ಸೆಲರಿ ಒಳ್ಳೆಯ ಸೊಪ್ಪು ತರಕಾರಿ. ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಇದನ್ನು ವ್ಯಾಪಕವಾಗಿ ಬೆಳೆಯುತ್ತಾರೆ. ಇದರ ಬೇಸಾಯ ಮತ್ತು ಬಳಕೆಗಳು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ವ್ಯಾಪಕ. ಇದರಲ್ಲಿ ತರಕಾರಿಯಾಗಿ ಬಳಸಲಾಗುವ ಭಾಗಗಳೆಂದರೆ ಸೊಪ್ಪು ಮತ್ತು ಬಿಳಿಚಿಕೊಂಡ ಎಲೆತೊಟ್ಟು. ಇದರ ಬೀಜವೂ ಸಹ ಉಪಯುಕ್ತ ಸಾಮಗ್ರಿಯಾಗಿ ವಿದೇಶಗಳಲ್ಲಿ ಅಪಾರ ಬೇಡಿಕೆ ಪಡೆದಿದೆ. ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಇಟಲಿ, ಜರ್ಮನಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮುಂತಾದ ದೇಶಗಳು ನಮ್ಮಿಂದ ಸೆಲರಿ ಬೀಜವನ್ನು ಆಮದು ಮಾಡಿಕೊಳ್ಳುತ್ತಿವೆ. ಇಡೀ ಜಗತ್ತಿನಲ್ಲಿ ಭಾರತದ ಸೆಲರಿ ಅತ್ಯುತ್ತಮವಾದುದೆಂದು ಪರಿಗಣಿಸಲಾಗಿದೆ. ಈ ಬೀಜಗಳಿಂದ ತೆಗೆದ ಎಣ್ಣೆಯನ್ನು ’ಸೆಲರಿ ದ್ರವ’ ಎನ್ನುತ್ತಾರೆ. ಇದು ವಾಣಿಜ್ಯ ಪದಾರ್ಥ. ಇದಕ್ಕೂ ಸಹ ಹೆಚ್ಚಿನ ಬೇಡಿಕೆ ಇದೆ.

ಪೌಷ್ಟಿಕ ಗುಣಗಳು : ಸೆಲರಿ ಸೊಪ್ಪು ಮತ್ತು ತೊಟ್ಟುಗಳಲ್ಲಿ ಶರೀರದ ಬೆಳವಣಿಗೆಗೆ ಅಗತ್ಯವಿರುವ ಶರ್ಕರಿಷ್ಟ, ಪ್ರೊಟೀನ್, ಖನಿಜ ಪದಾರ್ಥ, ಜೀವಸತ್ವಗಳು ಅಧಿಕ ಪ್ರಮಾಣದಲ್ಲಿರುತ್ತವೆ.

೧೦೦ ಗ್ರಾಂ ಎಲೆ ಮತ್ತು ತೊಟ್ಟುಗಳಲ್ಲಿರುವ ಪೋಷಕಾಂಶಗಳು

ಪೋಷಕಾಂಶಗಳು ಎಲೆ ತೊಟ್ಟು
ತೇವಾಂಶ ೮೧.೩ ಗ್ರಾಂ ೯೫.೫ ಗ್ರಾಂ
ಶರ್ಕರಪಿಷ್ಟ ೮.೬ ಗ್ರಾಂ ೩.೫ ಗ್ರಾಂ
ಪ್ರೊಟೀನ್ ೬.೦ ಗ್ರಾಂ ೦.೮ ಗ್ರಾಂ
ಕೊಬ್ಬು ೦.೬ ಗ್ರಾಂ ೦.೧ ಗ್ರಾಂ
ನಾರು ೦.೯ ಗ್ರಾಂ ೦.೯ ಗ್ರಾಂ
ಕ್ಯಾಲ್ಸಿಯಂ ೩೯ ಮಿ.ಗ್ರಾಂ ೫೦ ಮಿ.ಗ್ರಾಂ
ರಂಜಕ ೦.೧೪ ಮಿ.ಗ್ರಾಂ ೦.೦೪ ಮಿ.ಗ್ರಾಂ
ಕಬ್ಬಿಣ ೦.೩ ಮಿ.ಗ್ರಾಂ ೧.೦ ಮಿ.ಗ್ರಾಂ
’ಎ’ ಜೀವಸತ್ವ ೨೪೦ ಐಯು.
ಥಯಮಿನ್ ೦.೦೫ ಮಿ.ಗ್ರಾಂ
ರೈಬೋಫ್ಲೇವಿನ್ ೦.೦೫ ಮಿ.ಗ್ರಾಂ
ನಯಾಸಿನ್ ೦.೫೦ ಮಿ.ಗ್ರಾಂ
’ಸಿ’ ಜೀವಸತ್ವ ೯ ಮಿ.ಗ್ರಾಂ ೧೫ ಮಿ.ಗ್ರಾಂ
ಕ್ಯಾಲೊರಿಗಳು ೧೫
ನಿಕೋಟಿನಿಕ್ ಆಮ್ಲ ೦.೪ ಮಿ.ಗ್ರಾಂ

