ಅವೇ ನೆಟ್ಟು ನೋಡಲು ನಾಚುವ, ಆದರೂ ಆದರದಿಂದ ಗಮನಿಸುವ ಕಣ್ಣುಗಳು; ಎಡಗದ್ದದ ಕೆಳಗಿನ ಕೊರಳಿನ ಮೇಲೆ ಒಂದು ಮಚ್ಚೆ, ಅವಳ ಆಕರ್ಷಕ ಮುಖಕ್ಕೆ ದೇವತೆಯೊಬ್ಬಳು ಗರ್ಭದಲ್ಲೇ ಹಾಕಿದ ಛೋಟಾ ಸಹಿಯ ಹಾಗೆ.

ಹೌದು ಇದು ಭಾಗೇರತಿ.

ಮೂವ್ವತ್ತು ವರ್ಷಗಳಿಂದ ನೋಡದ, ವಿಚಿತ್ರವೆಂದರೆ ಕಣ್ಣಾರೆ ನೋಡಬೇಕೆಂದು ಬಾಧಿಸದಂತೆತರ್ಗತಳಾದ, ಎಲ್ಲ ಹೆಣ್ಣುಗಳಲ್ಲೂ ಅಷ್ಟಿಷ್ಟು ಪ್ರತ್ಯಕ್ಷವಾಗುವ ಭಾಗೇರತಿ.

ಬಾಲ್ಯಕಾಲದಲ್ಲಿ ಹುಚ್ಚಿನಂತಿದ್ದು, ಬೆಳೆದಂತೆಲ್ಲ ತನ್ನೊಳಗೆ ಸಂಭವಿಸುತ್ತಲೇ ದಿವ್ಯಗೊಂಡ ದೇವಿಯಂತೆ ಭಾಸವಾಗುವ ಭಾಗೇರತಿ, ಮಾತಿನ ಸೂತಕ ತಟ್ಟದಂತೆ ಪಿಸುಮಾತೇ ಆಗುವ ವಿಸ್ಮಯದ ಭಾಗೇರತಿ, ತನ್ನನ್ನು ಮೀರಿ ಬಂತೆಂದು ಅನ್ನಿಸುವ ಅಪರೂಪಾದ ಕೆಲವು ಕಥೆ ಕಾದಂಬರಿಗಳ ಹಿಂದಿರುವ ಗುಪ್ತ ಪ್ರೇರಣೆ ಭಾಗೇರತಿ.

ತನ್ನ ಮಹೋಲೋಕದ ಬೀಟ್ರಿಕ್ಸ್‌ ಇವಳು.

ಏನನ್ನೋ ಎಡವಿ ಮುಗ್ಗರಿಸಿ ಕಂಡಂತಾಗಿ, ಒಳಗೊಳಗೇ ಆಡಲಾರದ ಮಾತುಗಳು ಉಕ್ಕಿ ಬಂದಂತಾಗಿ ನಾಗಭೂಷಣ ಹಿಗ್ಗಿದ. ಬಿಳಿ ಜುಬ್ಬದ ತೋಳನ್ನು ಮುಂಗೈನಿಂದ ಮೇಲಕ್ಕೆ ಸರಿಸಿ ಕೈಮುಗಿದು ಅಚ್ಚರಿಯಲ್ಲಿ ಅಂದ:

‘ಭಾಗೇರತಿ’

‘ಹೌದು. ಅದೇ ಮಚ್ಚೆ. ಆದರೆ ಈಗ ರತಿ. ಅಮೆರಿಕನ್ನರ ಬಾಯಿಗೆ ನಾನು ಸಿಕ್ಕಿ ಫೇಮಸ್‌ ಆದದ್ದೂ, ಲ್ಯಾಟಿನ್‌ ಅಮೆರಿಕಾದಲ್ಲಿ ಬ್ರಾಂಡ್‌ ಅಂಬಾಸಡರ್ ಆಗಿ ಮೆರೆದದ್ದೂ ರತಿಯಾಗಿ. ನಿಮ್ಮ ಎಲ್ಲ ಬರವಣಿಗೆಯಲ್ಲೂ ಹೊಳೆದು ಹೋಗುವ ಈ ಮಚ್ಚೆಯಿಂದಾಗಿಯೇ ನಾನು ಬ್ರಾಂಡ್‌ ಅಂಬಾಸಡರ್ ಆದದ್ದು. ಆಲ್‌ಸೈಮರ್ಸಿನ ನಂತರ ತಾನು ಯಾರೆಂಬುದನ್ನೇ ಮರೆತ ನನ್ನ ಅಮ್ಮನಿಗೂ ನಾನು ಕರೆಯುವ ಭಾಗೇರತಿಯಾಗಿ ಉಳಿದಿಲ್ಲ. ಎಷ್ಟೋ ವರ್ಷಗಳ ನಂತರ ನೀವೊಬ್ಬರೇ ನನ್ನನ್ನು ಭಾಗೇರತಿಯೆಂದು ಕರೆದದ್ದು. ನಾನು ಹೋದಲ್ಲೆಲ್ಲ ನನ್ನ ಪೂರ್ವಲೋಕದ ಅಮ್ಮನನ್ನೂ ನಿಮ್ಮ ಬರವಣಿಗೆಯನ್ನೂ ಜೊತೆಗೆ ಇಟ್ಟುಕೊಂಡಿರುತ್ತೇನೆ ಅಷ್ಟ.’

ಅವಳ ಮಾತಿನಲ್ಲಿ ತನ್ನನ್ನೇ ಗೇಲಿ ಮಾಡಿಕೊಳ್ಳುತ್ತ, ಹೇಳಿಕೊಳ್ಳಬೇಕಾದ್ದನ್ನು ಹೇಳುವ ಲೌಕಿಕ ಸಭ್ಯತೆಯಿತ್ತು.

ನಾಗಭೂಷಣನಿಗೆ ಥಟ್ಟನೇ ಏನು ಹೇಳುವುದು ತಿಳಿಯಲಿಲ್ಲ. ತನ್ನ ಬರವಣಿಗೆಯ ಆಕಾಶಗಳನ್ನು ತೆರೆದ, ಜಾಹೀರಾತುದಾರರಿಗೂ ಲಾಭದಾಯಕವಾದ, ಅವಳ ಕತ್ತಿನ ಮೇಲಿನ ಮಚ್ಚೆಯನ್ನು ನೋಡುತ್ತಲೇ ಅವಾಕ್ಕಾಗಿ, ವಿಚಲಿತನಾಗಿ ನಿಂತ.

‘ನನ್ನ ಮಚ್ಚೆ ಹಾಗೆ ಇದೆ, ನಿಮ್ಮ ಕಾವ್ಯದಲ್ಲೂ, ನನ್ನ ಕತ್ತಲ್ಲೂ. ಆದರೆ ನಿಮ್ಮ ಬಲಕತ್ತಿನ, ಗಂಡಿನ ಅದೃಷ್ಟದ ಮಚ್ಚೆ ನಿಮ್ಮ ಗಡ್ಡದಲ್ಲಿ ಮುಚ್ಚಿದೆ.’

ಗಹನವೆನ್ನಿಸುವಂತೆ ತನ್ನೊಳಗೆ ಬೆಳೆದಿದ್ದ ಅಪೂರ್ವ ಶೋಭೆಯ ಲೋಕವೊಂದನ್ನು ಆ ಲಂಗ-ದಾವಣಿಯ ಸುಂದರಿ ಹೀಗೆ ಸ್ನೇಹದ ಲವವಿಕೆಯ ಸಲುಗೆಯಲ್ಲಿ ಕಂಡು ಗೇಲಿ ಮಾಡಬಲ್ಲಳೆಂದು ನಾಗಭೂಷಣ ನಿರೀಕ್ಷಿಸಿರಲಿಲ್ಲ. ಅವನ ಲೋಕದಲ್ಲಿ ಅವನನ್ನು ಗೇಲಿಮಾಡಬಲ್ಲ ಯಾರೂ ಉಳಿದಿರಲಿಲ್ಲ.

ಭಾಗೇರತಿಯೂ ಎಲ್ಲರಂತೆ ಇನ್ನೊಬ್ಬ ಬಾಯಾಳಿಯೇ? ತಾನೇನೋ ಅಚ್ಚುಕಟ್ಟಿನ ವೇಷಭೂಷಣಗಳಲ್ಲಿ ಸಾರ್ವಜನಿಕ ಘನವಂತನೆಂದು ತೋರುವ ಸಭ್ಯನಾಗಿದ್ದೇನೆ-ನಿಜ.

ಇವಳು?

*

‘ಅಮೆರಿಕಾದಲ್ಲಿ ಇದ್ದಿದ್ದರೆ ನೀವು ನಾಗ್‌ ಆಗುತ್ತ ಇದ್ದಿರಿ. ನನ್ನ ಗಂಡ ಸವ್ಯಸಾಚಿನ್‌ ಬರೇ ಸಚಿನ್‌ ಆದ ಹಾಗೆ. ಜನಪ್ರಿಯ ಕ್ರಿಕೆಟ್‌ ಸಚಿನ್‌ನ ಹೆಸರು ಮಾತ್ರ ಅವನದು. ಗಾದೆಯನ್ನು ತಿರುಗುಮುರುಗು ಮಾಡಿ ಅವನನ್ನು ವರ್ಣಿಸಬೇಕು. ಮನೆಗವನು ಉಪಕಾರಿ; ಪರರಿಗೆ ಮಾರಿ. ಅವನು ಇಲ್ಲಿ ನಿಮ್ಮನ್ನು ನೋಡಲು ಬರುವ ಮುಂಚೆಯೇ ಅವನ ಚರಿತ್ರೆ ಹೇಳಿಬಿಡುತ್ತೇನೆ. ಮೈಸೂರಿನಲ್ಲಿ ಎಂಜಿನಿಯರಿಂಗ್‌ ಮಾಡಿ, ಉತ್ತರಾದಿ ಮಠದ ನಿಯಮಕ್ಕೆ ತಕ್ಕಂತೆ ನನ್ನ ಮದುವೆಯಾಗಿ ಕೆನಡಾಕ್ಕೆ ಹೋಗಿ ಅಲ್ಲಿ ಸಿಟಿಜೆನ್‌ ಆಗಿ, ಕೆನಡಾ ಮೈನಿಂಗ್‌ ಕಂಪನಿಯೊಂದರ ಮ್ಯಾನೇಜರ್ ಆಗಿ…

‘ಸಾರಿ ನಿಮ್ಮನ್ನು ನಿಲ್ಲಿಸಿಯೇ ಮಾತಾಡುತ್ತ ಇದ್ದೇನೆ. ನಿಮ್ಮ ಕಥಾಲೋಕದಿಂದ ಹೊರಬಂದ ಎಕ್ಸೈಟ್‌ಮೆಂಟಿನಲ್ಲಿ ಏನೇನೋ ಬಡಬಡಿಸುತ್ತ ಇದ್ದೇನೆ. ದಾವಣಿ-ಲಂಗದ ಹುಡುಗಿಯಾಗಿ ನಿಮ್ಮ ಜೊತೆ ಮಾತಾಡಿದ್ದೇ ಇಲ್ಲವಲ್ಲ? ಆಸೆಯನ್ನೆಲ್ಲ ತೀರಿಸಿಕೊಳ್ಳುತ್ತ ಇದ್ದೇನೆ. ಸಚಿನ್‌ ಬಂದ ನಂತರ ಅವನು ತನ್ನ ಚಿಲಿ ದೇಶದ ಗಣಿಗಾರಿಕೆಯ ಕಷ್ಟನಟ್ಟ ಲಾಭಗಳ ಬಗ್ಗೆ ನಿಮ್ಮನ್ನು ಕೊರೆಯುತ್ತಾನೆ.  ಅವನು ನಿಮ್ಮನ್ನು ಓದಿಲ್ಲ. ನೀವು ಕೇವಲ ‘ಪದ್ಮವಿಭೂಷಣ’ ಅವನ ಪಾಲಿಗೆ. ಅವನೇ ನಿಮ್ಮನ್ನು ಏರ್ ಟಿಕೆಟ್‌ ಕೊಟ್ಟು ಕಲ್ಕತ್ತದಿಂದ ಕರೆಸಿಕೊಂಡದ್ದು, ನನ್ನ ನಲವತ್ತೈದನೆ ವರ್ಷದ ಹುಟ್ಟುಹಬ್ಬದ ಉಡುಗೊರೆಯಾಗಿ. ಅಪ್ಪಟ ಐರೋಪ್ಯ ಸಭ್ಯ ಅವನು. ಕನ್ನಡಿಗನಾದರೂ ಕನ್ನಡ ಮಾತಾಡಲಾರ. ಗೊತ್ತು, ಆದರೆ ಕಷ್ಟಪಡ್ತಾನೆ. ಲ್ಯಾಟಿನ್‌ ಅಮೆರಿಕಾದಲ್ಲಿ ಸುಲಿಗೆ ಮಾಡಕ್ಕೆ ಅಂತ ಸ್ಟ್ಯಾನಿಷ್‌ ಕಲ್ತಿದಾನೆ. ನೋಡೋಕೆ ಸಿನಿಮಾ ಹೀರೋ ಹಾಗೆ ಇದಾನೆ.’

ಮಾತಾಡುತ್ತಲೇ ನಾಗಭೂಷಣನನ್ನು ಸೋಫಾದ ಮೇಲೆ ಕೂರಿಸಿ ಅಕ್ಕಿ ತೊಳೆದ ನೀರಿಗೆ ಹಾಲು ಬೆಲ್ಲ ಬೆರೆಸಿದ ಮಲೆನಾಡಿನ ಮೈತಂಪು ಮಾಡುವ ಪಾನಕ ಕೊಟ್ಟಿದ್ದಳು. ಅಮ್ಮನ ನೆನಪಾಯಿತು ನಾಗಭೂಷಣನಿಗೆ. ನಲವತ್ತು ವರುಷಗಳ ಹಿಂದಿನ ರುಚಿ ಮರುಕಳಿಸಿ ಹಾಯೆನ್ನಿಸಿತು.

ಸೋಫಾ ಮಾತ್ರ ಆಧುನಿಕ, ಉಳಿದದ್ದೆಲ್ಲ ಪೂರ್ವಕಾಲದ ಮಲೆನಾಡಿನ ಮನೆ. ಅವೇ ದಪ್ಪ ದಪ್ಪ ಕೊರೆದ ಕಂಬಗಳು. ಎತ್ತರದ ರಂಗೋಲೆ ಹಾಕಬಲ್ಲಷ್ಟು ಅಗಲದ ಹೊಸ್ತಿಲು. ಕತ್ತನ್ನು ಬಗ್ಗಿಸದೇ ಈ ಹೊಸಲು ದಾಟಿ ಒಳಹೋಗುವಂತಿಲ್ಲ. ಅಂಬೆಗಾಲಿಡುವ ಮಗು ಈ ಹೊಸ್ತಿಲನ್ನು ಹತ್ತಿ ಅಂಬೆಗಾಲಿಡುತ್ತಲೇ ಕೆಳಗಿಳಿದರೆ ಅದೊಂದು ಮನೆಯವರಿಗೆಲ್ಲ ಹಬ್ಬ. ಆಳುಕಾಳುಗಳಿಗೆಲ್ಲ ಹೇಳಿ ನಟಿಗೆ ಮುರಿದು ಮಗುವಿನ ದೃಷ್ಟಿ ತೆಗೆಯುವ ಸಂಭ್ರಮದ ಪಾಯಸ ತಿನ್ನುವ ಹಬ್ಬ.

ಹೊಸಲು ದಾಟಿದ ಹೆಣ್ಣು ಎಂಬ ದೂಷಣೆಗೆ ಕಾರಣವಾಗಬಲ್ಲಷ್ಟು ಹೆಣ್ಣಿಗೆ ಎಲ್ಲೆಗಳನ್ನು ಸೃಷ್ಟಿಸುವ ರಕ್ಷಣೆಯಂತೆಯೇ ಶಿಕ್ಷೆಯೂ ಈ ಎತ್ತರದ ಹೊಸ್ತಿಲು. ಮನೆಯ ತಂಪು ಕತ್ತಲಿಗೆ ಜಗಜಗಿಸುವ ನೆರಳು ಬೆಳಕಿನ ಒಂದು ಹೊರಗನ್ನು, ಮಲೆನಾಡಿನ ಅರಣ್ಯದ ನಿರಂಕುಶ ಅನ್ಯವನ್ನು ಒದಗಿಸುವ ಸೀಮಾರೇಖೆ ಕೂಡ ಈ ಹೊಸ್ತಿಲು. ಈ ಪ್ರಾಚೀನ ಬಾಗಿಲಿನ ಚೌಕಟ್ಟು ತಲೆ ಬಾಗಿಸುವ ವಿನಯವನ್ನು ಕಲಿಸುವ ಸ್ಥಾವರ. ತನ್ನ ಬರವಣಿಗೆಯ ಬೀಟ್ರಿಕ್ಸ್‌ ಆದ ಈ ಭಾಗೇರತಿಯೂ ಇಂತಹ ಹೊಸ್ತಿಲು ದಾಟಿದ ಹೆಣ್ಣೇ. ನನ್ನ ಹೊಸ್ತಿಲನ್ನೂ ಈಗ ದಾಟಿ ರತಿಯಾದಳು. ಬ್ರಾಂಢ್‌ ಅಂಬಾಸಡರ್ ಆದಳು. ಮತ್ತೆ ಇಂತಹದೊಂದು ಮನೆಯನ್ನು ರೆಸಾರ್ಟ್ ಮಾಡಲು ಕಟ್ಟಿಸಿ ತನ್ನನ್ನು ಕರೆಸಿಕೊಂಡಳು.

ಏನೂ ಮಾತಾಡದೆ, ಭಾಗೇರತಿಯಿಂದ ಅಡ್ಡಡ್ಡ ಮಾತುಗಳಲ್ಲಿ ಪೂಜಿಸಿಕೊಳ್ಳುತ್ತ ಕೂತ ನಾಗಭೂಷಣ ತನ್ನ ಅನಿಸಿಕೆಗೆ ಒಪ್ಪಿಗೆ ಸೂಚಿಸುವಂತೆ ಲೊಚಗುಟ್ಟಿದ ಹಲ್ಲಿಯೊಂದನ್ನು ನಾಗಂದಿಗೆ ಮೇಲೆ ಕಂಡ: ರತಿ ಕ್ಷಮಿಸಿ ಎಂದು ಕಾಲೆತ್ತಿ, ತಲೆಬಾಗಿ, ದಾರಂದವನ್ನು ಹಿಡಿದು ಹೊಸಲು ದಾಟಿ ಒಳಗೆ ಹೋದಳು.

ಜುಬ್ಬದ ಜೋಬಿನಿಂದ ಕಾಗದ ತೆರೆದು ನಾಗಭೂಷಣ ಓದಿಕೊಂಡ:

‘ನೀವು ಹುಟ್ಟಿಬೆಳೆದ ಮಲೆನಾಡಿನ ಹೆಂಚಿನ ಮನೆಯನ್ನು ‘ಪಚ್ಚೆ ರೆಸಾರ್ಟ್’ನ ಒಂದು ಅಂಗವಾಗಿ ರಿನೊವೇಟ್‌ ಮಾಡಲಾಗಿದೆ. ಅದನ್ನು ನಿಮಗೆ ಅರ್ಪಿಸುವ ಸಮಾರಂಭಕ್ಕೆ ತಾವು ಈಗ ಇರುವ ‘ಶಾಂತಿನಿಕೇತನ’ದಿಂದ ಬರಬೇಕು. ಅಗತ್ಯವಾದ ಏರ್ ಟಿಕೆಟ್‌ ಇಲ್ಲಿದೆ. ಬೆಂಗಳೂರಲ್ಲಿ ಕಾರು ಕಾದಿರುತ್ತದೆ, ನೀವಿದ್ದ ನಿಮ್ಮ ಜನ್ಮ ಸ್ಥಳಕ್ಕೆ ತರಲು’ ಎಂಬ ಒಂದು ಕಾಗದ ತನಗೆ ಬಂದಿತ್ತು. ಅದರ ಕೆಳಗೆ ಶಶಿ ಎಂಬ ಸಹಿಯಿತ್ತು.

ಒಳಗೆ ಹೋದ ರತಿ ತಾನು ಮೊದಲು ತೊಟ್ಟಿದ್ದ ಜೀನ್ಸನ್ನು, ಶರ್ಟನ್ನು ಬಿಚ್ಚಿ, ಒಂದು ಸಾದಾ ಸೀರೆಯುಟ್ಟು, ಕುಂಕುಮವಿಟ್ಟು ಬಂದಿದ್ದಳು. ಅವಸರದಲ್ಲಿ ಸ್ನಾನವನ್ನೂ ಮಾಡಿ, ರೇಷ್ಮೆ ನುಣುಪಿನ ತನ್ನ ಕಪ್ಪು ಕೂದಲನ್ನು ಬಾಚದೆ ಬೆನ್ನಿನ ಮೇಲೆ ಒಣಗಲು ಚೆಲ್ಲಿ ದೂರದಲ್ಲಿ ನಿಂತವಳು, ತಾನು ಏನೋ ಕೇಳಲಿರುವೆನೆಂದು ಊಹಿಸಿ ಪ್ರಶ್ನೆ ಮಾಡುವಂತೆ ತನ್ನ ನೀಳವಾದ ಕಣ್ಣುಗಳನ್ನು ಎತ್ತಿ ನಸುನಕ್ಕಳು:

‘ನನ್ನನ್ನು ಕರೆದ ಈ ಶಶಿ ಯಾರು? ನನ್ನ ರಿನೋವೇಟಡ್‌ ಮನೆಯೆಲ್ಲಿದೆ?’

‘ತೋರಿಸ್ತೇನೆ ಇರಿ. ಶಶಿ ನನ್ನ ಮಗ ಭಾರತದಲ್ಲಿ ಆರು ಇಕೋಫ್ರೆಂಡ್ಲಿ ರೆಸಾರ್ಟ್‌‌ಗಳ ಒಡೆಯ. ತನ್ನ ಅಪ್ಪನಂತೆ ಅವನೂ ಬಳ್ಳಾರಿಯಲ್ಲಿ ಗಣಿ ಲೈಸನ್ಸಿಗೆ ಅರ್ಜಿ ಹಾಕಿಕೊಂಡಿದ್ದಾನೆ. ಅವನ ಅಪ್ಪನ ಮಾರ್ಗದರ್ಶನ, ಲ್ಯಾಟಿನ್‌ ಅಮೆರಿಕಾದಲ್ಲಿ ನಡೆಸುತ್ತ ಇರುವ ಅಪ್ಪನ ಗಣಿಗಾರಿಕೆಯ ಅನುಭವ ಎರಡೂ ಅವನಿಗೆ ಇದೆ. ಇಕೋಫ್ರೆಂಡ್ಲಿಯಾಗಬೇಕು ಎಂಬ ಕನ್ಸರ್ನ್ ಕೂಡ ಇದೆ. ಅಥವಾ ಹಾಗೆ ಅಂದುಕೊಂಡಿದಾನೆ. ತಾಯಿಯ ಮಚ್ಚೆ ತಂದ ಭಾಗ್ಯವನ್ನು, ಅಂಧರೆ ಡಾಲರುಗಳನ್ನು ಕೂಡ, ನೆನೆಯಲು ಇದು ಪಚ್ಚೆ ರೆಸಾರ್ಟ್ ಆಗಿದೆ. ಇದನ್ನೆಲ್ಲ ಕೇಳಿ ನೀವೇನು ಅಂದುಕೋತಿದೀರಿ ಅನ್ನೋದು ನಿಮ್ಮೊಳಗೆ ಬೆಳೆದ ನನಗೆ ಗೊತ್ತಿದೆ, ಬಿಡಿ.’

ರತಿಯನ್ನು ಭಾಗೇರತಿ ಮಾಡಿದ ಸಾದಾ ಸೀರೆಯನ್ನೂ, ಉದ್ದವಾಗಿ ಇಟ್ಟ ಕುಂಕುಮವನ್ನೂ ನಾಗಭೂಷಣ ಗಮನಿಸಿದ. ಯಾಕಿದು ಎಂದು ಕೇಳದಿದ್ದರೂ ಅವಳೇ ಹಳಿದಳು:

‘ಅಮ್ಮನಿಗೆ ಏನೂ ಗೊತ್ತಾಗಲ್ಲ. ಅಪ್ಪ ಕಾಲರಾದಿಂದ ಸತ್ತರು-ನಾನು ಕೆನಡಾದಲ್ಲಿ ಇದ್ದಾಗಲೇ. ನಾನೊಬ್ಬಳೇ ಮಗಳಲ್ಲವೆ? ಅವತ್ತಿನಿಂದ ಅಮ್ಮ ನನ್ನ ಜೊತೆಯಲ್ಲೇ ಇರೋದು. ಮುಂಚೆ ಕೆನಡಾದಲ್ಲೂ, ಈಗ ಇಲ್ಲೂ. ಸುಮಾರು ಎರಡು ವರ್ಷಗಳಿಂದ ಅವಳಿಗೆ ತಾನು ಯಾರೆಂದೇ ಗೊತ್ತಾಗದ ಅಲ್‌ಸೈಮರ್ಸ್ ಖಾಯಿಲೆ. ನಾವು ಉತ್ತರಾದಿ ಮಠದ ಮಹಾ ಮಡಿವಂತೆ ಬ್ರಾಹ್ಮಣರಲ್ಲವೆ? ಅಮ್ಮನಿಗೆ ಈಗ ಏನೂ ಗೊತ್ತಾಗದಿದ್ದರೂ ನಾನು ಎಲ್ಲೇ ಇರಲಿ-ಒಂದು ಸೀರೆಯನ್ನು ಹಗ್ಗದ ಮೇಲೆ ಒಣಹಾಕಿ, ನಿತ್ಯ ಅವಳ ಕಣ್ಣಿನ ಎದುರೇ ಅದನ್ನು ಕೋಲಿನಿಂದ ಎತ್ತಿ ಕೆಳಗಿಳಿಸಿ ಉಟ್ಟುಕೊಳ್ಳುತ್ತೇನೆ-ಒಳ ಕಚ್ಚೆಹಾಕಿ; ನಡುವೆ ಬಾಳೆಕಾಯಿಯ ಹಾಗೆ ಕಾಣುವ ಸೀರೆಯನ್ನೆ ಮುದುರಿ ಸುತ್ತಿದ ಗಮಟು ಹಾಕಿ-ಅವಳಿಗಿದೆಲ್ಲ ತಿಳಿಯುತ್ತೊ ಇಲ್ಲವೊ ನನಗೆ ಬೇಡ. ಮಡಿ ಸೀರೆಯುಟ್ಟೇ ನಾನು ಅವಳಿಗೆ ಗಂಜಿ ತಿನ್ನಿಸುವುದು. ಮಡಿಗಾಗಿ ನಾನು, ನೀವು ಕೂಡ ಕಾರ್ಪೆಟ್ಟಿನ ಮೇಲೂ ನಿಂತಿಲ್ಲ ನೋಡಿ. ನನ್ನ ಗಂಡ ನನ್ನ ಮಗ ಈ ನನ್ನ ಮಡಿವಂತಿಕೆಯ ವೇಷ ಕಂಡು ನಗುತ್ತಾರೆ. ನೀವು ನಿಮ್ಮೊಳಗಿನಿಂದ ಆರಾಧಿಸುವ ಭಾಗೇರತಿ ಪ್ಯಾಂಟನ್ನೂ ಹಾಕುಇವಳು. ಮಡಿಯನ್ನೂ ಉಡುವಳು ಅಲ್ಲವೆ?’ ಎಂದು ನಗುತ್ತ ಅಮ್ಮನಿಗೆ ಊಟಮಾಡಿಸಲು ಅವಳು ಮಲಗಿದ ಕೋಣೆಗೆ ಹೋದಳು.

