ಅಃ ಅದೋ! ಆಲಿಸಲ್ಲಿ!
ಹೊದರುದಳಿರ ಮಾವಿನಲ್ಲಿ
ಹೊರಸು ಗುಬ್ಬಳಿಸುತಿದೆ!
ಅದೋ! ಮತ್ತೆ ಏನು ಸವಿ!
ಇಂದ್ರಿಯಂಗಳೆಲ್ಲ ಕಿವಿ!
ಜೀವ ಬೆಬ್ಬಳಿಸುತಿದೆ!

ದೂರ ಇರುವ ಹೃದಯ ಬಂಧು
ಹಠಾತ್ತಾಗಿ ಬಳಿಗೆ ಬಂದು
ಕರೆದು ನುಡಿವ ತೆರದಲಿ
ಏನೊ ಹರ್ಷ, ಏನೊ ಬೆರಗು,
ದೂರದ ಸ್ಮೃತಿ ತರುವ ಕೊರಗು,
ಹೊರಸಿನ ಈ ಸ್ವರದಲಿ!

ನಮ್ಮ ಹಳ್ಳಿ, ಗದ್ದೆ, ತೋಟ,
ಬೈಲು, ಬೆಟ್ಟ, ಬನದ ನೋಟ,
ತೇಲಿಬಹವು ಮನದಲಿ.-
ಮಲಯವನದ ಕಂಪುವೊತ್ತ
ಎಲರು ತೊಳಲುತತ್ತಯಿತ್ತ
ಸುಳಿದಿದೆ ಮರುವನದಲಿ!

ಇಷ್ಟು ಪುಟ್ಟ ಪ್ರಾಣಿಯಲ್ಲಿ
ಅಷ್ಟು ದೊಡ್ಡ ಮಲೆಯ ಹಳ್ಳಿ
ಕಷ್ಟವಿಲ್ಲದಡಗಿದೆ!
ನನ್ನಿಯ ನೆನಪೊಳಗೆ ಬೆಳಗೆ
ಮಣ್ಣಿನೆದೆಯ ಕಿರಿಮೆಯೊಳಗೆ
ಸಗ್ಗಕೆ ಕಣ್ ಮೂಡದೆ?

೧೪-೭-೧೯೩೪