ಮೊನ್ನೆ ಪ್ರಾಥಮಿಕ ಶಾಲೆಯ ಉಪಾಧ್ಯಾಯರಿಗಾಗಿ ನಮ್ಮ ನಡುವಿನ ಶ್ರೇಷ್ಠ ಮನೋವಿಜ್ಞಾನಿ (ತಿರುಪತಿ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿದ್ದವರು) ಶ್ರೀ ಎಂ. ಬಸವಣ್ಣನವರಿಂದ ಉಪನ್ಯಾಸವೊಂದನ್ನು (ಅಭಿನವದ ಸಹಯೋಗದಲ್ಲಿ) ಏರ್ಪಡಿಸಿದ್ದೆವು. ಅಲ್ಲಿ ಬಸವಣ್ಣನವರು ಕೇಳಿದ ಮೊದಲ ಪ್ರಶ್ನೆ ‘ನಿಮ್ಮಲ್ಲಿ ಈ ಕೆಲಸ ಬಿಟ್ಟು ಬೇರೆ ಯಾವುದೇ ಕೆಲಸ ಸಿಕ್ಕರೆ ಎಷ್ಟು ಜನ ಹೋಗುತ್ತೀರಿ?’ ಎಂಬುದಾಗಿತ್ತು. ಕೆಲವರು ಗುಸು ಗುಸು ಮಾಡಿದರು. ಬಹು ಸಂಖ್ಯೆಯಲ್ಲಿದ್ದ ಶಿಕ್ಷಕಿಯರಲ್ಲಿ ಯಾರೂ ಮಾತನಾಡಲಿಲ್ಲ. ಬಸವಣ್ಣನವರು ಹೇಳಿದರು: ‘ನೋಡಿ ಅಧ್ಯಾಪಕ ಹುದ್ದೆ ಎಂದರೆ ಎಷ್ಟು ಗೌರವವಿದೆ ಎಂದುಕೊಂಡಿದ್ದೀರಿ? ಯಾವ ಪೋಷಕರು ತಮ್ಮ ಮಕ್ಕಳನ್ನು ಐದು ನಿಮಿಷ ಸುಮ್ಮನೆ ಕುಳಿತುಕೊಳ್ಳುವಂತೆ ಮಾಡಲಾರರೋ ಅಂಥ ಮಕ್ಕಳನ್ನೇ ನೀವು ನಲವತ್ತೈದು ನಿಮಿಷ ಸುಮ್ಮನೆ ಕುಳಿತುಕೊಳ್ಳುವಂತೆ ಮಾಡುತ್ತೀರಿ (ಐ ಪ್ಯಾಡ್‌, ಮೊಬೈಲ್‌, ಗೇಮ್‌; ಸಿ ಡಿ ಇಲ್ಲದೆ) ಅಷ್ಟೆ ಅಲ್ಲ ನೀವು ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತೀರಿ, ಅವರೇ ಪ್ರಶ್ನೆ ಕೇಳುವುದನ್ನು ಕಲಿಸುತ್ತೀರಿ; ಜೊತೆಗೆ ತಪ್ಪಾದಾಗ ಕ್ಷಮೆ ಕೋರುವುದನ್ನೂ ಕಲಿಸುತ್ತೀರಿ, ಎಲ್ಲರನ್ನು ಗೌರವಿಸುವುದನ್ನೂ ಕಲಿಸುವ ಜೊತೆಗೆ ಆತ್ಮಗೌರವದಿಂದ ಬದುಕುವುದನ್ನೂ ಕಲಿಸುತ್ತೀರಿ. ಹೇಗೆ ಬರೆಯಬೇಕೆಂಬುದನ್ನು ಕಲಿಸುತ್ತಲೇ ಹೇಗೆ ಮೌಲ್ಯಮಾಪನ ಮಾಡಬೇಕೆಂಬುದನ್ನು ಕಲಿಸುತ್ತೀರಿ. ಕ್ಯಾಲ್ಕುಲೇಟರ್ ಗಿಂತ ವೇಗವಾಗಿ ಗಣಿತದ ಲೆಕ್ಕಗಳನ್ನು ನಮ್ಮ ಮೆದುಳು ಮಾಡುತ್ತದೆಂಬುದನ್ನು ತೋರಿಸಿಕೊಡುತ್ತೀರಿ. ಪ್ರಪಂಚದ ಬಗೆಗೆ ಪಾಠ ಮಾಡುತ್ತಾ ಇಡೀ ಮನುಕುಲದ ಚರಿತ್ರೆಯನ್ನು ಸಂಸ್ಕೃತಿಯ ಒಳ ಪದರುಗಳನ್ನು ಅವರ ಮನದ ಮುಂದೆ ತೆರೆದಿಡುತ್ತೀರಿ. ಪುಸ್ತಕದ ಜಗತ್ತಿಗೇ ಅವರನ್ನು ಕರೆದುಕೊಂಡು ಹೋಗುತ್ತೀರಿ. ದೇವರು ಕೊಟ್ಟಿರುವ ವರವಾದ ‘ಕಷ್ಟಪಟ್ಟು ದುಡಿ, ನಿನ್ನ ಹೃದಯದ ಮಾತಿಗೆ ಬೆಲೆ ಕೊಡು’ ಎಂಬುದನ್ನು ಮನವರಿಕೆ ಮಾಡಿಕೊಡುತ್ತೀರಿ. ಇವತ್ತು ಒಬ್ಬ ವಾಣಿಜ್ಯೋದ್ಯಮಿ ತನ್ನ ಮಗ ಸಿ ಇ ಓ ಆಗಬೇಕೆಂದು ಬಯಸುತ್ತಾನೆ. ಡಾಕ್ಟರ್ ಮಗ ಡಾಕ್ಟರ್ ಆಗಬೇಕೆಂದು ಬಯಸುತ್ತಾರೆ. ಇಂಜಿನಿಯರ್ ಮಗ ಇಂಜಿನಿಯರ್ ಆಗಬೇಕೆಂದು ಬಯಸುತ್ತಾನೆ. ಆದರೆ ಶಿಕ್ಷಕನಾದವನು ಮಾತ್ರ ತನ್ನ ಮಗ ಶಿಕ್ಷಕನಾಗುತ್ತಾನೋ ಬಿಡುತ್ತಾನೋ ಬೇರೆಲ್ಲ ಮಕ್ಕಳನ್ನು ಸಿ ಇ ಓ ಗಳನ್ನಾಗಿ, ಡಾಕ್ಟರ್ ಆಗಿ, ಇಂಜಿನಿಯರ್ ಆಗಿ ರೂಪಿಸುತ್ತಾನೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬದುಕಿನಲ್ಲಿ ಹಣವೊಂದಕ್ಕೆ ಮಾತ್ರ ಮಹತ್ವವಿಲ್ಲ ಮಾನವೀಯತೆಯೇ ದೊಡ್ಡದು ಎಂಬುದನ್ನು ಕಲಿಸುತ್ತೀರಿ… ಈಗ ಹೇಳಿ ಮೇಷ್ಟ್ರ ಕೆಲಸ ಎಷ್ಟು ದೊಡ್ಡದು ಎಂಬುದನ್ನು ಯಾರೂ ಮಾತನಾಡಲಿಲ್ಲ.

