ಫುಲ್ಲ ಕುಸುಮ ಫಣಾ ಜಟಿ
ಪವನ ಲೀಲಾಲೋಲ ಕಟಿ
ಕುಣಿಯುತಿಹಳದೊ ಲತಾನಟಿ
ಪ್ರೇಮ ಮಧೂನ್ಮಾದಿನಿ!

ಮಲೆ ಬನ ಬಾನಾಡುಂಬೊಲಂ;
ಕವಿಯೊರ್ವನೆ ರಸಿಕ ಕುಲಂ;
ನವರಸಂಗಳೆ ಕುತೂಹಲಂ:
ನಂದನವಾಯ್ತೊ ಮೇದಿನಿ!

ನೆನೆ ರತಿಯಂ: ಲಾಸ್ಯದ ಸತಿ;
ನೆನೆ ಶಿವನಂ: ತಾಂಡವ ಯತಿ;
ಮತಿಯಂತೆಯೆ ಮೆರೆವುದೊ ಗತಿ:
ನಿಖಿಲ ರಸಾಹ್ಲಾದಿನಿ!

ಪ್ರತಿಕಂಪಿತ ಖಗಗಾನಂ
ನಗ ನಿರ್ಝರ ಜಲತಾನಂ
ಹಿಮ್ಮೇಳದ ಸನ್ಮಾನಂ:
ಲತೆಯೆ ಭರತಬೋಧಿನಿ!

ತೈ ತಕ ತೈ ತೈ ತಕ ತೈ
ವರ್ತಿಸುತಿರೆ ಹೂವಿನ ಕೈ
ನರ್ತಿಸುತಿದೆ ಹಸುರಿನ ಮೈ:
ಚಲನ ಕಲೋನ್ಮಾದಿನಿ!

ಅತ್ತಲೊಮ್ಮೆ ಇತ್ತಲೊಮ್ಮೆ
ನೆತ್ತಿಗೊಮ್ಮೆ ಪಾದಕೊಮ್ಮೆ
ಮಣಿವ ಕುಣಿವ ತಣಿವ ಹೆಮ್ಮೆ
ನಾಟ್ಯ ರಸಹ್ರಾದಿನಿ

ರಸ ತರಂಗದುಯ್ಯಲೆಯಲಿ
ಲತಾನಟಿಯ ಬಾಹುಗಳಲಿ
ರಿಂಗಣಗುಣಿವುದಂಗಗಳಲಿ
ಕವಿಯ ಮನೋನ್ಮಾದಿನಿ!

೬-೬-೧೯೩೮