*

ಅದು ಚೌಕಿ ಮನೆ. ಮಧ್ಯದಲ್ಲಿ ಆಕಾಶಕ್ಕೆ ತೆರೆದ ಅಂಗಳ. ಮಧ್ಯೆ ತುಳಸಿ ಕಟ್ಟೆ ಒಂದು ಪಕ್ಕಕ್ಕೆ ದೊಡ್ಡದೊಂದು ಹಾಲು. ಆದರೆ ಗೋಡೆಗಳ ಮೇಲೆ ಜೆಕೆ, ರಮಣ,ಪರಮಹಂಸ, ಓಶೋ ಚಿತ್ರಗಳು. ಶ್ರುತಿಯಂತೆ ಸತತವಾದ ಓಂಕಾರದ ನಾದ. ಈ ಹಾಲಿನಲ್ಲಿ ‘ರೆಸಾರ್ಟಿಗೆ ಬಂದವರು ಇಲ್ಲಿ ಧ್ಯಾನ ಮಾಡಬಹುದು’ ಎಂದು ರತಿ ವಿವರಿಸಿದಳು. ಮಲೆನಾಡಿನ ಬಣ್ಣದ ಚಾಪೆ ಮೇಲೆ ಕೂರಲು ದಿಂಬುಗಳೂ ಇದ್ದವು. ಪುಸ್ತಕವಿಡುವ ವ್ಯಾಸಪೀಠಗಳೂ ಇದ್ದವು. ಕಾಲು ಮಡಿಸಲಾರದ ಹೊರಗಿನವರಿಗೆಂದು ಕುರ್ಚಿಗಳೂ ಇದ್ದವು. ರತಿ ಮೆಲ್ಲನೆ ಅವನನ್ನು ನಡೆಸುತ್ತ ಹೇಳಿದಳು:

‘ಕೇಳಿದೀರ? ಟೆನ್ಸನ್ನಿನಿಂದ ಅಧೀರರಾದವರಿಗೆ, ಮಲ್ಟಿನ್ಯಾಷನಲ್‌ ಮ್ಯಾನೇಜರ್ ಗಳಿಗೆ ಆತ್ಮವಿಶ್ವಾಸ ತುಂಬುವ ಗುರುವೊಬ್ಬರು, ನಿಮ್ಮಂತೆ ಟ್ರಿಮ್‌ ಮಾಡದ ಉದ್ದ ಗಡ್ಡದವರು ಬೆಂಗಳೂರಿನಲ್ಲಿ ಇದ್ದಾರೆ. ಅವರ ಬ್ರಾಂಚುಗಳು ವಿಶ್ವದಲ್ಲಿ ಎಲ್ಲೆಲ್ಲೂ ಇವೆ. ಅವರ ಸಂಸ್ಥೆಯ ಹೆಸರು ‘ಕುಂಡಲಿನಿ’. ನಿಮ್ಮ ಒಳಗಿನ ಸಹಸ್ರಾರವನ್ನು ಸೂಟುಬೂಟಿನಲ್ಲೇ ಮುಟ್ಟುವ ಉಪಾಯಗಳನ್ನು ಇವರು ಬಲೊಲರು. ಒಂದು ವಾರದ ಕೋರ್ಸ್ ಇದು. ಈ ರೆಸಾರ್ಟ್ ಶುರುವಾಗುವ ಮೊದಲೇ ನೂರಾರು ಜನ ಬುಕ್‌ ಮಾಡಿದ್ದಾರೆ. ನನ್ನ ಗಂಡ ನನ್ನ ಮಗ ಇಬ್ಬರಿಗೂ ಇದರಲ್ಲಿ ನಂಬಿಕೆ. ನಂಬಿಕೆ ಮಾತ್ರವಲ್ಲ; ಗಳಿಸುವ ಡಾಲರ್ ಕೂಡ. ನಿಮಗಿದು ಆಗದು ಎಂದು ನನಗೆ ಗೊತ್ತು. ನನಗೂ ಬೇಕಿಲ್ಲವೆಂದು ನಿಮ್ಮೊಳಗಿನ ನಾನು ಹೇಳಬೇಕಿಲ್ಲ ಅಲ್ಲವೆ? ಹೀಗೆಲ್ಲ ಮಾತಾಡೋದೇ ಕೃತಕ;  ಆದರೆ ನಿಮ್ಮ ಒಳಗಿನ ನನ್ನನ್ನು ಹೀಗೆ ತಿದ್ದದೆ ಉಳಿಸಿಕೊಳ್ಳೋದು ಸುಳ್ಳಾಗತ್ತೆ; ನಿಮ್ಮ ಬರವಣಿಗೆ ಈ ಕಾಲದಲ್ಲಿ ಸುಳ್ಳಾಗಬಾರದು ಎಂದು ಈ ಎಲ್ಲ ನನ್ನ ಬಡಾಯಿ. ರೆಸಾರ್ಟ್ ಲಾಭದಾಯಕವಾಗಿ ನಡೀಲಿ ಎಂದುಕೊಳ್ಳೋದೂ ಗೃಹಿಣಿಯ ಲಕ್ಷಣ ತಾನೆ? ನಾನು ಓದಿದ ಕ್ಯಾಲಿಫೋರ್ನಿಯಾದ ಮುಕ್ತ ಹೆಂಗಸರೂ ತಮ್ಮ ಸಿಟ್ಟಿನ ಅಮೆರಿಕಾಕ್ಕೆ ಒಗ್ಗಿಕೊಳ್ಳೋದು ನನ್ನ ಹಾಗೇನೇ, ಅಲ್ಲವೆ ಮಿಸ್ಟರ್ ರ‍್ಯಾಡಿಕಲ್‌ ಧೀಮಂತರೆ? ನೀವೂ ಹೊಂದಿಕೊಂಡು ಯಶಸ್ಸು ಕಂಡವರೇ ಅಂದುಕೊಂಡಿದೀನಿ.’

ರತಿ ಮಡಿಸೀರೆ ಬಿಚ್ಚಿ ಒಂದು ಸುಂದರವಾದ ಒರಿಸ್ಸಾದ ಸೀರೆ ಉಟ್ಟಿದ್ದಳು; ದೊಡ್ಡ ಉದ್ದ ವೈಷ್ಣವ ಕುಂಕುಮ ಆಕರ್ಷಕವಾದ ಸಣ್ಣ ಕುಂಕುಮವಾಗಿತ್ತು. ನಲವತ್ತೈದು ವಯಸ್ಸಾದರೂ ಅದನ್ನು ತೋರದ ನಾಚದ ಮಾತಿನ ನಾಚುವ ಮುಖ, ಗಂಜಿಹಾಕದ ತೆಳು ಸೀರೆಯಲ್ಲಿ ಎಲ್ಲ ಬಳಕು ಭಿನ್ನಾಣಗಳನ್ನು ಸೀರೆಯಲ್ಲೂ ನೋಡುವ ಕಣ್ಣಿಗೊಂದು ಚೆಲುವಿನ ಉಡುಗೊರೆ. ಬಣ್ಣಬಣ್ಣದ ಗಾಜಿನ ಬಳೆಗಳ ಕಿಣಿಕಿಣಿಯಲ್ಲು, ಮುತ್ತಿನ ಸರದಲ್ಲು ಬಾಲ್ಯದ ಆಸೆಗಳನ್ನು ಕಳೆದುಕೊಳ್ಳದ ಪ್ರೌಢೆಯಾಗಿ ಕಂಡಳು.

ಮರಗಳ ನಡುವೆ ಕಾಲು ಹಾದಿಯಲ್ಲಿ ನಡೆದು ರಿನೊವೇಟಡ್‌ ಮನೆ ತಲುಪಿದರು. ಅದೇ ಹೆಂಚಿನ ಮನೆ. ಅದೇ ಸಗಣಿ ಹಾಕಿ ಸಾರಿಸಿದ ಅಂಗಳ. ಅದೇ ರಂಗೋಲೆ . ಅಲ್ಲಿ ಪ್ಲಸ್‌ ಅಂದರೆ, ತನಗಾಗಿ ಕಟ್ಟಿರುವ ಮಾವಿನ ತೋರಣ. ಅಷ್ಟು ದೊಡ್ಡ ಹೊಸ್ತಿಲಲ್ಲ; ಆದರೆ ಅಷ್ಟೇ ಬಾಗಬೇಕಾದ ಕುಳ್ಳಾದ ಹೊರ ಬಾಗಿಲು; ಅದಕ್ಕೆ ಅದೇ ಒಳಚಿಲಕ; ಅಗುಳಿ.

‘ಉಡುಪಿಯಲ್ಲಿ ಒಬ್ಬ ಜೀನಿಯಸ್‌ ಇದಾರೆ. ಅವರು ಹಕ್ಕಿಯಂತೆ ಎಲ್ಲೆಲ್ಲಿಂದಲೊ ಹಾಳು ಬಿದ್ದ ಮನೆಗಳಿಂದ ಬಾಗಿಲು ಕಿಟಕಿ ತಂದು ಈ ಬಗೆಯಲ್ಲಿ ನಮಗೆ ಬೇಕಾದ್ದನ್ನು ಕಟ್ಟಿಕೊಡುತ್ತಾರೆ.’ ರತಿ ಹೆಚ್ಚಿನ ವಿವರಗಳಿಗೆ ಹೊರ ಬಾಗಿಲಿನಲ್ಲಿ ಶಾಸನದ ರೂಪದಲ್ಲಿ ಬರೆದದ್ದನ್ನು ತೋರಿಸಿದಳು.

‘ನನ್ನ ಗಂಡ ನನ್ನ ಮಗ ಇದು ಇಂಗ್ಲಿಷಿನಲ್ಲಿ ಇರಬೇಕೂಂತ, ನಾನು ಕನ್ನಡದಲ್ಲೇ ಇರಬೇಕೂಂತ. ನಾನೇ ರಿಸರ್ಚ್ ಮಾಡಿ ಬರೆದದ್ದು ಓದಿ ನೋಡಿ.’

ಒಕ್ಕಣೆಯ ತಾತ್ಪರ್ಯ ಹೀಗಿತ್ತು:

ಜಗತ್ತಿನಲ್ಲೇ ಶ್ರೇಷ್ಠ ಲೇಖಕನೆಂಬ ಮೆಚ್ಚುಗೆಗೆ ಪಾತ್ರನಾದ ನಾಗಭೂಷಣ ಹುಟ್ಟಿದ ಮನೆ ಇದೆಂದೂ (ತಾರೀಖಿನ ಸಹಿತ) ಇವನ ತಂದೆ ವೇದಾಂಗ ಪಂಡಿತರಾಗಿದ್ದ ಕೃಷ್ಣ ಜೋಯಿಸರೂ, ತಾಯಿ ಗೌರಮ್ಮನವರೂ ಬಡತನದಲ್ಲೂ ಮಗನನ್ನು ಐದು ಮೈಲು ದೂರದ ಶಾಲೆಗೆ ಕಳುಹಿಸಿ ಓದಿಸಿದರೆಂದೂ, ಬರಿಗಾಲಿನಲ್ಲಿ ಹುಡುಗ ಶಾಲೆಗೆ ಹೋಗುತ್ತ ಇದ್ದನೆಂದೂ, ಅವನು ಓದಿ ಕೆಲಸ ಹಿಡಿದವನು ಮಾತಾಪಿತೃಗಳನ್ನು ಮೈಸೂರಿಗೆ ಕರೆದುಕೊಂಡು ಹೋದನೆಂದೂ, ಈ ಜಾಗ ಶ್ರೀ ಶಂಕರ ಮಠಕ್ಕೆ ಸೇರಿದ್ದೆಂದೂ, ಇಲ್ಲಿ ಮುಂದೆ ಇದ್ದವರೂ ಮಠದ ಗೇಣಿದಾರರೆಂದೂ, ಮನೆ ಹಾಳು ಬಿತ್ತೆಂದೂ, ನಾಗಭೂಷನರ ಮಹಾಕಾದಂಬರಿ ಕಥೆಗಳಿಂದ ಸ್ಫೂತಿ ಪಡೆದ ಅವರ ಬಾಲ್ಯದ ಗೆಳತಿ ಭಾಗೇರತಿಯವರ ಪ್ರೀತ್ಯರ್ಥವಾಗಿ ಅವರ ಗಂಡ ಶ್ರೀಯುತ ಸವ್ಯಸಾಚಿನ್ನರೂ ಸುಪುತ್ರ ಶಶಿಭೂಷಣರೂ ಈ ಮನೆಯನ್ನು ಸುತ್ತಲಿನ ಜಾಗವನ್ನೂ ಕೊಂಡು ಮಲೆನಾಡಿನ ಸೊಗಡನ್ನು ಉಳಿಸುವ ಕಾರಣದಿಂದ ಅತಿಥಿಗಳ ಶಾಂತಿಗಾಗಿ ಪಚ್ಚೆ ರೆಸಾರ್ಟ್‌‌ನ್ನು ಈ ದಿವ್ಯ ಸ್ಥಳದಲ್ಲಿ ನಿರ್ಮಿಸಿದ್ದಾಗಿಯೂ, ಇತ್ಯಾದಿ ಬರೆದದ್ದನ್ನು ನಾಗಭೂಷಣ ವಿಧೇಯ೮ ವಿದ್ಯಾರ್ಥಿಯಂತೆ ಓದುವುದನ್ನು ನೋಡಿ ರತಿ ನಕ್ಕಳು. ಅವನೂ ನಕ್ಕು ಒಳಗೆ ಹೋದ.

ತಂಪಾದ ಮಣ್ಣಿನ ನೆಲ; ಸಗಣಿ ಹಾಕಿ ಸಾರಿಸಿದ ನೆಲ. ಅಲ್ಲಿ ಇಲ್ಲಿ ಕೂರಲು ಮಣೆಗಳು. ಮೂಲೆಯಲ್ಲಿ ದೀಪ ಹಚ್ಚಿಟ್ಟ ದೇವರ ಕೋಣೆ. ನಾಗಭೂಷಣ ಒಂದು ಮಣೆಯ ಮೇಲೆ ಕೂತು ಪಕ್ಕದಲ್ಲಿ ರತಿಯನ್ನು ಕೂರಿಸಿಕೊಂಡ. ತನ್ನ ಮಾತಿನ್ನೂ ಮುಗಿದಿಲ್ಲವೆಂದು ರತಿ ಹೇಳಿದಳು:

‘ನಿಮ್ಮ ತಂದೆ ತಾಯಿ ತೀರಿದ ನಂತರ ನೀವು ಮೈಸೂರು ಬಿಟ್ಟು ಇಂಗ್ಲೆಂಡಿಗೆ ರೋಡ್ಸ್‌ ಸ್ಕಾಲರ್ ಷಿಪ್‌ ಪಡೆದು ಹೋದಿರಿ ಅಲ್ಲವೆ? ಅಪ್ಪ ಅಮ್ಮ ಸತ್ತ ಮೇಲೆ ನಿಮಗೆ ಬೇಡವಾದ ನಿಮ್ಮ ಈ ದೇವರ ಪಟಗಳನ್ನೂ ತುಂಬ ಹಳೆಯ ಕಾಲದಿಂದ ನಿಮ್ಮ ಮನೆತನದಲ್ಲೆ ಉಳಿದು ಬಂದ ನರಸಿಂಹ ಸಾಲಿಗ್ರಾಮವನ್ನೂ ನಿಮ್ಮ ಪರಿಚಯದ ಯಾರಿಗೋ ಕೊಟ್ಟು ಹೋಗಿ ಮರೆತುಬಿಟ್ಟಿರಿ. ನಾನು ಎರಡು ವರ್ಷ ಎಲ್ಲೆಲ್ಲೋ ನಿಮಗೆ ಪರಿಚಯದವರನ್ನು ಹುಡುಕಿ ಆ ನರಸಿಂಹ ಸಾಲಿಗ್ರಾಮವನ್ನೂ ದೇವರ ಪಟಗಳನ್ನೂ, ಆ ಗಂಟೆಯನ್ನೂ ಪಂಚಪಾತ್ರೆಗಳನ್ನೂ ನಿಮ್ಮ ಜಾತಕವನ್ನೂ ನೀವು ಹುಟ್ಟಿದ ವರ್ಷದ ಪಂಚಾಂಗವನ್ನೂ ಪಡೆದು ತಂದು ಇಲ್ಲಿ ಇಟ್ಟಿದ್ದೇನೆ. ನೋಡಿ, ಕವಳಹಾಕಲು ನಿಮ್ಮ ತಂದೆ ಬಳಸುತ್ತ ಇದ್ದ ಹಿತ್ತಾಳೆ ಚಲ್ಲದ ಪೆಟ್ಟಿಗೆಯೂ ಇದೆ ನೋಡಿ. ನನ್ನ ಇಂಪಾಸಿಬಲ್‌ ಗಂಡ ಹೇಳಿದ: ‘ನೀನೇಕೆ ನಿನ್ನ ರಿಸರ್ಚನ್ನು ಡಾಕ್ಟರೇಟಿಗೆ ಸಬ್ಮಿಟ್‌ ಮಾಡಬಾರದು?’ ಹಿ ಮೆಂಟ್‌ ಇಟ್‌.’

