02

ಪಕ್ಷಿಗಳು ನಮ್ಮ ದಿನ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ ಜೀವಿಗಳು. ಇಂದಿನ ಧಾವಂತದ ಜೀವನದಲ್ಲಿ ನಾವು ಗುರುತಿಸದಿದ್ದರೂ ನಮ್ಮ ಉಳಿವಿಗೆ ಕಾರಣವಾಗುಷ್ಟು ಮಹತ್ವ ಈ ಪಕ್ಷಿಗಳಿಗಿದೆ. ನಮ್ಮ ಪುರಾಣ, ಜಾನಪದಗಳಲ್ಲಿಯೂ, ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿಯೂ ಹಕ್ಕಿಗಳ ಉಲ್ಲೇಖ ಗಣನೀಯ ಪ್ರಮಾಣದಲ್ಲಿದೆ. ಕೋಳಿ ಕೂಗುವ ಹೊತ್ತಿಗೆ ಎದ್ದ, ಕೋಳಿ ಕೂಗಿದರೇ ಬೆಳಗಾಗುವುದಾ ಎಂದ ಜಾನಪದ ನಮ್ಮದು! ಸೌಂದರ್ಯದ ಮತ್ತೊಂದು ಪ್ರತೀಕವೇ ಹಕ್ಕಿಗಳು. ಮಾನವನಿಗಿಂತ ಲಕ್ಷಾಂತರ ವರ್ಷಗಳ ಹಿಂದೆಯೇ ಈ ಭೂಮಿಯ ಮೇಲೆ ವಿಕಾಸವಾದ ಇವು ಮಾನವನ ಹಿರಿಯ ಸಹಜೀವಿಗಳು. ಹಕ್ಕಿಗಳ ವಿಕಾಸ ಕುರಿತಾದ ಚರ್ಚೆ ಸುದೀರ್ಘವಾದದ್ದು ಮತ್ತು ವಿಜ್ಞಾನಿಗಳಲ್ಲೇ ಪಂಥಗಳನ್ನು ಹುಟ್ಟುಹಾಕಿದಂಥದ್ದು. ಇಂದು ಅವನ್ನು ಗರಿಗಳುಳ್ಳ ಡೈನೊಸಾರುಗಳೆಂದು ಕರೆಯಲಾಗುತ್ತದೆ. ಇದಕ್ಕೆ ಆದಾರ ಇತ್ತೀಚಿನ ಪಳಿಯುಳಿಕೆಗಳು ಹಾಗೂ ಅವನ್ನು ವಿಶ್ಲೇಷಿಸಲು ಇಂದು ಲಭ್ಯವಾದ ಉನ್ನತ ತಂತ್ರಜ್ಞಾನ. ಅದೇನೇ ಇರಲಿ, ಪಕ್ಷಿಗಳು ನಮ್ಮ ಹಿರಿಯ ಸಹಜೀವಿಗಳು ಎಂಬ ನೈತಿಕ ಪ್ರಜ್ಞೆ ನಮ್ಮಲ್ಲಿ ಯಾವಾಗಲೂ ಜಾಗೃತವಾಗಿರಬೇಕು.

