ಎಂದಿನ ಔತಣಕೂಟವಾದರೂ, ಇಂದಿನ ವಿಶೇಷವೆಂಬಂತೆ ಉಮಾ ಅತಿಥಿಗಳನ್ನು ಉಪಚರಿಸುತ್ತ ಓಡಾಡಿದಳು. ದೇವಾಲಯದ ಭಾವನೆಯನ್ನೂ ಅರಮನೆಯ ವೈಭವವನ್ನೂ ಏಕಕಾಲದಲ್ಲಿ ಹೊಳೆಯಿಸುವ ಕೌಶಲ್ಯದ ಚಿತ್ರಗಳನ್ನು ಕೊರೆದ ಕಪ್ಪು ಕಂಬಗಳಗೆ ಒರಗಿ ನಿಂತ ಪೈಜಾಮ ಜುಬ್ಬದ ಸರಳ ಉಡುಪಿನ ಕೆಲವರು ಅದೇ ಮಾತಿನ ಅದೇ ಗತ್ತಿನ ಆಪ್ತರೇ, ಇವರನ್ನು ಉಪಚರಿಸುವ ಅಗತ್ಯವಿರಲಿಲ್ಲ. ಭಾರತದಲ್ಲಿ ಬಿಸಿನೆಸ್‌ ಕುದುರಿಸಲು ಭಾರತದ ರಾಯಭಾರಿ ಉಮಾಳ ಗಂಡ ಸುರೇಶ್‌ ಕುರುಪ್‌ಗೆ ಇವರೆಲ್ಲರೂ ಆತ್ಮೀಯ ಸಹಾಯಕರು, ಹಿತೈಷಿಗಳು ಕೂಡ. ಭಾರತದ ಎಲ್ಲ ಪ್ರದೇಶಗಳಿಂದ ಬಂದ ಇವರನ್ನು ಕನ್ನಡತಿ ಉಮಾ ಕರೆಯುವುದು ಜಗ ಜಂಗಮರು ಎಂದು.

ಭಾರತದ ರಕ್ಷಣಾ ಮಂತ್ರಿಯ ಗೌರವಾರ್ಥವಾಗಿ ಒಂದು ತಿಂಗಳ ಹಿಂದೆ ಏರ್ಪಡಿಸಿದ್ದ ಈ ಸಂಜೆಯ ಕೂಟದಲ್ಲಿ ಉಮಾ ಕೆಂಪು ರೇಷ್ಮೆ ಸೀರೆಯನ್ನು ಉಟ್ಟಿದ್ದಳು. ಪರಿಚಿತರಿಗೂ ಮತ್ತೆ ನೋಡಬೇಕೆಂಬ ಆಕರ್ಷಣೆಯಾಗುವಂತೆ ಅದರ ಸೆರಗಿನಲ್ಲಿ ಇನ್ನೇನು ಕುಪ್ಪಳಿಸುತ್ತಾವೋ ಎಂಬ ಭ್ರಮೆ ಹುಟ್ಟಿಸುವ ನವಿಲುಗಳು ಇದ್ದವು. ರಕ್ಷಣಾ ಮಂತ್ರಿ ಬರುವುದನ್ನು ಒಂದು ವಾರ ಮುಂದೂಡಿದ್ದರಿಂದ ಈ ಔತಣಕೂಟ ಸರಸ ಸಲ್ಲಾಪಗಳ ಹಗುರದಲ್ಲಿ ಮುಖ್ಯವಾದ್ದನ್ನು ಹೂಡಿ ಬಿತ್ತಿ ವ್ಯಾಪಾರ ಚಿಗುರಲು ಕಾಯುವ ಪೂರ್ವಭಾವಿ ಸಭೆಯಾಗಿ ಮಾರ್ಪಟ್ಟಿತ್ತು.

ಬಿಸಿನೆಸ್‌ ಕುದುರಿಸುವ ಸಾಹಸದಲ್ಲಿ ನಿರತನಾದ ರಾಯಭಾರಿ ಗಂಡನಿಗೆ ಅವನ ಅವಸರವಿಲ್ಲದ, ಲೋಕೋತ್ತರ ಹಂಬಲದ ಸಹಧರ್ಮಿಣಿ ಈ ಉಮಾ. ಇಪ್ಪತ್ತು ವರ್ಷಗಳಿಂದ ಅವಳು ನಡೆಸಿಕೊಂಡು ಬಂದಿರುವ ಆಚರಣೆ ಈ ಕಾಕ್ಟೈಲ್‌ ಉಪಚಾರ. ಪುಟ್ಟ ಕುಂಕುಮವಿಟ್ಟ ನಗುಮೊಗದಲ್ಲಿ ಆಯಾಸ ತೋರದಂತೆ ಅವಳು ನಡೆಸುವ ಔತಣಪೂರ್ವ ಕಾಕ್ಟೈಲ್‌ ಆಚರಣೆಯಲ್ಲಿ ಒಂದು ವಿಶೇಷವಿತ್ತು. ಹಲವರಿಗೆ, ಅವಳ ಗಂಡನಿಗೂ-ಶುರು ಮಾಡಿದ ಆಪ್ತ ಮಾತು ಮುಗಿಯುವ ಮುನ್ನ ಇನ್ನೊಬ್ಬರನ್ನು ಮಾತಿಗೆ ಎಳೆಯುವ ಆಚರಣೆ ಅದಾದರೆ, ಉಮಾ ಮಾತಿನಲ್ಲಿ ತೊಡಗಿದವನ ಜೊತೆ ಮಾತ್ರ ತೊಡಗಿದವಳಂತೆ ಇರುವುದನ್ನು ಕಲಿತಿದ್ದಳು.

ಗೋಡೆಯ ಮೇಲಿನ, ಬಂಗಾರದ ದಾರದಲ್ಲಿ ಹೊಲಿದಿರುವಂತೆ ಭ್ರಮೆ ಹುಟ್ಟಿಸುವ ಮೈಸೂರಿನ ಬಾಲಕೃಷ್ಣನ ಬಣ್ಣಕ್ಕೆ ಅನುರೂಪವಾಗುವಂತೆ ಅವಳ ಗುಂಡು ಮುಖವೂ, ಕಣ್ಣುಗಳಿಗೆ ತೋರಣದಂತಿರುವ ಹುಬ್ಬುಗಳೂ ಇದ್ದವು. ಎಲ್ಲವೂ ಮನಸ್ಸಿನ ಆಯಾಸದಲ್ಲಿ ಮೈಗೂಡಿಬಿಟ್ಟ ರಂಗಪರಿಕರಗಳೇ. ಸಹಜವೆನ್ನಿಸುವಂತೆ ಅವಳು ಹೆಜ್ಜೆಹಾಕುವ ಸೊಬಗಿನಲ್ಲಿ ಪ್ರಸಿದ್ಧ ನರ್ತಕಿಯೆಂದು ಸೂಚಿಸುವುದನ್ನು ಅವಳ ಐವತ್ತರ ವಯಸ್ಸಿನಲ್ಲೂ ಸಾಧಿಸಿದ್ದಳು. ಈ ಸೊಬಗಿನ ಉಮಾ ಅಪ್ಪಟ ಪ್ರಾಮಾಣಿಕ ಅಧಿಕಾರಿಯೂ, ಏಕಾಂತದ ಸಲಿಗೆಯಲ್ಲೂ ಸಹಜವಾಗಿ ಒದಗದವನೂ ಆದ ಕುರುಪ್‌ ನನ್ನೂ ಹೇಗೆ ಒಲಿದು ಮದುವೆಯಾದಳು ಎಂಬ ಸಮಸ್ಯೆ ಅವಳ ಆತ್ಮೀಯರನ್ನು ಕಾಡುವುದಿದೆ. ಎಲ್ಲ ಬಿಟ್ಟು ಯಾಕವಳು ಕೊನೆಗೂ ಆಯ್ದದ್ದು ಲೌಕಿಕ ಯಶಸ್ಸನ್ನೆ?