ಕುತೂಹಲಕ್ಕಾಗಿಯು ನಾಗಭೂಷಣ ಎದ್ದು ಹೋಗಲಿಲ್ಲ. ಹಲವು ಬಣ್ಣದ ಬಳೆಗಳ ಅವಳ ಎಡಗೈಯನ್ನು ಸ್ನೇಹದಲ್ಲಿ ಹಿಡಿದು ತನಗೇ ಹೇಳಿಕೊಳ್ಳುವಂತೆ ಹೇಳಿದ:

‘ಈ ದೇವರು ಏನೇನು ಈ ಮನೆಯಲ್ಲಿ ಕಂಡೂ ಕಣ್ಣು ಮುಚ್ಚಿ ಕೂತಿದ್ದಾನೆ ಗೊತ್ತ? ನನ್ನ ತಾಯಿಗೊಬ್ಬಳು ತಂಗಿಯಿದ್ದಳು. ಬಾಲ ವಿಧವೆ. ಸಂಬಂಧಿಗಳು ಬಾಯಿಗೆ ಬಂದಂತೆ ಆಡಿಕೊಳ್ಳುವ ಸಕೇಶಿ. ಯಾವ ಆಭರಣಗಳನ್ನೂ ತೊಡದ, ತಲೆಯ ಕೂದಲನ್ನು ಕೂಡ ನೀಟಾಗಿ ಬಾಚಿಕೊಳ್ಳದ ಅವಳು ನನ್ನ ಅಮ್ಮನಿಗಿಂತ ಚೆಲುವೆ. ಗಂಡನ ಮನೆಯವರಿಗೆ ಹೊರೆಯಾಗಿ, ತಾಯಿ ಮನೆಯಲ್ಲಿ ದಿಕ್ಕಿಲ್ಲದೆ ಅಡಿಕೆ ತೋಟವನ್ನು ಮಠದಿಂದ ಗೇಣಿಗೆ ಹಿಡಿದ ನಮ್ಮ ಮನೆಯಲ್ಲಿ ಅವಳು ಆಶ್ರಯ ಪಡೆದಳು. ಮಗುವಾಗಿದ್ದಾಗಿನ ದಿನಗಳಿಂದಲೂ ನನ್ನ ಪಾಲಿಗೆ ಅವಳೇ ತಾಯಿಯ ಹಾಗೆ. ಅಂಡು ತೊಳೆದು, ಸೀಗೆ ಹಚ್ಚಿ ಮೈ ತೊಳೆದು ಬೆಳೆಸಿದವಳು. ತನಗೆ ಗೊತ್ತಿರುವ ಕಥೆಗಳನ್ನೆಲ್ಲ ರಾತ್ರೆ ತನ್ನ ಪಕ್ಕ ಮಲಗಿಸಿಕೊಂಡು ನನಗೆ ಹೇಳಿದವಳು  ಅವಳೇ.’

‘ಅಮ್ಮ ಮುಟ್ಟಾಗಿ ಹೊರಗೆ ಚಾವಡಿಯಲ್ಲಿ ಮಲಗಿದ್ದ ಒಂದು ರಾತ್ರೆ ಅವಳು ಎದ್ದು ಹಿತ್ತಲಿನ ಬಾಗಿಲು ತೆರೆದಳು. ನಾನು ಕಣ್ಣು ಮುಚ್ಚಿ ಮಲಗಿಯೇ ಇದ್ದೆ. ಚಿಕ್ಕಮ್ಮನಿಗೆ ಉಚ್ಚೆಯ ಅವಸರವಾಗಿರಬಹುದು ಎಂದುಕೊಂಡೆ. ಬಾಗಿಲು ಹಾಕಿಕೊಂಡಳು. ಆಮೇಲೆ ಅಪ್ಪನೂ ಎದ್ದು ಬಾಗಿಲು ತೆರೆದು ಹಿತ್ತಲಿಗೆ ಹೋದರು. ಅವರಿಗೂ ಉಚ್ಚೆಯ ಅವಸರವಾಗಿರಬಹುದು ಎಂದುಕೊಂಡೆ. ಸ್ವಲ್ಪ ಹೊತ್ತಿನ ನಂತರ ಪಿಸು ಮಾತುಗಳೂ ಚಿಕ್ಕಮ್ಮ ನರಳುವುದೂ ಅಪ್ಪ ನರಳುವುದೂ ಕೇಳಿಸಿತು. ನನಗಿದು ಅರ್ಥವಾಗಲಿಲ್ಲ. ಅಮ್ಮ ಮುಟ್ಟಾದಾಗಲೆಲ್ಲ ಹೀಗಾಗುವುದು ಗಮನಿಸಿದೆ. ಅರ್ಥವಾಯಿತು. ಚಿಕ್ಕಮ್ಮನ ಜೊತೆ ಮಲಗುವುದು ಬಿಟ್ಟೆ. ಅಪ್ಪನೆಂದರೆ ದ್ವೇಷ ಬೆಳೆಯಿತು. ಗೊತ್ತಿದ್ದೂ ಏನೂ ಗೊತ್ತಾಗದವಳಂತೆ ಅಮ್ಮ ನಟಿಸಿದರೂ ಅವಳು ವಿನಾಕಾರಣ ತಂಗಿಯ ಮೇಲೆ ಸಿಡಿಮಿಡಿಗೊಳ್ಳಗೊಡಗಿದಳು.’

‘ಆಗ ನಾನು ಮಿಡಲ್‌ ಸ್ಕೂಲಿನಲ್ಲಿ ಇದ್ದೆ. ನೀನು ಪ್ರೈಮರಿ ಸ್ಕೂಲಿನಲ್ಲಿ. ಊರಿನ ಅಮಲದ್ದಾರರ ಮಗಳು ನೀನು. ನಿನ್ನ ತಂದೆ ಪಿತ್‌ ಹ್ಯಾಟ್‌ ಹಾಕಿ ಟೈಕಟ್ಟಿ ಕಚ್ಚೆ ಪಂಚೆಯ ಮೇಲೊಂದು ಕೋಟ್‌ ತೊಟ್ಟು ಹಣೆಯ ಮೇಲೆ ಅಂಗಾರ ಅಕ್ಷತೆಯಿಟ್ಟು ಜಬರದಸ್ತಿನಲ್ಲಿ ತಿರುಗಾಡುವುದನ್ನು ನಾನು ನೋಡಿದ್ದೇನೆ. ಅವರ ದರ್ಪಕ್ಕೆ ಬೆದರದವರಿಲ್ಲ. ಆದರೆ ಒಬ್ಬ ಕಾಂಗ್ರೆಸ್‌ ಯುವಕ ನಿನ್ನ ತಂದೆಯ ಮೇಲೆ ಯಾವ ಕಾರಣಕ್ಕೋ ಸಿಟ್ಟಾದ. ನದಿಯಲ್ಲಿ ಆಧಾರವಾದ ಕಂಬಗಳಿಲ್ಲದಂತೆ ಎರಡು ತುದಿಗಳಲ್ಲಿ ಎತ್ತಿ ನಿಲ್ಲಿಸಿದ ಊರಿನ ಸೇತುವೆಯ ಎತ್ತರದ ಕಮಾನಿನ ಮೇಲೆ ಏರಿ ಅಪಾಯದ ತುದಿಯಲ್ಲಿ ಕೂತು ‘ಅಮಲ್ದಾರರು ಕ್ಷಮೆ ಕೇಳಿದರೆ ಮಾತ್ರ ತಾನು ಇಳಿಯುವುದೆಂದು’ ಸಾರಿದ್ದ. ಊರಿನ ಹಿರಿಯರೆಲ್ಲ ಸೇರಿ ಇಬ್ಬರ ಮರ್ಯಾದೆಯೂ ಉಳಿಯುವಂತೆ ಏನೋ ಉಪಾಯ ಮಾಡಿ ಅವನನ್ನು ಕೆಳಗೆ ಇಳಿಯುವಂತೆ ಮಾಡಿದ್ದರು.

‘ಮೊದಲಬಾರಿ ಶಾಲೆಗೆ ನೀನು ನಡೆದು ಹೋಗುವುದನ್ನು ನೋಡಿದ್ದೇ ನೀನು ನನ್ನ ಆರಾಧ್ಯ ದೇವಿಯಾಗಿ ಬಿಟ್ಟೆ. ಎರಡು ಜಡೆಹಾಕಿ ಮಲ್ಲಿಗೆ ಮುಡಿದಿದ್ದೆ. ಕೈತುಂಬ ಈಗಿನ ಹಾಗೆಯೇ ಬಣ್ಣ ಬಣ್ನದ ಗಾಜಿನ ಬಳೆಗಳನ್ನು ತೊಟ್ಟಿದ್ದೆ. ನಿನ್ನ ಕತ್ತಿನ ಮೇಲಿನ ಮಚ್ಚೆ ಅಂದಿನಿಂದಲೂ ನನ್ನನ್ನು ಕಾಡಿ ನಾನು ಬೆಳೆದಾದ ಮೇಲೆ ನನ್ನ ಪದ್ಯಗಳಲ್ಲೂ ಕಥೆಗಳಲ್ಲೂ ಕಾಣಿಸಿಕೊಂಡು ಏನೇನೊ ಅರ್ಥಗಳನ್ನು ಪಡೆದುಕೊಂಡವು.’

‘ಚಿಕ್ಕಮ್ಮನ ಬಗ್ಗೆ ಇನ್ನೂ ಹೇಳುವುದಿದೆ . ಆದರೆ ಈ ಕ್ಷಣದಲ್ಲಿ ನೀನು ಮತ್ತೆ ಲಂಗ ದಾವಣೆಯ ಬಾಲೆಯಾಗಿಬಿಟ್ಟಿದ್ದೀಯ. ಈ ನಿನ್ನಿಂದ ಪಾರಾದ ಮೇಲೆ ಉಳಿದ ಕಥೆ.’

‘ಚಿಕ್ಕಮ್ಮನಿಂದ ಹೇಸಿ ನಾನು ಚಾವಡಿ ಮೇಲೆ ಮಲಗಲು ಇನ್ನೊಂದು ಕಾರಣವಿತ್ತು. ಲಾಟೀನು ಹತ್ತಿಸಿಕೊಂಡು ಯಾರಿಗೂ ತೊಂದರೆಯಾಗದಂತೆ ಓದುವುದು; ನಿನ್ನನ್ನು ಧ್ಯಾನಿಸುತ್ತ ಮನೆಯೊಳಗಿನ ಹೇಸಿಗೆಯಿಂದ ಮುಕ್ತನಾಗುವುದು.’

‘ಒಂದು ರಾತ್ರೆ ಏನು ಮಾಡಿದೆ ಗೊತ್ತೆ? ಎಲ್ಲ ಮಲಗಿದ ಮೇಲೆ ಎದ್ದೆ. ಚಂದ್ರನ ಬೆಳಕಿತ್ತು. ಹಾಕಿದ ಚಡ್ಡಿ ಅಂಗಿಯಲ್ಲಿ ಬರಗಾಲಿನಲ್ಲಿ ಅಂಗಳದಾಟಿ ಹೊರಟೇಬಿಟ್ಟೆ. ನಡೆದೆ ಮೈಯಲ್ಲಿ ದೆವ್ವ ಹೊಕ್ಕವನಂತೆ ನಡೆದೆ. ಕಾಡಿನ ಒಳದಾರಿಗಳಲ್ಲಿ ಐದು ಮೈಲಿಗಳಾದರೂ ನಡೆದು ನಿನ್ನ ಬಂಗಲೆಯ ಹಿತ್ತಲನ್ನು ಹೊಕ್ಕೆ. ಮನೆಯೆದುರು ಕಾವಲುಗಾರ ನಿದ್ದೆ ಹೋಗಿದ್ದ. ಉಪ್ಪರಿಗೆ ಮೇಲೆ ನೀನಿರಬಹುದೆಂದು ಮನೆಗೆ ಮುಟ್ಟಿಕೊಂಡಂತೆ ಇದ್ದ ಮಾವಿನ ಮರವನ್ನು ಏರಿದೆ. ಮರದ ಟೊಂಗೆಯೊಂದು ಉಪ್ಪರಿಗೆಗೆ ತಾಗಿದಂತೆ ಇತ್ತು. ಬಾಲನಾದ ನಾನು ಹಗುರವಾಗಿದ್ದರಿಂದ ನನ್ನ ಭಾರವನ್ನು ಈ ಟೊಂಗೆ ಸಹಿಸಿತು. ಬಾಗಿಲಿಗೆ ಮುಟ್ಟಿಕೊಂಡಂತೆ ಇದ್ದ ಮಾವಿನ ಮರವನ್ನು ಏರಿದೆ. ಮರದ ಟೊಂಗೆಯೊಂದು ಉಪ್ಪರಿಗೆಗೆ ತಾಗಿದಂತೆ ಇತ್ತು. ಬಾಲನಾದ ನಾನು ಹಗುರವಾಗಿದ್ದರಿಂದ ನನ್ನ ಭಾರವನ್ನು ಈ ಟೊಂಗೆ ಸಹಿಸಿತು . ಬಾಗಿಲಿಗೆ ಚಿಲಕ ಹಾಕಿರಲಿಲ್ಲ. ಒಳಗೆ ಬಂದು ಚಂದ್ರನ ಮಂದ ಬೆಳಕಿನಲ್ಲಿ ನೀನೆಲ್ಲಿ ಮಲಗಿರಬಹುದೆಂದು ಹುಡುಕಿದೆ . ನಿನ್ನ ದರ್ಪದ ತಂದೆ ನೋಡಿಯಾರೆಂಬ ಭಯವೂ ನನಗೆ ಇರಲಿಲ್ಲ. ನೀನು ಎಲ್ಲೂ ಕಾಣಿಸಲಿಲ್ಲ.’

ರತಿ ಕೈ ಒತ್ತಿ ನಗುತ್ತ ಹೇಳಿದಳು: ‘ನಾನು ಬಾಗಿಲ ಸಂದಿಯಿಂದ ನಿನ್ನ ನೋಡಿದೆ. ಆದರೆ ಹೆದರಿ ಕೂಗಿಕೊಳ್ಳಲಿಲ್ಲ. ಈ ಜನ್ಮದಲ್ಲಿ ಯಾವ ಗಂಡಸಿನ ಕಣ್ಣೂ ನನ್ನನ್ನು ಹಾಗೆ ಹುಡುಕಿದ್ದಿಲ್ಲ.’

‘ನಿಜವೇ’ ಎಂದು ಚಕಿತನಾಗಿ ನಾಗಭೂಷಣ ರತಿಯನ್ನು ನೋಡಿದ. ಅವಳು ಹಾಸ್ಯದಲ್ಲಿ ಹೇಳಿದಳು.

