆ,
ಮೂಷೆಯಲಿ ಕಾಯ್ದ ಕಬ್ಬಿಣದುಂಡೆ ಚೆಂಡಂತೆ,
ಕತ್ತಲಲಿ ಕತ್ತರಿಸಿದುರಿಯ ವರ್ತುಲದಂತೆ,
ಕವಿಯ ಭಾವಾವೇಶದೊಂದು ಹೆಗ್ಗಿಡಿಯಂತೆ,
ಮೇಣೆನ್ನ ಸವಿಮಾತು ಹೋಲಿಕೆಗಳುರೆ ನಾಚಿ, ೨೦
ಮೌನದ ಮಹಿಮೆ ಹೆಚ್ಚಿ, ಚಿಂತೆ ಮೈಮರೆವಂತೆ!
ಕಣ್ ತುಳುಕಿತೆದೆ ನಲಿದುದಸು ಹಿಗ್ಗಿತುಲ್ಲಸದಿ;
ಮಿಂಚು ಹರಿವಂತೆ ನೆತ್ತರು ಚಿಮ್ಮಿ ದೇಹದಲಿ
ತೇಜಸ್ವಿಯಾದೆ ನಾಂ ಸೂರ್ಯನಂತೆ!
ಯಾವ ಗುಡಿ
ಮಿಗಿಲು ಈ ಭುವನ ದೇವಾಲಯಕೆ? ಮೇಣಾವ
ವಿಗ್ರಹಂ ಮೀರಿರುವುದೀ ಚೈತ್ರ ಪಂಚಮಿಯ
ಪುಣ್ಯ ಪ್ರಭಾತದಲಿ, ದೂರದ ದಿಗಂತದಿಂ
ಪ್ರತ್ಯಕ್ಷವಾಗಿರುವ ಭವ್ಯಸುಂದರ ದಿವ್ಯ
ಸೂರ್ಯದೇವನಿಗೆ? ಮೇಣಾವುದಾರಾಧನೆಯು
ಉಪಮಾನವೀ ನಿರುಪಮ ಕಲಾ ಉಪಾಸನೆಗೆ?          ೩೦
ಈ ಅನುಭವದೊಳಿಲ್ಲದಾನಂದಮೂರ್ತಿಯಾ
ಪರಮಾತ್ಮನಿನ್ನಾವ ಪೂಜೆ ಜಪತಪಗಳಲಿ
ದೊರೆಕೊಳ್ಳುವಂ?
ನೋಡದೋ: ನನ್ನ ಪದತಲದಿ
ಎಂಬಂತೆ ನಗರ ನಾಗರಿಕತೆಯ ಜೀವನಂ
ಹಬ್ಬಿ ಬಿದ್ದಿದೆ, ತನ್ನ ನೂರಾರು ಬಾಯ್ಗಳಿಂ
ಕೈಗಳಿಂ ಮೈಗಳಿಂ ಕಣ್ಗಳಿಂ ಕಾಲ್ಗಳಿಂ,
ನಖದಂಷ್ಟ್ರ ಭೀಷಣ ಪೆಡಂಭೂತವನು ಹೋಲಿ!
ಪ್ರಾಸಾದ, ಸೌಧ, ಮಂದಿರ, ಗುಡಿ, ಗೋಪುರಂ,
ಮನೆ, ಚರ್ಚು, ಗುಡಿಸಲು, ಮಸೀದಿ, ಯಂತ್ರಾಲಯಂ,
ಕಾರ್ಖಾನೆ, ಆಸ್ಪತ್ರೆ, ಶಾಲೆ, ವಿದ್ಯಾಶಾಲೆ,      ೪೦
ಹೋಟಲಾಹಾರವಿಕ್ರಯದ ಮನೆ, ಮದ್ಯಮಂ
ಮಾರುವಂಗಡಿ, ಕೋರ್ಟು, ಜೈಲು ಮೇಣರಮನೆ
-ಇಂತು ಹಬ್ಬಿದೆ ಪಟ್ಟಣದ ಬೃಹಜ್ಜೀವನಂ
ಶತಶತ ಸಹಸ್ರಶತ ಶಾಖೋಪಶಾಖೆಯಿಂ
ಮರವೊಂದರಿಂದಾದ ಹೇರಡವಿಯೆಂಬಂತೆ!