ಅವಳ ಸೊಬಗಿನ ಸಾಧನೆಯ ಹಿಂದೆ ಸುಕ್ಕಿದ ಮುಖದ ವೃದ್ಧ ಗುರುವೊಬ್ಬ ಮೈಸೂರಿನಲ್ಲಿ ಇದ್ದ. ಉಮಾ ಬೆಳಿಗ್ಗೆ ಎದ್ದವಳೇ ಅವನು ಸೈಕಲ್‌ ಕಚ್ಚೆ ಹಾಕಿ ಬರಿ ಮೈಯಲ್ಲಿ ಪಾಠಮಾಡುವ ತ್ರಿಭಂಗಿಯ ಫೋಟೋಗೆ ನಮಸ್ಕಾರ ಮಾಡಿ ಹಸ್ತದರ್ಶನ ಮಾಡಿಕೊಳ್ಳುವುದು. ಪ್ಯಾರಿಸ್‌, ಬರ್ಲಿನ್‌, ಮಾಸ್ಕೊ ಎಲ್ಲಿದ್ದರೂ ‘ಕರಾಗ್ರೇ ವಸತೇ ಲಕ್ಷ್ಮೀ, ಕರಮೂಲೇ ಸರಸ್ವತೀ’ ಜೆಎನ್‌ಯುನಲ್ಲು ಅವಳು ಮಾಡುತ್ತ ಇದ್ದ ಈ ಪ್ರಾರ್ಥನೆ ಅವಳ ಸಹಪಾಠಿಗಳ ಸ್ನೇಹದ ವ್ಯಂಗ್ಯಕ್ಕೆ ಒಳಗಾಗಿತ್ತು.

ಕಾಕ್ಟೈಲ್‌ ಪಾರ್ಟಿಗಳ ಸಜ್ಜನಿಕೆಯ ವರ್ತನೆಯಲ್ಲಿ ತನ್ನ ನರ್ತನ ಕಲೆಯ ಬಗ್ಗೆ ಯಾವ ಅತಿಥಿಯಾಗಲೀ ಮಾತಾಡಲು ಶುರುಮಾಡಬಹುದೆಂಬ ಆತಂಕ ಅವಳನ್ನು ಕಾಡುವುದೆಂದು ಅವಳ ಗಂಡ ಕುರುಪ್‌ಗೆ ಗೊತ್ತಿತ್ತು. ಆದರೆ ಅವಳ ರೂಪವನ್ನು ಮಾತ್ರ ಅತಿಥಿಗಳು ಮೆಚ್ಚಿದರೂ ಅವಳು ನಿರಾಶಳಾಗಿ ಕಳೆಗುಂದುವಳೆಂದೂ ಅವನಿಗೆ ತಿಳಿದಿತ್ತು. ಅಷ್ಟರಮಟ್ಟಿಗೆ ಅವನು ಅವಳ ಒಳಜೀವನದ ತುಡಿತಗಳಿಗೆ ಒದಗುತ್ತ ಇದ್ದ-ಅವನಿಗೆ ಒಗ್ಗಿಹೋದ ಸನ್ನಡತೆಯಲ್ಲಿ.

ತನಗಿಂತ ಹೆಚ್ಚು ಶಕ್ತಿಯುಕ್ತಿಗಳಿಂದ ನರ್ತಿಸಬಲ್ಲವರು ಪ್ಯಾರಿಸ್‌ನಲ್ಲಿ ಹೊಟ್ಟೆಪಾಡಿಗಾಗಿ ಇದ್ದರೂ ರಾಯಭಾರಿಯ ‘ಭಾರ್ಯೆ’ಯೆಂದು ತನಗೆ ಸಲ್ಲುವ ಮನ್ನಣೆಯಿಂದ ಸಂಕೋಚವಾಗುವುದೆಂದು ಅವಳು ಗಂಡನಿಗೆ ಹೇಳುವುದಿತ್ತು. ಈ ಮಾತು ಜೆಎನ್‌ಯು ಅವಳಿಗೆ ಕಲಿಸಿದ್ದು. ಇಂತಹ ಸಂಕೋಚವನ್ನು  ಸೂಚಿಸುವ ಅವಳ ವಿನಯಶೀಲತೆ ಕೂಡ ಗಂಡನಿಗೆ ಲಾಭದಾಯಕವಾಗಿಯೇ ಇತ್ತು.

*

ಉಮಾಳನ್ನು ಶಸ್ತ್ರಾಸ್ತ್ರ ತಯಾರಿಸಿ ಮಾರುವ, ಔತಣಕೂಟದ ಕೇಂದ್ರಬಿಂದು ಉದ್ಯಮಿಗೆ, ಕಂಬಕ್ಕೊರಗಿ ವೈನ್‌ ಕುಡಿಯುತ್ತ ಇದ್ದ ಮಹಾರಾಷ್ಟ್ರದ ಆಪ್ತ ದೇಶಪಾಂಡೆ ಮೆಲುದನಿಯಲ್ಲಿ ಪರಿಚಯ ಮಾಡಿಸಿದ; ಉಮಾ ನಿರೀಕ್ಷಿಸಿದಂತೆ:

‘ಉಮಾ ಭಾರತದ ಪ್ರಸಿದ್ಧ ನರ್ತಕಿ, ಐ.ಎ.ಎಸ್‌ ಮಾಡಿ ಕೆಲಸದಲ್ಲಿದ್ದವಳು ನರ್ತನಕ್ಕಾಗಿ ಕೆಲಸ ಬಿಟ್ಟಳು. ಗಂಡನ ಜೊತೆ ಬದುಕಬೇಕೆಂದೂ ತನ್ನ ಅಫಿಶಿಯಲ್‌ ಕರಿಯರ್ ಬಿಟ್ಟಳು ಎಂದರೆ ಅವಳು ಒಪ್ಪುವುದಿಲ್ಲ. ಕೆಲಸದಲ್ಲಿ ಗಂಡನಿಗೆ ತನ್ನ ಅಗತ್ಯವಿಲ್ಲ ಎನ್ನುತ್ತಾಳೆ. ಆದರೆ ನಿಮಗೆ ಗೊತ್ತಲ್ಲ? ಯಶಸ್ವಿಯಾದ ಎಲ್ಲ ಗಂಡಂದಿರ ಬೆನ್ನಿನ ಹಿಂದೆ ಒಬ್ಬ ಹೆಂಡತಿ ಇರುತ್ತಾಳೆ. ಈ ಪ್ಯಾರಿಸ್‌ನಲ್ಲಿಯೂ ಇವಳು ನಾಲ್ಕೊ ಐದೊ ಫ್ರೆಂಚ್‌ ಹುಡುಗಿಯರಿಗೆ ನೃತ್ಯ ಕಲಿಸುತ್ತಾಳೆ.’

ಗುಜರಾತಿನ ಉದ್ಯಮಿಯೊಬ್ಬ ಈ ಮಾತುಕಥೆಯಲ್ಲಿ ಸೇರಿಕೊಂಡ. ಶಸ್ತ್ರಾಸ್ತ್ರದ ಉದ್ಯಮಿಯ ಕೊಂಚ ತೋರವಾದ ಮೈಯ, ನೀಲಿಗಣ್ಣಿನ ಹೆಂಡತಿಯೂ ಈ ಸಂಭಾಷಣೆಯಲ್ಲಿ ಸೇರಿಕೊಂಡಿದ್ದರಿಂದ ಅವನು ಉತ್ತೇಜಿತನಾಗಿದ್ದ.