‘ನನಗಾದ ತೊಂದರೆ ಏನು ಗೊತ್ತ? ನೀನು ಅಟ್ಟದಲ್ಲಿ ಹರವಿದ್ದ ಒಗೆದು ಮಡಿಮಾಡಿದ ಅಮ್ಮನ ಸೀರೆಯನ್ನು ನನ್ನನ್ನು ಹುಡುಕುವಾಗ ಮುಟ್ಟಿಬಿಟ್ಟೆ. ಮೈಲಿಗೆಯಾದದ್ದನ್ನು ಅಮ್ಮನಿಗೆ ಹೇಳದೇ ಇರುವಂತಿಲ್ಲ. ನಾನೇನು ಮಾಡಿದೆ ಗೊತ್ತೆ? ಚೆಂಡಾಡುವಾಗ ನಾನೇ ಸೀರೆಯನ್ನು ಮುಟ್ಟಿದೆ ಎಂದು ಹೇಳಿ ಅಮ್ಮನಿಂದ ಹೊಡೆಸಿಕೊಂಡೆ. ಅಮ್ಮ ಒದ್ದೆ ಸೀರೆಯುಟ್ಟೇ ಅವತ್ತು ಅಡುಗೆ ಮಾಡಿದ್ದು.’

ತಾನು ಹೇಗೆ ಉಪ್ಪರಿಗೆಯಿಂದ ಇಳಿದೆ ಎನ್ನುವುದನ್ನು ಹೇಳುವುದನ್ನು ಮರೆತು ನಾಗಭೂಷಣ ನಗಲು ತೊಡಗಿದ.

‘ನನಗೀಗ ಒಗ್ಗಿಹೋದ ಹೆಂಡತಿಯಿದ್ದಾಳೆ. ಅವಳನ್ನು ಕೃತಜ್ಞತೆಯಿಂದ ನೋಡುತ್ತೇನೆ. ನನಗೆ ಪ್ರೇಯಸಿಯರೂ ಇದ್ದಾರೆ.’

‘ನನಗೂ ನನ್ನನ್ನು ಬೆಳೆಸಿದ ಗಂಡನಿದ್ದಾನೆ ಆದರೆ ನಿಮ್ಮ ಪ್ರಕಾರ ನಾನು ರಾಧೆಯೂ ಅಲ್ಲವೆ? ಗಂಡನ ಮಗ್ಗುಲಲ್ಲಿ ಮಾತ್ರ ಮಲಗಬೇಕೆಂದು ರಾಧೆ ತಿಳಿದಿದ್ದಳೆ? ನನ್ನ ಟೆಲಿವಿಷನ್‌ ಕೀರ್ತಿ ಗೆಳೆಯರನ್ನೂ ತಂದಿತು. ಗಂಡನಿಂದ ಈಕೆ ಕೊಂಚ ದೂರವಾಗಿದ್ದಾಳೆ ಎನ್ನುವ ಸುಳಿವು ಸಿಕ್ಕಿದ್ದೇ ಹಲಸಿನ ಹಣ್ಣಿನ ವಾಸನೆ ಹುಡುಕಿ ಬರುವ ಕೋಣಗಳಂತೆ ಗಂಡಸರು ಹತ್ತಿರವಾಗಲು ಹೆಣಗುತ್ತಾರೆ. ನನ್ನ ಕೀರ್ತಿ ನನ್ನ ಸಂಸಾರಕ್ಕೂ ಬೇಕಾಗಿತ್ತು ಎಂದು ಬೇಕಾದರೆ ಎನ್ನಿ. ನನ್ನ ಗಂಡನೇನೂ ಏಕಪತ್ನಿವ್ರತಸ್ಥನಲ್ಲ. ನಾವು ಒಬ್ಬರಿಗೊಬ್ಬರು ಸಾಕಷ್ಟು ಸ್ಪೇಸ್‌ ಕೊಟ್ಟುಕೊಂಡು ಸ್ನೇಹದಲ್ಲಿ ಬದುಕಿದ್ದೇವೆ. ಗಂಡನ ವ್ಯವಹಾರ ಮಾತ್ರ ನನ್ನ ಅರಿವಿಗೆ ಮೀರಿದ್ದು. ಚಿಲಿ ನನ್ನ ಗಂಡನಂಥವರ ವ್ಯವಹಾರಗಳಿಂದ ನಾಶವಾಯಿತು ಎಂದು ಓದಿದ್ದೇನೆ. ಆದರೆ ಅವನು ಆಸ್ಪತ್ರೆಗಳನ್ನು ಕಟ್ಟಿಸಿದ್ದಾನೆ. ತನ್ನ ಊರಲ್ಲಿ ಕಾಲೇಜು ತೆರೆದಿದ್ದಾನೆ ಉದಾರಿ. ಅತ್ಯಂತ ಕಡಿಮೆ ನಾಶವಾಗುವಂತೆ ನಾಜೂಕಿನಲ್ಲಿ ಗಣಿಗಾರಿಕೆ ಮಾಡುವುದು ಹೇಗೆಂದು ಬರೆದು ತನ್ನ ಸಹೋದ್ಯೋಗಿಗಳ ಜೊತೆ ಗುದ್ದಾಡಿದ್ದಾನೆ. ಮಗನೂ ಇನ್ನೂ ಹೆಚ್ಚು ಗುದ್ದಾಡಿದ್ದಾನೆ. ಈಗ ಮಗನ ಹೆಸರಿನಲ್ಲಿ ಬಳ್ಳಾರಿಯಲ್ಲಿ ಗಣಿಗಾರಿಕೆಗೆ ಲೈಸೆನ್ಸ್‌ ಪಡೆಯಲು ಯತ್ನಿಸುತ್ತ ಇದ್ದಾನೆ. ತನ್ನ ಆಸೆ ಧನಸಂಪಾದನೆ ಮಾತ್ರವಲ್ಲ, ಅಗತ್ಯವಾದ ಗಣಿಗಾರಿಕೆಯನ್ನು  ಈ ಭೂಮಿಗೆ ಅಪಾಯವಾಗದಂತೆ ಮಾಡುವುದು ಹೇಗೆಂದು ತೋರಿಸುವವನು ನಾನು ಎಂದು ವಾದಿಸುತ್ತಾನೆ ನಮ್ಮ ಸಂಸಾರದ ಬಗ್ಗೆ ಇಷ್ಟು ಸಾಕು, ನಿಮ್ಮ ಕಥೆ ಹೇಳಿ.’

‘ಚಿಕ್ಕಮ್ಮ ಬಸುರಾದಳು. ಅಪ್ಪ ಅಮ್ಮ ಕಂಗಾಲಾದರು. ಚಿಕ್ಕಮ್ಮನನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗುವ ನೆವದಲ್ಲಿ ಅಪ್ಪ ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಯಾರನ್ನೋ ಹಿಡಿದು ಬಸಿರು ತೆಗೆಸಿದರು. ಮನೆಗೆ ಹಿಂದೆ ಬಂದ ಚಿಕ್ಕಮ್ಮ ಉಸಿರಾಡುವ ಶವದಂತೆ ಇದ್ದಳು. ನಿಲ್ಲದ ರಕ್ತಸ್ರಾವದಿಂದ ಬಳಲುತ್ತ ಇದ್ದವಳು ಒಂದು ದಿನ ಬಟ್ಟೆ ಒಗೆಯಲೆಂದು ನದಿಗೆ ಹೋಗಿ ಮುಳುಗಿ ಸತ್ತಳು. ಮಳೆಗಾಲ. ಅವಳ ಶವವೂ ಸಿಗಲಿಲ್ಲ. ಸಾಯುವ ತನಕ ಅಪ್ಪ ಮಂಕಾಗಿ ಜಪತಪದಲ್ಲಿ ಕಾಲಕಳೆಯುತ್ತ ತೋಟವನ್ನು ಕಳೆದುಕೊಂಡರು. ಮೈಸೂರಿಗೆ ನನ್ನ ಜೊತೆ ಬಂದಿದ್ದು, ಹೃದಯಘಾತದಿಂದ ಅವರು ಸತ್ತರೆ ಏಕಾಕಿತನದಲ್ಲಿ ಬಳಲಿ ಅಮ್ಮ ಸತ್ತಳು.’

‘ಅಮ್ಮ ಹೇಳಿದೊಂದು ಮಾತನ್ನ ನಿನಗೆ ಹೇಳಬೇಕು. ಒಂದು ದಿನ ನಾನು ಸಿಕ್ಕಿ ಬಿದ್ದೆ. ಖಾಲಿ ಪೇಪರ್ ಸಿಕ್ಕರೆ ಸಾಕು, ಅದರಲ್ಲಿ ನಾನು ರಾಮನಾಮ ಬರೆಯುವಂತೆ ನಿನ್ನ ಹೆಸರನ್ನು ಮೇಲಿಂದ ಕೆಳಗೆ ಎಡದಿಂದ ಬಲಕ್ಕೆ ಕಾಪಿ ಮಾಡುತ್ತ ಕಳೆಯುತ್ತ ಇದ್ದೆ. ಅಮ್ಮ ಇಷ್ಟೇ ಹೇಳಿದ್ದು ನನಗೆ: ಆ ಹುಡುಗಿಯನ್ನು ತೀರಾ ಹಚ್ಚಿಕೋಬೇಡ. ಅವರು ಉತ್ತರಾದಿ ಮಠದವರು; ನಾವು ಕಮ್ಮೆ ಬ್ರಾಹ್ಮಣರು. ಅವರಷ್ಟು ಮಡಿಗಿಡಿ ನಾವು ಮಾಡಲ್ಲ; ನಮ್ಮನ್ನು ಅವರು ಒಪ್ಪಲ್ಲ.

*

ಮಲೆನಾಡಿನ ಊಟವನ್ನು ರತಿಯೇ ಬಡಿಸಿದಳು. ದಿಂಡಿನ ಗೊಜ್ಜು, ತೊಂಡೆಪಲ್ಯ, ಪತ್ರೊಡೆ, ಮಿಡಿಮಾವಿನ ಉಪ್ಪಿನಕಾಯಿ, ಹಲಸಿನ ಹಪ್ಪಳ-ಹೀಗೆ. ‘ನಮ್ಮ ರೆಸಾರ್ಟಿನ ಮೆನುವಿನಲ್ಲೂ ಇವೆಲ್ಲಾ ಇರುತ್ತವೆ’ ಎಂದು ನಕ್ಕಳು. ಊಟದ ಹೊತ್ತಿಗೆ ಸವ್ಯಸಾಚಿಯೂ ಬಂದ. ಊಟಕ್ಕೆ ಮಣೆಯ ಮೇಲೆ ಕೂತ, ನಾಗಭೂಷಣನ ಜೊತೆ ನಗುತ್ತ ‘ಹೆಚ್ಚು ಹೊತ್ತು ಹೀಗೆ ಕೂತಿರಲಾರೆ’ ಎಂದ.

‘ನನಗೂ ಕಷ್ಟ’ ಎಂದು ನಾಗಭೂಷಣ ಹೇಳಿದ.

‘ಇವೆಲ್ಲ ರತಿಯ ಪ್ರೀತ್ಯರ್ಥ’ ಎಂದು ಗಂಡ ಕನ್ನಡದಲ್ಲೇ ಹೇಳಿದ್ದು ಕೇಳಿ ರತಿಗೆ ಅಚ್ಚರಿಯಾಯಿತು.

ಊಟವಾದ ನಂತರ ವೀಳ್ಯದ ಎಲೆಯ ತಟ್ಟೆಯನ್ನು ರತಿ ಎದುರಿಗಿಟ್ಟಳು. ಪಚ್ಚೆ ರೆಸಾರ್ಟಿನ ಮೆನುವಿನಲ್ಲಿ ಇದೂ ಒಂದಿರಬೇಕು; ರತಿ ಅವತಾರದ ಭಾಗೇರತಿಯ ಖಯಾಲಿ. ಯಾರಿಗೂ ಇದರ ಅಭ್ಯಾಸ ಉಳಿದಿರಲಿಲ್ಲ. ರತಿಯ ಪ್ರೀತ್ಯರ್ಥ ಸ್ವೀಕರಿಸಿದರು.

ಸಚಿನ್‌ ಹೇಳಿದ: ‘ನಿಮ್ಮನ್ನು ಇವಳು ಯಾವಾಗಲೂ ನೆನಸುತ್ತಾಳೆ. ಬಾಲ್ಯದಲ್ಲಿ ನೀವಿಬ್ಬರೂ ತುಂಬ ಪ್ರೀತಿಸಿದ್ದರಂತೆ. ಅದಕ್ಕಾಗಿಯೇ ನೀವು ಹುಟ್ಟಿದ ಮನೆಯನ್ನು ರೆನೊವೇಟ್‌ ಮಾಡಿಸಿದ್ದು. ಒಂದು ವಾರದ ನಂತರ ನಮ್ಮ ಸಿ.ಎಂ. ಅದನ್ನು ಇನಾಗುರೇಟ್‌ ಮಾಡುತ್ತಾರೆ. ನೀವು ದೇಶದ ಹೆಮ್ಮೆಯ ಲೇಖಕ ಎಂದು ಅವರು ಹೇಳಿ, ಕರೆದದ್ದೇ ಒಪ್ಪಿದರು. ರೆಸಾರ್ಟನ್ನು ಅವತ್ತೇ ಗವರ್ನರ್ ಇನಾಗುರೇಟ್‌ ಮಾಡುತ್ತಾರೆ. ಇನ್ನೂ ಒಂದು ವಿಷಯವಿದೆ. ಅದನ್ನು ನಿಮ್ಮ ಗರ್ಲ್ ಫ್ರೆಂಡೇ ನಿಮಗೇ ಹೇಳುತ್ತಾರೆ.’

ರತಿ ಪ್ರಶ್ನಾರ್ಥಕವಾಗಿ ಗಂಡನನ್ನು ನೋಡಿದಳು. ಸಚಿನ್‌ ಕಣ್ಣು ಸನ್ನೆಯಲ್ಲೇ ಒಪ್ಪಿಗೆ ಸೂಚಿಸಿ ಹೇಳಿದ: ‘ಈಗ ನಿಮ್ಮಿಬ್ಬರನ್ನೂ ಎಷ್ಟು ಬೇಕೊ ಅಷ್ಟು ಮಾತಾಡಲು ಬಿಟ್ಟು ನಾನು ದೆಹಲಿಗೆ ಹೋಗಲಿದ್ದೇನೆ. ಮುಂದಿನ ವಾರ ಇನಾಗುರೇಷನ್‌. ಆ ತನಕ ನೀವಿಲ್ಲಿರಬೇಕೆಂದು ನನ್ನ ಅಪೇಕ್ಷೆ. ನನ್ನ ಮಗನ ಅಪೇಕ್ಷೆ, ರತಿಯ ಅಪೇಕ್ಷೆಯೇನೆಂದು ನಾನು ಹೇಳುವುದೇ ಬೇಕಿಲ್ಲ.’