ಔಷಧೀಯ ಗುಣಗಳು : ಸೆಲರಿಯಲ್ಲಿ ವಾತಹರ ಗುಣಗಳಿವೆ. ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಇದು ಮೂತ್ರವರ್ಧಕ ಹಾಗೂ ಚೈತನ್ಯದಾಯಕವಿರುವುದರ ಜೊತೆಗೆ ಸಂಧಿವಾತ ರೋಗವನ್ನು ಗುಣಪಡಿಸಬಲ್ಲದು. ಸೆಲರಿ ಬೀಜಗಳಲ್ಲಿ ಕ್ರಿಮಿನಾಶಕ ಗುಣಗಳಿವೆ. ಅವು ನೋವು ನಿವಾರಕವೂ ಹೌದು. ಗಂಟಲು ನೋವು ಇದ್ದಲ್ಲಿ ಬೀಜಗಳಿಂದ ತಯಾರಿಸಿದ ಕಷಾಯವನ್ನು ಮುಕ್ಕಳಿಸಬೇಕು. ಬೀಜಗಳನ್ನು ಅಗಿಯುತ್ತಿದ್ದಲ್ಲಿ ಹಲ್ಲು ನೋವು ನಿವಾರಣೆಯಾಗುತ್ತದೆ. ಅದರಿಂದ ಗಂಟಲ ಕೆರೆತ ಮತ್ತು ಕೆಮ್ಮು ದೂರಗೊಳ್ಳುತ್ತವೆ.

ಉಗಮ ಮತ್ತು ಹಂಚಿಕೆ : ಸೆಲರಿಯ ತವರೂರು ಯೂರೋಪ್, ದಕ್ಷಿಣ ಮತ್ತು ಉತ್ತರ ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾ.

ಸಸ್ಯ ವರ್ಣನೆ : ಸೆಲರಿ ಏಪಿಯೇಸೀ ಕುಟುಂಬಕ್ಕೆ ಸೇರಿದ ದ್ವೈವಾರ್ಷಿಕ ಸಸ್ಯ. ಇದು ಸುಮಾರು ೬೦ ರಿಂದ ೯೦ ಸೆಂ.ಮೀ. ಎತ್ತರಕ್ಕೆ ಬೆಳೆಯುವ ಮೂಲಿಕೆ. ಸಸ್ಯಭಾಗಗಳು ದಟ್ಟ ಹಸುರು ಬಣ್ಣದ್ದಿರುತ್ತವೆ. ಪ್ರಾರಂಭದ ದಿನಗಳಲ್ಲಿ ಎಲೆಗಳು ಒತ್ತಾಗಿ ಒಂದರ ಮೇಲೊಂದರಂತೆ ಹೊದಿಸಲ್ಪಟ್ಟು ಕ್ರಮೇಣ ಉದ್ದ ಕವಲುಗಳು ಮೂಡುತ್ತವೆ. ಬಿಡಿ ಎಲೆಗಳ ಉದ್ದ ೩೦ ರಿಂದ ೩೫ ಸೆಂ.ಮೀ., ಎಲೆತೊಟ್ಟು ಬುಡಭಾಗದಲ್ಲಿ ಅಗಲಗೊಂಡಿದ್ದು ಕಾಂಡದ ಸುತ್ತ ಆವರಿಸಿರುತ್ತದೆ. ಎಲೆಯ ಅಂಚಿನ ಉದ್ದಕ್ಕೆ ಸೀಳುಗಳಿದ್ದು ಕೊತ್ತಂಬರಿ ಸೊಪ್ಪಿನಂತೆ ಕಾಣುತ್ತವೆ. ಇದರ ಬೇರು ಸಮೂಹ ಮಣ್ಣಿನ ಮೇಲ್ಪದರದಲ್ಲಿ ಹರಡಿ ಬೆಳೆದಿರುತ್ತದೆ. ಬಿಡಿಹೂಗಳು ಗಾತ್ರದಲ್ಲಿ ಬಲು ಸಣ್ಣವು. ಬೀಜ ಜೀರಿಗೆಯಂತಿದ್ದು, ಗಾತ್ರದಲ್ಲಿ ಸ್ವಲ್ಪ ದೊಡ್ಡವಿರುತ್ತವೆ. ಅವುಗಳಲ್ಲಿ ತೈಲಪದಾರ್ಥವಿರುತ್ತದೆ.