‘ಉಮಾ ಮತ್ತು ಅವಳ ಗಂಡ ಜೆಎನ್‌ಯುನಲ್ಲಿ ಸಹಪಾಠಿಗಳು. ನಾನೂ ಅವರ ಜೊತೆ ಓದಿದವನು. ಕುರುಪ್‌ ಐ.ಎಫ್‌.ಎಸ್‌. ಮಾಡಿದ; ಉಮಾ ಐ.ಎ.ಎಸ್‌. ಮಾಡಿದಳು. ಇಬ್ಬರೂ ಓದುವಾಗ ಕ್ರಾಂತಿಕಾರರು. ನಕ್ಸಲೈಟ್‌ ಸಿಂಪತಿ ಇದ್ದವರು. ಅಮೆರಿಕದ ವಿರೋಧಿಗಳು. ಹೇಗೆ ಬದಲಾದರೋ ಹೇಳಲಾರೆ. ಅಥವಾ ನಿಜವಾಗಿ ಬದಲಾದರೋ ಹೇಳಲಾರೆ. ಯೌವ್ವನದಲ್ಲಿ ಕ್ರಾಂತಿಕಾರನಾಗದವನು ಹೃದಯಹೀನ. ಆಮೇಲೂ ಕ್ರಾಂತಿಕಾರಿಯ ಆಗಿ ಉಳಿಯುವಾತ ಮೂರ್ಖ. ಹೀಗೊಂದು ಮಾತೂ ಇದೆಯಲ್ಲ! ನಮ್ಮ ಕಾಲದಲ್ಲಂತೂ ದೊಡ್ಡ ದೊಡ್ಡ ಕೆಲಸ ಪಡೆದು ಯಶಸ್ವಿಯಾದವರೆಲ್ಲ ನಕ್ಸಲಿಯರೇ. ಅದೊಂದು ಪದಕದಂತೆ ಇತ್ತು.’

ಈ ಮಾತುಕಥೆಯಲ್ಲಿ ಗೆಲುವಿನಿಂದ ಸೇರಿಕೊಂಡ ಕುರುಪ್‌ ಎಲ್ಲವನ್ನೂ ಆಲಿಸುತ್ತ ಇದ್ದ ಉಮಾಳನ್ನು ಕರೆದ:

ಶಸ್ತ್ರಾಸ್ತ್ರ ಉದ್ಯಮಿ ಅದೇ ಗೆಲುವಿನಲ್ಲಿ ಹೇಳಿದ:

‘ನೋ ನೋ ನನ್ನ ಪೂರ್ವಜರೂ ಕ್ರಾಂತಿಕಾರರು. ಫ್ರೆಂಚ್‌ ಕ್ರಾಂತಿಯಲ್ಲಿ ಭಾಗವಹಿಸಿದ್ದರು ಎಂಬ ಐತಿಹ್ಯ ನಮ್ಮ ಕುಟುಂಬದಲ್ಲಿ ಇದೆ.’

ಕುರುಪ್‌ ಹೇಳಿದ:

‘ಉಮಾ ನನ್ನಂತೆ ಅಲ್ಲ. ಅವಳಿಗೆ ಈ ಲೋಕದ ವ್ಯವಹಾರದಲ್ಲಿ ಮನಸ್ಸಿಲ್ಲ. ಆದರೆ ನನ್ನನ್ನೂ ನಿನ್ನನ್ನೂ ಈ ವ್ಯವಹಾರ ಪ್ರಪಂಚ ಅಪ್ರೋಪ್ರಿಯೇಟ್‌ ಮಾಡಿಕೊಂಡುಬಿಟ್ಟಿದೆ. ಅದಕ್ಕಾಗಿಯೇ ನಾವು ಇವತ್ತು ಸೇರಿರುವುದು ಅಲ್ಲವೆ?’

ಉದ್ಯಮಿಯ ಸ್ವಪ್ನಸ್ಥವೆನ್ನಿಸುವ ನೀಲಿಗಣ್ಣಿನ ಹೆಂಡತಿ ಗಂಭೀರಳಾದಳು.

‘ನನ್ನ ಗಂಡನ ಉದ್ಯಮದಲ್ಲಿ ನಾನೂ ಪಾಲುದಾರಳು. ಆದರೆ ನಮ್ಮ ಆಸಕ್ತಿಗಳು ಬೇರೆ ಬೇರೆ. ನಾವು ಯಶಸ್ಸು ಕಂಡವರು. ಆದರೆ ಈಚೆಗೆ ನನಗಂತೂ ವ್ಯವಹಾರದಿಂದ ಸುಸ್ತಾಗುತ್ತ ಇದೆ. ಇಂಡಿಯಾ ಜೊತೆ ವ್ಯವಹರಿಸುವುದರಲ್ಲಿ ನನಗೊಂದು ಗುಪ್ತ ಉದ್ದೇಶವಿದೆ. ಹೇಳಲೋ ಆಲ್ಬರ್ಟ್?’ ಎಂದು ಗಂಡನ ಕಡೆ ತಿರುಗಿದಳು.

ಉಮಾಳ ಕಣ್ಣುಗಳು ಗಂಭೀರವಾದ್ದನ್ನು ಕುರುಪ್‌ ಗಮನಿಸಿದ; ಆಲ್ಬರ್ಟ್‌ ಮತ್ತು ಅವನ ಹೆಂಡತಿಯೂ ಗಮನಿಸಿದರು. ಕುರ್ಚಿಗಳನ್ನು ಎಳೆದು ಕೂತರು. ಗ್ಲಾಸಿನಲ್ಲಿ ವೈನನ್ನು ತುಂಬಿಸಿ ಮಾತು ಶುರುಮಾಡಿದರು.

ಆಲ್ಬರ್ಟ್‌‌ನ ಹೆಂಡತಿ ಕುರ್ಚಿಯ ಮೇಲೇ ಯೋಗದಲ್ಲಿ ಕಾಲುಮಡಿಸಿ ಕೂರುವಂತೆ ಕೂತು ಉಮಾಳನ್ನು ಮೆಚ್ಚುಗೆಯಲ್ಲಿ ನೋಡುತ್ತ ಅಂದಳು.

‘ನನ್ನನ್ನು ಮೇರಿ ಎಂದು ಕರಿ. ನಿನ್ನನ್ನು ನೋಡಿದ್ದೇ ನನಗೆ ಅಸೂಯೆಯಾಯಿತು. ಯಾಕೆ ಹೇಳಲೆ? ನಿನ್ನ ನೋಟದಲ್ಲಿ ಒಂದು ದಿವ್ಯ ಕಳೆಯಿದೆ. ನೀನು ನರ್ತಕಿಯೆಂದು ಕೇಳಿದೆ. ಅಧಿಕಾರ ಬಿಟ್ಟವಳೆಂದು ಕೇಳಿದೆ. ನಿನ್ನ ಸೊಬಗಿನಲ್ಲಿ ಇಡೀ ಇಂಡಿಯಾ ಇದೆ.’

ನಿರಾಕರಣೆಯ ಸೌಜನ್ಯದ ಅಗತ್ಯವಿಲ್ಲದಂತೆ ಮೇರಿ ಮಾತಾಡಿದ್ದನ್ನು ಉಮಾ ಗಮನಿಸಿ ಕೃತಜ್ಞತೆಯಲ್ಲಿ ಕಣ್ಣು ತಗ್ಗಿಸಿ ಕೂತಳು. ಕುರುಪ್‌ ಕೂಡ ಹಾಸ್ಯದ ಚಟ ತೊರೆದು ಗಂಭೀರನಾದ.

