ಮಲೆಗಳೆಡೆಯ ಕಣಿವೆಯಲ್ಲಿ
ಬಯಲ ಗದ್ದೆ ಕೋಗಿನಲ್ಲಿ
ಬಳಲಿ ಬರುತಲಿದ್ದ ನಾನು
ಕಿವಿ ನಿಮಿರ್ದು ಕೇಳಿದೆ:
ಬೆರಗಿನಿಂದೆ ಮುಖವನೆತ್ತಿ
ಕಂಡೆ, ಕೇಳ್ದೆ, ದಣಿವ ಮರೆತೆ,
ಉಲ್ಲಾಸವ ತಾಳಿದೆ!

ಬಿಳಿಯ ಮುಗಿಲ ನೀಲಿ ಬಾನು;
ಮುಗಿಲ ಮರೆಯ ಹಗಲ ಭಾನು;
ಸುತ್ತ ಮಲೆತ ಮಲೆಯ ಕಾನು.
ಇಂತಹ ಹಿನ್ನೆಲೆಯಲಿ
ರೆಂಕೆಗೆದರಿ ಬಿಂಕದಿಂದೆ
ಚಕ್ರಗತಿಯೊಳಲೆದು ತೇಲಿ,
ವಕ್ರಗಮನ ಗಗನ ಕೇಲಿ
ಕಣ್ಗೆ ಮನಕೆ ಸೊಗಸುವಂತೆ
ಹಾರುತಿತ್ತು ಪೊಂಗುಳಿ;
ಚಿಮ್ಮುತಿತ್ತು ಚಲನೆಯೋಲೆ
(ನಾದದೊಂದು ರಾಸಲೀಲೆ!)
ಇಂಪುದನಿಯ ಸರಳ ಮಾಲೆ,
ಚೀರುವದರ ನೀಳುಲಿ!
ಇನಿತು ಮಧುರನಾದಗೈವ
ಪೊಂಗುಳಿಯಿದೆ? ಪಕ್ಷಿದೈವ!
ನೋಟಕದೂ ಒಂದು ಹದ್ದು!
ಕಿವಿಗೊ?-ಚೈತ್ರ ಪಿಕದ ಸದ್ದು!
ಆಲಿಸಯ್ಯ ಮಲೆಯ ಕವಿ:
ಎನಿತು ಇಂಪು, ಏನು ಸವಿ;
ದನಿಯ ಜೇನ್ಗೆ ಜಿಹ್ವೆ ಕಿವಿ!
ಮಳೆಕೋಗಿಲೆ ಎಂಬ ಹೆಸರು
ನಿನಗೆ ಕೊಸರೆ? ಅಲ್ಲ, ಮೊಸರು!
ದಿಟವಾದರೆ ಮುಗಿಲನಲೆವ
ನೀನು ‘ಮಳೆಯ ಕೋಗಿಲೆ’,
ಆತ್ಮ ತೊಯ್ಯುವಂತೆ ಬರಲಿ
ನಿನ್ನ ಕೊರಲ ಜೇನ್ಮಳೆ!
ನಿನ್ನ ಉಲಿಹು ಸಗ್ಗದ ಕರೆ:
ಆಲಿಸುತಿದೆ ನಮ್ಮೀ ಧರೆ;
ಹಾರು, ಹಾಡು, ಪೊಂಗುಳಿ!
ಬಾಳ ಕಣಿವೆಯಲ್ಲಿ ತೊಳಲಿ
ನಡೆವ ವೇಳೆ ನಾನು ಬಳಲಿ
ಇಂತೆ ಬರಲಿ ನಿನ್ನುಲಿ;
ಉಲ್ಲಾಸವನೆದೆಗೆ ಮನಕೆ
ಇಂತೆ ತರಲಿ ಪೊನ್ನುಲಿ!
ಇಂತೆ ನಲಿ, ಇಂತೆ ಉಲಿ,
ಇಂತೆ ಬಾ, ಪೊಂಗುಳಿ!

೨೭-೫-೧೯೩೫