02ಜಗತ್ತಿನಲ್ಲಿ ಅತಿ ವೇಗವಾಗಿ ಹಬ್ಬುತ್ತಿರುವ ಹವ್ಯಾಸವೆಂದರೆ ಪಕ್ಷಿ ವೀಕ್ಷಣೆ. ಮಾನವನ ಹಿರಿಯ ಸಹಜೀವಿಗಳಾದ ಪಕ್ಷಿಗಳನ್ನು ನೋಡಿ ಅವುಗಳಲ್ಲಿನ ಪ್ರಬೇಧಗಳನ್ನು ಗುರುತಿಸುವುದು, ಅವುಗಳ ಚಟುವಟಿಕೆಗಳನ್ನು ನೋಡಿ ದಾಖಲಿಸುವುದೇ ಆಗಿದೆ. ಇದು ಕೇವಲ ವ್ಯಕ್ತಿಗತ ಸಂತೋಷಕ್ಕಾಗಿರಬಹುದು ಅಥವಾ ಅಧ್ಯಯನ, ಸಂರಕ್ಷಣೆ, ಸಂಶೋಧನೆಗೂ ಆಗಿರಬಹುದು. ಇತ್ತೀಚೆಗೆ ಈ ಎರಡನೆ ಬಗೆಯ ವೀಕ್ಷಣೆ ಹೆಚ್ಚಾಗುತ್ತಿರುವುದು ಆರೋಗ್ಯಕರ ಲಕ್ಷಣ.

ಮಾನವ ಕೃಷಿ ಕಲಿತು, ಮನೆ ನಿರ್ಮಿಸಿ ವಾಸಿಸಲಾರಂಭಿಸಿದಂತೆಯೇ ಕಾಡುಗಳ ನಾಶ ಆರಂಭವಾಯಿತು. ಹಾಡಿ, ಹಳ್ಳಿ, ಪಟ್ಟಣ ನಗರಗಳಾದವು. ಕಾಡು ಬೇರೆಯಾಯಿತು ನಾಡು ಬೇರೆಯಾಯಿತು. ನಾಡಿನೊಳಗೆ ಮಾನವ ಉದ್ಯಾನಗಳನ್ನು ನಿರ್ಮಿಸಿದ. ಕೆರೆ, ಕಟ್ಟೆ ಜಲಾಶಯಗಳನ್ನು ನಿರ್ಮಿಸಿದ. ಇವು ಮಾನವ ವಸತಿ ಪ್ರದೇಶಗಳಲ್ಲಿ ಆವಾಸವಾಯಿತು.

ಮಾನವನ ಕುತೂಹಲವೇ ಎಲ್ಲ ಹೊಸತುಗಳಿಗೆ ಮೂಲ. ಆ ನಿಸರ್ಗಜನ್ಯ ಕುತೂಹಲವೇ ಪಕ್ಷಿವೀಕ್ಷಣೆಗೂ ಮೂಲವಾಯಿತು. ಈ ಹವ್ಯಾಸಕ್ಕೆ ವಿಜ್ಞಾನದ ಪ್ರಾಮುಖ್ಯತೆ ಮಿಳಿತವಾಗಿ ಒಂದು ಗಂಭೀರ ಚಟುವಟಿಕೆಯಾಗಿ ಬೆಳೆದಿದೆ. ಪಕ್ಷಿ ವೀಕ್ಷಣೆಯನ್ನು ಆಸಕ್ತ ಯಾರು ಬೇಕಾದರೂ ಮಾಡಬಹುದು. ಒಬ್ಬ ಶ್ರದ್ಧಾವಂತ ಪಕ್ಷಿ ವೀಕ್ಷಕ ನೀಡಿದ ಮಾಹಿತಿ ವೈಜ್ಞಾನಿಕ ಸಂಶೋಧನೆಯಲ್ಲಿ ಬಳಕೆಯಾಗುತ್ತದೆ, ಮಾತ್ರವಲ್ಲ ಅದರ ಬೆಳೆವಣಿಗೆಗೂ ಕಾರಣವಾಗುತ್ತದೆ. ಹೊಸ ವಿಷಯಗಳ ಪತ್ತೆಗೂ ಕಾರಣವಾಗುತ್ತದೆ. ಪರಿಸರ ಮಾಲೀನ್ಯದ ಈ ದಿನಮಾನಗಳಲ್ಲಿ ಆ ಮಾಲೀನ್ಯದ ಪರಿಣಾಮ ಪಕ್ಷಿಗಳ ಮೇಲೆ ಹೇಗೆ ಆಗುತ್ತಿದೆ ಎಂಬುದರ ಪ್ರಾಥಮಿಕ ಮಾಹಿತಿ ಬರುವುದೇ ಪಕ್ಷಿ ವೀಕ್ಷಣೆಯಿಂದ.