ಮೇರಿ ಕೇಳಿದಳು:

‘ನೀನು ಈಗಲೂ ನೃತ್ಯ ಕಲಿಸುತ್ತಿ ಎಂದು ಕೇಳಿದೆ. ಭಾರತದಲ್ಲಿ ಒಂದು ಇಂಟರ್ ನ್ಯಾಷನಲ್‌ ಕಲಾ ಶಾಲೆಯನ್ನು ತೆರೆಯುವುದಕ್ಕೆ ನಿನ್ನ ಸಹಕಾರ ಕೇಳಬಹುದೆ?’

‘ಖಂಡಿತವಾಗಿ, ನನಗೊಬ್ಬ ಮೈಸೂರಿನಲ್ಲಿ ಗುರುವಿದ್ದಾನೆ. ನನಗೆ ದೇವರಮತೆ ಅವನು.’

‘ನಮಗೆ ಇಪ್ಪತ್ತು ಎಕರೆಯಷ್ಟು ಜಮೀನು ಬೇಕು. ಗುಡ್ಡ ಕಾಡು ಸಮೀಪದಲ್ಲಿ ಈ ಭೂಮಿ ಇರಬೇಕು. ಸಾಂಪ್ರದಾಯಿಕವಾದ ಮಣ್ಣಿನ ಗೋಡೆಯ ಮಣ್ಣಿನ ನೆಲದ ಹೆಂಚು ಹೊದಿಸಿದ ಗುಡಿಸಿಲುಗಳು ಇರಬೇಕು. ಅದೊಂದು ಆಶ್ರಮವಾಗಬೇಕು. ಗುರುಕುಲವಾಗಬೇಕು.’

ತನ್ನ ಸಮ್ಮತಿ ಸೂಚಿಸಲು ಉಮಾ ಮುಂದಾದ ತುರ್ತುನ ತತ್‌ಕ್ಷಣದ ಪ್ರತಿಕ್ರಿಯೆಗಳಿಂದ ಕುರುಪ್‌ಗೂ ಅಚ್ಚರಿಯಾಗಿತ್ತು. ಇಂತಹ ಒಂದು ಘಟನೆಗಾಗಿ ಅವಳು ಜೀವಾವಧಿ ಕಾದಿದ್ದಂತೆ ಕಂಡಿತು.

‘ನಾನೊಬ್ಬಳೇ ಮಗಳು. ನನ್ನ ತಾಯಿ ತಂದೆ ಮೈಸೂರಲ್ಲಿ ಇದ್ದಾರೆ. ಚಿಕ್ಕಮಗಳೂರು ಎಂಬ ಮಲೆನಾಡಿನಲ್ಲಿ ನಮ್ಮದೊಂದು ಇಪ್ಪತ್ತು ಎಕರೆ ತೋಟವಿದೆ. ಕಾಫಿ ತೋಟ. ವ್ಯವಸಾಯವಿಲ್ಲದೆ ಅದು ಕಾಡಾಗಿದೆ. ಅಲ್ಲಿಯೇ ಈ ಆಶ್ರಮ ತೆರೆಯಬಹುದು.  ಗುರುಕುಲದಲ್ಲಿ; ಕಲಿಯಲು ಬರುವ ಮಕ್ಕಳಿಗೆ ಫೆಲೋಶಿಪ್‌ ಕೊಡುವುದು ಅಗತ್ಯವಲ್ಲವೆ? ಹಣಕ್ಕೇನು ಮಾಡುವುದು? ಲಾಭವಿಲ್ಲದ ಉದ್ಯಮಕ್ಕೆ ಯಾರು ಮುಂದಾಗುತ್ತಾರೆ, ಈ ಕಾಲದಲ್ಲಿ?’

‘ಅದನ್ನು ನನಗೆ ಬಿಡು. ಅಂದರೆ ನನ್ನ ಗಂಡ ಆಲ್ಬರ್ಟ್‌‌ಗೆ ಬಿಡು. ಶಸ್ತ್ರಾಸ್ತ್ರಗಳನ್ನು ತಯಾರಿಸಿ ಮಾರುವ ದಾನವ ಅವನಲ್ಲವೆ?’

ಮೇರಿ ಬಳಸಿದ ‘ದಾನವ’ ಪದದಿಂದ ಎಲ್ಲರೂ ಅಚ್ಚರಿಗೊಂಡರು. ನಿತ್ಯ ವ್ಯಾಯಾಮದ ಆಲ್ಬರ್ಟನ ಅಚ್ಚುಕಟ್ಟಿನ ಮೈ ಮುಖಗಳು ಅರಳಿದವು. ಅಲ್ಲಿ ಇಲ್ಲಿ ಬಿಳಿಗೂದಲು ಅಲಂಕಾರವಾಗುವಂತೆ ಇದ್ದ ಗಡ್ಡವನ್ನು ಅವನು ಕರೆಯುತ್ತ ಅದೇನು ತನ್ನ ಹೆಚ್ಚುಗಾರಿಕೆಯಲ್ಲವೆನ್ನುವಂತೆ ಮಾತಾಡತೊಡಗಿದ:

‘ಭಾರತೀಯ ಪುರಾಣಗಳಲ್ಲಿ ನಾನು ದಾನವ ಪರ; ದೇವತೆಗಳ ವಿರೋಧಿ. ಕ್ಷಮಿಸಿ. ಯಾಕೆ ಹೇಳುತ್ತೇನೆ ಕೇಳಿ. ದಾನವರು ಮಾಡುವ ತಪ್ಪೇನು ತಿಳಿಯುವುದೇ ಇಲ್ಲ. ಅವರು ಪರಮ ಅಹಂಕಾರಿಗಳು ಎನ್ನುವುದನ್ನು ಬಿಟ್ಟು, ದೇವತೆಗಳು ಜಾಣರು; ಸ್ವಾರ್ಥಿಗಳು. ಈಗ ಅಮೆರಿಕಾದ ಸಹಾಯದಿಂದ ಬಲಗೊಂಡ ನಮ್ಮ ದೇಶಗಳ ಹಾಗೆ ಅವರು ವಿಷ್ಣುವಿನಿಂದಲೋ ಶಿವನಿಂದಲೋ ಮಂತ್ರಬಲ ಪಡೆದವರು. ಇನ್ನು ನಿಮ್ಮ ಪುರಾಣಗಳ ಮಹಾಪುರುಷರೋ ಆ ಕಾಲದ ಅತ್ಯಾಧುನಿಕ ಅಸ್ತ್ರಗಳನ್ನು ಉಪಾಯದಿಂದ ಪಡೆದವರು. ಚಕ್ರ, ಗದೆ, ಪಾಶುಪತಾಸ್ತ್ರ, ಎಲ್ಲಕ್ಕಿಂತ ಮಿಗಿಲಾದ ಅಣ್ವಸ್ತ್ರದಂತಹ ಬ್ರಹ್ಮಾಸ್ತ್ರ-ಒಂದೇ, ಎರಡೇ? ನಿಮ್ಮ ನಾಗರಿಕತೆ ಮೊದಲಿನಿಂದಲೂ ಹೊಸ ಹೊಸ ಅಸ್ತ್ರಗಳಲ್ಲಿ ಆಸಕ್ತವಾದ್ದು. ಅಲ್ಲವೆ? ಇಲ್ಲವಾದರೆ ಅತ್ಯಾಧುನಿಕ ಗನ್ನಿಗಾಗಿ ನನ್ನ ಬಳಿ ಅವರು ಬರುವವರೇ? ಅವುಗಳ ಬಲವಿಲ್ಲದ ರಾಕ್ಷಸರು ಸೋಲುತ್ತಾರೆ. ಅವರಲ್ಲು ಅಸ್ತ್ರಶಕ್ತಿ ಇದೆ. ಆದರೆ ಅದಕ್ಕಿಂತ ಮಿಗಿಲಾದ ಅಸ್ತ್ರಗಳನ್ನು ತಪಸ್ಸಿನ ಫಲವಾಗಿ ಪಡೆದು ಗೆಲ್ಲುವವರು ದೇವತೆಗಳಾಗುವುದು ಅನಿವಾರ್ಯ. ರಾಮಾಯಣದ ತುಂಬ ಮಾನವರು ವರ್ಸಸ್‌ ರಾಕ್ಷಸರು. ಮಹಾಭಾರತದ ತುಂಬ ಪರಸ್ಪರ ವೈರದ ಕಸಿನ್ಸ್‌ಗಳಲ್ಲಿ ಗೆಲ್ಲುವುದು ಸತ್ಯ ಮಾತ್ರವಲ್ಲ; ಯಾರ ಹತ್ತಿರ ಆಧುನಿಕ ಶಸ್ತ್ರಗಳು ಇದ್ದಾವೊ, ಅವರು ಅಲ್ಲವೆ?’

