Kingfishers  (Alcedinidae)

 

ಮಿಂಚುಳ್ಳಿಗಳು (ಮೀಂಗೊತ್ತಿ)

 

ಮಿಂಚಿನಂತೆ ಹೊಳೆಯುವ ಅಂದವಾದ ಬಣ್ಣ ಮತ್ತು ಮಿಂಚಿನ ವೇಗವುಳ್ಳ ಹಕ್ಕಿಗಳೇ ಮಿಂಚುಳ್ಳಿಗಳು. ಮಿಂಚುಳ್ಳಿಗಳು ಮತ್ಸ್ಯಪ್ರಿಯ ಹಕ್ಕಿಗಳು. ಭೂಮಿ-ಆಕಾಶ-ನೀರು ಈ ಮೂರೂ ವ್ಯಾಪ್ತಿಗಳಲ್ಲಿಯೂ ಲೀಲಾಜಾಲವಾಗಿ ಸಂಚರಿಸಬಲ್ಲ ಹಕ್ಕಿಗಳು. ನೀರಿರುವೆಡೆಗಳಲ್ಲಿ ಅವುಗಳ ವಾಸ. ಚಟ್ಟೆತಲೆಗೆ ಉದ್ದವಾದ, ದಪ್ಪನಾದ, ಚೂಪಾದ ಕೊಕ್ಕು, ಅವುಗಳ ಮುಖಕ್ಕೆ ಭೂಷಣಪ್ರಾಯವಾಗಿ ಎದ್ದು ಕಾಣುತ್ತದೆ; ಕೊಕ್ಕು-ಕಾಲು ಒಂದೇ ಬಣ್ಣ. ಹಾರುವಾಗ ಮಿಂಚುವ ಬಣ್ಣಗಳು, ಕಣ್ಣಿಗೆ ಸೊಬಗು. ಮೀನು, ಕಪ್ಪೆ, ಅದರ ಗೊದಮೊಟ್ಟೆ, ಇನ್ನಿತರ ಜಲಜೀವಿಗಳೇ ಆಹಾರ. ಮೊಂಡುಬಾಲದ ಈ ಹಕ್ಕಿಗಳು ನೀರಿನ ಬಳಿ, ಗದ್ದೆಯ ಬದುಗಳಲ್ಲಿ ಗೂಡುಕಟ್ಟುತ್ತವೆ. ಕೊಕ್ಕಿನಿಂದ ಕೊರೆದು, ಕಾಲುಗಳಿಂದ ಮಣ್ಣನ್ನು ಬಗೆದು ತೆಗೆಯುತ್ತವೆ. ಒಂದರಿಂದ ನಾಲ್ಕು ಅಡಿ ಉದ್ದದ ಸುರಂಗದ ಒಳಗೆ ದೊಡ್ಡ ಕೋಣೆ ಮತ್ತು ತಾನು ತಿಂದುಳಿಸಿದ ಮೀನು ಮೂಳೆಗಳ ಹಾಸಿಗೆ: ದುರ್ವಾಸನೆ!

 

133. Small Blue Kingfisher (Alcedo atthis) Common Kingfisher R Sparrow+ ನೀಲಿ ಮಿಂಚುಳ್ಳಿ (ಮೂಂಗೊಟ್ಟು)

18 ಸೆಂಮೀ. ಗುಬ್ಬಚ್ಚಿಗಿಂತ ದೊಡ್ಡದಾದ ಈ ಹಕ್ಕಿಗೆ ನೀಲಿ-ಹಸಿರು ತಲೆ, ಕೆನ್ನೆ, ಮೇಲ್ಮೈ; ಕೆಂ-ಕಂದು ಕೆಳಮೈ; ಬಿಳಿಗಲ್ಲ, ಗಂಟಲು ಮತ್ತು ಕೆನ್ನೆ ಮಚ್ಚೆಗಳು. ನದೀತೀರದಲ್ಲಿ, ನೀರಿನ ಮೇಲೆ ಬಾಗಿರುವ ಕೊಂಬೆಯ ಮೇಲೋ, ಜೊಂಡಿನ ಮೇಲೋ ಕುಳಿತು ಮೀನಿಗೆ ಹೊಂಚು ಹಾಕುತ್ತದೆ. ಆಗಾಗ ಕುಳಿತಲ್ಲೇ ಕುಪ್ಪಳಿಸಿ, ಮೋಟುಬಾಲವನ್ನು ಕುಣಿಸುತ್ತದೆ. ಬೇಟೆ ಕಂಡೊಡನೆ, ಳಕ್ಕನೆ ನೀರಿಗೆ ಧುಮುಕಿ, ಮೀನನ್ನು ಕಚ್ಚಿಕೊಂಡು ಟಿಯುತ್ತದೆ; ಹಿಂದಿರುಗಿ, ಬೇಟೆಯನ್ನು ಹೊಡೆದು, ಕೊಂದು ನುಂಗುತ್ತದೆ. ಹಾರುವಾಗ ತೀಕ್ಷ್ಣ ಧ್ವನಿಯ ಚೀ..ಚೀ..ಚೀ..ಚೀ.. ಕೂಗು.