ಯಾವ ಹೃದಯದ ಮನುಜರಿಹರಲ್ಲಿ? ನನ್ನವೋಲ್
ಯಾರಾದರೀ ಉದಯವನು ನೋಡುತಿಹರೇನು?
ಲಕ್ಷದೊಳಗೊಬ್ಬನಿರಬಹುದಾತನಿಗೆ ನಮೋ!
ಏಕೆಂದರಾತನದೆ ಈ ಹೊಳಲಿನೊಳಗಿಂದು
ಈ ಸಮಯದಲಿ ನಡೆಯುವೆಲ್ಲ ಕಾರ್ಯಂಗಳಿಗೆ           ೫೦
ಮಿಗಿಲಹ ಮಹತ್ಕಾರ್ಯ!
ಶಿವ ಶಿವಾ, ಕಣ್ದೆರೆದು
ಪ್ರಕೃತಿ ಸೌಂದರ್ಯಮಂ ಭಾವನೋಜ್ವಲವಾಗಿ
ನೋಡದಿಹ ಬಾಳೊಂದು ಬಾಳಲ್ಲ! “ಸೊಬಗಿನಲಿ
ಶಿವನಿಹನು; ಶಿವನೆ ಸೊಬಗಾಗಿಹನು.” ಎನಿತೊರೆಯೆ
ಈ ವಚನ ಪುನರುಕ್ತಿಯಾದೀತು? ಹಳಸೀತು?
ಸತ್ಯಂ ಶಿವಂ ಸುಂದರಂ ಎಂದು ಹಾಡಿದರು
ರಸಋಷಿಗಳೆಲ್ಲ. ಮರೆತದನು ನಾವುಗಳಿಂದು
ನೊಂದಿಹೆವು ಜಡಬಾಳ್ಗೆ ಬೇಸತ್ತು. ಸತ್ಯದಲಿ
ಶಿವವಿಹುದು; ಶಿವದಲ್ಲಿ ಸತ್ಯವಿದೆ; ಮೇಣೆರಡು
ಸೌಂದರ್ಯದಲಿ ಲೀನವಾಗಿಹವು. ತಿಳಿದವಗೆ ೬೦
ಒಂದನುಳಿದೊಂದಿಲ್ಲ. ಲೋಕದಲಿ ದುಃಖವಿರೆ
ಆ ದುಃಖದೊಳಗರ್ಧ ಹೃದಯದಾರಿರ್ದ್ಯದಿಂ
ಬಂದಿಹುದು! ಆ ಹೀನ ದೀನ ದಾರಿರ್ದ್ಯಮಂ
ಪರಿಹರಿಸಿ ‘ದರ್ಶನ’ವ ದಯೆಗೈಯೆ ಕಲೆಯಿಹುದು.