ವೈಜ್ಞಾನಿಕವಾಗಿ ಪಕ್ಷಿಗಳು ‘ಕಶೇರುಕ ವರ್ಗದ (ಬೆನ್ನುಮೂಳೆಯಿರುವ) ಗರಿಗಳುಳ್ಳ’ ಬಿಸಿರಕ್ತದ ಪ್ರಾಣಿಗಳು. ಇವು ಸರಿಸೃಪಗಳಿಂದ ವಿಕಾಸವಾಗಿವೆ. ಸ್ತನಿಗಳಂತೆ ನಾಲ್ಕು ಭಾಗಗಳಿರುವ ಹೃದಯವನ್ನು ಹೊಂದಿವೆ. ಇವುಗಳ ಮುಂಗಾಲುಗಳು ರೆಕ್ಕೆಗಳಾಗಿ ವಿಕಾಸ ಹೊಂದಿವೆ. ಕೊಕ್ಕನ್ನು ಹೊಂದಿರುವುದು ಈ ಜೀವಿಗಳ ಇನ್ನೊಂದು ವೈಶಿಷ್ಟ್ಯ. ಹಕ್ಕಿಯ ಆಹಾರ ಅಭ್ಯಾಸಕ್ಕೆ ಪೂರಕವಾಗಿ ಕೊಕ್ಕುಗಳು ವಿಕಾಸ ಹೊಂದಿವೆಯಾದರು ಕೊಕ್ಕು ಆಹಾರ ಸೇವಿಸಲು ಮಾತ್ರವಲ್ಲದೆ ರಕ್ಷಣೆ, ಗೂಡು ಕಟ್ಟುವಿಕ ಇತ್ಯಾದಿ ಕಾರ್ಯಗಳಿಗೂ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಕೊಕ್ಕಿನ ಬುಡದಲ್ಲಿ ಮೂಗಿನ ಹೊಳ್ಳೆಯಿರುತ್ತದೆ. ಇಲ್ಲಿಂದ ಇವು ಉಸಿರಾಡುತ್ತವೆ. ಆಹಾರ ಅರಸಲು ಸಾಮಾನ್ಯವಾಗಿ ದೃಷ್ಟಿಯನ್ನು ಅವಲಂಬಿಸಿದ್ದರು, ನ್ಯೂಜಿಲ್ಯಾಂಡಿನ ಕಿವಿ ಹಕ್ಕಿ ವಾಸನೆಯಿಂದ ಆಹಾರವನ್ನು ಪತ್ತೆ ಮಾಡುತ್ತದೆ. ಅದಕ್ಕೆ ಅನುಕೂಲವಾಗುವಂತೆ ಕಿವಿ ಹಕ್ಕಿಯ ಕೊಕ್ಕಿನ ತುದಿಯಲ್ಲಿ ಇದರ ಮೂಗಿನ ಹೊಳ್ಳೆಯಿದೆ. ವಂಶಾಭಿವೃದ್ಧಿ ಮೊಟ್ಟೆಯಿಟ್ಟು ಮರಿಮಾಡುವ ಮೂಲಕ ನಡೆಯುತ್ತದೆ. ಮೊಟ್ಟೆಯನ್ನು ರಕ್ಷಿಸುತ್ತವೆ ಹಾಗೂ ಮೊಟ್ಟೆಗೆ ಕಾವು ಕೊಟ್ಟು ಮರಿಮಾಡುತ್ತವೆ. ಮೊಟ್ಟೆಗೆ ಕಾವು ಕೊಡುವ, ಮರಿಗಳನ್ನು ಪಾಲಿಸುವ ಕಾರ್ಯ ಗಂಡು ಅಥವಾ ಹೆಣ‍್ಣು ಅಥವಾ ಎರಡೂ ನಿರ್ವಹಿಸುತ್ತವೆ. ಸಾರಸ್ ಕೊಕ್ಕರೆಯಂತಹ ಹಕ್ಕಿ ಇಡೀ ಜೀವಮಾನ ಒಂದೇ ಸಂಗಾತಿಯೊಂದಿಗೆ ಇದ್ದರೆ, ಕೆಲವು ಗಂಡು ಹಕ್ಕಿಗಳು ಅನೇಕ ಹಕ್ಕಿಗಳೊಂದಿಗೆ ಕೂಡುತ್ತವೆ ಹಾಗೆಯೇ ಕೆಲವು ಪ್ರಬೇಧದ ಹೆಣ್ಣುಹಕ್ಕಿಗಳು ಅನೇಕ ಗಂಡು ಹಕ್ಕಿಗಳೊಂದಿಗೆ ಕೂಡುತ್ತವೆ. ಗುಡು ಕಟ್ಟುವ ಕಾರ್ಯ ಬಹುತೇಕ ಗಂಡಿನದೇ ಆದರೂ ಕೆಲವೊಮ್ಮೆ ಎರಡೂ ಹಕ್ಕಿಗಳು ಸೇರಿ ಗೂಡನ್ನು ಕಟ್ಟುತ್ತವೆ. ಗೂಡ ಕಟ್ಟದ ಹಕ್ಕಿಗಳಲ್ಲಿ ಕೆಲವು ನೆಲದ ಮೇಲೆ ಅಥವಾ ಮರೆಯಲ್ಲಿ ಮೊಟ್ಟೆಯಿಟ್ಟು ಮರಿಮಾಡಿದರೆ, ಕೆಲವು ಬೇರೆ ಪ್ರಬೇಧದ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುತ್ತವೆ ಹಾಗೂ ಆ ಮೊಟ್ಟೆಯೊಡುದು ಬರುವ ಮರಿಯನ್ನು ಆ ಬೇರೆಯೇ ಪ್ರಬೇಧದ ಹಕ್ಕಿ ಆಹಾರ ನೀಡಿ ಸಾಕುತ್ತದೆ. ಕೆಲವು ಜಾತಿಯ ಹಕ್ಕಿಗಳು ಸಾಮೂಹಿಕವಾಗಿ ಗೂಡು ಕಟ್ಟುತ್ತವೆ. ಇವು ಸೇತುವೆಯ ಕೆಳಗಿರಬಹುದು ಇಲ್ಲವೆ ಗುಹೆಯಂತಹ ಪ್ರದೇಶದಲ್ಲಿರ ಬಹುದು. ಕೆಲವು ಹಕ್ಕಿಗಳು ಹಿಂದಿನ ವರ್ಷದ ಗೂಡನ್ನು ತುಸು ದುರಸ್ತಿ ಮಾಡಿ ಬಳಸುವುದೂ ಉಂಟು, ಅದೇ ಗೂಡಿ ಮತ್ತಷ್ಟು ಸಾಮಗ್ರಿ ಸೇರಿಸಿ ಹೊಸದಾಗಿ ಮಾಡುವುದೂ ಉಂಟು. ಸಾಮೂಹಿಕವಾಗಿ ಗೂಡು ಕಟ್ಟುವ ಹಕ್ಕಿಗಳಲ್ಲಿ ಈ ಗೂಡಿನ ಭಾರ ಎಷ್ಟಿರುತ್ತದೆ ಎಂದರೆ ಮರದ ಕೊಂಬೆಯೇ ಬಿದ್ದು ಹೋಗುತ್ತದೆ.

ಹಕ್ಕಿಗಳ ಕಣ್ಣಿನ ದೃಷ್ಟಿ ತೀಷ್ಣವಾಗಿದ್ದು ಕೆಲವೇ ಕ್ಷಣಗಳಲ್ಲಿ ಇವುಗಳ ಕಣ್ಣು ದೂರದರ್ಶಕದಿಂದ ಸೂಕ್ಷ್ಮದರ್ಶಕವಾಗಬಲ್ಲದು. ವಾಸನೆ, ಶಬ್ದ ಮತ್ತು ರುಚಿ ಗ್ರಹಣಶಕ್ತಿ ಅಷ್ಟಕಷ್ಟೆ. ಬಹುತೇಕ ಹಕ್ಕಿಗಳು ಹಗಲಿನಲ್ಲಿ ಎಚ್ಚರವಿರುತ್ತವೆ.