ಹವಾಗುಣ : ಇದು ಶೈತ್ಯ ಹವಾಗುಣದಲ್ಲಿ ಬಹು ಚೆನ್ನಾಗಿ ಫಲಿಸುತ್ತದೆ. ಎತ್ತರದ ಪ್ರದೇಶಗಳಾದಲ್ಲಿ ಉತ್ತಮ. ಸಮುದ್ರ ಮಟ್ಟದಿಂದ ೯೦೦ ಮೀಟರ್ ಅಥವಾ ಅದಕ್ಕೂ ಮೇಲ್ಪಟ್ಟು ಎತ್ತರವಾದಲ್ಲಿ ಸೂಕ್ತ. ಈ ಬೆಳೆಗೆ ದಿನದಲ್ಲಿ ಸರಾಸರಿ ೧೨ ೧/೨ ತಾಸುಗಳಷ್ಟು ಬೆಳಕು ಬೇಕು. ಇದು ಹೆಚ್ಚು ತೇವವನ್ನು ಬಯಸುತ್ತದೆ. ಗಾಳಿಯಲ್ಲಿ ಹೆಚ್ಚು ತೇವಾಂಶ ಇರಬಾರದು. ಬಿಸಿಲು ಸಾಕಷ್ಟಿರಬೇಕು.

ಭೂಗುಣ : ಇದರ ಬೇಸಾಯಕ್ಕೆ ನೀರು ಬಸಿಯುವ ಮರಳು ಇಲ್ಲವೇ ರೇವೆಗೋಡು ಮಣ್ಣು ಅತ್ಯುತ್ತಮ. ಜೇಡಿ ಮಣ್ಣಿನ ಭೂಮಿ ಹಾಗೂ ಜೌಗು ನೆಲ ಸೂಕ್ತವಿರುವುದಿಲ್ಲ. ಮಣ್ಣು ಸಾರವತ್ತಾಗಿರಬೇಕು. ಮಣ್ಣಿನ ರಸಸಾರ ೬ ರಿಂದ ೭ ರಷ್ಟಿದ್ದರೆ ಸೂಕ್ತ.

ತಳಿಗಳು : ಸೆಲರಿಯಲ್ಲಿ ಗಣನೀಯ ಪ್ರಮಾಣದ ತಳಿ ಅಭಿವೃದ್ಧಿಕಾರ್ಯ ನಡೆದಿದ್ದು ಹಲವಾರು ಅತ್ಯುತ್ತಮ ತಳಿಗಳು ಬೇಸಾಯಕ್ಕೆ ಬಂದಿವೆ. ಬೇಸಾಯದಲ್ಲಿನ ತಳಿಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಬಹುದು. ಹಳದಿ ಹಾಗೂ ಹಸುರುಬಣ್ಣದ ಎಲೆತೊಟ್ಟುಗಳ ತಳಿಗಳು, ಸ್ವಯಂ ಬಿಳಿಚಿಕೊಳ್ಳುವ ತೊಟ್ಟುಗಳ ತಳಿಗಳು ಹಾಗೂ ಬುಡಗಳಿಗೆ ಮಣ್ಣು ಏರಿಸಿ ಅವು ಬಿಳಿಚಿಕೊಳ್ಳುವಂತೆ ಮಾಡಬೇಕಾದ ತಳಿಗಳು, ಬೇಗ ಕೊಯ್ಲಿಗೆ ಬರುವ ಹಾಗೂ ತಡವಾಗಿ ಕೊಯ್ಲಿಗೆ ಬರುವ ತಳಿಗಳು ಮುಂತಾಗಿ.

