ತಿರೆಯ ಹೋರಾಟದಲಿ
ಬಗೆ ಕದಡಿ ಕಂಗೆಡಲು,
ನೇಹಿಗನೆ, ಬಾ, ಇಲ್ಲಿ
ಶಾಂತಿಯಿಹುದು!
ತಂಬೆಲರ ತೀಟವಿದೆ
ಬಳಲಿಕೆಯ ಪರಿಹರಿಸೆ;
ಮೋಹಿಸಲು ಕಂಗಳನು
ಪರಮ ಸೌಂದರ್ಯವಿದೆ;
ಜೀವವನು ಸಂತವಿಸೆ
ದೇವ ಸಾನ್ನಿಧ್ಯವಿದೆ!         ೧೦
ಸೋದರನೆ, ಬಾ, ಇಲ್ಲಿ;
ಧನ್ಯನಾಗುವೆ ಇಲ್ಲಿ;
ಪುಣ್ಯನಾಗುವೆ ಇಲ್ಲಿ;
ಪೂರ್ಣನಾಗುವೆ ಇಲ್ಲಿ;
ಬೆಟ್ಟದಲ್ಲಿ.

ಬೆಂಗದಿರ ಮುಳುಗುತಿರೆ,
ಬೈಗುಗೆಂಪಳಿಯುತಿರೆ,
ಮುಚ್ಚಂಜೆ ಮುಸುಗುತಿರೆ,
ಕತ್ತಲೆಯು ಕವಿದು ಬರೆ,
ಪಯಣಿಗನೆ, ಬಾ, ಇಲ್ಲಿ      ೨೦
ನಿಂತು ನೋಡು!
ಮೂಡಲನು ಪಡುವಲನು
ತೆಂಕಲನು ಒಡಗಲನು
ಗಗನವನು ಭೂಮಿಯನು
ಮನದಣಿಯೆ, ಕಣ್‌ತಣಿಯೆ,
ಎದೆಯರಳಿ ಮೈಮರೆಯೆ,
ತೂಣಗೊಂಡವನಂತೆ
ನಿಂತು ನೋಡು!

ಕಂಬನಿಗಳಿಳಿಯುತಿರೆ,
ಮೈನವಿರು ನಿಮಿರುತಿರೆ,    ೩೦
ಎದೆಯಲರು ಅರಳುತಿರೆ,
ಮೇಣಂತರಂಗದಲಿ
ಹೊಸ ಬೆಳಕು ಮೂಡಿ ಬರೆ,
ಬಣ್ಣನೆಗೆ ಬಾರದಿಹ
ಚೆಲುವನವಲೋಕಿಸಲು
ಮಾತು ಮೈದೆಗೆಯುತಿರೆ,
ಬಾಳೆಲ್ಲ ಹಿಗ್ಗಿ ಬರೆ,
ದೇಹ ಪಂಜರದಲ್ಲಿ
ಜೀವ ಹೋರಾಡುತಿರೆ,
ಬಾ, ಇಲ್ಲಿ, ನೇಹಿಗನೆ,        ೪೦
ಮೌನದಲಿ ಮಮತೆಯಲಿ
ನಿಂತು ನೋಡು!

ಹುಣ್ಣಿಮೆಯ ದಿನದಲ್ಲಿ,
ಪೂರ್ವ ದಿಗ್ದೇಶದಲಿ,
ದೂರ, ಬಹು ದೂರದಲಿ,
ಮಬ್ಬಿನ ದಿಗಂತದಲಿ,
ದುಂಡಾಗಿ, ಕೆಂಪಾಗಿ,
ಸುಂದರ ಸುಧಾಕರನು
ಮೂಡಿ ಮೇಲೇಳುತಿರೆ,
ಸುತ್ತಲಿಹ ಬಯಲುಗಳ      ೫೦
ಹಸುರಾದ ಹೊಲಗಳನು,
ಅಲ್ಲಲ್ಲಿ ಮೆರೆಯುತಿಹ
ಬಿತ್ತರದ ಜಲಗಳನು
ಕೌಮುದಿಯು ಮುತ್ತುತಿರೆ,
ಚಂದ್ರಿಕೆಯು ಬೆಳಗುತಿರೆ,
ಬೆಳ್ದಿಂಗಳೆಸೆಯುತಿರೆ,
ಮೌನ ಮಿತಿಮೀರುತಿರೆ,
ಧ್ಯಾನ ಬಗೆವುಗುತಲಿರೆ,
ನಿಂತಿಲ್ಲಿ, ನೇಹಿಗನೆ,
ಚೆಲುವ ನೋಡು! ೬೦