ಹಕ್ಕಿಗಳ ಕೂಗು ಅನೇಕ ಉದ್ದೇಶ ಉಳ್ಳದ್ದು. ಇದು ಅವುಗಳಲ್ಲಿ ಸಂವಹನಕ್ಕೆ, ತನ್ನ ಕ್ಷೇತ್ರವನ್ನು ಕಾಯ್ದುಕೊಳ್ಳುವುದಕ್ಕೆ ಬಳಕೆಯಾಗುತ್ತದೆ. ಕೆಲವು ಹಕ್ಕಿಗಳು ಹಾಡುವುದೂ ಉಂಟು. ಇದು ತನ್ನ ಇರುವಿಕೆಯನ್ನು ಸೂಚಿಸಲು. ಕೆಲವು ಹಕ್ಕಿಗಳು ಇತರ ಹಕ್ಕಿಗಳ ಕೂಗನ್ನು ಅನುಕರಿಸುವುದೂ ಉಂಟು.

ಜಗತ್ತಿನಲ್ಲಿ ಸುಮಾರು 10,132 ವಿವಿಧ ಪ್ರಬೇಧಗಳ ಪಕ್ಷಿಗಳನ್ನು ಇದುವರೆಗು ಗುರುತಿಸಲಾಗಿದೆ. ಭಾರತದಲ್ಲಿ 1263 ವಿವಿಧ ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದೆ (ಜುಲೈ 2016) ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವವಿದೆ. ಕರ್ನಾಟಕದ ಪಕ್ಷಿಗಳ ಸಂಖ್ಯೆ 512 ಇದ್ದು, ಪಶ್ಚಿಮಘಟ್ಟಗಳಲ್ಲಿ 508 ವಿವಿಧ ಪ್ರಬೇಧಗಳು ದಾಖಲಾಗಿವೆ. ಭಾರತದ ಹಕ್ಕಿಗಳನ್ನು ಕುರಿತ ವಿಶೇಷತೆ ಎಂದರೆ ಜಗತ್ತಿನಲ್ಲಿ ಕಂಡುಬರುವ ಹಕ್ಕಿಗಳ ಸುಮಾರು ಶೇ 12 ಇಲ್ಲಿ ಕಂಡುಬರುವುದರ ಜೊತೆಗೆ ಜಗತ್ತಿನಲ್ಲಿರುವ 75 ಪಕ್ಷಿ ಕುಟುಂಬಗಳಲ್ಲಿ 45 ಕುಟುಂಬಗಳನ್ನು ಭಾರತದಲ್ಲಿ ಕಂಡುಬರುವ ಹಕ್ಕಿಗಳು ಪ್ರತಿನಿಧಿಸುತ್ತವೆ. ಇದು ಬಹಳ ಮಹತ್ವದ ಅಂಶ. ಇದಕ್ಕೆ ಪ್ರಮುಖ ಕಾರಣ ಭಾರತದ ವೈವಿಧ್ಯಮಯ ಆವಾಸಗಳು. ಹಿಮದಿಂದ ಕೂಡಿದ ಪರ್ವತ ಶ್ರೇಣಿಗಳಿಂದ ತೊಡಗಿ ಮರುಭೂಮಿಯವರೆಗೆ, ನಿತ್ಯಹರಿದ್ವರ್ಣದ ಕಾಡುಗಳಿಂದ ತೊಡಗಿ ಕುರುಚಲು ಕಾಡುಗಳು, ಕೆರೆ, ಕುಂಟೆಗಳಿಂದ ತೊಡಗಿ ಮಹಾಸಾಗರದವರೆಗಿನ ಆವಾಸ ವೈವಿಧ್ಯ ಇಲ್ಲಿನ ಹಕ್ಕಿಗಳ ವೈವಿಧ್ಯದ ರಹಸ್ಯ! ವೈಜ್ಞಾನಿಕವಾಗಿ ಈ ಆವಾಸಗಳನ್ನು 1. ಭಾರತ ಭಾಗದ ಹಿಮಾಲಯೋತ್ತರ ಭಾಗ (The Trans-Himalayas) 2.ಹಿಮಾಲಯ (The Himalayan Range) 3. ಭಾರತದ ಮರುಭೂಮಿ (Indian Desert) 4. ಅರೆ ಕುರುಚಲು ಪ್ರದೇಶ (Semi Arid Zone) 5. ಪಶ್ಚಿಮಘಟ್ಟಗಳು (The Western Ghats) 6. ದಕ್ಷಿಣ ಪ್ರಸ್ಥಭೂಮಿ (Deccan Peninsula) 7. ಗಂಗಾನದಿಯ ಮುಖಜಭೂಮಿ (The Gangetic Plains) 8. ಕರಾವಳಿ ಪ್ರದೇಶ (The Coasts) 9. ಈಶಾನ್ಯ ಭಾರತ (The Northeast India) 10. ದ್ವೀಪಗಳು (The Islands). ಈ ವಿಂಗಡನೆಯನ್ನು ವಿಜ್ಞಾನಿ ಡಾ ಜಿ ಎಸ್ ರಾವತ್ ಮಾಡಿದ್ದಾರೆ.