ಹಳದಿ ಎಲೆತೊಟ್ಟುಗಳಿಂದ ಕೂಡಿದ ತಳಿಗಳು: ಗೋಲ್ಡನ್‌ಪ್ಲೂಮ್, ಕಾರ್ನೆಲ್ಸ್, ಮಿಚಿಗನ್ ಇಂಪ್ರೊವ್ಡ್ ಗೋಲ್ಡನ್, ಸುಪ್ರೀಂ ಗೋಲ್ಡನ್, ಗೋಲ್ಡನ್ ಸೆಲ್ಫ್ ಬ್ಲಾಂಚಿಂಗ್ ಮುಂತಾದುವು.

ಹಸುರು ಎಲೆತೊಟ್ಟುಗಳಿಂದ ಕೂಡಿದ ತಳಿಗಳು : ಉಟಾಹ್, ಜಯಂಟ್ ಪ್ಯಾಸ್ಕಲ್, ಎರ್ಮ್‌ಸನ್ ಪ್ಯಾಸ್ಕಲ್, ಸಮ್ಮರ್ ಪ್ಯಾಸ್ಕಲ್, ಫೋರ್ಡ್‌ಹುಕ್ ಮುಂತಾದುವು.

ಸ್ವಯಂ ಬಿಳಿಚಿಕೊಳ್ಳುವ ತಳಿಗಳು : ಗೋಲ್ಡನ್‌ಸೆಲ್ಫ್ ಬ್ಲಾಂಚಿಂಗ್, ಅಮೇರಿಕನ್ ಗ್ರೀನ್ ಇತ್ಯಾದಿ ತಳಿಗಳಲ್ಲಿ ಬುಡಗಳಿಗೆ ಮಣ್ಣು ಏರಿಸುವ ಅಗತ್ಯವಿಲ್ಲ.

ಬುಡಗಳಿಗೆ ಮಣ್ಣು ಏರಿಸಬೇಕಾದ ತಳಿಗಳು : ಜಯಂಟ್ ವೈಟ್, ಪ್ರೈಜ್‌ಟೇಕರ್, ಜಯಂಟ್ ಪಿಂಕ್, ಜಯಂಟ್‌ರೆಡ್ ಮುಂತಾದ ತಳಿಗಳ ಬುಡಗಳಿಗೆ ಮಣ್ಣು ಏರಿಸಿ, ಅವುಗಳಿಗೆ ಬೆಳಕು ಸಿಗದಂತೆ ಮಾಡಿ ಬಿಳಿಚಿಕೊಳ್ಳುವಂತೆ ಮಾಡಬೇಕು.

ಇತರ ಮುಖ್ಯ ತಳಿಗಳೆಂದರೆ ಕ್ಲೀನ್‌ಕಟ್, ಫ್ಲೋರಿಡಾ ೬೮೩, ಟಾಲ್‌ಗ್ರೀನ್ ಲಯಟ್, ಮ್ಯಾಮ್ಮಥ್‌ವೈಟ್, ಕ್ಲೇವರ್ತ್‌ಪಿಂಕ್, ಸಾಲಿಡ್ ವೈಟ್ ಮುಂತಾದುವು.