ತಾರೆಗಳ ದಿಬ್ಬಣವು
ಗಗನದಿಂದೈತಂದು
ಬೆಟ್ಟದುದಿಯಲಿ ತಳುವಿ,
ಸೋಪಾನಗಳನಿಳಿದು
ತಪ್ಪಲಲಿ ಮೇಳವಿಸಿ
ಕವಿದು ಕಿಕ್ಕಿರಿದಂತೆ,
ಬುವಿ ಬೆಸಲೆಯಾದಂತೆ,
ಚುಕ್ಕಿಗಳ ತಿಂತಿಣಿಯ
ತೆಕ್ಕನೆಯೆ ಪೆತ್ತಂತೆ,
ಸಗ್ಗ ನೆಲಕಿಳಿದಂತೆ,          ೭೦
ಬಾನಿಳೆಗೆ ಬಿದ್ದಂತೆ,
ನೂರಾರು ದೀಪಗಳು,
ಮಿಣುಕುತಿಹ ಸೊಡರುಗಳು,
ಸಾಲಾಗಿ, ಡೊಂಕಾಗಿ,
ಗುಡಿಗಟ್ಟಿ ಕೊಂಕಾಗಿ,
ಗೊಂಚಲಲಿ ಗುಂಪಾಗಿ,
ತೆಕ್ಕನೆಯೆ ಹುಟ್ಟಿಬರೆ,
ಪತ್ತನದಿ ಮಿಂಚಿ ಬರೆ,
ಬೆರಗಾಗಿ, ಮರುಳಾಗಿ,
ಬಾ ನೋಡು, ನಿಂತಿಲ್ಲಿ       ೮೦
ಮೂಕನಾಗಿ!

ತಾರೆಗಳ ತವರೂರು
ಸಿಂಗರದ ಮೈಸೂರು!
ಕನ್ನಡದ ಕುಶಲತೆಗೆ
ಕನ್ನಡದ ರಸಿಕತೆಗೆ
ಕನ್ನಡದ ನಿಪುಣತೆಗೆ
ಕನ್ನಡಿಯು ಮೈಸೂರು!
ಕನ್ನಡಿಗರೆದೆಯರಿಯೆ
ಕನ್ನಡಿಗರೊಲವವರಿಯೆ
ಕನ್ನಡಿಗರಿಂಪರಿಯೆ,          ೯೦
ಸೋದರನೆ, ನೇಹಿಗನೆ,
ಲಲಿತ ಲಲಿತಾದ್ರಿಯಲಿ
ನಿಂತು ನೋಡು!

ಕಬ್ಬಗಳ ಕಟ್ಟುವೊಡೆ
ಕಬ್ಬಿಗನೆ, ಬಾ, ಇಲ್ಲಿ;
ಗಾನವರು ಹಾಡುವೊಡೆ
ಗಾಯಕನೆ, ಬಾ, ಇಲ್ಲಿ;
ಬೀಣೆಯನು ಮಿಡಿಯುವೊಡೆ
ಬಾ ಇಲ್ಲಿ, ವೈಣಿಕನೆ;
ಧ್ಯಾನವನು ಮಾಡುವೊಡೆ  ೧೦೦
ಬಾ ಇಲ್ಲಿ, ತಾಪಸನೆ;
ಬಣ್ಣದಲಿ ಭಾವಗಳ
ಬಣ್ಣಿಪೊಡೆ ಬಾ ಇಲ್ಲಿ,
ವರ್ಣಶಿಲ್ಪಿ!

ದೇಗುಲವು ಭಕ್ತರಿಗೆ,
ಉಪವನವು ರಸಿಕರಿಗೆ,
ಲೌಕಿಕರಿಗಿದು ಸಗ್ಗ,
ವೈದಿಕರಿಗಿದು ಮುಕ್ತಿ,
ಲಲಿತ ಗಿರಿಯು!

೬-೮-೧೯೨೯