ಪಕ್ಷಿ ವೀಕ್ಷಣೆಗೆ ಬೇಕಾಗಿರುವುದು ಬಹಳ ಮುಖ್ಯವಾಗಿ ನಾವು ಪರಿಸರದ ಮಧ್ಯದಲ್ಲಿದ್ದೇವೆ ಎಂಬ ಅರಿವು, ಸಹನೆ. ಪರಿಸರದಲ್ಲಿದ್ದೇವೆ ಎಂದರೆ ನಾವು ಮತ್ತೊಬ್ಬರ ನಿವಾಸದಲ್ಲಿದ್ದೇವೆ ಎಂಬ ಎಚ್ಚರ. ಇದು ಬಹಳ ಮುಖ್ಯ. ಈ ಚಟುವಟಿಕೆಗೆ ಹೋದಾಗ ಸಾಧ್ಯವಾದಷ್ಟೂ ಪರಿಸರದಲ್ಲಿ ಲೀನವಾಗುವಂತಹ ಬಟ್ಟೆಗಳನ್ನು ತೊಡಬೇಕು. ಸದ್ದು ಮಾಡುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಕಡಿಮೆ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಅನವಶ್ಯಕವಾದ ಯಾವ ಮಾತೂ ಬೇಡ. ಪ್ರಕೃತಿಯ ವಿಷಯ ಬಿಟ್ಟು ಬೇರಾವ ಮಾತೂ ಬೇಡ.

ಪಕ್ಷಿ ವೀಕ್ಷಣೆಗೆ ಬೇಕಿರುವದು 1. ಉತ್ತಮ ದುರ್ಬೀನು (ಬೈನಾಕ್ಯುಲರ್), 2. ಟಿಪ್ಪಣಿ ಪುಸ್ತಕ (ಚಿಕ್ಕದಾಗಿದಷ್ಟೂ ಒಳ್ಳೆಯದು), 3. ಪೆನ್ನು, ಮತ್ತು 4. ಒಂದು ಉತ್ತಮ ಕ್ಷೇತ್ರ ಕೈಪಿಡಿ ಪುಸ್ತಕ (ಫೀಲ್ಡ್ ಗೈಡ್).