ಗೋಲ್ಡನ್ ಸೆಲ್ಫ್ ಬ್ಲಾಂಚಿಂಗ್ ಬಲುಬೇಗ ಕೊಯ್ಲಿಗೆ ಬರುವ ತಳಿ. ಅಮೆರಿಕನ್ ಗ್ರೀನ್ ಸ್ವಾದಿಷ್ಟಪೂರ್ಣ ತಳಿ, ಅದರ ತೊಟ್ಟು ಹಸುರು ಬಣ್ಣದ್ದಿರುತ್ತದೆ. ಅಮೇರಿಕಾದ ಜಯಂಟ್‌ಪ್ಯಾಸ್ಕಲ್ ಮತ್ತು ಗೋಲ್ಡನ್ ಸೆಲ್ಫ್ ಬ್ಲಾಂಚಿಂಗ್ ತಳಿಗಳು ವಾಣಿಜ್ಯ ತಳಿಗಳು. ಫೋರ್ಡ್ ಹುಕ್, ಜಯಂಟ್‌ಪ್ಯಾಸ್ಕಲ್, ಟಾಲ್ ಗ್ರೀನ್ ಲೈಟ್ ಮುಂತಾದುವು ತಡವಾಗಿ ಕೊಯ್ಲಿಗೆ ಬರುವ ತಳಿಗಳು. ಗೋಲ್ಡನ್ ಪ್ಲೂಮ್ ಅತ್ಯುತ್ತಮವಾದುದು. ಇದು ಗೋಲ್ಡನ್ ಸೆಲ್ಫ್ ಬ್ಲಾಂಚಿಂಗ್ ತಳಿಯಿಂದ ಉದ್ಭವಿಸಿದ ಬಗೆ. ಉಟಾಹ್ ಚೆನ್ನಾಗಿ ಸ್ಥಿರಗೊಂಡಂತಹ ತಳಿ. ಇದನ್ನು ಪ್ಯಾಸ್ಕಲ್ ತಳಿಯಿಂದ ಅರಿಸಿ, ವೃದ್ಧಿಪಡಿಸಲಾಯಿತು.

ಇವುಗಳೇ ಅಲ್ಲದೆ ಸಾಲ್ಟ್ ಲೇಕ್ ಪ್ಯಾಸ್ಕಲ್, ಅರ‍್ಲಿ ಬ್ಲಾಂಚಿಂಗ್, ವಾರಿಂಗ್ಸ್ ಡ್ವಾರ್ಫ್‌ವೈಟ್, ಸೆಲರಿಯ, ಸೊಲಾಟ್ ಮುಂತಾದ ತಳಿಗಳು ಸ್ವಲ್ಪಮಟ್ಟಿಗೆ ಬೇಸಾಯದಲ್ಲಿವೆ.

ಒಟ್ಲು ಎಬ್ಬಿಸುವುದು : ಸೆಲರಿಯನ್ನು ಬೀಜ ಬಿತ್ತಿ ಬೆಳೆಸಲಾಗುತ್ತದೆ. ಮೊದಲು ಒಟ್ಲು ಎಬ್ಬಿಸಿ ಅನಂತರ ಕಿತ್ತು ನಾಟಿ ಮಾಡಬೇಕು. ಸೆಲರಿ ಬೀಜ ಸಣ್ಣ. ಅರ್ಧ ಕಿ. ಗ್ರಾಂ. ಬೀಜ ಒಂದು ಹೆಕ್ಟೇರಿಗಾಗುವಷ್ಟು ಸಸಿಗಳನ್ನು ಪೂರೈಸಬಲ್ಲವು.

ಪ್ರತಿ ಮಡಿ ೧.೨ ಮೀಟರ್ ಉದ್ದ, ೦.೯ ಮೀಟರ್ ಅಗಲ ಮತ್ತು ೧೦ ಸೆಂ.ಮೀ. ಎತ್ತರ ಇರಬೇಕು. ಪ್ರತಿ ಸಸಿ ಮಡಿಗೆ ೨೦ ಕಿ.ಗ್ರಾಂ ತಿಪ್ಪೆಗೊಬ್ಬರ, ೧೦ ಕಿ.ಗ್ರಾಂ ಕೆಮ್ಮಣ್ಣು ಮತ್ತು ಅರ್ಧ ಕಿ.ಗ್ರಾಂ ಸೂಪರ್ ಫಾಸ್ಫೇಟ್‌ಗಳನ್ನು ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಬೀಜವನ್ನು ಬಿತ್ತನೆಗೆ ಮುಂಚೆ ಒಂದು ದಿನದ ಮಟ್ಟಿಗೆ ನೀರಿನಲ್ಲಿ ನೆನೆಸಿಟ್ಟರೆ ಅವು ಬೇಗೆ ಮೊಳೆಯುತ್ತವೆ. ಬೀಜವನ್ನು ಗೀರು ಸಾಲುಗಳಲ್ಲಿ ಬಿತ್ತಿ ಅದರ ಮೇಲೆ ಪುಡಿಗೊಬ್ಬರ ಉದುರಿಸಿ, ನೀರು ಹನಿಸುವ ಡಬ್ಬಿಯ ನೆರವಿನಿಂದ ನೀರು ಕೊಡಬೇಕು.

