(ಗಾಂಧಿಗೆ ನೆಹರು ಹೇಳಿರಬಹುದಾದೊಂದು ದೃಷ್ಟಾಂತ ಕಥೆ)

ಮಗಧರಾಜ ಅಜಾತ ಶತ್ರು ಒಂದಾನೊಂದು ದಿನ ವೈರಾಗ್ಯವಶನಾಗಿ,
ಬದುಕು ನಶ್ವರವೆಂಬುದನ್ನು ಅರಿತು, ಬುದ್ಧನಿಗೆ ಶರಣಾಗಿ,
ರಾಜಧರ್ಮವನ್ನೂ ಮರೆಯದೆ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತ,
ತತ್ಫಲವಾಗಿ ಬೌದ್ಧಧರ್ಮ ಹರಡಲು ಎಲ್ಲೆಲ್ಲೂ ವಿಹಾರಗಳನ್ನು
ಸ್ತೂಪಗಳನ್ನೂ ಕಟ್ಟಿಸಿ ನಾಡಿನಲ್ಲಿ ಸುಭಿಕ್ಷೆ ನೆಲೆಸುವಂತೆ ಮಾಡಿ
ಅಹನ್ಯಹನಿ ಭಿಕ್ಷೆ ಎತ್ತಿ ಬದುಕುವ ಭಿಕ್ಷುಗಳಿಗೆ ಆಶ್ರಯದಾತನಾದ.

ತನ್ನ ತಂದೆಯನ್ನೇ ಕೊಂದು ರಾಜನಾದನೆಂಬ ಅಪಖ್ಯಾತಿಯನ್ನು ಹೀಗೆ
ಕಳೆದುಕೊಂಡು ಲಿಚ್ಛವಿ ಎಂಬ ಸ್ವತಂತ್ರಪ್ರೇಮಿಗಳಾದ ಬುಡಕಟ್ಟಿನ ಜೊತೆ
ನಿರಂತರ ಕಾಳಗದಲ್ಲಿ ತೊಡಗಿದ್ದ ಮಹಾರಾಜ ಅಜಾತಶತ್ರು ಒಂದು ದಿನ ರಥದಲ್ಲಿ ಬುದ್ಧನಿದ್ದ
ತಾಣಕ್ಕೆ ಬಂದು, ರಥದಿಂದ ಇಳಿದು, ಕಿರೀಟವನ್ನೂ ಪಾದರಕ್ಷೆಗಳನ್ನೂ ಬಿಚ್ಚಿಟ್ಟು
ಅಂಜಲಿಬದ್ಧನಾಗಿ ದೇಶಕಾಲಾತೀತನೆನ್ನಿಸುವ ಹಾಗೆ ಪದ್ಮಾಸೀನನಾದ ತನ್ನ
ದೈವದಿದಿರು ನಿಂತು ನಿವೇದಿಸಿದ:

‘ಎಲ್ಲೆಲ್ಲೂ ಈಗ ಶತ್ರುಗಳೇ ತಥಾಗತ, ಐಹಿಕವಾದರೂ ಈ ಲೋಕದಲ್ಲಿ
ಶಾಂತಿ ಕಾಯುವುದು ರಾಜಧರ್ಮವಲ್ಲವೆ? ರಾಜಧರ್ಮ ಪಾಲಿಸಲು ಈ
ನಿಮ್ಮ  ಸೇವಕನಿಗೆ ಸೈನ್ಯ ಅಗತ್ಯವಲ್ಲವೆ? ಆದರೆ ಕಾಳಗಕ್ಕೆ ಅಂಜುವ
ಯೋಧರು ದೀಕ್ಷೆ ಪಡೆದು ಸಂಘದ ಭಿಕ್ಷುಗಳಾಗುತ್ತ ಇದ್ದಾರೆ. ಸೈನ್ಯ
ತೊರೆದು ಓಡುವವರನ್ನು ಹಿಡಿದು ಶೂಲಕ್ಕೆ ಏರಿಸುವುದು ರಾಜಧರ್ಮ
ಭಗವಾನ್‌. ಆದರೆ ಭಿಕ್ಷುಗಳಾಗಿಬಿಟ್ಟವರನ್ನು ಶಿಕ್ಷಿಸುವಂತೆ ಇಲ್ಲ.
ಪರಿಣಾಮವಾಗಿ ಈ ಮಗಧರಾಜನ ಸೈನ್ಯ ಶಿಥಿಲವಾಗುತ್ತ ಇದೆ.
ಯಾವುದಕ್ಕೂ ಅಂಜದ ನಮ್ಮ ದುಷ್ಟ ವೈರಿಗಳು ಬಲವಾಗುತ್ತ
ಇದ್ದಾರೆ.’