ಈ ಎಲ್ಲ ಆವಾಸ ಭಾಗಗಳ ಸೃಷ್ಟಿಯ ಹಿಂದೆ ಭೂವಿಜ್ಞಾನದ ಪ್ರಕ್ರಿಯೆ ಅಡಗಿದೆ. ಸಸ್ಯ-ಪ್ರಾಣಿ-ಪಕ್ಷಿಗಳನ್ನು ಸರಿಯಾಗಿ ಅಧ್ಯಯನ ಮಾಡಲು ಅಗತ್ಯವಾದದ್ದು ಭೂವಿಜ್ಞಾನದ ತಿಳಿವಳಿಕೆ. ಇದು ಒಂದು ಆವಾಸ ಹೇಗೆ ಸೃಷ್ಟಿಯಾಯಿತು ಎಂದು ಹೇಳುತ್ತದೆ. ಅಂಥ ಆವಾಸ ಬೆಂಬಲಿಸುವ ಸಸ್ಯ-ಪ್ರಾಣಿ-ಪಕ್ಷಿ ಹಾಗೂ ಇತರ ಜೀವಿಗಳು ಅಲ್ಲಿ ವಿಕಾಸವಾದವು. ಭಾರತ ಭೂಭಾಗದಲ್ಲಿ ನಡೆದ ಭೂವಿಜ್ಞಾನ ಪ್ರಕ್ರಿಯೆ, ಜಗತ್ತಿನ ಪ್ರಾಣಿಗಳಲ್ಲಿ ಶೇ 6.5, ಸಸ್ಯಗಳಲ್ಲಿ ಶೇ 7ರಷ್ಟು ಭಾರತದಲ್ಲಿಯೇ ಕಂಡುಬರುವಂತೆ ಮಾಡಿದೆ. ಭಾರತದಲ್ಲಿನ ಹಕ್ಕಿಗಳಲ್ಲಿ 78 ಪ್ರಬೇಧದ ಹಕ್ಕಿಗಳು ಗಂಡಾಂತರದಂಚಿನಲ್ಲಿವೆ. ಈ ಕೊನೆಯ ಅಂಶ ನಮಗೆ ಇವುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಹೆಚ್ಚಿಸಬೇಕು.