ಬೀಜವನ್ನು ಅಗಲಬಾಯಿಯ ಮಣ್ಣಿನ ಪಾತ್ರೆಯಲ್ಲಿ ಸಹ ಬಿತ್ತಬಹುದು. ಸಣ್ಣ ಪ್ರಮಾಣದಲ್ಲಿ ಸಸಿಗಳನ್ನ ಒಟ್ಲು ಬಿಡುವುದಿದ್ದರೆ ಈ ಪದ್ಧತಿಯನ್ನು ಅನುಸರಿಸಬಹುದು. ಬೀಜದ ಜೊತೆಗೆ ಸಾಕಷ್ಟು ಪುಡಿಗೊಬ್ಬರ ಬೆರೆಸಿ ಬಿತ್ತಿದರೆ ಅವು ಒಂದೇ ಸಮನಾಗಿ ತೆಳ್ಳಗೆ ಹಂಚಿಕೆಯಾಗುತ್ತವೆ. ಹೆಚ್ಚು ಆಳಕ್ಕೆ ಬಿತ್ತಬಾರದು. ಬಿತ್ತನೆಗೆ ಮೈದಾನ ಪ್ರದೇಶಗಳಲ್ಲಿ ಆಗಸ್ಟ್-ಅಕ್ಟೋಬರ್ ಮತ್ತು ಬೆಟ್ಟ ಪ್ರದೇಶಗಳಲ್ಲಿ ಫೆಬ್ರುವರಿ-ಏಪ್ರಿಲ್ ಸೂಕ್ತ ಕಾಲ. ಸುಮಾರು ೧೫ ದಿನಗಳಲ್ಲಿ ಮೊಳೆಯುತ್ತವೆ ಹಾಗೂ ೫೦-೬೦ ದಿನಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಿರುತ್ತವೆ.

ಭೂಮಿ ಸಿದ್ಧತೆ ಮತ್ತು ನಾಟಿ ಮಾಡುವಿಕೆ : ಕಾಲುವೆಳಗ ನಡುವೆ ೪೫-೬೦ ಸೆಂ.ಮೀ. ಮತ್ತು ಸಾಲಿನಲ್ಲಿ ೩೦ ಸೆಂ.ಮೀ. ಅಂತರ ಇದ್ದರೆ ಸಾಕು. ನಾಟಿ ಮಾಡುವ ಸಸಿಗಳು ೧೨ ರಿಂದ ೨೫ ಸೆಂ.ಮೀ. ಎತ್ತರವಿದ್ದು ದೃಢವಾಗಿರಬೇಕು ಅಂದರೆ ಬಿತ್ತನೆ ಮಾಡಿದ ೫೦-೬೦ ದಿನಗಳಲ್ಲಿ ಸಸಿಗಳನ್ನು ಕಿತ್ತು ನಾಟಿ ಮಾಡಬಹುದು.

ಗೊಬ್ಬರ : ಹೆಕ್ಟೇರಿಗೆ ೨೫-೩೦ ಟನ್ ತಿಪ್ಪೆಗೊಬ್ಬರ, ೧೦೦ ಕಿ.ಗ್ರಾಂ ಸಾರಜನಕ ಮತ್ತು ೫೦ ಕಿ.ಗ್ರಾಂ. ರಂಜಕಗಳನ್ನು ಕೊಡಬೇಕು. ದ್ರವಗೊಬ್ಬರ ಕೊಡುವುದು ಲಾಭದಾಯಕ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ತೆಗೆಯಬೇಕು. ಸಸಿಗಳ ಬುಡಭಾಗಕ್ಕೆ ಮಣ್ಣು ಏರಿಸುವುದು ಅಗತ್ಯ. ಅದರಿಂದ ಸಸಿಗಳು ಮುರಿದು ಬೀಳುವುದು ತಪ್ಪುತ್ತದೆಯಲ್ಲದೆ ಆ ಭಾಗಗಳಿಗೆ ಬೆಳಕು ಇಲ್ಲದಂತಾಗಿ ಅವು ಬಿಳಿಚಿಕೊಳ್ಳುತ್ತವೆ ಅಂತಹ ಎಲೆತೊಟ್ಟು ತಿನ್ನಲು ಗರಿಗರಿಯಾಗಿರುತ್ತವೆ. ಮಣ್ಣು ಏರಿಸುವ ಕೆಲಸವನ್ನು ಕೊಯ್ಲು ಮಾಡುವ ಸುಮಾರು ಮೂರು ವಾರಗಳ ಮುಂಚೆ ಮಾಡಿದರೆ ಸಾಕು. ಇದರಿಂದಾಗಿ ಸ್ವಚ್ಛ ಬಿಳುಪಿನ ಹಾಗೂ ರುಚಿಕಟ್ಟಾದ ಎಲೆ ತೊಟ್ಟುಗಳು ಲಭಿಸುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಚೆಲುವು ಮಾಡುವ ಉದ್ದೇಶಕ್ಕೆ ಕಾಗದದ ಹಾಳೆಗಳನ್ನು ಟೊಪ್ಪಿಯಂತೆ ಮಾಡಿ ಸಸಿಗಳ ಮೇಲೆ ಹೊದಿಸುತ್ತಾರೆ.