ದುರ್ಬೀನು (ಬೈನಾಕ್ಯುಲರ್) ಯಾವುದನ್ನು ತೆಗೆದುಕೊಳ್ಳಬೇಕು ಎಂಬುದು ಮುಖ್ಯ. ಅನೇಕ ಹೆಸರಾಂತ ಕಂಪನಿಗಳು ದುರ್ಬೀನುಗಳನ್ನು ತಯಾರಿಸುತ್ತವೆ. ಪಕ್ಷಿವೀಕ್ಷಣೆಗೆ ಮಾತ್ರವಲ್ಲದೆ, ನಕ್ಷತ್ರ ವೀಕ್ಷಣೆ, ಮೋಜಣಿ, ಪ್ರವಾಸ ಇತ್ಯಾದಿಗಳಿಗಾಗಿಯೂ ವಿಶೇಷವಾಗಿ ದುರ್ಬೀನುಗಳನ್ನು ತಯಾರಿಸಲಾಗುತ್ತದೆ. ಹಾಗಾಗಿ, ಪಕ್ಷಿವೀಕ್ಷಣೆಗಾಗಿಯೇ ತಯಾರಿಸಲಾಗಿರುವ ದುರ್ಬೀನನ್ನು ಖರೀದಿಸಬೇಕು. ರಸ್ತೆ ಬದಿಯಲ್ಲಿ ದೊರೆಯುವ ಮಸೂರಕ್ಕೆ (ಲೆನ್ಸ್) ಬಣ್ಣವಿರುವ ದುರ್ಬೀನನ್ನು ಖರೀದಿಸಬಾರದು. ದುರ್ಬೀನುಗಳಿಗೆ 6 X 25 ಈ ಬಗೆಯಲ್ಲಿ ಅಂಕಿತವಿರುತ್ತದೆ. ಈ ಅಂಕಿತದಲ್ಲಿ X ಯಿಂದ ಬೇರೆಯಾಗಿರುವ ಎರಡು ಭಾಗಗಳಿವೆ. ಮೊದಲ ಅಂಕಿ ಈ ದುರ್ಬೀನು ವಸ್ತುಗಳನ್ನು ಎಷ್ಟು ಪಟ್ಟು ದೊಡ್ಡದಾಗಿಸುತ್ತದೆ ಎಂಬುದನ್ನು ಸೂಚಿಸುತ್ತದೆಯಾದರೆ ಎರಡನೇ ಅಂಕಿ ದುರ್ಬೀನಿನ ಮುಂದಿನ ಮಸೂರದ ವ್ಯಾಸ. ಇದು ಹೆಚ್ಚಿದಷ್ಟೂ ಹೆಚ್ಚು ಬೆಳಕು ಒಳಬಂದು ಕಾಣುವ ದೃಶ್ಯ ಸ್ಪಷ್ಟವಾಗುತ್ತದೆ. ಹಾಗೆಂದು ಎರಡೂ ಅತಿಹೆಚ್ಚಿರುವುದನ್ನು ತೆಗೆದುಕೊಳ್ಳಬಾರದು. ಮೊದಲ ಅಂಕಿ ಹೆಚ್ಚಾದಷ್ಟೂ ನಾವು ನೋಡುವ ಪಕ್ಷಿಯ ಗಾತ್ರ ಹೆಚ್ಚಾಗುತ್ತದೆಯಾಗಿ ನಮಗೆ ದುರ್ಬೀನಿನ ಮೂಲಕ ಕಾಣುವ ಪ್ರದೇಶ ಚಿಕ್ಕದಾಗುತ್ತದೆ. ಇದು ದೊಡ್ಡ ನಕಾರಾತ್ಮಕ ಅಂಶ. ಹಾಗೆಯೇ ಎರಡನೆ ಅಂಕಿ ಹೆಚ್ಚಾದಷ್ಟೂ ಮಸೂರ ದೊಡ್ಡದಾಗಿ ದುರ್ಬೀನಿನ ತೂಕ ಹೆಚ್ಚುತ್ತದೆ. ಅದ್ದರಿಂದ ಒಂದು ಉತ್ತಮ ಮಧ್ಯಮ ಗಾತ್ರದ ದುರ್ಬೀನನ್ನು ಖರೀದಿಸಬೇಕು. 7 X 40 ಮತ್ತು 8 X 40 ಒಳಗಿನ ದುರ್ಬೀನು ಒಳ್ಳೆಯದು.

ಜೊತೆಗೊಂದು ಒಳ್ಳೆಯ ಕ್ಷೇತ್ರ ಕೈಪಿಡಿ ಇಟ್ಟುಕೊಳ್ಳಬೇಕು. ಸಲೀಂ ಅಲಿಯವರದ್ದು ಸೇರಿದಂತೆ ಇಂಗ್ಲಿಷಿನಲ್ಲಿ ಅನೇಕ ಕ್ಷೇತ್ರಕೈಪಿಡಿಗಳಿವೆ. ಕನ್ನಡದಲ್ಲಿಯೂ ಅನೇಕ ಹಕ್ಕಿಪುಸ್ತಕಗಳು ಬಂದಿವೆ. ನಮ್ಮ ಉದ್ದೇಶ, ಅಗತ್ಯಗಳಿಗನುಸಾರವಾಗಿ ಸೂಕ್ತವಾದುದನ್ನು ಕೊಂಡುಕೊಳ್ಳಬೇಕು.

