Sunbirds (Nectariniidae)

 

ಸೂರಕ್ಕಿಗಳು (ತೇನ್ಗೀಜೆ)

 

ಮಿರುಗುವ ಉಜ್ವಲ ಬಣ್ಣದ, ಮಕರಂದಪ್ರಿಯ, ಟಾಣಿ ಹಕ್ಕಿಗಳು. ಕಾಡಿನಲ್ಲಾಗಲೀ, ಎಸ್ಟೇಟು-ಹೂದೋಟವೇ ಆಗಲೀ, ಮರಗಿಡಗಳಲ್ಲಿ ಹೂವರಳಿದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಮಾಡಿಸಿದಂತಿರುವ, ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ. ಹೂಗಳ ಪರಾಗಸ್ಪರ್ಶಕ್ರಿಯೆಯಲ್ಲಿ ಬಹು ಉಪಕಾರಿ. ಮಕರಂದದ ಜೊತೆಗೆ ಜೇಡ, ಹುಳಹುಪ್ಪಟೆಗಳೂ ಆಹಾರದ ಪಟ್ಟಿಯಲ್ಲಿವೆ. ಸಂತಾನ ಋತುವಿನಲ್ಲಿ ಗಂಡು, ಹೆಣ್ಣಿಗಿಂತ ಆಕರ್ಷಕ. ಅವಿಶ್ರಾಂತವಾಗಿ ಹಾಡುತ್ತಾ ತಮ್ಮ ಕಿಲಿಕಿಲಿ ಸ್ವರದಿಂದ ವಾತಾವರಣವನ್ನೇ ಆಹ್ಲಾದಕರಗೊಳಿಸುತ್ತವೆ. ಹೊರಗಿನಿಂದ ಒರಟಾಗಿ ಕಂಡರೂ, ಒಳಗೆ ಮುದ್ದಾದ, ಮೃದುವಾದ, ನೇತಾಡುವ ಗೂಡು, ಅದರ ಬಾಗಿಲ ಮೇಲೊಂದು ಚಜ್ಜ!

 

295. Purple-rumped Sunbird (Nectarinia zeylonica) R Sparrow-  ಖಗರತ್ನ (ತೇನ್ಗೀಜೆ)

 

 

10 ಸೆಂಮೀ. ಹೆಸರಿಗೆ ತಕ್ಕ ಹಕ್ಕಿ: ಸೂರ್ಯನ ಕಿರಣಗಳಿಗೆ ಮಿಂಚಿ-ಮಿರುಗುವ ಕಡುಗೆಂ-ನೇರಳೆ ಬಣ್ಣದ ಮೇಲ್ಭಾಗ ಮತ್ತು ಗಂಟಲು; ಹೊಳೆಯುವ ಹಸಿರು ನೆತ್ತಿ, ಭುಜ ಪಟ್ಟಿ; ಕಡು ಕೆಂಗಂದು ಸರ; ನೇರಿಳೆ ಬಣ್ಣದ ಪೃಷ್ಠ; ಹಳದಿ ಕೆಳಭಾಗ. ಹೆಣ್ಣಿನ ಹಸಿರುಗಂದು ಮೇಲ್ಮೈಗೆ ಪೇಲವ ಹಳದಿ ಕೆಳಮೈ; ಮಾಸಲು ಗಲ್ಲ. ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಹೂದೋಟಗಳಲ್ಲಿ ವಾಸ. ಸಂತಾನಋತುವಿನಲ್ಲಿ ಗಂಡು ಉದ್ರೇಕದಿಂದ ಅತ್ತಿಂದಿತ್ತ ಹಾರುತ್ತಾ ಟಿಟ್ಯೂ..ಟಿಟ್ಯೂ..ಟ್ರ್… ಎಂದು ತೀಕ್ಷ್ಣ ಧ್ವನಿಯಲ್ಲಿ ಕೂಗುತ್ತದೆ.