ಅನಂತಮೂರ್ತಿ ಅವರು ನಮಗೆ ಮಾಡುತ್ತಿರುವುದು ಇಂಥ ಮೇಷ್ಟ್ರ ಕೆಲಸವನ್ನೇ. ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಪಾಠಗಳನ್ನೇ ಇಂದು ನಿಜ ಬದುಕಿನಲ್ಲಿ ಕಲಿಯುತ್ತಿದ್ದೇವೆ. ಇಂಥ ಮೇಷ್ಟ್ರ ಒಡನಾಟ ನಮಗೆಲ್ಲ ಅಪರೂಪದ್ದೇ.

ಕಳೆದ ವಾರ ಫೋನ್‌ ಮಾಡಿ ‘ನನ್ನ ಕವಿತೆಗಳು, ಕಥೆಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ತರಲು ಸಾಧ್ಯವೇ ನೋಡು’ ಎಂದರು. ತಕ್ಷಣ ನೆನಪಾದದ್ದು ಅರ್ಜೈಂಟೈನಾದ ಲೇಖಕ ಬೋರ್ಹೆಸ್‌. ತನ್ನ ಕೃತಿಗಳ ಮೂಲಕ, ವಿಚಾರಗಳ ಮೂಲಕ ಇದು ಗದ್ಯ, ಇದು ಪದ್ಯ ಎಂಬುದನ್ನೆ ಒಡೆದು ಇದೊಂದು ಅನನ್ಯ ಕೃತಿ ಎಂದಷ್ಟೆ ಪ್ರಸ್ತುತಪಡಿಸುತ್ತಾನೆ ಬೋರ್ಹೆಸ್‌. ಇದು ಸೃಜನಶೀಲ, ಇದು ಸೃಜನಶೀಲ ಅಲ್ಲ ಎಂಬ ಗೋಡೆಯನ್ನು ಆತ ಕೆಡವುತ್ತಾನೆ. ಇಂಥದೇ ಹಲವು ಪ್ರಯತ್ನಗಳು ಕನ್ನಡದಲ್ಲಿಯೂ ನಡೆಯುತ್ತಿವೆ.

ಈ ಸಂಕಲನವನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀ ಅನಂತಮೂರ್ತಿ ಅವರಿಗೆ ಮತ್ತು ಶ್ರೀಮತಿ ಎಸ್ತರ್ ಅವರಿಗೆ, ನಮ್ಮ ಕೆಲಸವನ್ನು ಬೆಂಬಲಿಸುತ್ತಿರುವ ಶ್ರೀ ಚಿ. ಶ್ರೀನಿವಾಸರಾಜು ಕುಟುಂಬ, ಎಚ್‌.ಎಸ್‌. ರಾಘವೇಂದ್ರರಾವ್‌, ಷ. ಶೆಟ್ಟರ್, ದೇವನೂರ ಮಹಾದೇವ, ವಿಜಯಮ್ಮ, ಜಿ.ಎನ್‌. ಮೋಹನ್‌, ಕೆ.ಜಿ. ನಾಗರಾಜಪ್ಪ, ಜಿ.ಎಸ್‌. ಶಿವರುದ್ರಪ್ಪ, ಪ್ರಭುಶಂಕರ್, ಕೆಂದೋಳೆ ಸುಬ್ರಹ್ಮಣ್ಯ, ಎಂ.ಎಸ್‌. ಆಶಾದೇವಿ, ರಹಮತ್‌ ತರೀಕೆರೆ, ಬಸವರಾಜ ಕಲ್ಗುಡಿ, ಎಚ್‌.ಎಸ್‌. ಗೋಪಾಲರಾವ್‌, ಎಂ.ವೈ. ಘೋರ್ಪಡೆ, ವಿವೇಕ್‌ ಶಾನ್‌ಭಾಗ್‌, ಕೆ.ವಿ ಅಕ್ಷರ, ಕೆ.ಪುಟ್ಟಸ್ವಾಮಿ, ಜಿ.ಪಿ. ಬಸವರಾಜು, ಶಾಂತಾ ನಾಗರಾಜ್‌ ಮುಂತಾದವರಿಗೆ-

ತುರ್ತಾಗಿ ಅಕ್ಷರ ಜೋಡಿಸಿಕೊಟ್ಟ ಶ್ರೀಧರ್, ಮುಖಪುಟದ ವಿನ್ಯಾಸ ಮಾಡಿದ ಬಿ. ದೇವರಾಜ್‌, ಮುದ್ರಿಸಿದ ಲಕ್ಷ್ಮೀ ಪ್ರಿಂಟರ್ಸ್ ಮಾಲೀಕರು ಮತ್ತು ಬಂಧುಗಳಿಗೆ-

ಅಕ್ಷತಾ, ಅವಿನಾಶ್‌, ಎಚ್‌.ಆರ್. ರಮೇಶ್‌, ಜ.ನಾ. ತೇಜರೀ, ಚ.ಹ ರಘುನಾಥ್‌, ಇಸ್ಮಾಯಿಲ್‌, ಜಯಪ್ರಕಾಶ್‌ ಮುಂತಾದ ಗೆಳೆಯರಿಗೂ ಧನ್ಯವಾದಗಳು.

. ರವಿಕುಮಾರ
ಅಭಿನವದ ಪರವಾಗಿ