ಪಕ್ಷಿ ವೀಕ್ಷಣೆಯನ್ನು ನಮ್ಮ ಮನೆಯ ಕಿಟಕಿಯಿಂದಲೇ ಆರಂಭಿಸಬಹುದು. ನಮ್ಮ ಆಸಕ್ತಿ ಗಾಢವಾಗುತ್ತಾ ಹೋದಂತೆ ಅದು ನಮ್ಮನ್ನು ಕಾಡಿಗೆ ತಲುಪಿಸುತ್ತದೆ. ನಾವು ಪಕ್ಷಿ ವೀಕ್ಷಣಾ ತಾಣ ತಲುಪಿದಾಗ ವೀಕ್ಷಣೆಗೆ ಮೊದಲು ನಮ್ಮ ಟಿಪ್ಪಣಿ ಪುಸ್ತಕದಲ್ಲಿ ಆ ಸ್ಥಳದ ಮಾಹಿತಿ, ದಿನಾಂಕ, ಸಮಯ ಮತ್ತು ಹವಾಮಾನವನ್ನು ನಮೂದಿಸಿಕೊಳ್ಳಬೇಕು. ಆನಂತರ ಕಂಡ ಹಕ್ಕಿಗಳ ಲಕ್ಷಣಗಳನ್ನು ಅಂದರೆ ಅವುಗಳ ಪ್ರಧಾನ ಬಣ್ಣ, ಗಾತ್ರ, ಎದ್ದು ಕಾಣುವ ಬಣ್ಣ ಅಥವಾ ರಚನೆ, ಕೂಗು ಮತ್ತು ವೀಕ್ಷಿಸುತ್ತಿದ್ದಾಗ ಅದು ಮಾಡುತ್ತಿದ್ದ ಚಟುವಟಿಕೆ ಇವಲ್ಲನೆಲ್ಲ ಸ್ಪಷ್ಟವಾಗಿ ಟ್ಟಿಪ್ಪಣಿ ಮಾಡಿಕೊಳ್ಳಬೇಕು. ಈ ಮಾಹಿತಿಯನ್ನು ನಮ್ಮ ಕ್ಷೇತ್ರ ಕೈಪಿಡಿಯಲ್ಲಿನ ಚಿತ್ರ-ಮಾಹಿತಿಗೆ ಎಚ್ಚರಿಕೆಯಿಂದ ಹೋಲಿಸಿ ನಾವು ನೋಡಿದ ಹಕ್ಕಿ ಯಾವುದು ಎಂದು ಪತ್ತೆ ಹಚ್ಚಬೇಕು. ಇದೇ ಸರಿಯಾದ ಕ್ರಮ. ಕೆಲವು ಬಾರಿ ಅನುಭವಿ ಪಕ್ಷಿವೀಕ್ಷಕರೊಂದಿಗೆ ಪಕ್ಷಿವೀಕ್ಷಣೆಗೆ ತೊಡಗಿ ಕಲಿಯುವುದು ತುಂಬ ಪ್ರಯೋಜನಕಾರಿ.