ಸ್ನೇಹದ ಹಾಸ್ಯದಲ್ಲಿ ಆಲ್ಬರ್ಟ್ ಮಾತಾಡಿದ್ದ. ಕುರುಪ್‌ ಅದೇ ಸ್ನೇಹದಲ್ಲಿ ಕೇಳಿದ.

‘ಪಾಕಿಸ್ತಾನದ ಮಿಲಿಟರಿ ರಕ್ಕಸರು ಅಮೆರಿಕಾದಿಂದ ಪಡೆಯುವ ಶಸ್ತ್ರಾಸ್ತ್ರಗಳಿಗಿಂತ ನೀನು ನಮಗೆ ಮಾರುವುದು ಉತ್ತಮವೆಂಬ ಗ್ಯಾರಂಟಿಯೇನು?’

‘ಅವರೂ ನಮ್ಮ ಹತ್ತಿರ ಈ ಗನ್ನು ಬೇಕೆಂದು ಕೇಳಿದ್ದಾರೆ ಎಂಬುದು ನಿಮ್ಮ ದೇಶಕ್ಕೆ ಗೊತ್ತಿರದ ಸಂಗತಿಯೆ? ನಮ್ಮ ಗನನ್ನು ಕೊಳ್ಳುವ ಭಾರತದ ಜೊತೆಗಿನ ಒಪ್ಪಂದವಾದರೆ ನಾವು ಅವರಿಗೆ ಏನನ್ನೂ ಮಾರುವಂತಿಲ್ಲ. ನಿಮ್ಮ ಪುರಾಣಗಳಲ್ಲು ಹಾಗೇ ತಾನೆ? ಶಿವ ಈ ಒಪ್ಪಂದಗಳನ್ನು ಮುರಿದು ವಿಷ್ಣುವಿಗೆ ಸಮಸ್ಯೆಯಾಗುತ್ತಾನೆ ಅಲ್ಲವೆ?’

ಕುರುಪ್‌ ಈ ಬಗೆಯ ಮಾತನ್ನು ಒಬ್ಬ ಫ್ರೆಂಚ್‌ಮನ್‌ನಿಂದ ನಿರೀಕ್ಷಿಸಿರಲಿಲ್ಲ.

‘ಆಲ್ಬರ್ಟ್, ಯಾವಾಗ ನೀನು ಇವನ್ನೆಲ್ಲ ಓದಿಕೊಂಡಿ?’

‘ಕಾಶಿಯಲ್ಲಿ ನಾನು ಐದು ವರ್ಷ ಸಂಸ್ಕೃತ ಕಲಿತಿದ್ದೇನೆ. ರಾಮಾಯಣ, ಹೆಚ್ಚಾಗಿ ಮಹಾಭಾರತ ನನಗೆ ಪ್ರಿಯವಾದ ಕೃತಿಗಳು.

ಬನಾರಸ್‌ ಅನ್ನದೆ ಕಾಶಿಯೆಂದನೆಂದು ಉಮಾಗೆ ಖುಷಿಯಾಯಿತು. ಗಂಡ ಕುರುಪ್ ಬಾಯಿತಪ್ಪಿಯೂ ಗ್ಯಾಂಜೀಸ್‌ ಎಂದರೆ ಉಮಾ ಗಂಗಾ ಎಂದು ಅವನಿಂದ ಐದು ಸಾರಿ ಹೇಳಿಸುವುದು ವಾಡಿಕೆ. ಇವೆಲ್ಲವನ್ನು ಆಲಿಸುತ್ತ ಇದ್ದ ಔತಣಕೂಟಕ್ಕೆ ಬಂದಿದ್ದ ಆಪ್ತರು ಸತತವಾಗಿ ಉಪಚಾರದ ಕೆಲಸ ವಹಿಸಿಕೊಂಡು ವೈನನ್ನು ಬರಿದಾಗುವ ಗ್ಲಾಸುಗಳಿಗೆ ತುಂಬಿಸಿದರು. ರುಚಿಕರವಾದ ಪುಟಾಣಿ ತಿಂಡಿಗಳನ್ನು ಒಡ್ಡಿದರು. ಎಲ್ಲರೂ ಇಷ್ಟಪಡುವ ಉಮಾಳ ಉಮೇದಿನ ಕೋಸುಂಬರಿಯನ್ನು ಹಂಚಿದರು.

‘ನನ್ನ ಪೂರ್ವಜರು ಫ್ರೆಂಚ್‌ ಕ್ರಾಂತಿಯಲ್ಲಿ ತೊಡಗಿದವರು ಎಂಬ ನಂಬಿಕೆ ನಮ್ಮ ಮನೆಯಲ್ಲಿ ಇದೆ.  ಕ್ರಾಂತಿಯಾಗದ ದೇಶದಲ್ಲಿ ಉದ್ಯಮಶೀಲತೆ ಬೆಳೆಯುವುದಿಲ್ಲ. ಉದಾಹರಣೆಗೆ ಚೀನಾ. ಮೂರು ಜನರೇಷನ್‌ಗಳಿಂದ ನಾವು ಶಸ್ತ್ರಗಳನ್ನು ತಯಾರಿಸುವ ಉದ್ಯಮದಲ್ಲಿ ತೊಡಗಿದ್ದೇವೆ. ಭಾರತದ ಎಡಪಂಥೀಯರಲ್ಲಿ ಕೆಲವರು ನನ್ನ ಗೆಳೆಯರು. ನಿಮ್ಮ ಎಡಪಂಥೀಯ ರಕ್ಷಣಾ ಮಂತ್ರಿಯೂ ನನ್ನ ಹಳೆಯ ಗೆಳೆಯ.’

ಈ ಮಾತುಗಳು ಹೀಗೇ ಬೆಳೆಯುವುದು ಮೇರಿಗೆ ಬೇಕಿರಲಿಲ್ಲ.

‘ಉಮಾಳಂತಹ ದೇವತೆ ನಮ್ಮೊಡನೆ ಇರುವಾಗ ಬೇರೇನಾದರೂ ಮಾತಾಡಬಹುದೆ?’ ಎಂದಳು.

‘ಆ ವಿಷಯ ಈಗಲೇ ಎತ್ತಿದರೆ ವ್ಯಾಪಾರ ಕುದುರಿಸುವ ಉಪಾಯವೆಂದು ನಮ್ಮ ರಾಯಭಾರಿ ಗೆಳೆಯ ತಿಳಿದಾನು ಎಂದು ಸುಮ್ಮನಿದ್ದೇನೆ.’