ಕಲೆಯಿಂದ ಜಡವು ಚೇತನವಾಗಿ, ಜೀವನದ
ನೀರಸತೆ ಕಿಡಿಯಾಗಿ, ಪ್ರವಹಿಪುದು ನೂತನತೆ
ಚಿರವಾಗಿ. ಭುವನ ಕವಿವರ ಕವನವೀ ಸೃಷ್ಟಿ;
ಭುವನಶಿಲ್ಪಿಯ ಚಿತ್ರಕೃತಿ; ಭುವನಗಾಯಕನ
ಸುಮಧುರ ಮಹಾಗಾನ! ಸವಿಯದಿರೆ, ನೋಡದಿರೆ,
ಕೇಳದಿರೆ, ಬದುಕಿದ್ದರೂ ನಾವು ಸತ್ತಂತೆ!       ೭೦
“ಎಲ್ಲರೂ ನಿನ್ನಂತೆ ಕಲೆಯ ಆರಾಧನೆಯ
ಗೈಯಲೆಂತುಟು ಸಾಧ್ಯ? ನೋಡಲ್ಲಿ: ಆ ಕೂಲಿ
ಕಾರ್ಖಾನೆಯಲಿ ಯಂತ್ರದೆಡೆ ನಿಂತು ತಲೆಯೆತ್ತೆ
ತೆರಪಿಲ್ಲದಂತೆ ಗೆಯ್ಯುತ್ತಿಹನು. ಈಗವನು
ನಿನ್ನಂತೆ ಸೂರ್ಯನುದಯವ ನೋಡಿ ನಲಿಯೆ ಬರೆ
ಮಧ್ಯಾಹ್ನಕಾತನಿಗೆ ಬರಿಹೊಟ್ಟೆ! ಅವನ ಸತಿ,
ಅವನ ಶಿಶು ಸಾಯುವರು” ಎಂದು ವಾದಿಸುವೆನ್ನ
ಸೋದರನೆ, ಹೋಗಿ ಕೇಳಾ ಕೆಲಸಗಾರನನೆ:
ಅಶಿವ ಕೃತಿಗಳಿಗೆ, ಕಳ್ಳಂಗಡಿಗೆ, ಸಿನಿಮಕ್ಕೆ,
ನೂರಾರು ಹವ್ಯಾಸಗಳಿಗೆನಿತು ವೇಳೆಯನು   ೮೦
ವ್ಯರ್ಥಮಾಡುವನೆಂದು! ಬರಿ ವಾದದಿಂದೇನು?
ಮನಸಿರಲು ಮಾರ್ಗವಿದೆ!
ಅವನ ಮಾತಂತಿರಲಿ.
ಎನಿತು ಶ್ರೀಮಂತಹರೀ ರಾಜಧಾನಿಯಲಿ!
ಅವರೆನಿತು ಕಾಲವನು ಕಳೆಯುವರು ಕಲೆಗಾಗಿ,
ಹೇಳಯ್ಯ? ಅವರೊಳಗೆ ಎನಿಬರೀ ಹೊತ್ತು ನಾ
ಕಾಣುತ್ತಿರುವೀ ಸೂರ್ಯನುದಯವನು ಕೊಂಡಾಡಿ
ಧನ್ಯರಾಗುತ್ತಿಹರು ಹೇಳಯ್ಯ? ಅಥವಾ
ರಾತ್ರಿಯೆಲ್ಲವ ಕಳೆಯುತಿಂದ್ರಿಯೋನ್ಮಾದದಲಿ
ಹೊರಳಿಹರೊ ಸೆಜ್ಜೆಯಲಿ ನಾಗರಿಕ ಪಶುಗಳಂತೆ?
ಪೃಥ್ವಿಯಲಿ ಕ್ಲೇಶಕಷ್ಟಗಳೆಲ್ಲ ಕೊನೆಮುಟ್ಟಿ        ೯೦
ಸರ್ವರೂ ರಸದ್ರಷ್ಟರಾಗಿ, ‘ದರ್ಶನ’ ಪಡೆದು,
ಕಾವ್ಯದಾಸ್ವಾದನೆಗೆ, ಸೌಂದರ್ಯಸಾಧನೆಗೆ,
ಕಲೆಯ ಆರಾಧನೆಗೆ ಮನವೀಯುವಾ ಪುಣ್ಯ
ಸ್ವರ್ಗವೆಂದೈತರುವುದೋ ಕಾಣೆ! ಅದು ಬರಿಯ
ಕನಸೆಂದು ತೋರುತಿದೆ. ಆದರೇನೆಲ್ಲರೂ
ಏಳುವನ್ನೆಗಮೆಲ್ಲರೂ ಮಲಗಬೇಕೇನು?
ಸೋದರನೆ, ಮೊದಲು ನೀನೆದ್ದು ಮನಸನು ಮಾಡು:
ಕಣ್ದೆರೆಯೆ ಸ್ವರ್ಗವಿದೆ! ಕಣ್ಮುಚ್ಚೆ ನರಕವಿದೆ!
