ನಾನು ನಾಯಿ ಮೆಟ್ಟು ಕೊಡೆ
ನಾಲ್ವರೆ ತಿರುಗಾಟಕೆ
ಹೊರಟೆವಂದು ನಸುಕು ಬಿಡೆ
ಬೆಳಗು ಸಿರಿಯ ನೋಟಕೆ:
ಬಾನು ಬುವಿ ಮುಗಿಲು ರವಿ
ಹೊರಟರೊಡನೆ ನಮ್ಮ ಒಡನೆ
ರಸದೌತಣದೂಟಕೆ!

ಸಹ್ಯಾದ್ರಿಯ ಪ್ರಕೃತಿಭಾಮೆ
ಸೌಂದರ್ಯ ಪರಾಕ್ರಮಿ;
ಭಾದ್ರಪದದ ಬಯಲು ಸೀಮೆ
ರಮ್ಯತೆಯಲಿ ಸಂಯಮಿ:
ಅಡವಿಹುಚ್ಚು ಬೆಟ್ಟಗೆಚ್ಚು
ಇಲ್ಲದದಕೆ ಮಿತಿಯೆ ಮೆಚ್ಚು:
ಸೊಬಗಿನೊಳೂ ಸಂಯಮಿ!

ಹಳದಿ ಹೊನಲು ಹರಿದು ಹೋಯ್ತು;
ಮತ್ತೆ ಕೆಂಪಿನೋಕುಳಿ;
ಮದುವೆಯಾಯ್ತು ಒಸಗೆಯಾಯ್ತು
ಉಷೆಗೆ ಮೂಡುಬಾನಲಿ!
ಕಂಪಿನುಸಿರನೆಸೆಯೆ ಸುಸಿಲು
ಹುಟ್ಟಿ ಬಂತು ಹಸುಳೆಬಿಸಿಲು;
ಹಬ್ಬವಾಯ್ತು ಹೊಲದಲಿ!

ಗುಬ್ಬಳಿಸಿದುವೆನಿತೊ ಚೋರೆ
ಮರದ ಸೊಪ್ಪಿನೊಡಲಲಿ;
ಕಿವಿಯೆ ದೋಣಿಯಾಯ್ತು ಬೇರೆ
ಹಕ್ಕಿದನಿಯ ಕಡಲಲಿ
ಮೆಯ್ಯ ತೋರೆ ಹೊನ್ನ ಹೊತ್ತು
ಪಡುವಣೆಡೆಗೆ ನೀಳವಾಯ್ತು
ನೆರಳು ಮರದ ಬುಡದಲಿ!

ಜೋಳದ ಬೆಳೆ ಕೊಯ್ಯಲಾಯ್ತು
ಬಣಬೆಯಾಯ್ತು ಹೊಲದಲಿ;
ನೆತ್ತರರ್ಧ ಸೇರ್ವೆಯಾಯ್ತು
ಒಕ್ಕಲಿಗನ ಬಲದಲಿ!
ಹುರುಳಿ ರಾಗಿ ಹರಳು ತೊಗರಿ
ಹಸುರ ಬೀಸುತಿಹವು ಚಿಗುರಿ
ಮತ್ತೆ ಉತ್ತ ನೆಲದಲಿ!

ಕಣಿವೆಗಿಳಿದು ಬೋರೆಗೇರಿ
ಜೇನ್‌ಗನಸಿನ ಪಾಲೊಳು
ನಿಲ್ಲುತೊಮ್ಮೆ ನಡೆಯುತೊಮ್ಮೆ
ಕಣ್‌ನಾಲಗೆ ತೇಲಲು,
ಕಬ್ಬಿಗನೆದೆಯೆ ಕಬ್ಬಿಣಗಾಣ,
ಕಬ್ಬು ಅದಕೆ ಜಗತ್‌ಪ್ರಾಣ,
ಕಬ್ಬವೆ ರಸವಾಗಲು!

ಮಲೆಯ ಹೊಣ್ಣೊ? ಬಯಲ ಹೆಣ್ಣೊ?
ಒಲುಮೆ ಇದ್ದರೆದೆಯಲಿ
ಎಲ್ಲ ಚೆನ್ನು, ಎಲ್ಲ ಹೊನ್ನು!
ಭೇದವಿಹುದೆ ಬೆದೆಯಲಿ?
ಮಲೆಯ ನೆಲವೊ? ಬಯಲ ಹೊಲವೊ?
ಬೇರೆ ಧೇನು;-ಆದರೇನು
ಅಮೃತವಿರದೆ ಸೊದೆಯಲಿ?

೨೦-೯-೧೯೩೭