‘ನಮ್ಮಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳೂ ಇವೆ. ಅವಳೂ, ಕೆನಡಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ನನ್ನ ಮಗನೂ ಗಣಿಗಾರಿಕೆಯನ್ನು ರೇಪ್‌ ಆಫ್‌ ದಿ ಅರ್ಥ್‌ ಎಂದು ಹೀಯಾಳಿಸುತ್ತ ಇದ್ದರು. ನನ್ನ ಮಗ ಕ್ರಮೇಣ ದಾರಿಗೆ ಬಂದ. ನಾನು ವಾದಿಸೋದು ಇಷ್ಟೇ: ಸಿವಿಲ್‌ ಸೊಸೈಟಿ ಹೇಳ ಓದನ್ನು ನಿರ್ದಾಕ್ಷಿಣ್ಯವಾಗಿ ಹೇಳಲೇಬೇಕು. ಆದ್ದರಿಂದಲೇ, ಎಲ್ಲರಂತೆ ತಪ್ಪು ಮಾಡುತ್ತ ಇದ್ದ ನಾನು ಕಲಿಯುವುದು ಸಾಧ್ಯವಾಯಿತು. ಥ್ಯಾಂಕ್ಸ್‌ ಟು ಶಶಿ ಅಂಡ್‌ ರತಿ-ಭಾಗೇರತಿ-ಇಫ್‌ ಯು ಲೈಕ್‌ ಟು ಕಾಲ್‌ ಹರ್ ಸೊ, ನಾನು ಕಲಿತಿದ್ದೇನೆ. ಆದರೆ ಗಣಿಗಾರಿಕೆ ಮಾಡದೆ ಬೇರೆ ಮಾರ್ಗವಿಲ್ಲ. ವಿ ನೀಡ್‌ ಓರ್ ದೇಶ ಬೆಳೆಯಬೇಕಾದರೆ ಎನ್ನುತ್ತೇನೆ. ಈ ದೇಶ ಸಾವಿರಾರು ವರ್ಷ ಮಾನ್ಸೂನ್‌ಗಾಗಿ ಆಕಾಶ ನೋಡಿಯೇ ಹೇಗೋ ಬದುಕುತ್ತಾ ಬಂತು. ಈಗ ನಾವು ಕೆಳಗೆ ನೋಡಬೇಕು. ಭೂಮಿಯ ಒಳಗೇನಿದೆ ಅಂತ ನೋಡಬೇಕು. ಇದು ನನ್ನ ವಾದ. ಗವರ್ನರ್ ಮತ್ತು ಸಿಎಂ ನಾನು ಹೇಳುವುದನ್ನು ಒಪ್ಪಿದರು. ಎಲ್ಲರಿಗೂ ಮಾದರಿಯಾಗುವಂತೆ ಕ್ಲೀನ್‌ ಮೈನಿಂಗ್‌ ಮಾಡುವುದು ಹೇಗೆಂದು ನಾನು ತೋರಿಸುತ್ತೇನೆ. ಇದೊಂದು ಛಾಲೆಂಜ್‌ ನನಗೆ.’ ಕೈಕುಲುಕಿ ರತಿಗೆ ಮುತ್ತಿಟ್ಟು ಸಚಿನ್‌ ಹೊರಟುಹೋದ.

‘ಸ್ವಲ್ಪ ರೆಸ್ಟ್‌ ಮಾಡಿ’ ಎಂದು ರತಿ ನಾಗಭೂಷಣನನ್ನು ಅವನ ರೂಮಿಗೆ ಕೊಂಡೊಯ್ದಳು.

ನಾಗಭೂಷಣನಿಗೆ ರೆಸ್ಟ್‌ ಮಾಡುವುದು ಸಾಧ್ಯವಾಗಲಿಲ್ಲ. ಎದ್ದು ಬಂದು ‘ಭಾಗೇರತಿ’ ಎಂದು ಕರೆದ. ಅವಳು ತನಗೆ ಸುಖಕರವಾದ ಜೀನ್ಸನ್ನೂ ಶರ್ಟನ್ನೂ ತೊಟ್ಟು ಬಂದಳು. ಕರೆದದ್ದರಿಂದ ಅವಳು ಖುಷಿಯಾದಂತೆ ಕಂಡಿತು. ‘ಏನಪ್ಪಣೆ?’ ಎಂದು ಕೈಕಟ್ಟಿ ನಿಂತು ತಮಾಷೆ ಮಾಡಿದಳು. ‘ನಮ್ಮನೆಗೆ ಮತ್ತೆ ಹೋಗೋಣವೆ?’ ಎಂದ.

‘ಇಲ್ಲೊಂದು ಕರೆಯಿತ್ತು. ಮತ್ತೆ ಅದು ಆಗಿನ ಕೆರೆಯಾಗಿದೆಯೇ ನೀವೇ ನೋಡಿ ಹೇಳಬೇಕು. ನಿಮ್ಮ ಬರವಣಿಗೆಯಲ್ಲಿ ಅದು ಇದೆಯೆಂದೇ ನನಗದು ರಿಸರ್ಚ್‌ನಲ್ಲಿ ಹೊಳೆದದ್ದು. ಈಗ ಅದನ್ನು ಬಳಸಿಕೊಂಡೇ ಮನೆಗೆ ಹೋಗೋಣ. ನಿಮ್ಮ ಬಾಲ್ಯದ ಕಾಲದಲ್ಲಿ ಅದರ ಸುತ್ತ ಇದ್ದ ಮರಗಳನ್ನು ಕಡಿದು, ಬಿರ್ಲಾ ತಯಾರಿಸುವ ಬಟ್ಟೆಗೆ ಬೇಕಾದ ಮರಗಳನ್ನು ಸರ್ಕಾರವೇ ಒದಗಿಸಿತು. ಹಚ್ಚ ಹಸಿರಿನ ಬೇಗ ಬೆಳೆಯುವ ಮರಗಳು ನೋಡಲು ಸುಂದರ ಆದರೆ ಒಂದು ಹಕ್ಕಿಯೂ ಅದರ ಮೇಲೆ ಬಂದು ಕೂರುವುದಿಲ್ಲ. ಮರಗಳು ಮಳೆಯನ್ನು ಕರೆಯದೇ ಕೆರೆಯ ನೀರು ಬತ್ತಿತು. ನನ್ನ ಮಗ ಗಲಾಟೆ ಮಾಡಿ ಅದನ್ನು ಕಡಿದು ಮಲೆನಾಡಿನ ಸಹಜ ಮರಗಳನ್ನು ನೆಡಿಸಿದ. ಈಗ ಕೆರೆಯ ತುಂಬ ನೀರಿದೆ. ಎಕೋ ಟೂರಿಸಂನಿಂದ ಏನು ಪ್ರಯೋಜನವೆಂಬುದಕ್ಕೆ ಅವನ ಉದಾಹರಣೆ ಇದು. ಐದು ವರ್ಷಗಳ ಹೋರಾಟದ ಫಲ ಇದು. ನೀವೆಲ್ಲೋ ದೂರವಾಗಿ ನಿಮ್ಮ ಬರವಣಿಗೆಯಲ್ಲಿ ಮುಳುಗಿಬಿಟ್ಟು ಇವೆಲ್ಲ ನಿಮಗೆ ಗೊತ್ತೇ ಇಲ್ಲ. ನಾನೇನೂ ನಿಮ್ಮನ್ನು ಬ್ಲೇಮ್‌ ಮಾಡ್ತ ಇಲ್ಲ. ಆ ದಾರೀಲೇ ನಿಮ್ಮ ರೆನೋವೇಟೆಡ್‌ ಮನೆಗೆ ಹೋಗೋಣ. ರಾತ್ರೆ ಅದರ ದಂಡೆ ಮೇಲೆ ಕೂತು ಮಾತಾಡೋಣ. ಇವತ್ತು ಹುಣ್ಣಿಮೆ.;

ಕಾಲ್ದಾರಿ ಸೊಗಸಾಗಿತ್ತು. ಅವನ ಬಾಲ್ಯ ಕಾಲದ ಹಲಸಿನ ಮರಗಳೂ ಇದ್ದವು. ಕೃಷ್ಣರಾಜ ಒಡೆಯರ್ ಅವುಗಳ ತೊಳೆಯ ಮಾಟ ಮತ್ತು ರುಚಿಗೆ ಮರುಳಾಗಿ ಒಂದು ಬೆಳ್ಳಿಯ ಪದಕವನ್ನು ತನ್ನ ಅಪ್ಪನಿಗೆ ಕೊಟ್ಟಿದ್ದರಂತೆ.

ಇದನ್ನು ಕೇಳಿಸಿಕೊಂಡ ರತಿ ಖುಷಿಯಾಗಿ ಹೇಳಿದಳು. ‘ಅಷ್ಟಾದರೂ ನಿಮಗೆ ನೆನಪಿದೆಯಲ್ಲ! ನಾಗಂದಿಯಲ್ಲಿ ಧೂಳು ಹಿಡಿದಿದ್ದ ಅದನ್ನು ಹುಡುಕಿ ತೆಗೆದು ಇಟ್ಟಿದ್ದೇನೆ. ನಿಮ್ಮ ತಂದೆಗೂ ನೀವು ಮಾಡಲು ಮರೆತ ಶ್ರಾದ್ಧವನ್ನು ಈ ರತಿಯೇ ಮಾಡಿದ್ದಾಳೆ. ರೆಸಾರ್ಟ್‌ಗೆ ಬಂದ ಗಿರಾಕಿಗಳಿಗೆ ಇದೂ ಒಂದು ಆಕರ್ಷಣೆ ಎಂದು ನನ್ನ ಇಂಪಾಸಿಬಲ್‌ ಗಂಡ ಮೆಚ್ಚಿಕೊಂಡ.’

ತನ್ನ ಮನೆಯ ದೇವರ ಮುಂದೆ ನಿಂತು ನಾಗಭೂಷಣ ರತಿಗೆ ಹೇಳಿದ: ‘ನನ್ನ ಅಪ್ಪನ ಬಗ್ಗೆ ನನಗೆ ಯಾವ ದ್ವೇಷವೂ ಉಳಿದಿಲ್ಲ ಭಾಗೇರತಿ. ಚಿಕ್ಕಮ್ಮನಿಗೆ ಅವರು ಸುಖ ಕೊಟ್ಟರು, ಸುಖ ಪಡೆದರು. ಮತ್ತೆ ನರಳಿದರು. ನನ್ನ ಅಮ್ಮನೂ ನರಳಿದರು. ಅವರು ಸಾಯುವ ಮುಂಚೆ ನಾನು ಮದುವೆಯಾದೆ. ಆದರೆ ಕಮ್ಮಿ ಜಾತಿಯವಳನ್ನು ಮದುವೆಯಾಗಿಲ್ಲವೆಂಬ ದುಃಖವನ್ನು ಅಮ್ಮ ಮಾತಾಡದೆ ಸಹಿಸಿದರು. ಆದರೆ ನನ್ನ ಪ್ರೀತಿಯ ಮಚ್ಚೆಯೂ ಮಾರಾಟದ ಆಕರ್ಷಣೆಯಾಯಿತು ಎನ್ನುವುದೇಕೋ ನನ್ನ ಬಾಧಿಸುತ್ತ ಇದೆ.’

ರತಿ ನಕ್ಕಳು. ‘ಅಬ್ಬಾ ಪೊಸೆಸಿವ್‌ ಗಂಡ! ನನ್ನ ಪರಮ ಪ್ರಾಕ್ಟಿಕಲ್‌ ಗಂಡನೇ ವಾಸಿ. ನನ್ನನ್ನು ನಿನಗೆ ವಹಿಸಿ ಅವನು ಎಷ್ಟು ನಿರಾಳವಾಗಿ ಹೋಗಿಬಿಟ್ಟ ನೋಡಿ.’

ನಾಗಭೂಷಣ ಸಜ್ಜನಿಕೆಯ ನಗೆ ನಕ್ಕ.

‘ನೀವು ಬಾಲ್ಯದಲ್ಲಿ ಏನೇನೊ ನನಗೆ ಈಗಲೂ ಅರ್ಥವಾಗದ ಕಾಗದಗಳನ್ನು ಬರೆದು ನಮ್ಮ ಮನೆಯ ಪಾಗಾರದ ಒಂದು ಸಂದಿಯಲ್ಲಿ ತೂರಿಸಿಡುತ್ತಿದ್ದಿರಿ. ಅದಕ್ಕಾಗಿ ನಾನು ಜಾತಕ ಪಕ್ಷಿಯಂತೆ ಕಾದಿರುತ್ತ ಇದ್ದೆ. ಆಗಲೂ ನಿಮ್ಮದು ಸಾಂಕೇತಿಕ ಭಾಷೆಯೇ, ಈಗಿನಂತೆಯೇ. ಅವನ್ನೆಲ್ಲ ಲ್ಯಾಮಿನೇಟ್‌ ಮಾಡಿಸಿ ಜೋಪಾನಮಾಡಿ ಇಟ್ಟಿದ್ದೀನಿ. ರಾತ್ರೆ ಊಟವಾದ ಮೇಲೆ ತೋರುಸ್ತೇನೆ. ಆಯಿತಾ?’

ಕೆರೆಯ ದಂಡೆಯ ಮೇಲೆ ನಿಂತು ತಾವರೆ ಅರಳಿದ ನೀರನ್ನು ನೋಡುತ್ತ ಹೇಳಿದ: ‘ನಾನೇನೂ ಮರೆತಿಲ್ಲ ಭಾಗೇರತಿ. ಮರೆಯಾಗಿರತ್ತೆ. ಕ್ರಿಯೇಟಿವ್‌ ಆದಾಗ ಮುಂದೆ ಬರುತ್ತೆ: ದಿವ್ಯವಾಗಿ ಹೊಳೆಯುತ್ತೆ.’

‘ನಂದು ಹಂಸಪಾದ; ಆರ್ಮಿಗೆ ನನ್ನ ಸೇರಿಸ್ತಾನೇ ಇರಲಿಲ್ಲ. ಪೆದ್ದು ಪೆದ್ದಾಗಿ ನಾನು ನಡೆಯೋದರಲ್ಲೆ ನಿನಗೆ ತಿಳಿದಿರಬೇಕು. ಇರಲಿ. ಆದರೆ ನಮ್ಮ ಕಡೆ ಹಂಸಪಾದ ಬಲು ಲಕ್ಷಣದ್ದು; ಶಂಖ ಚಕ್ರದ ಚಿಹ್ನೆ ಇದ್ದರಂತೂ ಅದಕ್ಕೆ ಎಣೆಯೇ ಇಲ್ಲ. ಈ ಕೆರೆ ಬೇಸಗೆಯಲ್ಲಿ ಬತ್ತಿದಾಗ ಹಳ್ಳಿಯ ಹಿರಿಯರು ನನಗೊಂದು ರೇಷ್ಮೆ ಪೇಟ ತೊಡಸಿ ಇದರ ಕೆಸರಲ್ಲಿ ನಡೆಸೋರು. ಬೇಗ ಮಳೆಯಾಗಿ ಕೆರೆ ತುಂಬಲಿ ಎಂದು. ಅಥವಾ ಯಾರಾಗಲೀ ಹೊಸ ಗದ್ದೆ ಕೊಂಡಾಗ ನನ್ನ ಅಪ್ಪನಿಗೆ ತೆಂಗಿನಕಾಯಿ ತರಕಾರಿಗಳನ್ನು ಬುಟ್ಟಿಯಲ್ಲಿ ತಂದು ಅರ್ಪಿಸಿ ಅಥವಾ ಹೊಸ ಪಂಚೆ ತಂದು ನಮಸ್ಕಾರ ಮಾಡಿ ಗದ್ದೆಗೆ ನನ್ನ ಪಾದದ ಸೇವೆ ಮಾಡಿಸೋರು. ಬೆತ್ತಲೆ ಪಾದದ ಸೇವೆ. ಈಗ ನನ್ನ ಪಾದ ಶೂ ಇಲ್ಲದೆ ನಡೆಯಲಾರದು ಅಷ್ಟು ಸೂಕ್ಷ್ಮವಾಗಿಬಿಟ್ಟಿದೆ. ನೆನಪಾಗುವ ಇನ್ನೊಂದು ಸಂಗತಿ ಹೇಳ್ತೇನೆ. ನನ್ನ ಅಮ್ಮನಿಗೆ ಅದೇನೋ ಮೊಲೆ ಸುಳಿ ಎನ್ನುವ ಖಾಯಿಲೆಯಾಯಿತು. ಮೊಲೆಯ ಮೇಲೆ ಬಾವು. ಅವರಿಉ ಸ್ನಾನಮಾಡಿ ತುಲಸಿಗೆ ದೀಪ ಹಚ್ಚಿ ಕುಪ್ಪಸ ಕಳೆದು ಮೊಲೆಯನ್ನು ತೋರುತ್ತ ಮನೆಯ ಹೊಸ್ತಿಲ ಮೇಲೆ ಕುಳಿತರು. ಮಂತ್ರ ಹೇಳುತ್ತ ನಿಂತ ನನ್ನ ಅಪ್ಪ, ನನ್ನ ಚಿಕ್ಕಮ್ಮ-ಇವರ ಎದುರೇ ನನ್ನ ಎಡ ಪಾದದಿಂದಲೂ ಬಲ ಪಾದದಿಂದಲೂ ಕಾಲೆತ್ತಿ ನಾನು ಕುಡಿದು ಬೆಳೆದ ಮೊಲೆಗಳನ್ನು ಮೆತ್ತಗೆ ತುಳಿದಿದ್ದೆ. ಅಮ್ಮ ಹುಷಾರಾದರು.’