ಸುಂದರ ಮಹೇಶ್ವರನ ರಸಮಯ ಶರೀರವಿದು
ವಿಶ್ವರೂಪದಿ ನಮಗೆ ತೋರುತಿದೆ. ಜೀವನಂ  ೧೦೦
ಕ್ಷಣಕ್ಷಣಕೆ ಮುಟ್ಟುತಿಹುದಾತನಂ, ಘ್ರಾಣದಲಿ
ಸ್ಪರ್ಶದಲಿ ರುಚಿಯಲ್ಲಿ, ಶ್ರೋತ್ರ ದೃಷ್ಟಿಗಳಲ್ಲಿ.
ಎದೆ ತುಂಬಿ ಬಾಳುವುದೆ ಪ್ರಾಣಕರ್ಪೂರಮಂ
ಹೊತ್ತಿಸೆತ್ತಿದ ಮಂಗಳಾರತಿ. ನಾವಂತು
ಬಾಳದಿರೆ ಬದುಕು ಬೆಳಕಿಲ್ಲದಿಹ ಬರಿಯ ಹೊಗೆ!
ನಗುತಲಿರೆ ಜಡವೆ ಚೈತನ್ಯಮಂ ಸವಿಸವಿದು,
ಚೇತಸರು ನಮಗೇಕೆ ಜಡತನಂ? ರಮಿಸುತಿವೆ
ಕಲ್ಮಣ್ಣು ಮರ ಹೂವು ನನ್ನಾತ್ಮ ಹರ್ಷಮಂ,
ಮೇಣೆನ್ನ ಸ್ಪರ್ಶಮಂ!
ಮೇಲೇಳು, ಸೋದರನೆ,
ಗೆಲುವಿನಿಂದಿದಿರುಗೊಳ್ ಉದಯಿಸುವ ಸೂರ್ಯನಂ,  ೧೧೦
ಗಿರಿಯ ನೆತ್ತಿಯ ಮೇಲೆ: ನಿನ್ನಮಲ ಹೃದಯದಲಿ
ನಾಳನಾಳಗಳಲ್ಲಿ ನೆತ್ತರಾಡಲಿ ಚಿಮ್ಮಿ
ಬಿಸಿಯಾಗಿ, ಎದೆಯುಬ್ಬೆ ಶ್ವಾಸಕೋಶದ ತುಂಬಿ
ಹೊರಬರಲಿ ತಂಪಾದ ನಿರ್ಮಲ ಸಮೀರಣಂ;
ಕಿವಿಹೊಗಲಿ ಹಕ್ಕಿಯುಲಿ; ಹೂಗಂಪು ಮೂಗಿನಲಿ
ಸಂಭೃತ ಸುವಾಸನೆಯ ನಾಕಮಂ ನಿರ್ಮಿಸಲಿ;
ಕಣ್ಣಿಗಾಗಲಿ ದಿವ್ಯಸೌಂದರ್ಯ ದರ್ಶನಂ;
ಪ್ರಜ್ಞೆಯಾಧಿಕ್ಯದಿಂ ಪ್ರಜ್ಞೆ ತಪ್ಪುವ ತೆರದಿ
ಭಾವದಾವೇಶದಲಿ ಬಾಳೆಂಬ ದಳ್ಳುರಿಯ
ನಾಲಗೆಯು ನಾಕ ನೀಲವ ನೆಕ್ಕುವಂತಾಗೆ,    ೧೨೦
ಜೀವಗಿರಿ ಶೃಂಗದಲಿ ತುಂಗ ಗೋಪುರವಾಗಿ
ಮೆರೆಯಯ್ಯ, ಕಲೆಯ ಮಹಿಮೆಗೆ ಮಹಾ ಸಾಕ್ಷಿಯಾಗಿ!

೨೩-೩-೩೪

 


* ಒಂಟಿಕೊಪ್ಪಲಿನ ಜಲಾಶಯ ದಿಬ್ಬದಲ್ಲಿ ನಿಂತು ಭಾವ ಸಂವತ್ಸರದ ಶುಕ್ಲಪಕ್ಷದ ಚೈತ್ರ ಪಂಚಮಿಯ ಸೂರ್ಯೋದಯದ ಸಮಯದಲ್ಲಿ.