‘ಕೊಂಚ ಕಾಯುತ್ತೀರ?’ ಎಂದು ಕೇಳಿ ಉಮಾ ತನ್ನ ಮಲಗುವ ಕೋಣೆಗೆ ಹೋದಳು-ಟಾಯ್‌ಲೆಟ್‌ಗೆ ಹೋಗಬೇಕಿತ್ತು ಅವಳಿಗೆ. ಕೋಣೆಯಲ್ಲಿ ಆನ್‌ ಆಗಿಯೇ ಇದ್ದ ಟೆಲಿವಿಷನ್‌ನಲ್ಲಿ ಭಾರತೀಯ ಛಾನೆಲ್‌ನಿಂದ ಸುದ್ದಿ ಬಿತ್ತರವಾಗುತ್ತ ಇತ್ತು. ಟಾಯ್‌ಲೆಟ್‌ನಿಂದ ಹೊರಬಂದವಳು ಛಾನೆಲ್‌ನಲ್ಲಿ ಸುದ್ದಿ ಬಿತ್ತರವಾಗುತ್ತ ಇತ್ತು. ಟಾಯ್‌ಲೆಟ್‌ನಿಂದ ಹೊರಬಂದವಳು ಛಾನೆಲ್‌ನಲ್ಲಿ ಪರಿಚಿತ ಮುಖವೊಂದನ್ನು ಕಂಡು ಗಕ್ಕನೆ ನಿಂತಳು. ತಾವೆಲ್ಲರೂ ಕ್ರಾಂತಿಯ ಬಗ್ಗೆ ಮಾತಾಡುತ್ತ ಇದ್ದಾಗ ಜೆಎನ್‌ಯೂನಲ್ಲಿ ಓದುವುದನ್ನು ತೊರೆದು ನಕ್ಸಲೈಟ್‌ ಆಗಿ ಬಂಗಾಳದ ಕಾಡು ಹೊಕ್ಕವನು ಇವನು. ಕೈಯಾರೆ ಒಬ್ಬ ಜಮೀಂದಾರನನ್ನು ಕೊಲೆ ಮಾಡಿದವನು. ಒಂದೆರಡು ವರ್ಷಗಳ ನಂತರ ವ್ಯಕ್ತಿಹತ್ಯೆಯ ಮುಖೇನ ಕ್ರಾಂತಿಗೆ ದೇಶವನ್ನು ಸಿದ್ಧಪಡಿಸುವ ಥಿಯರಿಯಿಂದ ಬೇಸತ್ತು ದೂರವಾಗಲು ಪ್ರಯತ್ನಿಸಿದವನು. ತನ್ನನ್ನು ತನ್ನವರೇ ಸಾಯಿಸಬಹುದೆಂಬ ಭೀತಿಯಲ್ಲಿ ದೇಶಾಂತರ ಅಲೆದವನು.

ಉಮಾ ಐ.ಎ.ಎಸ್‌. ಮುಗಿಸಿ ಅದೇತಾನೆ ಒರಿಸ್ಸಾದ ಸರ್ಕಾರದ ಸೇವೆಯಲ್ಲಿ ಕಾಡು ಪ್ರದೇಶದ ಟಿ.ಬಿ.ಯೊಂದರಲ್ಲಿ ಟೆಂಪೊರರಿ ಕಛೇರಿ ಮಾಡಿಕೊಂಡಿದ್ದಳು. ಒಂದು ಮಧ್ಯರಾತ್ರಿ ಯಾರೋ ಬಾಗಿಲು ತಟ್ಟಿದಂತೆ ಸದ್ದಾಯಿತು. ಬಾಗಿಲು ತೆರೆದು ನೋಡಿದರೆ ತನ್ನ ಸಹಪಾಠಿಯಾಗಿದ್ದ ನಕ್ಸಲೈಟ್‌ ಗೆಳೆಯ. ಅವನ ಮುಖ ಭೀತಿಯಲ್ಲಿ ಬೆವರುತ್ತ ಇತ್ತು. ಅವನು ಕೈಹಿಡಿದು ‘ನನ್ನನ್ನು ರಕ್ಷಿಸು. ನನ್ನ ಪಕ್ಷವನ್ನು ತೊರೆದು ಜೀವ ಭಯದಲ್ಲಿ ನಿನ್ನ ಮೊರೆಹೊಕ್ಕಿದ್ದೇನೆ’ ಎಂದಿದ್ದ.

ಉಮಾ ಅವನಿಗೆ ಫ್ರಿಜ್‌ನಿಂದ ಅನ್ನ ಮೊಸರು ತೆಗೆದು ಉಣಿಸಿದಳು. ನೀರು ಕಾಯಿಸಿ ಸ್ನಾನ ಮಾಡಿಸಿದಳು.

‘ನನ್ನ ಕೆಲಸವೀಗ ನಕ್ಸಲೈಟರನ್ನು ಓಲೈಸಿ ಹಾದಿಗೆ ತರುವುದು. ನಕ್ಸಲಿಸಂನನ್ನು ನಾನು ಈಗ ಒಪ್ಪುತ್ತಾ ಇಲ್ಲ. ನಾಳೆ ನಿನ್ನನ್ನು ಬಂಧಿಸಿ ನೀನೇ ಶರಣಾಗಿದ್ದೀಯ ಎಂದು ರಿಪೋರ್ಟ್ ಮಾಡುತ್ತೇನೆ., ಈಗ ಮಲಗು’ ಎಂದು ಅಡುಗೆ ಮನೆಯಲ್ಲಿ ಹಾಸಿಗೆ ಒದಗಿಸಿದಳು. ಇವೆಲ್ಲವೂ ಹದಿನೈದು ವರ್ಷಗಳ ಹಿಂದೆ ನಡೆದ್ದು.

ಅವನು ನೇಣು ಹಾಕಿಕೊಂಡು ಒರಿಸ್ಸಾದ ಹಳ್ಳಿಯ ಗುಡಿಸಿಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂಬ ಸುದ್ದಿ ಪ್ರಸಾರವಾಗುತ್ತ ಇತ್ತು. ಹಿಂಸೆ ಬಿಟ್ಟು ಶರಣಾದವನು ಮತ್ತೆ ಹಿಂಸೆಯಿಲ್ಲದ ಪ್ರಜಾತಾಂತ್ರಿಕ ಹೋರಾಟದಲ್ಲಿ ತೊಡಗಿಕೊಂಡನಂತೆ. ಅವನು ಹಿಂಬಾಲಕರೇ ಮತ್ತೆ ಅವನನ್ನು ಕ್ರಾಂತಿದ್ರೋಹಿ, ರಿಯಾಕ್ಷನರಿ ಇತ್ಯಾದಿ ಜರೆದು ಹಿಂಸಾಚಾರದ ಹಾದಿ ಹಿಡಿದರಂತೆ. ಇವನು ಒಂಟಿಯಾದನಂತೆ. ದಿಕ್ಕು ತೋರದೆ ಮೌನಿಯಾದನಂತೆ.  ಒಂದು ಹುಲ್ಲು ಹೊದಿಸಿದ ಗುಡಿಸಿಲಿನಲ್ಲಿ ಮಂಚವೂ ಇಲ್ಲದೆ ಚಾಪೆಯ ಮೇಲೆ ಮಲಗಿ, ಮಡಕೆಯಲ್ಲಿ ಗಂಜಿ ಕಾಯಿಸಿ ಕುಡಿದು ಎಲ್ಲ ಬಗೆಯ ರಾಜಕಾರಣದಿಂದ ದೂರವಾದನಂತೆ. ಅವನು ಹಳೆಯ ಗೆಳೆಯನಾಗಿದ್ದ ಬಂಗಾಳದ ಕಮ್ಯುನಿಸ್ಟ್‌ ಸೀಎಂ ಖುದ್ದಾಗಿ ಅವನನ್ನು ಭೇಟಿಯಾಗಿ ಬೇಡಿಕೊಂಡರೂ ಒಂದು ಸಾದಾ ಮನೆಯಲ್ಲಿ ವಾಸವಾಗಿರಲೂ ಒಪ್ಪಲಿಲ್ಲವಂತೆ. ಅಧಿಕಾರದಿಂದಲೂ ದೂರವಾಗಿ, ಪರದೇಶದಿಂದ ಕಳ್ಳಸಾಗಣೆಯಿಂದ ಪಡೆದ ಗನ್ನುಗಳಿಂದ ಅಮಾಯಕರನ್ನು ಕೊಂದು ಭೀತಿ ಹರಡುವ ನಕ್ಸಲೈಟರಿಂದಲೂ ಹೇಸಿ ಯಾವ ದಾರಿಯೂ ತೋರದೆ ತನ್ನ ನಿರಾಶೆಯನ್ನು ಸಹಿಸಲಾರದೆ ನೇಣು ಹಾಕಿಕೊಂಡನಂತೆ.