ರತಿ ಅವನ ಭುಜದ ಮೇಲೆ ಕೈಯಿಟ್ಟು ಮೆಲು ದನಿಯಲ್ಲಿ ನಸುನಗುತ್ತ ಹೇಳಿದಳು: ‘ಇಷ್ಟು ಹೊತ್ತೂ ಏನೇನೊ ಬಡಬಡಿಸುತ್ತ ಇದ್ದವಳು ಒಂದು ವಿಷಯ ಹೇಳಲು ಅಂಜಿದ್ದೆ. ನಿನ್ನ ಕನಸಿನ ಸುಂದರಿಯಾಗಿಯೇ ಉಳಿಯಲು ಆಸೆಪಟ್ಟಿದ್ದೇ ಈ ಹೆಣ್ಣಿನ ಸಹಜ ಅಂಜಿಕೆಗೆ ಕಾರಣ. ನನಗೂ ಮೊಲೆ ಕ್ಯಾನ್ಸರ್ ಆಗಿ ಮೊದಲ ಹಂತದಲ್ಲೇ ಸರ್ಜರಿ, ಪ್ಲಾಸ್ಟಿಕ್‌ ಸರ್ಜರಿ ಎಲ್ಲ ಮಾಡಿಸಿಕೊಂಡೆ. ನಾನೀಗ ಅರ್ಧ ಸ್ತನಿ ಹೆಣ್ಣು. ನಿನ್ನ ಪಾದದ ಸೇವೆಯಿಂದ ನಾನೂ ಬಚಾವಾಗುತ್ತಾ ಇದ್ದೆನೇನೊ?’

ಕೊನೆಯ ಮಾತನ್ನು ಅದೆಷ್ಟು ಸ್ನೇಹದ ಆತ್ಮ ಮರುಕವಿಲ್ಲದ ದನಿಯಲ್ಲಿ ನಿಜವೋ ಎಂಬಂತೆ ಹೇಳಿದಳೆಂದರೆ ನಾಗಭೂಷಣನಲ್ಲಿ ಪ್ರೇಮ ಉಕ್ಕಿತು. ಕಣ್ಣು ಒದ್ದೆಯಾಯಿತು. ಅವಳು ಲಂಗ ದಾವಣಿಯ ದೇವಿಯಾಗಿಯೇ ಕಂಡಳು. ಅವಳನ್ನು ನಿಂತಲ್ಲೇ ಬರಸಳೆದು ಅಪ್ಪಿ ಅವಳ ಎಡಕತ್ತಿನ ಮೇಲಿನ ಮಚ್ಚೆಯನ್ನು ಚುಂಬಿಸಿದ.

ರತಿಯ ನಗುವ ಕಣ್ಣುಗಳೂ ಒದ್ದೆಯಾದವು. ಅವರು ಮತ್ತೇನೂ ಮಾತಾಡದೆ ಚೌಕಟ್ಟಿನ ಅವಳ ಮನೆಗೆ ಹಿಂದಿರುಗಿದರು. ರೆಸಾರ್ಟಿನ ಅತಿಥಿಗಳಿಗೆಂದು ಕಟ್ಟಿಸಿದ ಆಧುನಿಕ ಪುಟ್ಟ ಮನೆಗಳನ್ನು ತೋರಿಸಬೇಕೆಂಬ ರತಿಯ ಆಸೆ ಮಾಯವಾಗಿತ್ತು.

*

ರತಿ ನಾಗಭೂಷಣನನ್ನು ತನ್ನ ಖಾಸಗಿ ಕೋಣೆಗೆ ಕರೆದೊಯ್ದಳು. ಮಂಚವಿಲ್ಲ; ಚಾಪೆಯ ಮೇಲೊಂದು ಹಾಸಿಗೆ. ಗೋಡೆಯ ಮೇಲೆ ಅವಳ ಅಪ್ಪನ ಚಿತ್ರ. ಪಿತ್‌ ಹ್ಯಾಟ್‌ ಧರಿಸಿ, ಟೈ ಕಟ್ಟಿ, ಉಲನ್‌ ಕೋಟಿನ ಕೆಳಗೆ ಕಚ್ಚೆಹಾಕಿ ಉಟ್ಟ ಜರಿ ಪಂಚೆ. ಸ್ಪಷ್ಟವಾಗಿ ಕಾಣುವಂತೆ ಇಟ್ಟ ಅಂಗಾರ ಅಕ್ಷತೆ. ಎರಡು ಕಣ್ಣುಗಳ ಪಕ್ಕದಲ್ಲೂ ಒತ್ತಿದ ಮುದ್ರೆ. ಅವರ ಪಕ್ಕದಲ್ಲೇ ಕಚ್ಚೆಹಾಕಿ ಸೀರೆಯುಟ್ಟ ಉದ್ದ ಕುಂಕುಮದ ಅಮ್ಮ. ಮೂಲೆಯಲ್ಲೊಂದು ಅವಳ ಸಂಗೀತದ ಅಭ್ಯಾಸವನ್ನು ಸೂಚಿಸುವ ತಂಬೂರಿ. ಒಂದು ಹಳೆಯ ಕಾಲದ ಬೀಟೆಯ ಮೇಜು, ಕುರ್ಚಿ.

ಕನ್ನಡದಲ್ಲಿ ಹೇಳಿದರೆ ಕೃತಕವಾದೀತೆಂದು ನಾಗಭೂಷಣ ತನ್ನ ಮಾತನ್ನು ತಾನೇ ನುಂಗುವಂತೆ ಇಂಗ್ಲಿಷಿನಲ್ಲಿ ಹೇಳಿದ: `There is still something pure and divine in our love. Nothing can destroy it.’

ರತಿ ಈ ಮಾತಿನಿಂದ ಉಕ್ಕಿದ ಕಣ್ಣೀರನ್ನು ತೋರಬಾರದೆಂದು ಹಾಸ್ಯದಲ್ಲಿ ಹೇಳಿದಳು, ಕನ್ನಡದಲ್ಲೆ:

‘ನಿಜ. ಹಾದರ ಮಾಡಿದ್ದರೂ ನಾನು ರಾಧೆ: ಮಚ್ಚೆಯನ್ನು ಬ್ರಾಂಡ್‌ ಅಂಬಾಸಡರ್ ಆಗಿ ಮಾರಿಕೊಂಡರೂ ಅದು ನಿಮ್ಮ ತುಟಿಗೇ ಕಾದಿತ್ತು. ಉಂಡು ಉಪವಾಸಿ, ಮಲಗಿಯೂ ಬ್ರಹ್ಮಚಾರಿ ಅನ್ನುತ್ತಾರಲ್ಲ ಹಾಗೆ’.

ಮಾತಾಡಿ ಮುಗಿದದ್ದೇ ತಾನು ಹಾಗೆ ಆಡಿ ತೋರಬಾರದಿತ್ತು ಅಂದುಕೊಂಡಳು. ‘ಅಮ್ಮನನ್ನು ನೋಡುತ್ತೀರ?’ ಒತ್ತಾಯಿಸದಂತೆ ಕೇಳಿ ಇನ್ನೊಂದು ಕೋಣೆಗೆ ಕರೆದುಕೊಂಡು ಹೋದಳು. ಹೋಗುವಾಗ ಹಾಸ್ಯಮಾಡಿದಳು. ‘ಅವರ ಮಡಿ ಸೀರೆಯನ್ನು ಮತ್ತೆ ಮುಟ್ಟಿಬಿಟ್ಟೀರಿ ಜೋಕೆ.’ ನಾಗಭೂಷಣ ಹಗುರಾಗಿ ನಕ್ಕ.

ಅಮ್ಮನನ್ನು ಏನು ನೋಡುವುದು? ದಿಂಬಿಗೊರಗಿ ಶೂನ್ಯವನ್ನು ದಿಟ್ಟಿಸುತ್ತ ಇರುವಂತೆ ಕೂತಿದ್ದರು. ದೂರದಿಂದಲೇ ಕೈಮುಗಿದು ನಿಂತ. ರತಿ ಅಮ್ಮನ ಮುಖವನ್ನು ಒದ್ದೆ ಬಟ್ಟೆಯಲ್ಲಿ ಒರೆಸಿ, ಮತ್ತೆ ಒಣಗಿದ ಬಟ್ಟೆಯಲ್ಲಿ ಒರೆಸಿ, ಪೌಡರ್ ಬಳಿದು ಸ್ವಚ್ಛ ಮಾಡಿದಳು. ನಿಷ್ಕಾಮ ಕರ್ಮವೆಂದರೆ ಇದೇ. ಅನಾಸಕ್ತಿ ಎಂದರೂ ಇದೇ ಅನ್ನಿಸಿತು. ಅಮ್ಮನಿಗೇನೂ ಗೊತ್ತೇ ಆಗಿರಲಿಲ್ಲ. ದೇಹಕ್ಕೆ ಹಿತವಾಗಿರಬಹುದೇನೊ? ಅದನ್ನು ರತಿ ನಿರೀಕ್ಷಿಸಿದಂತೆ ಕಾಣಲಿಲ್ಲ.

‘ಹೋಗೋಣ.’

ತನ್ನ ರೂಮಿಗೆ ಕೈಹಿಡಿದು ಕರೆದುಕೊಂಡು ಹೋಗಿ ತನ್ನ ಹಾಸಿಗೆಯಲ್ಲಿ ಕಾಲು ಚಾಚಿ ಕೂತು, ನೆಮ್ಮದಿಯಲ್ಲಿ ಅವನನ್ನೂ ಪಕ್ಕದಲ್ಲಿ ದಿಂಬಿಗೊರಗಿಸಿ ಕೂರಿಸಿಕೊಂಡು ಹೇಳಿದಳು:

‘ಹೇಳಲು ಕಷ್ಟವಾದ ಒಂದು ಸಂಗತಿಯಿದೆ; ಇಷ್ಟವಾದ್ದು ಇನ್ನೊಂದು ಇದೆ. ಮೊದಲು ಇಷ್ಟವಾದ್ದನ್ನು ಮಾಡುತ್ತೀನಿ. ಓಕೆ?’

ಎದ್ದುಹೋಗಿ ಬೀರಿನಿಂದ ಒಂದು ಲಕೋಟೆ ತಂದಳು.

‘ನೋಡಿ. ಎಷ್ಟೋ ವರ್ಷಗಳ ಹಿಂದೆ ಮಲ್ಲಿಗೆ ಮುಡಿದ ಲಂಗ ದಾವಣಿಯ ಬಾಲೆಗೆ ನೀವು ಬರೆದ ಪತ್ರಗಳು ಇವು. ಹಕ್ಕಿ ಮರಿ ಮಾಡಲು ಸಂದಿಯಲ್ಲಿ ಮೊಟ್ಟೆಯಿಡುವಂತೆ ಪಾಗಾರದ ಒಂದು ಸಂದಿಯಲ್ಲಿ ನೀವಿದನ್ನು ಇಡುತ್ತ ಇದ್ದಿರಿ, ನನ್ನ ಉತ್ತರಕ್ಕೆ ಕಾಯದೆ. ಈ ರೆಸಾರ್ಟ್‌ನಲ್ಲಿ ಈಗ ನಿಮಗೆ ಉತ್ತರ ನನ್ನಿಂದ ಸಿಗುತ್ತ ಇದೆ. ಇದೊಂದು ಐರನಿ ಅಲ್ಲವೆ?’

ಸುಮಾರು ಮುವ್ವತ್ತೊ ಮೂವತ್ತೈದೊ ವರ್ಷಗಳ ಹಿಂದಿನ ಕಾಗದಗಳನ್ನು ನಾಗಭೂಷಣ ಓದಿದ. ಮಸಿಯಲ್ಲಿ ನಿಬ್ಬನ್ನು ಅದ್ದಿದ ಲೇಖನಿಯಲ್ಲಿ ಬರೆದವು ಅವು:

ಅಪ್ಪ ಅಮರಕೋಶವನ್ನು ಬಾಯಿಪಾಠ ಮಾಡಿಸುತ್ತ ಇದ್ದರು. ಗಂಧರ್ವರ ಹೆಸರು ಒಂದರಲ್ಲಿ: ಹಾ ಹೂ ಹೂ ಶ್ಚೈವ ಮಾದ್ಯಾಃ ಗಂಧರ್ವಾಃ|

ತಾವಿಬ್ಬರೂ ಈ ಲೋಕಕ್ಕೆ ಸೇರಿದ ಗಂಧರ್ವರು ಎಂದಿರಬೇಕು. ಇನ್ನೊಂದು ವೇದದ ಮಂತ್ರವಿರಬೇಕು. ಈಚೆಗೆ ಮತ್ತೆ ಅದನ್ನು ಒಂದು ಗ್ರಂಥದಲ್ಲಿ ವಿವರಣೆ ಸಹಿತ ಓದಿದ ನೆನಪು; ಪ್ರಕೃತಿ-ಪುರುಷರ ಸಂಬಂಧದ ಬಗ್ಗೆ.

‘ಹಾsss ಉ ಹಾsss ಉ’

ವೇದಗಳನ್ನು ಪಠಿಸಬೇಕಾದ ಏರಿಳಿತದಲ್ಲಿ ಅದನ್ನು ಓದಿಕೊಂಡ. ವೇದವೋ, ಅಪ್ಪ ಚಿಕ್ಕಮ್ಮರ ಸಂಭೋಗದ ಸುಕದ ವೇದನೆಯೋ? ಯಾವ ಪ್ರೇರಣೆಯಿಂದ ಬರೆದೆ ನನ್ನ ಮುದ್ದಿನ ಬಾಲೆಗೆ, ನನ್ನ ಆ ವಯಸ್ಸಿನಲ್ಲಿ?

