Rollers  (Coraciidae)

 

ನೀಲಕಂಠಗಳು (ನೀಲಕಂಟ)

 

ಮರದಲ್ಲಿಯೇ ವಾಸ ಮಾಡುವ, ದೊಡ್ಡಗಾತ್ರದ, ಗಲಾಟೆಕೋರ ಹಕ್ಕಿಗಳು. ದೊಡ್ಡ ತಲೆ, ಚಿಕ್ಕ ಕತ್ತು, ಉಜ್ವಲ ಕಂದು-ನೀಲಿ ಮೈ; ಅಗಲವಾದ, ಗಟ್ಟಿಮುಟ್ಟಾದ, ತುಸು ಕೊಕ್ಕೆಯಂತಹ ಕೊಕ್ಕು; ಉದ್ದ ರೆಕ್ಕೆ ಮತ್ತು ಬಾಲ. ನೋಡಲು ಗಂಡು-ಹೆಣ್ಣು ಒಂದೇ ರೀತಿ. ಒಂದನ್ನೊಂದು ಆಕರ್ಷಿಸಲು, ಆಕಾಶದಲ್ಲಿ ಅದ್ಭುತವಾದ ಸರ್ಕಸ್ ಮಾಡುತ್ತವೆ. ಒರಟಾಗಿ, ತೀಕ್ಷ್ಣಸ್ವರದಲ್ಲಿ ಅರಚುತ್ತಾ, ಸುರುಳಿ-ಸುರುಳಿಯಾಗಿ, ಉಂಗುರುಂಗುರವಾಗಿ ಹಾರುವುದು, ಧೊಪ್ಪನೆ ಬೀಳುವುದು ನೋಡಲು ಆಹ್ಲಾದ. ಹಾರುತ್ತಿರುವಾಗಲೇ ಕೀಟಗಳ ಭಕ್ಷಣೆ ಅಲ್ಲದೆ, ನೆಲದಲ್ಲಿ ತೆವಳುವ ಸಣ್ಣ ಪ್ರಾಣಿಗಳು ಆಹಾರ. ಮರದ ರಂಧ್ರಗಳಲ್ಲಿ ಗೂಡು.

 

143. Indian Roller (Coracias benghalensis) Blue Jay R Pigeon+/- ನೀಲಕಂಠ (ನೀಲಕಂಟ)

31 ಸೆಂಮೀ. ಒಂಟಿಯಾಗಿ ತಂತಿಯ ಮೇಲೋ, ಮರದ ಬೊಡ್ಡೆಯ ಮೇಲೋ ಕುಳಿತಿರುವಾಗ, ಅನಾಕರ್ಷಕ, ಮುದಿಗೊಡ್ಡಿನಂತೆ ಕಂಡರೂ, ಹಾರಲು ಮೇಲೆದ್ದೊಡನೆ, ಉಜ್ವಲ ಕಡು ನೀಲಿ, ತಿಳಿನೀಲಿ ಬಣ್ಣದ ರೆಕ್ಕೆಗಳು ಮತ್ತು ಸಂಗಾತಿಯನ್ನು ಆಕರ್ಷಿಸಲು ಆಗಸದಲ್ಲಿ ಹಾರಿ, ಗಿರಕಿ ಹೊಡೆದು ಮಾಡುವ ಸರ್ಕಸ್ ಮನೋಹರ. ಉದುರೆಲೆ, ಕಾಡಿನ ಅಂಚು, ಕುರುಚಲು ಕಾಡು, ಜೌಗು ಮತ್ತು ವ್ಯವಸಾಯ ಪ್ರದೇಶಗಳ ಸುತ್ತ-ಮುತ್ತ ವಾಸ. ತಂತಿ, ಮರದ ಬೊಡ್ಡೆ, ಕಂಬ ಅಥವಾ ಬಂಡೆಯ ಮೇಲೆ ಕುಳಿತು ಬೇಟೆಯನ್ನು ಹೊಂಚು ಹಾಕುತ್ತದೆ. ನೆಲದ ಮೇಲೆ ಹರಿದಾಡುವ ಜಂತು, ಹಾರುವ ಕೀಟಗಳೇ ಆಹಾರ; ರೈತನ ಮಿತ್ರ.  ನಿಶ್ಯಬ್ದ ಜೀವಿಯಾದರೂ, ಗಟ್ಟಿಯಾಗಿ ಖಕ್.ಖಕ್. ಕೆಮ್ಮು. ಗೋಡೆಯ ರಂಧ್ರಗಳಲ್ಲೂ ಗೂಡು.