ಓದುತ್ತಿದ್ದಾಗ ರಾತ್ರೆಯಿಡೀ ಈ ಚರ್ಚೆ ಮಾಡಿ, ಸದಾ ಕೆದರಿದ ಕ್ರಾಪಿನ ಈ ಕನಸುಗಾರನ ಜೊತೆ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುವುದೂ ಊಟವಾದ ಮೇಲೆ ಅವನಿಗೆ ಪ್ರಿಯವಾದ ಐಸ್‌ಕ್ರೀಮ್‌ ತಿನ್ನಲು ಹೋಗುತ್ತ ಇದ್ದುದೂ ನೆನಪಾಯಿತು. ‘ಕ್ರಾಂತಿಯನ್ನಾದರೂ ನೀನು ಬಿಟ್ಟೀಯ, ಐಸ್‌ಕ್ರೀಮ್‌ ಬಿಡಲಾರೆ’ ಎಂದು ತಾನು ಅವನ ಕೆದರಿದ ಕೂದಲನ್ನು ಇನ್ನಷ್ಟು ಕೆದರಿ ಗೇಲಿ ಮಾಡುತ್ತ ಇದ್ದುದು ನೆನಪಾಯಿತು. ಬಾಗಿಲು ತಟ್ಟಿ ತನ್ನನ್ನು ಎಬ್ಬಿಸಿದ ರಾತ್ರಿ ಭೀತ ಕಣ್ಣಿನಲ್ಲಿ ಕಂಡ ಅವನ ಬದುಕುವ ಆಸೆ ನೆನಪಾಯಿತು. ಅವಳ ಕಣ್ಣಿನಲ್ಲಿ ನೀರು ತುಂಬಿತು.

ಉಮಾ ಐ.ಎ.ಎಸ್‌.ಗೆ ಕೂರುವ ಸಿದ್ಧತೆ ನಡೆಸಿದಾಗ ಅವನು ‘ನೀನು ಕೂಡ ಪೆಟಿ ಬೂರ್ಜ್ವ’ ಎಂದು ಹಾಸ್ಯ ಮಾಡಿದ್ದ. ಆದರೆ ಸರ್ಕಾರಿ ಧಿಮಾಕಿನ ಕೆಲಸದಿಂದ ಅವಳೂ ಬೇಸತ್ತಿದ್ದಳು. ಕುರುಪ್‌ನನ್ನು ಮದುವೆಯಾದವಳು ತಾಯಿಯಾಗಿ ಮೈಸೂರಿನ ಗುರುವಿನಿಂದ ಆಗೀಗ ಕಲಿಯುತ್ತ ಸಂಸಾರಿಯಾಗಿದ್ದಳು.

*

ಪಾರ್ಟಿಗೆ ಹಿಂದಿರುಗಿದ ಉಮಾ ದುಃಖಿಯಾಗಿದ್ದಳು. ಅವಳಿಗೆ ಮಾತು ಬೇಡವೆನ್ನಿಸಿದರೂ ಔಪಚಾರಿಕವಾಗಿ ಕಾದಿದ್ದ ಆಲ್ಬರ್ಟ್‌‌ನ ಮಾತು ಕೇಳಿಸಿಕೊಳ್ಳಬೇಕಾಯಿತು.