ಇನ್ನೊಂದು ಮಾತನ್ನಂತೂ ತನ್ನ ಹೆಗಲ ಮೇಲೆ ಮಚ್ಚೆಯ ಕತ್ತನ್ನು ಇಟ್ಟು ತನ್ನನ್ನು ಮೂಸುವಂತೆ ಉಸಿರಾಡುತ್ತಿದ್ದ ಅಚ್ಚರಿಯ ಗೆಲುವಿನ ಕಣ್ಣುಗಳ ರತಿಗೆ ತೋರಿಸುವಂತೆ ಓದಿಕೊಳ್ಳುವುದಕ್ಕೂ ನಾಚಿಕೆಯಾಯಿತು. ತಾನು ಎಂದಾದರೂ, ಬಾಲ್ಯದಲ್ಲಾದರೂ ದೈವಿಕವೆಂಬಂತೆ ಮುಗ್ಧನಾಗಿ ಇದ್ದುದು ಉಂಟೆ?

‘ತ ತಾ ತಿ ತೀ ತು?’ ಎಂದು ಮೂರು ಚುಕ್ಕಿ ಹಾಕಿ ಮುಂದೊಂದು ಇನ್ಟು ಹಾಕಿ ‘?’ ಈ ಚಿಹ್ನೆಯಿಂದ ಮುಗಿದಿತ್ತು.

`No. I was never pure and innocent.’

‘ಯಾಕೆ?’ ಎಂದು ರತಿ ನಕ್ಕಳು, ಕೆನ್ನೆ ಹಿಂಡಿದಳು.

‘ಇದನ್ನು ಓದಿದಾಗೆಲ್ಲ ಉಪ್ಪರಿಗೆ ಕತ್ತಲಲ್ಲಿ ನಿನ್ನ ಕಾತರದ ಆತುರದ ಮುಖ ನೆನಪಾಗಿ ಮೈ ನವಿರೇಳುತ್ತ ಇತ್ತು. ದೊಡ್ಡವಳಾಗಿ ಬ್ರಾಂಡ್‌ ಅಂಬಾಸಡರ್ ಆಗಿ ಪರ ಪುರುಷರ ಜೊತೆಕ ಮೆರೆಯುವಾಗಲೂ ಇದು ನೆನಪಾಗುತ್ತ ಇತ್ತು. ತ ತಾ ತಿ ತೀ ತು ಎಂದು ಅವನ ಮುಖವನ್ನು ಎತ್ತಿ ತನ್ನ ಮಚ್ಚೆಯ ಮೇಲೆ ಮುದ್ದಿಸಿಕೊಂಡು, ‘ಅದರ ಮುಂದೆ?’ ಎಂದು ತೇಲುಗಣ್ಣಾದಳು. ‘ನೀವು ಎಷ್ಟು ಗ್ರೇಟೋ ಅಷ್ಟೇ ಮದಿಸಿದ ಗೂಳಿ ಎಂದು ನಾನು ತಿಳಿದಿರೋದು. ಮೈ ಡಿಯರ್ ಬುದ್ಧಿಜೀವಿ ಕವಿವರ್ಯರೇ, ಸಾಮಾಜಿಕ ನ್ಯಾಯದ ಹೋರಾಟಗಾರರೇ’ ಎಮದು ದಿವ್ಯವೆನ್ನಿಸುವಂತೆ ಮುಗುಳ್ನಕ್ಕಳು. ಸಾವರಿಸಿಕೊಂಡು ಅವನಿಂದ ಜರುಗಿ ಕೂತು ಹೇಳಿದಳು:

‘ಇನ್ನೊಂದು ವಿಷಯ ಹೇಳಿ ಬಿಡುವೆ. ನಿಮಗೆ ಅನ್ನಿಸಿದ್ದನ್ನು ನಿಷ್ಠುರವಾಗಿ ಹೇಳಿಬಿಡಿ. ನನ್ನ ಗಂಡ ಜಂಟಲ್‌ಮನ್‌ ಖದೀಮ. ಅವನ ಜೊತೆ ನಾನೀಗ ಮಲಗಲ್ಲ. ಆದರೆ ನನಗೆ ಬೇಕಾದ್ದನ್ನೆಲ್ಲ ಅವನಾಗಿಯೇ ಊಹಿಸಿ ಮಾಡುತ್ತಾನೆ. ಈ ರೆಸಾರ್ಟ್ ಮಾಡಿದ ಹಾಗೆ, ನಮ್ಮಿಬ್ಬರಿಗಾಗಿ. ಅವನಿಗೀಗ ಬಳ್ಳಾರಿಯಲ್ಲಿ ಮೈನಿಂಗ್‌ ಲೈಸೆನ್ಸ್‌ ಸಿಗುತ್ತದೆ. ಕೊಡುವಷ್ಟು ಲೊಂಚ ಕೊಟ್ಟಿದ್ದಾನೆ. ಆದರೆ ಈ ಪ್ರಾಂತ್ಯದಲ್ಲಿ ಅವನಿಗೆ ಒಳ್ಳೆಯ ಹೆಸರೂ ಬೇಕು; ನನಗೂ ಇಷ್ಟವಾಗಬೇಕು. ಆದ್ದರಿಂದ ಒಂದು ಕಲಾವಿದರ ಎಕ್ಸ್ ಚೇಂಜ್‌ ಪ್ರೋಗ್ರಾಮನ್ನು ರಿಜಿಸ್ಟರ್ ಮಾಡಿದ್ದಾನೆ. ಮೊದಲನೆಯದಾಗಿ ನಿನ್ನನ್ನು ಮೆಕ್ಸಿಕೋಗೆ ಒಂದು ವರ್ಷ ಬರೆದುಕೊಂಡಿರುವುದಕ್ಕೆ ಕಳಿಸೋದು; ಅಲ್ಲಿಯೂ ನಮ್ಮದೊಂದು ರೆಸಾರ್ಟ್ ಇದೆ. ಹಾಗೆಯೇ ಅಲ್ಲಿಂದ ಒಬ್ಬ ಕಲಾವಿದನನ್ನು ಕರೆಸಿಕೊಳ್ಳೋದು, ಇಲ್ಲಿ ಇರಲು. ಇನಾಗುರೇಶನ್ನಿನ ದಿನ ಗವರ್ನರ್ ರಿಂದ ಇದನ್ನು ಅನೌನ್ಸ್‌ ಮಾಡಿಸಬೇಕೆಂದು ಇದ್ದಾನೆ. ನಿನಗಿದು ಇಷ್ಟವಾಗುತ್ತಾ? ನೀನು ಬೇಡವೆಂದರೆ ನನ್ನ ಗಂಡನೇನೂ ಉಪವಾಸ ಬೀಳಲ್ಲ.’

ಮಾತಿನ ಓಘದಲ್ಲಿ ಗೌರವದ ‘ನೀವು’ ಪ್ರೀತಿಯ ‘ನೀನು’ ಆಗುವುದನ್ನು ಗಮನಿಸಿದ.

‘ನನಗೆ ಇದು ಬೇಡ ಭಾಗೇರತಿ.’

‘ನೀನು ಬೇಡವೆಂದಿ ಎಂದು ನನಗೆ ಖುಷಿಯೇ ಆಗುತ್ತ ಇದೆ. ಮತ್ತೆ ನಾನು ಎರಡು ಜಡೆಯ ಭಾಗೇರತಿಯಾಗಿಬಿಟ್ಟೆ. ಆದರೆ ರತಿಗೆ ಫ್ಯಾಮಿಲಿ ಅಬ್ಲಿಗೇಶನ್‌ ಕೂಡ ಇಎಯಲ್ಲ. ಒಂದು ಸುಳ್ಳು ಹೇಳುತ್ತೇನೆ. ಈ ಸುಳ್ಳಿಗೆ ನಾನು ತಯಾರಾಗಿಯೇ ಇದ್ದೆ ಎನ್ನು. ನಮ್ಮ ಲೇಖಕರಿಗೆ ಈ ವರ್ಷ ಫುಲ್‌ಬ್ರೈಟ್‌ ಫೆಲೋಶಿಪ್‌ ಸಿಗುತ್ತ ಇದೆ. ಮೋರ್ ಪ್ರೆಸ್ಟೀಜಸ್‌ ಫೆಲೋಶಿಪ್‌. ಮುಂದಿನ ವರ್ಷ ನೋಡೋಣ ಎನ್ನುತ್ತೇನೆ . ಓ.ಕೆ?’

ನಾಗಭೂಷಣ ಏನೂ ಹೇಳಲಿಲ್ಲ. ರತಿ ಅವನನ್ನು ಮೆಚ್ಚುಗೆಯಲ್ಲಿ ಮುದ್ದಿಸಿದಳು.

ಹುಣ್ಣಿಮೆಯ ರಾತ್ರೆ ಊಟವಾದ ಮೇಲೆ ಒಂದು ಹಣ್ಣಿನ ಬುಟ್ಟಿಯನ್ನು ತೆಗೆದುಕೊಂಡು ತುಂಬಿದ ಕೆರೆಯ ದಂಡೆಯ ಮೇಲೆ ಇಬ್ಬರೂ ಹೋಗಿ ಕೂತರು . ರತಿ ಮಡಿಯುಟ್ಟು ಅಮ್ಮನಿಗೆ ರಾತ್ರೆಯ ಊಟ ಮಾಡಿಸಿ ಆ ಮಡಿಯಲ್ಲೇ ಬಟ್ಟೆ ಬದಲಾಯಿಸದೆ ಬಂದಿದ್ದಳು.

ಬೆಳದಿಂಗಳ ರಾತ್ರೆ. ಬತ್ತಿ ಕೆಸರಾದಾಗ ತನ್ನ ಪುಟ್ಟ ಹಂಸಪಾದಗಳ ಸ್ಪರ್ಶದಿಂದ ಮತ್ತೆ ಗರ್ಭಿಣಿಯಾಗುವಳೆಂಬ ಹಳ್ಳಿಯವರ ನಂಬಿಕೆಯ ಅದೇ ಕೆರೆ. ಈಗ ರತಿಯ ಧನಬಲದಿಂದಾಗಿಯೂ ತನ್ನ ಮೇಲಿನ ಪ್ರೀತಿಯಿಂದಾಗಿಯೂ ಒಂದು ತಿಳಿ ನೀರಿನ ಸರೋವರವಾಗಿದೆ. ಸುತ್ತಲೂ ಅದರ ತವರು ಮನೆಯ ಮರಗಳು. ಆಕಾಶದ ನಡುವಿನಲ್ಲಿ ಪೂರ್ಣಚಂದ್ರ. ಸರೋವರದಲ್ಲೆ ಹುಟ್ಟಿ ಆಕಾಶದಲ್ಲೂ ಬೆಳಗುವಂತೆ ಕಾಣುವ ಚಂದ್ರ.

ನಾಗಭೂಷಣ ಬಾಲ್ಯದಲ್ಲಿ ತನ್ನ ಹೆಮ್ಮೆಯ ಶೋಕಿಯಾಗಿದ್ದ ಕಪ್ಪೆಯಾಟವನ್ನು ಆಡಲು ಎದ್ದು ನಿಂತ. ಒಂದು ಚಪ್ಪಟೆ ಕಲ್ಲನ್ನು ಎತ್ತಿಕೊಂಡು ರತಿಗೆ ಹೇಳಿದ.

‘ನಾನು ಎಸೆಯುವ ಕಲ್ಲು ಈಗಲೂ ಐದಾರು ಸಾರಿಯಾದರೂ ಕಪ್ಪೆಯಂತೆ ನೀರಲ್ಲಿ ಕುಪ್ಪಳಿಸುತ್ತದೋ ನೋಡುವೆ. ನಾನು ಗೆದ್ದರೆ ಹುಡುಗನಿದ್ದಾಗ ಬೇರೆ ಹುಡುಗರಿಂದ ಪೆಪ್ಪರ್ ಮಿಂಟನ್ನು ಪಡೆಯುತ್ತ ಇದ್ದೆ. ಈಗಲೂ ನೀನೊಂದು ಪೆಪ್ಪರ್ ಮಿಂಟ್‌ ಕೊಡಬೇಕು. ಓ.ಕೆ.’

‘ಓ.ಕೆ.’

ಕೆರೆಗೆ ಕೊಂಚ ದೂರದಲ್ಲಿ ನಿಂತು ಚಪ್ಪಟೆ ಕಲ್ಲನ್ನು ಬೀಸಿ ಎಸೆದ. ಮೂರು ಸಾರಿ ಮಾತ್ರ ಕುಪ್ಪಳಿಸಿದ್ದರಿಂದ ಅವನು ನಿರಾಶನಾದ. ರತಿ ‘ಭೇಷ್‌’ ಎಂದಳು. ಅವಳ ಪಕ್ಕ ಮತ್ತೆ ಕೂತು ಏಕಾಗ್ರಚಿತ್ತನಾಗಿ ಸರೋವರವನ್ನು ನೋಡಿದ.

ಎಸೆದು ಕುಪ್ಪಳಿಸಿದ ಕಲ್ಲಿಗೆ ಸರೋವರದ ಶಾಂತ ನೀರು ಅಲೆ ಅಲೆಯಾಗಿ ಎದ್ದದ್ದು ವಿಸ್ತರಿಸುತ್ತ ಕಂಪನಗಳಾಗಿ ದಡ ಮುಟ್ಟಿದವು. ಒಂದಾದ ಮೇಲೆ ಇನ್ನೊಂದು ಅಲೆ. ಹೀಗೆಯೇ, ಆಕಾಶದಲ್ಲಿ ಮಾತ್ರ ಸ್ಥಿರನಂತೆ ತೋರುವ ಚಂದ್ರನೂ ಚೂರು ಚೂರುಗಳಾಗಿ ಹೊಳೆಹೊಳೆಯುತ್ತಲೇ ಸರೋವರದ ಕೇಂದ್ರಕ್ಕೆ ನಿಧನಿಧಾನ ಇಷ್ಟಿಷ್ಟೇ ಚಲಿಸಿ ಕಂಪಿಸಿ ಪೂರ್ಣನಾದ. ಮೇಲೂ ಕೆಳಗು ಒಂದನ್ನೊಂದು ಕಂಡು ಸುಖಪಡುವಂತಹ ಚಂದ್ರರಾದರು.

ನಾಗಭೂಷಣ ಚೇಷ್ಟೆಗೆ ಇನ್ನೊಂದು ಕಲ್ಲೆಸೆದು ಬಾಲ್ಯದ ದಿನಗಳ ತನ್ನ ಕರ ಕೌಶಲ್ಯವನ್ನು ರತಿಗೆ ತೋರಬೇಕೆಂಬ ಹಂಬಲ ಇಂಗಿಸುವಷ್ಟು ಸರೋವರದಲ್ಲಿ ಚಂದ್ರ ಶಾಂತನಾಗಿದ್ದ.

ಕೃಪೆ: ದೇಶಕಾಲ