ತಥಾಗತ ಆನಂದನನ್ನು ಹತ್ತಿರ ಕರೆದು ಹೇಳಿದ:
“ಸೇವೆಯಲ್ಲಿರುವ ಯೋಧರಿಗೆ ಸನ್ಯಾಸದ ದೀಕ್ಷೆಕೊಡುವುದು ಬೇಡ.
ಕೊಟ್ಟರೆ ದುಃಖತಾ ಶಿಕ್ಷೆಗೆ ಅವರು ಒಳಗಾಗಲಿ”
ಆನಂದ ‘ಅಸ್ತು’ ಎಂದ.

ಅಜಾತ ಶತ್ರು ಮತ್ತೆ ಕೈಮುಗಿದು ‘ಇನ್ನೊಂದು ಅರಿಕೆ’ ಎಂದು
ಮುಂದುವರೆದ. ‘ಸದಾ ಸಂಚಾರದಲ್ಲಿ ಇರುವ ತಮ್ಮ ಸಂಘದ
ಹಿತವನ್ನು ಕಾಯುವ ಈ ಮಗಧರಾಜನ ಅರ್ಥವ್ಯವಸ್ಥೆಯೂ
ಕುಸಿಯುತ್ತ ಇದೆ, ಭಗವಾನ್‌. ಸಾಲಗಾರರೂ ತಮ್ಮ ಸಾಲವನ್ನು
ಹಿಂದಿರುಗಿಸಲಾರದೆ ಹೋದರೆ ಅವರು ಸಾಲ ಕೊಟ್ಟವರ
ಗುಲಾಮರಾಗಿ ಬದುಕಬೇಕೆನ್ನುವ ನಿಯಮ ಈ ರಾಜ್ಯದಲ್ಲಿ
ಅನೂಚಾನವಾಗಿ ನಡೆದುಕೊಂಡು ಬಂದಿದೆ. ಆದರೆ ಶಿಕ್ಷೆಯಿಂದ
ಪಾರಾಗಲೆಂದು ಇವರೂ ದೀಕ್ಷೆ ಪಡೆದು ಭಿಕ್ಷುಗಳಾಗಿ ಬಿಡುತ್ತಿದ್ದಾರೆ
ತಥಾಗತ,’

ತಥಾಗತ ಆನಂದನನ್ನು ಹತ್ತಿರ ಕರೆದು ಹೇಳಿದ:
‘ಸಾಲಗಾರರಾದವರಿಗೆ ಸನ್ಯಾಸದ ದೀಕ್ಷೆ ಕೊಡುವುದು ಬೇಡ, ಕೊಟ್ಟರೆ
ಅವರು ದುಃಖತಾ ಶಿಕ್ಷೆಗೆ ಒಳಗಾಗಲಿ’
ಆನಂದ ‘ಅಸ್ತು’ ಎಂದ.

ಕರುಣಾಳು ಬುದ್ಧ ಧ್ಯಾನಮುದ್ರೆಯಲ್ಲಿ ಮೌನಿಯಾದ.
ಹಿಂಸೆಯಿಂದ ಹಿಮ್ಮೆಟ್ಟುವ ಬಯಕೆ ಯೋಧರಿಗೆ ಸಹಜವಲ್ಲವೆ?
ಸಂಸಾರದ ದುಃಖವನ್ನು ದಿನ ರಾತ್ರೆಯೆನ್ನದೆ ನಿದ್ದೆಗೆಟ್ಟು
ಅನುಭವಿಸುವವರು ಸಾಲಗಾರರಲ್ಲವೆ? ಬುದ್ಧನ ಉಪದೇಶ ಈ
ದುಃಖಿಗಳಿಗೆ ಅಗತ್ಯವಲ್ಲವೆ?

ದುಃಖಿಗಳು ಉಳಿದಿರುವತನಕ ಬುದ್ಧನಾಗಲು ಒಲ್ಲದೆ ಮತ್ತೆ ಮತ್ತೆ
ಹುಟ್ಟಿ ಬರುವ ಬೋಧಿಸತ್ವರನ್ನು ಆನಂದ ಧ್ಯಾನಿಸಿದ. ತಥಾಗತನ
ಮಧ್ಯಮ ಮಾರ್ಗದ ಲೌಕಿಕ ವಿವೇಕವನ್ನು ಅರಿತ.

ಸತತ ದುಃಖದಲ್ಲಿರುವ ಈ ಆಶಾಶ್ವತ ಲೋಕದಲ್ಲಿ ಅವತರಿಸಿದ ಕರುಣಾಳು
ವಿಧಿಸಿದ ದುಃಖತಾ ಕಠಿಣ ಶಿಕ್ಷೆ ಆಗಿರಲಿಲ್ಲ.