ಕೊಯ್ಲು ಮತ್ತು ಇಳುವರಿ : ಬಿತ್ತನೆಯಾದ ಸುಮಾರು ೪ ರಿಂದ ೬ ತಿಂಗಳಲ್ಲಿ ಕೊಯ್ಲು ಮಾಡಬಹುದು. ಕೊಯ್ಲುಗಾಲಕ್ಕೆ ಸಸಿಗಳು ೩೦ ರಿಂದ ೪೫ ಸೆಂ.ಮೀ. ಎತ್ತರವಿರುತ್ತವೆ. ಬುಡಗಳಿಗೆ ಏರಿಸಿರುವ ಮಣ್ಣನ್ನು ಹಿಂದಕ್ಕೆಳೆದು, ಬುಡಭಾಗಕ್ಕೆ ಕತ್ತರಿಸಿ ತೆಗೆಯಬೇಕು. ಹೊರಸುತ್ತುಗಳ ಎಲೆತೊಟ್ಟುಗಳು ಬಹಳಷ್ಟು ಬಲಿತಿದ್ದರೆ ಅವುಳಗಳನ್ನು ಕಿತ್ತು ಹಾಕಬೇಕು.

ಬೆಳೆ ಚೆನ್ನಾಗಿ ಫಲಿಸಿದಲ್ಲಿ ಹೆಕ್ಟೇರಿಗೆ ೨೦ ರಿಂದ ೩೦ ಟನ್ ಇಳುವರಿ ಸಾಧ್ಯ.

ಕೊಯ್ಲು ಮಾಡಿದ ಸರಕನ್ನು ಹಾಗೆಯೇ ಇಟ್ಟಲ್ಲಿ ಅದು ಬಹುಬೇಗ ಕೆಟ್ಟು ಹಾಳಾಗುತ್ತದೆ. ಅದನ್ನು ತಪ್ಪಿಸಲು ೧೦ ಪಿಪಿಎಂ ಸಾಮರ್ಥ್ಯದ ಬೆಂಜಿಲ್ ಅಮೈನೊ ಫ್ಲೊರೈನ್ ಸಸ್ಯಚೋದಕವನ್ನು ದ್ರವಣವನ್ನಾಗಿ ಮಾಡಿ ಅದರಲ್ಲಿ ಅದ್ದಿ ೪ ಸೆ. ಉಷ್ಣತಾಮಾನದಲ್ಲಿ ಸಂಗ್ರಹಿಸಬಹುದು. ಅದು ಸುಮಾರು ೪೦ ದಿನಗಳವರೆಗೆ ಕೆಡುವುದಿಲ್ಲ.

ಕೀಟ ಮತ್ತು ರೋಗಗಳು : ಕೀಟಗಳಲ್ಲಿ ನೊಣ ಮುಖ್ಯವಾದುದು. ಹೊಗೆ ಸೊಪ್ಪಿನಲ್ಲಿ ಧೂಳನ್ನು ಉದುರಿಸಿ ಇಲ್ಲವೇ ಯಾವುದಾದರೂ ಸೂಕ್ತ ಕೀಟನಾಶಕ ಬಳಸಿ ಅದನ್ನು ಹತೋಟಿ ಮಾಡಬಹುದು.

