ಇಂದ್ರ ದಿಗಂತದಿ ದೂರಾದ್ದೂರಂ
ಪ್ರಾತಃ ಸ್ವರ್ಗದ ಸ್ವರ್ಣದ್ವಾರಂ
ನೋಡದೊ ತೆರೆಯುತಿದೆ;
ಲೋಕದ ನಯನಕ್ಕೋಕುಳಿಯೆರಚುತೆ
ಮೋಹಿಸಿ ಕರೆಯುತಿದೆ!
ಮುಗಿಲಿನ ಬೂದಿಯ ಕುಂಕುಮಗೈಯುತೆ
ಮಳೆಬಿಲ್ ರೇಶ್ಮೆಯ ಚೆಂಬಲೆ ನೆಯ್ಯುತೆ
ಹೊಂದೊರೆ ಹರಿಯುತಿದೆ;
ಕಾಸಿದ ಚಿನ್ನದ ಪುತ್ತಳಿಯಂದದಿ
ಕವಿಮೆಯ್ ಮೆರೆಯುತಿದೆ!
ಕಾಣಿದೊ ಸರಸಿಯ ಜಲವಿಸ್ತೀರ್ಣಂ
ಸ್ವರ್ಣದ್ರವವೆನೆ ಸುಮನೋವರ್ಣಂ
ರತಿಯೋಕುಳಿಯಂತೆ!
ಶ್ರೇಷ್ಠತೆ ಸಂಸರ್ಗಿಸೆ ಸಾಮಾನ್ಯತೆ
ಹೊಳೆಯದೆ ಹೊನ್ನಂತೆ?
ಉಷೆಯೀ ವೈಭವ ದೃಶ್ಯವ ಹೀರಿ
ಸವಿದಿಹೆನೆನಿತೋ ಸಾವಿರ ಸಾರಿ,
ಚೆಂದುಟಿ ಜೆನಂತೆ!
ನಲಿದಿಹುದೆದೆ ಇಂತೇ ಪ್ರತಿಸಲವೂ
ಅದೆ ಮೊದಲೆಂಬಂತೆ!
೧೪-೧೦-೧೯೩೫
Leave A Comment