ಸರ್ಕಾರ ಹಾಗೂ ಖಾಸಗಿ ನೆಲೆಯಲ್ಲಿ ಪಕ್ಷಿಗಳ ಸಂರಕ್ಷಣೆಗೆ ಅನೇಕ ಪ್ರಯತ್ನಗಳು ನಡೆದಿವೆ. ಭಾರತ ಸರ್ಕಾರ 1972ರಲ್ಲಿ ಜಾರಿಗೆ ತಂದ ವನ್ಯಜೀವಿ (ಸಂರಕ್ಷಣಾ) ಕಾಯಿದೆ, 1972 ಹಕ್ಕಿಗಳಿಗೂ ಸೇರಿದಂತೆ ಭಾರತದ ರಕ್ಷಣೆ ಅಗತ್ಯವಿರುವ ಸಸ್ಯ-ಪ್ರಾಣಿಗಳಿಗೆ ಬಲುದೊಡ್ಡ ಪ್ರಮಾಣದ ಕಾನೂನಿನ ರಕ್ಷಣೆ ನೀಡಿದೆ. ಇದೇ ಕಾಯಿದೆ ಅನ್ವಯ ಭಾರತದ ಕಾಡುಗಳನ್ನು ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ರಕ್ಷಿತಾರಣ್ಯ, ಸಮುದಾಯ ರಕ್ಷಿತಾರಣ‍್ಯಗಳಾಗಿ ವಿಂಗಡಿಸಿದ್ದು, ರಾಷ್ಟ್ರೀಯ ಉದ್ಯಾನದಲ್ಲಿನ ಜೀವಿಗಳಿಗೆ ಅತಿಹೆಚ್ಚಿನ ರಕ್ಷಣೆಯಿದೆ. ಈ ಕಾಯಿದೆಯ ಅನುಬಂಧಗಳಲ್ಲಿ ಜೀವಿಗಳನ್ನು ಪಟ್ಟಿಮಾಡಲಾಗಿದ್ದು ಸಂಶೋಧನೆ ಆಧಾರಿತವಾಗಿ ಸಸ್ಯ ಪ್ರಾಣಿಗಳನ್ನು ಇವುಗಳಲ್ಲಿ ವಿಂಗಡಿಸಲಾಗಿದೆ. ಖಾಸಗೀ ಅರಣ‍್ಯ ಎಂಬುದು ಭಾರತದಲ್ಲಿ ಇಲ್ಲ. ಎಲ್ಲ ಅರಣ್ಯ ಪ್ರದೇಶಗಳೂ ಸರ್ಕಾರದ ಸ್ವತ್ತು. ಹಾಗಾಗಿ, ಅರಣ್ಯದಲ್ಲಿ ಯಾವುದೇ ಬಗೆಯ – ಸಂಶೋಧನೆ ನಡೆಸುವುದೂ ಸೇರಿದಂತೆ – ಚಟುವಟಿಕೆ ನಡೆಸಲು ಸರ್ಕಾರದ ಅನುಮತಿ ಅತ್ಯಾವಶ್ಯಕ. ಹೀಗೆ ಅನುಮತಿ ಪಡೆದು ಅನೇಕ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಸಂಶೋಧನೆ, ಅಧ್ಯಯನ ಹಾಗೂ ವೀಕ್ಷಣೆಗಳನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಅನೇಕ ಬಗೆಯ ಹಕ್ಕಿಗಳನ್ನು ಮೊದಲಬಾರಿಗೆ ಪತ್ತೆಹಚ್ಚಲಾಗಿದೆ. ನಮ್ಮ ಹಕ್ಕಿಗಳ ಸಂಖ್ಯೆಯೂ ಹೆಚ್ಚಾಗಿದೆ, ಹಾಗೆಯೇ ರಕ್ಷಿತಾರಣ್ಯಗಳೂ ಹೆಚ್ಚಾಗಿದೆ.

