ಆನಂದಮಯ ಈ ಜಗಹೃದಯ:
ಏತಕೆ ಭಯ? ಮಾಣೊ!
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ!

ಬಿಸಿಲಿದು ಬರಿ ಬಿಸಿಲಲ್ಲವೊ,
ಸೂರ್ಯನ ಕೃಪೆ ಕಾಣೊ!
ಸೂರ್ಯನು ಬರಿ ರವಿಯಲ್ಲವೊ;
ಆ ಭ್ರಾಂತಿಯ ಮಾಣೊ!

ರವಿವದನವೆ ಶಿವಸದನವೊ:
ಬರಿ ಕಣ್ಣದು ಮಣ್ಣೊ!
ಶಿವನಿಲ್ಲದೆ ಸೌಂದರ್ಯವೆ?
ಶವಮುಖದಾ ಕಣ್ಣೊ!

ಉದಯದೊಳೇನ್? ಹೃದಯವ ಕಾಣ್!
ಅದೆ ಅಮೃತದ ಹಣ್ಣೊ!
ಶಿವ ಕಾಣದೆ ಕವಿ ಕುರುಡನೊ:
ಶಿವ ಕಾವ್ಯದ ಕಣ್ಣೊ!

೯-೧-೧೯೩೯