ದೂರಕೆ ದೂರಕೆ ಬಹು ಬಹು ದೂರಕೆ
ಹಾರುವೆ ಗಾನ ವಿಮಾನದಲಿ;
ಮುಗಿಲಿನ ದೂರಕೆ, ಗಗನದ ದೂರಕೆ,
ಶಶಿ ರವಿ ತಾರೆಗಳಾಚೆಯ ತೀರಕ್ಕೆ,
ಮಾತಿಗೆ ನಿಲುಕದ ಭವ್ಯ ಅಪಾರಕೆ,
ಮನಸಿಗೆ ನಿಲುಕದ ದಿವ್ಯ ಅತೀತಕೆ,
ದೂರಕೆ ದೂರಕೆ ಬಹು ಬಹು ದೂರಕೆ,
ಹಾರುವೆ ಗಾನ ವಿಮಾನದಲಿ!
ಹಾರುತ ಹಾರುತ ಭೂರ್ಭುವಸ್ವರ್ಗಳನ್
ಆತ್ಮ ವಿಲಯದಲಿ ತಬ್ಬುವೆನು.
ಬಿಸಿಲಿಗೆ ಹಬ್ಬುವ ಮಂಜಿನಂದದಲಿ
ಲೋಕ ಲೋಕಗಳ ಹಬ್ಬುವೆನು!

೨೧-೧೧-೧೯೩೩