ರೋಗಗಳಲ್ಲಿ ಬೇಗ ಕಾಣಿಸಿಕೊಳ್ಳುವ ಸೊರಗು, ತಡವಾಗಿ ಕಾಣಿಸಿಕೊಳ್ಳುವ ಸೊರಗು, ಅಣುಜೀವಿಗಳಿಂದ ಸಂಭವಿಸುವ ಸೊರಗು, ಕೆನ್ನೀಲಿ ಬಣ್ಣದ ಕೊಳೆ, ಪೋಷಕಾಂಶಗಳ ಕೊರತೆಯಿಂದ ಸಂಭವಿಸುವ ಅವ್ಯವಸ್ಥೆಗಳು ಮುಂತಾಗಿ ಮುಖ್ಯವಾದುವು.

ಸೂಕ್ತ ಶಿಲೀಂಧ್ರನಾಶಕ ಹಾಗೂ ಅಣುಜೀವಿನಾಶಕಗಳನ್ನು ಬಳಸಿ ಅವುಗಳನ್ನು ಹತೋಟಿ ಮಾಡಬಹುದು. ಅದರ ಜೊತೆಗೆ ನಿರೋಧಕ ತಳಿಗಳನ್ನು ಬಳಸುವುದು ಒಳ್ಳೆಯದು. ಎಮರ್ಸನ್ ಪ್ಯಾಸ್ಕಲ್ ತಳಿ ತಡವಾಗಿ ಕಾಣಿಸಿಕೊಳ್ಳುವ ಸೊರಗು ರೋಗಕ್ಕೆ ನಿರೋಧಕವಿರುತ್ತದೆ.

ಬೋರಾನ್ ಧಾತುವಿನ ಕೊರತೆಯಿದ್ದಾಗ ಕಾಂಡಭಾಗ ಸೀಳುತ್ತದೆ. ಅದರಿಂದ ಫಸಿನ ಇಳುವರಿ ಮತ್ತು ಗುಣಮಟ್ಟಗಳು ಕುಸಿಯುತ್ತವೆ. ಅಂತಹ ಸಂದರ್ಭದಲ್ಲಿ ಒಂದು ಹೆಕ್ಟೇರು ಕ್ಷೇತ್ರಕ್ಕೆ ೧೦ ಕಿ.ಗ್ರಾಂ. ಬೋರಾಕ್ಸ್ ಪುಡಿಯನ್ನು ಹರಡಿ ಮಣ್ಣಿನಲ್ಲಿ ಮಿಶ್ರಮಾಡಬೇಕು. ಅದೇ ರೀತಿ ಸುಣ್ಣದ ಕೊರತೆಯಿದ್ದಲ್ಲಿ ಬ್ಲಾಕ್ ಹಾರ್ಟ್ ರೋಗ ಕಾಣಿಸಿಕೊಳ್ಳುತ್ತದೆ. ಸೂಕ್ತ ಪ್ರಮಾಣದ ಕ್ಯಾಲ್ಸಿಯಂ ಕ್ಲೋರೈಡ್ ಅನ್ನು ನೀರಿನಲ್ಲಿ ಕರಗಿಸಿ ಬೆಳೆಯ ಮೇಲೆ ಸಿಂಪಡಿಸಬೇಕು ಇಲ್ಲವೇ ಮಣ್ಣಿಗೆ ಸೇರಿಸಬೇಕು.

ಬೀಜೋತ್ಪಾದನೆ : ಸೆಲರಿಯಲ್ಲಿ ಸ್ವ ಹಾಗೂ ಪರಕೀಯ ಪರಾಗಸ್ಪರ್ಶಗಳಿದ್ದಾಗ್ಯೂ ಹೆಚ್ಚಾಗಿ ಕಂಡುಬರುವುದು ಪರಾಗಸ್ಪರ್ಶವೇ. ಅಗತ್ಯ ಬೇಸಾಯ ಕ್ರಮಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು. ಗಿಡಗಳು ಸಂಪೂರ್ಣವಾಗಿ ಬೆಳೆದು, ಬೀಜ ಚೆನ್ನಾಗಿ ಬಲಿತ ನಂತರವೇ ಕೊಯ್ಲು ಮಾಡಬೇಕು. ಬೆಳೆ ಚೆನ್ನಾಗಿ ಫಲಿಸಿದರೆ ಹೆಕ್ಟೇರಿಗೆ ೬೦೦ ಕಿ.ಗ್ರಾಂ ಬೀಜ ಸಾಧ್ಯ.

* * *