ನೋಡು, ನೋಡು, ಕುಳಿರ ಬೀಡು ಮಾಗಿ ಬರುತಿದೆ!
ಹಲ್ಲ ಕಡಿದು ಮುಷ್ಟಿ ಹಿಡಿದು ಸೆಡೆತು ಬರುತಿದೆ!
ಐಕಿಲದರ ತಲೆಯ ತಿರುಳು,
ಕೊರೆಯುವ ಚಳಿಯದರ ಕರುಳು,
ಬೆರೆತ ಮುಗಿಲೆ ನರೆತ ಕುರುಳು,
ಮಾಗಿ ಬರುತಿದೆ!
ನೋಡು, ನೋಡು, ಕುಳಿರ ಬೀಡು ಸಾಗಿ ಬರುತಿದೆ!

ಚಳಿಯ ಕಡಲೊಳದ್ದಿದೊಡಲೊಳದೋ ಬರುತಿದೆ!
ಸುಗ್ಗಿವಸಿರದಾವಿಯುಸಿರದಾಗಿ ಬರುತಿದೆ!
ಕುಳಿರ ಕೈಯೊಳೆದೆಯ ಮುಟ್ಟಿ,
ಗಾನ ನದಿಯ ಗಡ್ಡೆಗಟ್ಟಿ,
ಕೋಗಿಲೆಗಳ ಕೊರಲ ಕಟ್ಟಿ
ಮಾಗಿ ಬರುತಿದೆ!
ಜಗವು ಕಂಪಿಪಂತೆ ತಂಪಿನಿಂದ ಬರುತಿದೆ!

ಮೆಯ್ಯ ಮೇಲೆ ಹನಿಯು ಬೀಳೆ ಕೋತಿ ಮರದಲಿ
ಹಲ್ಲ ಕಿರಿದು, ಬೆಚ್ಚಿ ಸರಿದು, ಶಪಿಸಲುರದಲಿ,
ಮಂಜಿನುಡೆಯ ಹೊದೆದುಕೊಂಡು,
ಬಿಳಿದು ತಿಂಗಳುಣಿಸನುಂಡು,
ಚೆದರುತಿರಲು ಮುಗಿಲ ಹಿಂಡು
ಬಾನ ಬನದಲಿ,
ಬಹುದು ಮಾಗಿ ಕುರುಬನಾಗಿ ಮುದಿಯತನದಲಿ!

ಹಸುರ ಮೇಲೆ ಬಿಸಿಲ ಲೀಲೆ ತಳತಳಿಸುತಿರೆ,
ಹೊಳೆವ ಕುಳಿರ್ ಪನಿಯ ತಳಿರ್ ನಳನಳಿಸುತಿರೆ,
ಮೆದ್ದು ಮುಗಿಯೆ ಮುರದ ಮಡ್ಡಿ,
ಮುದ್ದು ಬಿಸಿಲಿಗೊಡಲನೊಡ್ಲಿ,
ದೂರ ಜಾರುತಿರಲು ದೊಡ್ಡಿ,
ರಯ್ಯ ರಯ್ಯನೆ,
ಚಿಣ್ಣ ಕರುಗಳೊಡನೆ ತುರುಗಳಲೆವುವೊಯ್ಯನೆ!

ಸುಗ್ಗಿಗೇನು ಕಡಮೆಯೇನು ನಮ್ಮ ಮಾಗಿಯು?
ಚಳಿಯನೊಂದನುಳಿದು ಬಂದರದುವೆ ಸುಗ್ಗಿಯು!
ಸುಗ್ಗಿ ಮಗುವು: ಮಾಗಿ ತಂದೆ!
ಮಾಗಿ ಬಂದರೇನು ಮುಂದೆ?
ಸುಗ್ಗಿ ಬಸಿರನೊಡೆದು ಹಿಂದೆ
ಬಂದೆ ಬರುವುದು!
ಸೊಗವ ಜಗಕೆ ನಗೆಯ ಮೊಗಕೆ ತಂದೆ ತರುವುದು!

ಮುದಿಯ ಚಳಿಯ ಮಾಗಿಯಳಿಯಲೊಡನೆ ನವವಧು
ಬರಲು, ಗಾಡಿಯಿಂದ ಮೂಡಿ ತಿರೆಯು ನಲಿವುದು!
ಸುಗ್ಗಿ ಬಸಿರನೊಡೆದು ಮೂಡೆ,
ಮಾಗಿವಾಯ ಕುಳಿರ ದಾಡೆ
ಬುಡದ ಬಲವು ಸಡಿಲಿ ಕೂಡೆ
ಬಿದ್ದು ಸೀಳ್ವುದು!
ನಮ್ಮ ಲೋಕಕೊಲಿದು ನಾಕವಡ್ಡ ಬೀಳ್ವುದು!

ನೋಡು, ನೋಡು, ಕುಳಿರ ಬೀಡು ಮಾಗಿ ಬರುತಿದೆ!
ನಡುಕ ಹಿಡಿದು ಹಲ್ಲ ಕಡಿದು ಸೆಡೆತು ಬರುತಿದೆ!
ತಣ್ಣಿತುಸಿರನೂದಿಸುತ್ತ
ಹಣ್ಣೆಲೆಗಳನುದರಿಸುತ್ತ,
ದೊಣ್ಣೆಯೂರಿ ‘ಹುಹು’ ಎನ್ನುತ್ತ
ಬಾಗಿ ಬರುತಿದೆ!
ನೋಡು, ನೋಡು, ಕುಳಿರ ಬೀಡು ಮಾಗಿ ಬರುತಿದೆ!

೧-೧೨-೧೯೩೯