ಶರತ್ಕಾಲದ ಸೂರ್ಯೋದಯದಲಿ
ಸ್ವರ್ಗವು ಹೊಮ್ಮಿರೆ ಮರ್ತ್ಯಹೃದಯದಲಿ,
ಹೊರ ಹೊರಟೆನು ನಾ ಸಂಚರಿಸೆ.-
ಹೊಂಗದಿರ್ಗಳ ಮಳೆ ಸುರಿಸುರಿದಿತ್ತು;
ಬಂಗಾರದ ಹೊಳೆ ಹರಿದಾಡಿತ್ತು,
ತಿರೆ ಸಗ್ಗವದಾಯಿತೊ ಎನಿಸೆ!

ಹಾಸಗೆಯಂದದಿ ಬಯಲನು ತಬ್ಬಿ
ಹಚ್ಚನೆ ಹಸುರದು ಹಸಿಹಸಿ ಹಬ್ಬಿ
ಪಚ್ಚೆಯ ವೇದಿಕೆಯಾಗಿತ್ತು.
ಹುಲ್ಲಿನ ಮೇಗಡೆ ಇಬ್ಬನಿ ರಾಸಿ
ಶಿಶುವಿನ ರುಚಿಯಲಿ ನಗೆನಗೆ ಸೂಸಿ
‘ಉರಿ-ಕಿಡಿ’ ‘ಕಿಡಿ-ಉರಿ’ ಆಗಿತ್ತು:

ಹಚ್ಚನೆ ಪಚ್ಚನೆ ವೇದಿಕೆಯಲ್ಲಿ
ಸಾಸಿರಗಟ್ಟಲೆ ಮುತ್ತನು ಚೆಲ್ಲಿ,
ರನ್ನದ ಕಿರುಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ:
ಕಾಮನಬಿಲ್ಲಿನ ಬೆಂಕಿಯ ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ!

ಭಾವಾವೇಶದಿ ನೋಡುತ ನಿಂತೆ,
ಹೃದಯದೊಳುರಿಯಿತು ರಸಮಯಚಿಂತೆ:
‘ಉರಿ-ಕಿಡಿ’ದೆನು ಹಿಮಮಣಿಯಂತೆ!
ಕಲ್ಲಿನ ಯುಗಯುಗದಿರವೂ ಶೂನ್ಯ,
ಹುಲ್ಲಿನ ಅರೆನಿಮಿಷದ ಹನಿ ಧನ್ಯ:
ತಳತಳಿಪುದೆ ಸಾರ್ಥಕ ಪುಣ್ಯ:

ಎಂದಾಲೋಚಿಸುತಿರೆ, ಬಗೆ ಮರಳಿ
ಉರಿಯಿತು ಜ್ವಾಲಾರೂಪದಿ ಕೆರಳಿ:
ನೋಡಿದರೆಲ್ಲಿಯು ಚೈತನ್ಯ!
ಕಲ್ಲಲಿ, ಮಣ್ಣಲಿ, ಹುಲ್ಲಲಿ, ಹುಡಿಯಲಿ,
ನೀರಿನ ಹನಿಯಲಿ, ಬೆಂಕಿಯ ಕಿಡಿಯಲಿ,
ನನ್ನಲಿ,-ಎಲ್ಲಿಯು ಚೈತನ್ಯ!

ಹನಿಯನು ನಾನನುಭವಿಸುವ ಪ್ರೀತಿ
ಆ ಹನಿ ನನ್ನನು ರಮಿಸುವ ರೀತಿ!
ನನ್ನಡಿ ಸೋಂಕಿಹ ಈ ಹುಲ್ಲು
ಇನಿಯನ ತುಟಿಸೋಂಕನೆ ಸವಿಯುತ್ತಿದೆ!
ಪ್ರೀತಿಯ ಮುತ್ತಿಗೆ ಹಾತೊರೆಯುತ್ತಿದೆ
ಚೇತನ ಮೂರ್ತಿಯು ಆ ಕಲ್ಲು:-
ತೆಗೆ! ಜಡವೆಂಬುದೆ ಬರಿ ಸುಳ್ಳು!

೨-೧೧-೧೯೩೩