ಸೂರ್ಯ ವಿಧಿತಪ್ಪದಂತೆ ಮೂಡಿರಲು
ಸಕಲ ಜೀವಿಗಳ ಪ್ರಾಣದುಸಿರಾಗುತ್ತ ತನ್ನ ಪಾಡಿಗೆ ಗಾಳಿ ಬೀಸಿಕೊಂಡಿರಲು
ಹಕ್ಕಿ ಹಕ್ಕಿಗೆ ಅನ್ಯೋನ್ಯ ಬೇಟದ ಚೆಲ್ಲು
ಸಾಯಲಿರುವ ಚಿಟ್ಟೆಗೆ ಮೊಟ್ಟೆಯಿಡುವ ಅವಸರ
ಅರಳಿದ ಹೂವಿಗೆ ಚಿಟ್ಟೆಯ  ಚಪಲ

ತನ್ನ ಹಸಿರಿನ ಕಾಯಕದಿಂದ ನಿವೃತ್ತರಾಗಿ ಉದುರುವ ಒಣಗಿದೆಲೆ
ಚಿಗುರುವ ಭರವಸೆಯಲ್ಲಿ ಸಿಪ್ಪೆ ಸಿಡಿದು ಚಿಮ್ಮುವ ಬೀಜ

ಡೆಟ್ಟಾಲ್‌ ವಾಸನೆಯ ಶುಭ್ರ ಬಿಳಿ ಬೆಡ್ಡಿನಿಂದೆತ್ತಿ
ವಿಧಿವತ್ತಾಗಿ ತಂಪು ನೆಲದ ಮೇಲೆ ಮಲಗಿಸುವರು
ಜೀವ ನಂದಿತೆಂದು ಹಣತೆ ಹಚ್ಚುವರು
ಬೆಳಕಿಗೆ ಹಾರೈಸಿದ ಕಣ್ಣು ಮುಚ್ಚುವರು
ಕೊನೆಯುಸಿರಿಗೆ ಆಕಳಿಸಿದ ಬಾಯಿ ಮುಚ್ಚುವರು
ಹೊಸಬಟ್ಟೆ ಹೊದಿಸುವರು.

ಅಕ್ಕರೆಯ ಆಯಾಸದಲ್ಲಿ ಕಾದಿದ್ದ ಪ್ರೇಮಿಗಳ
ಕಣ್ಣುಗಳಲ್ಲಿ ಕಂಬನಿಯಾಗಿ
ಅವನೇ ಆಗಿ ಉಳಿಯದ ಅವನು
ಜ್ವಾಲೆಗಳ ಹೂವಾಗುವನು
ಸರ್ವಸ್ವದ ವಿಳಾಸಿಯಾಗುವನು

ಜುಲೈ , ೨೦೧೦