‘ಉಮಾಗೆ ಏನು ಹೇಳಲೂ ಸಂಕೋಚ ಬೇಡವೆಂದು ನನ್ನ ಮೇರಿ ಹೇಳಿದಳು. ಇಬ್ಬರಿಗೂ ಜನ್ಮಾಂತರದ ಸಂಬಂಧವಿರುವಂತೆ ತೋರುತ್ತದೆ. ನಿಮಗೆ ಶಸ್ತ್ರಾಸ್ತ್ರ ಮಾರಲು ನಾನು ಯೋಜಿಸಿದ ಉಪಾಯವಲ್ಲ ಇದು. ಆದರೆ ನಮ್ಮ ಶತ್ರುಗಳಿಗೆ ಹಾಗೆ ಕಾಣುವುದು ಸಹಜವೇ. ಕಾಣಲಿ ಬಿಡಿ. ಪೂರ್ಣ ಶುದ್ಧಿ ಸಾಮಾಜಿಕನಿಗೆ ಸಾಧ್ಯವಿಲ್ಲ ಅನ್ನುತ್ತಾರೆ; ಸಾಧುವೂ ಅಲ್ಲ ಎನ್ನುವುದು ಈ ದಾನವನ ಸಿದ್ಧಾಂತ. ಅರಣ್ಯದಲ್ಲಿ ಅಡಗಿದ ಚೀನೀ ಏಜೆಂಟರಿಗೆ ನಿಮ್ಮ ದೇಶವನ್ನು ಮಾವೋವಾದದ ಹೆಸರಿನಲ್ಲಿ ಕಳೆದುಕೊಳ್ಳುವುದು ಸಾಧ್ಯವೆ? ಪವರ್ ಗನ್ನಿನಿಂದ ಬರುವುದೆಂದು ಅವರ ದಾನವ ಸಿದ್ಧಾಂತ ತಾನೆ? ಮಾನವ ಚರಿತ್ರೆಯಲ್ಲಿ ಅಸ್ತ್ರಗಳ ಬಗ್ಗೆ ಕುತೂಹಲವಿಲ್ಲದ ಕಾಲವೇ ಇಲ್ಲ. ಆದಿಮಾನವನೇ ಕಲ್ಲನ್ನು ಚೂಪಾಗಿ ಕೆತ್ತಿ ಅಸ್ತ್ರಮಾಡಿಕೊಂಡ. ಆದ್ದರಿಂದ ಗನ್‌ ಮಾರುವುದು ನನ್ನ ಹಕ್ಕು; ಕೊಳ್ಳುವುದು ನಿಮ್ಮ ಹಕ್ಕು. ನಾಗರಿಕತೆಯನ್ನು ನಾಶಮಾಡಹೊರಟವರೆಲ್ಲ ಗನ್ನುಗಳನ್ನು ಬಳಸುವಾಗ ಸರ್ಕಾರಕ್ಕೂ ಗನ್ನು ಬೇಕಲ್ಲವೆ? ಆದರೆ ನಾಗರಿಕತೆಗೆ ಇದು ಮಾತ್ರ ಸಾಲದು. ಮೇರಿಗೆ ಭಾರತದ ಕಲೆಯಲ್ಲಿ ಎಷ್ಟು ಆಸಕ್ತಿಯೋ ನನಗೆ ಆಯುರ್ವೇದದಲ್ಲಿ ಅಷ್ಟೇ ಆಸಕ್ತಿ. ಉಮಾಳ ಇಪ್ಪತ್ತೆಕರೆಯಲ್ಲಿ ಗುರುಕುಲದ ಕಲಾಶಾಲೆ ಕಟ್ಟಬೇಕು. ಜೊತೆಗೇ ಔಷಧದ ಸಸ್ಯಗಳನ್ನು ಬೆಳೆಸಿ ರಿಸರ್ಚ್ ನಡೆಯಬೇಕು. ಔಷಧಗಳನ್ನು ತಯಾರಿಸಿ ಇಂಟರ್ ನ್ಯಾಷನಲ್ಲಿ ಮಾರಬೇಕು. ಲಾಭದ ಉದ್ದೇಶವಿಲ್ಲದೆ, ಮನುಷ್ಯನ ಆರೋಗ್ಯವನ್ನು ಕಾಯುವ ಔಷಧದ ರಿಸರ್ಚ್ ಹೊಸ ನಾಗರಿಕತೆಯನ್ನೇ ಸೃಷ್ಟಿಸಬಲ್ಲುದು ಎಂದು ಶಸ್ತ್ರಾಸ್ತ್ರ ಸೃಷ್ಟಿಯ ಈ ದಾನವ ತಿಳಿದಿದ್ದಾನೆ. ಇದಕ್ಕಾಗುವ ಖರ್ಚನ್ನೆಲ್ಲ ನಾನು ವಹಿಸಿಕೊಳ್ಳುತ್ತೇನೆ. ನಿಮ್ಮ ರಕ್ಷಣಾಮಂತ್ರಿಗೂ ಈ ಸುಳಿಹು ಕೊಟ್ಟಿದ್ದೇನೆ. ಅವನು ಸಮ್ಮತಿ ಸೂಚಿಸಿದ್ದಾಣೆ. ಈಗ ಉಮಾ ತನಗೆ ಸೇರಿದ ಭೂಮಿಯನ್ನು ಕೊಡಲು ಮುಂದಾಗಿದ್ದಾಳೆ. ಉಮಾಳೇ ಈ ಆಶ್ರಮದ ಸಿಈಓ. ಗೊತ್ತೆ ನಿಮಗೆ? ಭಾರತದ ಜೊತೆ ಗನ್ನಿನ ವ್ಯವಹಾರದ ಮಾತು ಹುಟ್ಟಿದ ದಿನದಿಂದ ಈ ದಾನವ ಖದೀಮ ರಿಸರ್ಚ್ ನಡೆಸಿದ್ದಾನೆ. ಉಮಾಳ ಕಲಾಪ್ರೇಮ ನಮ್ಮ ಗುಪ್ತಚರ್ಯದಲ್ಲಿ ತಿಳಿದಿತ್ತು. ಹಾಗೆಯೇ ಅವಳು ಕೆಲಸ ಬಿಟ್ಟಿದ್ದು. ಕ್ರಾಂತಿಕಾರಕ ಹಿಂಸೆಯಿಂದ ಹೇಸಿದ್ದು. ಗಾಂಧಿಯನ್‌ ಸೋಷಲಿಸ್ಟ್‌ ಆದದ್ದು. ಕುರುಪ್‌ನ ದೊಡ್ಡಪ್ಪನ ಮಗನೂ ಆಯುರ್ವೇದದ ಪಂಡಿತನೆಂದು ಒತ್ತೆ ಮಾಡಿದೆವು. ಇನ್ನೊಬ್ಬ ಕಸಿನ್‌ ಕೇರಳದ ಕಲೆಗಳಲ್ಲಿ ಆಸಕ್ತನಂತೆ. ನಮಗೆ ಗೊತ್ತಿಲ್ಲದೇ ಇದ್ದ ವಿಷಯ ಉಮಾ ಅವಳ ಇಪ್ಪತ್ತು ಎಕರೆಗಳನ್ನು ಕೊಡುತ್ತಾಳೆ ಎಂಬುದು. ಈ ಇಪ್ಪತ್ತು ಎಕರೆಯಲ್ಲಿ ಏನ್ಸಿಯೆಂಟ್‌ ಕಲೆಯೂ, ಆಯುರ್ವೇದವೂ ಈ ಜಗತ್ತಿಗೆ ಒದಗಲಿ.’

ಎಲ್ಲರೂ ಚಪ್ಪಾಳೆ ತಟ್ಟಿದರು. ಉಮಾ ತನ್ನ ದುಃಖವನ್ನು ತಡೆದುಕೊಂಡು ಕಣ್ಣು ತಗ್ಗಿಸಿ ದೇವತೆಯಂತೆ ಕೂತಳು.

*

‘ಮೇರಿ ನನ್ನ ಜೀವನದಲ್ಲಿ ಇಲ್ಲದಿದ್ದರೆ ನಾನೊಬ್ಬ ಕೇವಲ ಗನ್ನು ಮಾರುವ ದಾನವನೇ ಆಗುತ್ತಿದ್ದೆನೇನೋ.’

ಆಲ್ಬರ್ಟ್ ತಿಳಿಹಾಸ್ಯದಲ್ಲಿ ಆಡಿದ ಮಾತಿಗೆ ಕುರುಪ್‌ ದನಿಗೂಡಿಸಿದ:

‘ಉಮಾ ಇಲ್ಲದಿದ್ದರೆ ನಾನೊಬ್ಬ ಮ್ಯಾಟರ್ ಆಫ್‌ ಫ್ಯಾಕ್ಟ್‌ ಅಂಡ್‌ ಎಫಿಸಿಎಂಟ್‌ ಬ್ಯುರಕ್ರೇಟ್‌ ಮಾತ್ರ ಆಗಿರುತ್ತ ಇದ್ದೆ.’

ಉಮಾ ತಳಮಳದಲ್ಲಿ ಧ್ಯಾನಿಸಿದಳು.

ಕುರುಪ್‌ ಜೊತೆಗಿನ ಅವಳ ಸಂಬಂಧವನ್ನು ಸಹಿಸಲಾರದೆ ತನ್ನ ಯೌವನದ ಕಾಲದಲ್ಲಿ ಹತಾಶ ಪ್ರೇಮಿಯೊಬ್ಬ ಹೇಳಿದ್ದು ನೆನಪಾಯಿತು. ಪರಮ ಅಸೂಯೆಯಲ್ಲೊ? ಪ್ರಾಣವನ್ನೇ ಒಡ್ಡಿದ ಪ್ರೀತಿಯಲ್ಲೊ? ಈಗ ತಿಳಿಯದು.

‘ನೃತ್ಯವೇ ಆಗಿಬಿಡುವ ನರ್ತಕಿ ನೀನಲ್ಲ. ನಿನಗೆ ಬೇಕಾದ್ದು ಕ್ಷೇಮದ ಯಶಸ್ಸಿನ ಬದುಕು.

ಅವನೂ ಈಗ ಬೆಂಗಳೂರಿನಲ್ಲಿ ಲೆಕ್ಚರರ್ ಆಗಿ ಮನೆ ಕಟ್ಟಿದ್ದಾನೆ. ಕೆಲಸ ಕಳೆದುಕೊಳ್ಳುವ ಎಚ್ಚರದಲ್ಲಿ ನಕ್ಸಲೈಟರನ್ನು ‘ಸಿಂಪತಿಸಿ’ ಲೇಖನ ಬರೆಯುತ್ತಾನೆ.

ಕೃಪೆ: ದೇಶಕಾಲ, ವಿಶೇಷ ಸಂಚಿಕೆ ೨೦೦೯