(ಮರಾಠಿ ಕವಿ ವಿಂದಾ ಕರಂದೀಕರ್ ಓದಿದ್ದನ್ನು ಕೇಳಿಸಿಕೊಂಡ ನೆನಪಿನಲ್ಲಿ ನನ್ನ ಮಾತಿನಲ್ಲಿ ಮೂಡಿದ ಕವನ. ಮಾರ್ಚ್ ೧೪ ರಂದು ಗತಿಸಿದ ಮಹಾಕವಿಗೆ ಇದು ನನ್ನ ಶ್ರದ್ಧಾಂಜಲಿ).
ಆ ಲೋಕದ ಸಂತ ಕವಿ ತುಕಾರಾಮನನ್ನು ನೋಡೋಕೆ ಅಂತ
ಈ ಲೋಕದ ಭವ್ಯ ಮರ್ತ್ಯ ಕವಿ ಶೇಕ್ಸ್ಪಿಯರ್ ಬಂದ.
ಅವರು ಭೇಟಿಯಾದ್ದು ಒಂದು ಅಂಗಡಿಯ ಅಂಗಳದಲ್ಲಿ
ಒಬ್ಬರನ್ನೊಬ್ಬರು ತಬ್ಬಿದರು; ಹೃದಯ ಬಿಚ್ಚಿ ಮಾತಾಡಿದರು.
ತುಕಾರಾಮ್ ಹೇಳಿದ: ‘ಏ ವಿಲ್ಲಿ, ಐಹಿಕದಲ್ಲಿ ಲೀಲಾಜಾಲ ಈಸಿ
ಮಣ್ಣನ್ನೇ ಮೃತ್ತಿಕೆ ಮಾಡಿ
ಗೆದ್ದವನಪ್ಪ ನೀನು
ವಿಶ್ವರೂಪ ದರ್ಶನ ಮಾಡಿಸುವ ದೈತ್ಯ ಕವಿಯಪ್ಪ.’
ಶೇಕ್ಸ್ಪಿಯರ್ ಹೇಳಿದ:
‘ನಾನೆಲ್ಲಿ ನೀನೆಲ್ಲಿ? ನಾನು ಮಣ್ಣನ್ನು ಕಂಡೆ; ಆದರೆ ಮಣ್ಣಿನ ಇಟ್ಟಿಗೆ ಮೇಲೆ ನೀನು
ಕಂಡವನನ್ನು ನಾನು ಕಾಣಲಾರದೇ ಹೋದೆ.’
ಸಂತ ತುಕಾ ಹೇಳಿದ:
‘ಕಾಣದ್ದು ಒಳ್ಳೆಯದೇ ಆಯ್ತು ಬಿಡು.
ಸಂಸಾರವೇ ನರಕವಾಗುವಂತೆ ಅವನು ಮಾಡಿದ ನನಗೆ
ವಿಟ್ಠಲನೇನೂ ಅಂತಿಂಥವನಲ್ಲ; ಬಲು ಖದೀಮ
ಅವನ ಕಳ್ಳ ಸಂಚು ತಿಳಿಯುವುದೇ ಇಲ್ಲ
ಎಷ್ಟು ಬರೆದರೂ ನನ್ನ ಸ್ಲೇಟು ಈಗಲೂ ಖಾಲಿ ಖಾಲಿ.’
ಶೇಕ್ಸ್ಪಿಯರ್ ಒಪ್ಪಲಿಲ್ಲ:
‘ಯಾಕೆ ತುಕಾ? ನಿನ್ನ ಮಾತೇ ಮಾತಿಗೆ ಮೀರಿದ್ದನ್ನು
ಮಣ್ಣಿನ ಇಟ್ಟಿಗೆ ಮೇಲೆ ಕಾಲಿಟ್ಟು ಕಾಯುವಂತೆ ನಿಲ್ಲಿಸಿತಲ್ಲವೆ?’
ತುಕಾನೂ ಒಪ್ಪಲಿಲ್ಲ
‘ಅದೊಂದು ಬರಿ ಮಾತಿನ ಲೀಲೆಯಪ್ಪ
ನಮ್ಮ ನಮ್ಮ ಹಾದೀಲಿ ನಡೆದು ಹೋಗಲೇಬೇಕಾದ
ಸಂಸಾರದ ಗೋಳು ಇದ್ದೇ ಇರುತ್ತೆ.
ದಾರಿ ತುಂಬ ಮುಳ್ಳು.
ಈ ಮುಳ್ಳುಗಳ ನಡುವೆಯೂ ಅವನ ಅಕಸ್ಮಾತ್ ದರ್ಶನದ ಸೋಜಿಗ ಕೂಡ.
ದೇವಾಲಯದ ಗಂಟೆ ಬಾರಿಸುವುದನ್ನು ತುಕಾ ಬೆಚ್ಚಿ ಆಲಿಸಿದ.
ಇನ್ನೂ ಮಾತಿಗೆ ಅವಕಾಶ ಉಳಿಸಿಕೊಂಡಿದ್ದ ಶೇಕ್ಸ್ಪಿಯರ್ ನ ಹೆಗಲ ಮೇಲೆ ಕೈಯಿಟ್ಟು
ತುಕಾ ಹೇಳಿದ:
‘ಗಂಟೆ ಬಾರಿಸಿತು.
ಊಟದ ಹೊತ್ತು.
ನನ್ನನ್ನು ಸಾಕೋ ಗಯ್ಯಾಳಿ
ಸಟುಗ ಹಿಡಿದು ಸಿಡಿಮಿಡಿಯಾಗಿ ಮನೆಯಂಗಳದಲ್ಲಿ
ಪೂಜೆ ಮಾಡಲು ಕಾದಿರುತ್ತಾಳೆ
ಹೋಗಿ ಬರುವೆ.’
Leave A Comment