ಹುಟ್ಟಿದ್ದು ೨೧, ಡಿಸೆಂಬರ್ ೧೯೩೨ರಂದು ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ. ಪದವಿ; ೧೯೬೩ರಲ್ಲಿ ಕಾಮನ್‌ವೆಲ್ತ್‌ ಫೆಲೊಶಿಪ್‌ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್‌ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆ. ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್‌ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್‌ಬ್ರೈಟ್‌ ಪ್ರೊಫೆಸರ್ ಆಗಿ ಬೋಧನೆ. ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್‌ ಬುಕ್‌ ಟ್ರಸ್ಟ್‌ ಅಧ್ಯಕ್ಷ, ಪುಣೆಯ ಫಿಲ್ಸ್‌ ಅಂಡ್‌ ಟೆಲಿವಿಷನ್‌ ಇನ್ಸಿಟ್ಯೂಟ್‌ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳ ನಿರ್ವಹಣೆ. ಸದ್ಯ ಇಂದಿರಾಗಾಂಧಿ ವಿಶ್ವವಿದ್ಯಾನಿಲಯದ ‘ಟ್ಯಾಗೋರ್ ಛೇರ್’ನ ನಿರ್ದೇಶಕರಾಗಿದ್ದಾರೆ.

ಸಂಸ್ಕಾರ ಕಾದಂಬರಿ ಭಾರತದ ಭಾಷೆಗಳಲ್ಲದೆ, ಯೂರೋಪಿನ ಹಾಗೂ ಏಷ್ಯಾದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಅಭಾವ ಕವನ ಸಂಕಲನಗಳು. ‘ಆವಾಹನೆ’ ನಾಟಕ. ಭಾರತೀಪುರ, ಅವಸ್ಥೆ, ಭವ, ದಿವ್ಯ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಪೂಜೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಮಾತು ಸೋತ ಭಾರತ, ಋಜುವಾತು, ಸದ್ಯ ಮತ್ತು ಶಾಶ್ವತ, ಕಾಲಮಾನ, ಶತಮಾನದ ಕವಿ ಯೇಟ್ಸ್‌, ಶತಮಾನದ ಕವಿ ರಿಲ್ಕೆ, ಶತಮಾನದ ಕವಿ ವಡ್ಸ್‌ವರ್ತ್, ಮತ್ತೆ ಮತ್ತೆ ಬ್ರೆಕ್ಟ್‌ ಮೊದಲಾದವು ವಿಮರ್ಶಾತ್ಮಕ / ಚಿಂತನಪರ ಪ್ರಬಂಧ ಸಂಕಲನಗಳು ಈಗ ಆಚೀಚೆ (ಈಚಿನ ಬರಹಗಳು), ಪಚ್ಚೆ ರೆಸಾರ್ಟ್ (ಈಚಿನ ಕಥೆ-ಕವಿತೆಗಳು) ಪ್ರಕಟವಾಗುತ್ತಿವೆ.

ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ, ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್‌, ಹೋಮಿಬಾಬಾ ಫೆಲೊಶಿಪ್‌, ಅನಕೃ ಪ್ರಶಸ್ತಿ ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.