ದಿಗುತಟದಲಿ ತೆರೆಯುತಿತ್ತು
ಹಗಲಿನಕ್ಷಿ;
ಮುಗಿಲ ಗರಿಯ ಕಾಯಿಸಿತ್ತು
ಗಗನಪಕ್ಷಿ.
ಪಚ್ಚೆಯಾಗಿ ಮೆರೆಯುತಿತ್ತು
ಬುವಿಯ ಮಣ್ಣು;
ಪಸುರ ಸಿರಿಯ ಮೇಯುತಿತ್ತು
ಕವಿಯ ಕಣ್ಣು.

ಜೇನುತುಪ್ಪದಲ್ಲಿ ತೊಯ್ದ
ಹಣ್ಣಿನಂತೆ
ಪೊಸ ಚೆಲ್ವಿನ ಬಲೆಯ ನೆಯ್ದ
ಹೆಣ್ಣಿನಂತೆ
ಸವಿಗೆ ಸವಿಯ ಪೇರಿಸಿತ್ತು
ಭದ್ರಮಾಸಂ;
ಕವಿಗೆ ಕವಿಯ ತೋರಿಸಿತ್ತು
ಸುಪ್ರಭಾತಂ!

೧೨-೯-೧೯೩೮