ಪಕ್ಷಿ ವೀಕ್ಷಣೆಗೆ ಮುನ್ನ ಮಾಡಿಕೊಳ್ಳಬೇಕಾದ ಮುಖ್ಯವಾದ ಸಿದ್ಧತೆ ಎಂದರೆ ಅಧ್ಯಯನ. ಪಕ್ಷಿವೀಕ್ಷಣಾ ತಾಣದ ಸಮಗ್ರ ಪರಿಚಯ ನಮಗಿರಬೇಕು. ಅಲ್ಲಿರುವ ಜಲಪ್ರದೇಶಗಳ ಅರಿವು ಮೂಡಿಸಿಕೊಳ್ಳಬೇಕು. ಹಾಗೆಯೇ. ಆ ಪ್ರದೇಶದ ಪಕ್ಷಿಪಟ್ಟಿಯನ್ನು (ಚೆಕ್‍ಲಿಸ್ಟ್ ಎನ್ನುತ್ತಾರೆ) ಇಟ್ಟುಕೊಂಡು ಪರಿಶೀಲಿಸಬೇಕು. ಒಂದು ಪ್ರದೇಶದ ಪಕ್ಷಿಪಟ್ಟಿ ಎಂದರೆ ಒಂದು ವರ್ಷದ ವಿವಿಧ ಕಾಲದಲ್ಲಿ ಅಲ್ಲಿ ಕಂಡುಬರುವ ಪಕ್ಷಿಗಳ ಪಟ್ಟಿ. ಇದನ್ನು ಅನೇಕ ವರ್ಷಗಳ ಕಾಲ ವೀಕ್ಷಣೆ ಮಾಡಿ ಸಿದ್ಧಪಡಿಸಿರುತ್ತಾರೆ. ಆ ಪಟ್ಟಿಯನ್ನು ಅಧ್ಯಯನ ಮಾಡಿ, ನಾವು ಪಕ್ಷಿ ವೀಕ್ಷಣೆಗೆ ಹೋಗುವ ಕಾಲದಲ್ಲಿ ಅಲ್ಲಿ ಕಂಡುಬರುವ ಪಕ್ಷಿಗಳನ್ನು ಪಟ್ಟಿಮಾಡಿಕೊಂಡು ಅವುಗಳ ರಚನೆ, ಚಟುವಟಿಕೆ, ಸಂತಾನೋತ್ಪತ್ತಿಕಾಲ, ಆಹಾರ ಪದ್ಧತಿ, ಕೂಗು ಈ ಎಲ್ಲವನ್ನೂ ತಿಳಿದು ಸಿದ್ಧವಾಗಿ ಹೋಗಬೇಕು. ಹಾಗೆಯೇ ಪಕ್ಷಿ ವೀಕ್ಷಣೆ ಮುಗಿದ ಮೇಲೆ ನಮಗೆ ಕಾಣಸಿಕ್ಕ ಪಕ್ಷಿಗಳ ಪಟ್ಟಿಯನ್ನು ಇತರ ಪಕ್ಷಿ ವೀಕ್ಷಕರು ಹಾಗೂ ಅರಣ್ಯ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಇಂದು ಅನೇಕ ಬಗೆಯ ದಾಖಲೀಕರಣಗಳು ಬಳಕೆಯಲ್ಲಿವೆ. ಮೊಬೈಲ್ ಆಪ್‍ಗಳೂ ಇವೆ. ಇವೆಲ್ಲವನ್ನು ಯುಕ್ತವಾಗಿ ಬಳಸಿಕೊಳ್ಳಬೇಕು. ಮಾಹಿತಿ ಹಂಚುವಾಗ ವಹಿಸಬೇಕಾದ ಎಚ್ಚರಿಕೆ ಎಂದರೆ ಹಕ್ಕಿಗಳು ಅದರಲ್ಲೂ ಗಂಡಾಂತರದಂಚಿನಲ್ಲಿರುವ ಹಕ್ಕಿಗಳು ಗೂಡು ಕಟ್ಟಿರುವ ಸ್ಥಳದ ಮಾಹಿತಿಯನ್ನು ಎಲ್ಲಿಯೂ ಪ್ರಚಾರ ಮಾಡಬಾರದು. ಇಂದು ಅಂತರಜಾಲ ಗುಂಪುಗಳಲ್ಲಿಯೂ ಆಪ್ ಮಾಹಿತಿ ಪಡೆಯುವವರಲ್ಲಿಯೂ ಕಳ್ಳಬೇಟೆಯವರು ಸೇರಿಕೊಂಡಿದ್ದಾರೆ. ಪಕ್ಷಿಗಳ ಸಂರಕ್ಷಣೆ ನಮ್ಮ ಜವಾಬ್ದಾರಿ ಸಹ.

ಕೊನೆಯದಲ್ಲದ ಒಂದು ಮಾತು. ನಾವು ಹಕ್ಕಿಗಳನ್ನು ನೋಡಲು, ಅಧ್ಯಯನ ಮಾಡಲು ಹೋದಾಗ ಅವುಗಳಿಗೆ ಕಿಂಚಿತ್ತೂ ತೊಂದರೆಯಾಗದಂತೆ ನಮ್ಮ ನಡವಳಿಕೆಯಿರಬೇಕು. ಯಾರಾದರು ನಮ್ಮ ಮನೆಗೆ ಬಂದು ನೀವು ನಿಮ್ಮ ಪಾಡಿಗೆ ಜೀವಿಸಿ ನಾನು ಟಿಪ್ಪಣಿ ಮಾಡಿಕೊಳ‍್ಳುತ್ತೀನಿ ಎಂದರೆ? ಹಕ್ಕಿಗಳ ಜೀವನದಲ್ಲಿ ನಾವದನ್ನು ಮಾಡುತ್ತಿದ್ದೇವೆ. ಹಾಗಾಗಿ, ಆ ಗಾಂಭೀರ್ಯ, ಜವಾಬ್ದಾರಿ ನಮ್ಮಲ್ಲಿ ಎಂದಿಗೂ ಕಾಣಬೇಕು.