ಇಂತಹ ಸುಂದರ ಪ್ರಾತಃಕಾಲದಿ
ಜೀವಿಸುವುದಕಿಂತಲು ಬೇರೆಯ ಗುರಿ
ಜೀವಕೆ ಬೇಕಿಲ್ಲ:
ಚಿರಸೌಂದರ್ಯದ ಸಂಪದವಿದ್ದರೆ
ಧರ್ಮಕೆ ಚ್ಯುತಿಯಿಲ್ಲ.
ಮತಿಯಲ್ಲ;-
ರಸಾನುಭೂತಿಯ ರಸಪಥವಲ್ಲದೆ
ಸತ್ಯಕೆ ಗತಿಯಿಲ್ಲ!

ನಿನ್ನೆಯ ಸಂಜೆಯ ಮಳೆಯಲಿ ಮಿಂದು
ಕಳಕಳಿಸುವ ಹಸುರ್ಬಯಲಲಿ ಇಂದು
ಹೊಂಬಿಸಿಲಲಿ ಉರಿದಿರೆ ಜಲಬಿಂದು
ಸತ್ತಳೊ ಉರ್ವಶಿ ಸ್ವರ್ಗದಲಿ!
ಗಾಳಿಯ ಮಂಡಲ ಸ್ಫಟಿಕದವೋಲಿದೆ;
ನಭವೋ ನೀಲವಿತಾನವ ಹೋಲಿದೆ;
ಅಲ್ಲಲ್ಲಿಯೆ ಮುಗಿಲಿನ ಪಟ ತೇಲಿದೆ:
ವೈಕುಂಠವಿದೆ ನಿಸರ್ಗದಲಿ!

ದನಕರುಗಳು ಬಯಲಲಿ ಮೇಯುತ ‘ಇವೆ’;
ಗಿರಿತರುಗಳು ಬದುಕನು ಸವಿಯುತ ‘ಇವೆ’;
ಅರಿವಾಸೆಯ ಮಾಯೆಗೆ ಬೀಳದೆ ‘ಇವೆ’;
ಇರುವಿಕೆಯಾನಂದದಿ ನಲಿಯುತ ‘ಇವೆ’.
‘ಇವೆ’;-
ಇರುವಿಕೆಗಿಂತಲು ಹೆಚ್ಚಿನ ಗೋಜಿಗೆ ಹೋಗದಿವೆ!

‘ಅರಿವಾ’ ಸೆಯೆ ಮಾಯ ಬಂಧ;
‘ಇರು’ ವುದೆ ಮುಕ್ತಿಯ ಆನಂದ!
‘ಅರಿವಾ’ ಸೆಯ ಬಿಡು; ‘ಇರು’ ವಾಸೆಯ ತೊಡು!
ಇಂತಹ ಸಮಯದಿ ‘ಇರುವಿಕೆ’ ಗಿಂತಲು
ಹೆಚ್ಚಿನ ‘ಅರಿವಿ’ ಲ್ಲ!
ಇಂತಹ ದಿವ್ಯಪ್ರಭಾತ ಕಾಲದಿ
ಜೀವಿಸುವುದಕಿಂತಲು ರಸಜೀವಿಗೆ
ಬೇರೆಯ ಗುರಿಯಿಲ್ಲ!

೮-೯-೧೯೩೪