ಖಾಸಗೀ ನೆಲೆಯಲ್ಲಿ ಆದರೆ ಜಾಗತಿಕವಾಗಿ ನಡೆಯುತ್ತಿರುವ ಪಕ್ಷಿಸಂರಕ್ಷಣಾ ಕಾರ್ಯಗಳಲ್ಲಿ ಬಹಳ ಮುಖ್ಯವಾದದ್ದು ಬರ್ಡ್ ಲೈಫ್ ಇಂಟರ್ನಾಷ್ಯನಲ್. ಇದು ಜಾಗತಿಕವಾಗಿ ಪ್ರಮುಖವಾದ ಪಕ್ಷಿ ತಾಣಗಳನ್ನು ಗುರುತಿಸಿದೆ. ಸಂಶೋಧನೆ ಹಾಗೂ ಸಂರಕ್ಷಣಾ ಕಾರ್ಯ ಇಲ್ಲಿ ಆದ್ಯತೆ ಮೇರೆಗೆ ನಡೆಯಬೇಕಾಗಿದೆ. ಭಾರತದಲ್ಲಿ 465 ಜಾಗತಿಕವಾಗಿ ಪ್ರಮುಖವಾದ ಪಕ್ಷಿ ತಾಣಗಳನ್ನು ಗುರುತಿಸಲಾಗಿದ್ದು ಇವು 435 ಜಾಗತಿಕವಾಗಿ ಗಂಡಾಂತರದಂಚಿನಲ್ಲಿರುವ ಹಕ್ಕಿಗಳಿಗೆ ಆಶ್ರಯತಾಣವಾಗಿವೆ. ಕರ್ನಾಟಕದಲ್ಲಿ 37 ಜಾಗತಿಕವಾಗಿ ಪ್ರಮುಖವಾದ ಪಕ್ಷಿ ತಾಣಗಳಿದ್ದು ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ 46 ಪ್ರಮುಖ ಪಕ್ಷಿತಾಣಗಳನ್ನು ಹೊಂದಿರುವ ಅಸ್ಸಾಂ ರಾಜ್ಯವಾಗಿದೆ.

ಹಕ್ಕಿಗಳ ಸಂರಕ್ಷಣೆಗೆ ಅವುಗಳ ಗಣತಿಯೂ ಮುಖ್ಯ. ಇದು ವನ್ಯಜೀವಿ ಗಣತಿಯ ಒಂದು ಭಾಗ. ಪಕ್ಷಿಗಳ ಗಣತಿಗೆ ಹಲವಾರು ವಿಧಾನಗಳಿವೆ. ಕೆಲವು ನಿರ್ದಿಷ್ಟ ಗಣಕ್ಕೆ ಹೆಚ್ಚು ಉಪಯುಕ್ತ. ಸೀಳುದಾರಿ ಗಣತಿ (Line Transect), ಬಿಂದು ಗಣತಿ (Point Transect), ಧ್ವನಿ ಗಣತಿ (Call count), ಗೂಡು ಗಣತಿ (Nest counts), ಮೊಟ್ಟೆ/ಮರಿ ಗಣತಿ (Fledge count) ಹೀಗೆ ನಾನಾ ರೀತಿಯ ಗಣತಿಗಳಿವೆ. ಇವನ್ನು ಪ್ರದೇಶಕ್ಕನುಗುಣವಾಗಿ ತರಬೇತಾದ ವನ್ಯಜೀವಿ ತಜ್ಞರು ನಡೆಸುತ್ತಾರೆ. ಹಾಗೆಯೇ ಪ್ರಬೇಧ ಸಾಂದ್ರತೆಯನ್ನು (Species richness) ಕಂಡುಹಿಡಿಯಲಾಗುತ್ತದೆ. ಈ ಬಗೆಯ ಗಣತಿ ಆಧಾರಿತ ಅಧ್ಯಯನಗಳು ಸಂರಕ್ಷಣೆಗೆ ಬಹಳ ಮುಖ್ಯವಾದವು. ಇವುಗಳಿಗೆ ಸಾಕಷ್ಟು ಕ್ಷೇತ್ರಕಾರ್ಯ ಮಾಡಿ ಮಾಹಿತಿ ಸಂಗ್ರಹಿಸಿ ಅದನ್ನು ವಿಶ್ಲೇಷಣೆ ನಡೆಸಬೇಕಾಗುತ್ತದೆ. ಮಾಹಿತಿಯನ್ನು ಮೈಕ್ರೊಸಾಫ್ಟ್ ಎಕ್ಸೆಲ್‍ ನಲ್ಲಿ ವಿಶ್ಲೇಷಣೆ ಮಾಡುತ್ತಾರೆಯಾದರೂ ಇಂದು ಅದಕ್ಕಾಗಿಯೇ ಅನೇಕ ತಂತ್ರಾಂಶಗಳು ಲಭ್ಯವಿವೆ. ಇಂತಹ ಅಧ್ಯಯನಗಳಿಂದ ಒದಗಿದ ಮಾಹಿತಿಯನ್ನು ಪ್ರಬೇಧ ಸಂರಕ್ಷಣೆಗೆ ಬಳಸಲಾಗುತ್ತದೆ.

ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಪ್ರಮುಖ ಕಾರಣಗಳು ಆವಾಸ ನಾಶ, ಕೃಷಿಯ ವಿಸ್ತರಣೆ, ತೀವ್ರಗತಿಯ ಕೈಗಾರಿಕೀಕರಣ, ಕಳ್ಳಬೇಟೆ ಹಾಗೂ ಜಾಗತಿಕ ತಾಪಮಾನ ಏರಿಕೆ.

ಹಕ್ಕಿಗಳು ನಮಗೆ ಹಲವಾರು ಬಗೆಯಲ್ಲಿ ಉಪಯುಕ್ತ. ಆದರೆ, ನಾವು ಅದರ ಸಂರಕ್ಷಣೆಗೆ ತೊಡಗಬೇಕಾದ್ದು ಅವು ನಮ್ಮ ಸಹಜೀವಿಗಳು ಎಂಬ, ಈ ಭೂಮಿ ನಮ್ಮಂತೆ ಅವುಗಳಿಗೂ ಸೇರಿದ್ದು ಎಂಬ ನೈತಿಕ ನೆಲೆಯಿಂದ. ಬಹಳ ಮುಖ್ಯವಾಗಿ ಹಕ್ಕಿಗಳು ಸಸ್ಯಗಳ ಪರಾಗಸ್ಪರ್ಶದಲ್ಲಿ ಹಾಗೂ ಬೀಜಪ್ರಸಾರದಲ್ಲಿ ನೆರವಾಗುತ್ತವೆ. ಕಾಡುಗಳು ಬೆಳೆಯುವುದೇ ಹಕ್ಕಿಗಳಿಂದ. ಸಸ್ಯವೊಂದರ ಹರವು, ಅದಕ್ಕೆ ಬರುವ ಹಕ್ಕಿಗಳ ಹರವಿನೊಂದಿಗೆ ತಳುಕು ಹಾಕಿಕೊಂಡಿದೆ. ಕೀಟಗಳ ಸಂಖ್ಯೆಯನ್ನು ಪಕ್ಷಿಗಳು ನಿಯಂತ್ರಣದಲ್ಲಿಡುತ್ತದೆ. ಬೇಟೆಗಾರ ಹಕ್ಕಿಗಳು (Raptors) ಸರಿಸೃಪಗಳ ಸಂಖ್ಯೆಯನ್ನೂ ನಿಯಂತ್ರಣದಲ್ಲಿಡುತ್ತವೆ. ಹಾಗೆಯೇ, ಗೂಬೆಗಳು ಮೂಷಿಕ ವರ್ಗದ ಅನೇಕ ಪ್ರಾಣಿಗಳನ್ನು ತಿನ್ನುವುದರಿಂದ ಕೃಷಿ ಆಧಾರಿತ ದೇಶವಾದ ಭಾರತಕ್ಕೆ ಬೆಲೆಕಟ್ಟಲಾಗದಷ್ಟು ಪ್ರಯೋಜನವಿದೆ. ಹಕ್ಕಿಗಳೂ ಸೇರಿದಂತೆ ಇಡೀ ಪ್ರಕೃತಿ ಒಂದು ಜೀವಜಾಲ. ಅದರ ಸದಸ್ಯನಾಗಿಯೂ, ಆಹಾರ ಸರಪಳಿಯ ಒಂದು ಕೊಂಡಿಯಾಗಿಯೂ ಹಕ್ಕಿಗಳು ಬಹಳ ಮುಖ್ಯ.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]