ಪಟ್ಟಾಭಿ ಸೀತಾರಾಮಯ್ಯಆಂಧ್ರಪ್ರದೇಶವು ಭಾರತಕ್ಕೆ ನೀಡಿದ ಹಿರಿಯ ನಾಯಕರಲ್ಲಿ ಒಬ್ಬರು. ಪದವಿಗೆ ಆಶಿಸದೆ ದೇಶಕ್ಕಾಗಿ ದುಡಿದರು. ಪರದೇಶಕ್ಕೆ ಹರಿಯುತ್ತಿದ್ದ ಹಣದ ಹೊಳೆಯನ್ನು ತಡೆಗಟ್ಟಲು ಹಲವು ರಚನಾತ್ಮಕ ವಿಧಾನಗಳನ್ನು ಕಾರ್ಯಗತ ಮಾಡಿದರು. ರಾಷ್ಟ್ರೀಯ ಕಾಂಗ್ರೆಸಿನ ಐವತ್ತು ವರ್ಷಗಳ ಇತಿಹಾಸವನ್ನು ಬರೆದಿಟ್ಟ ಸಾಧನೆ ಇವರದು.

 

ಪಟ್ಟಾಭಿ ಸೀತಾರಾಮಯ್ಯ

‘ಪಟ್ಟಾಭಿ’ ಎಂಬ ಹೆಸರಿನಿಂದ ಜನರಿಗೆ ಪರಿಚಿತರಾದ ಡಾಕ್ಟರ್ ಭೋಗರಾಜು ಪಟ್ಟಾಭಿ ಸೀತಾರಾಮಯ್ಯ ಉತ್ತಮ ದೇಶಭಕ್ತರೆಂದೂ, ರಾಜಕೀಯ ಚತುರರೆಂದೂ ಮಹಾತ್ಮಾ ಗಾಂಧಿಯವರ ಭಾವನೆಗಳಿಗೆ ಭಾಷ್ಯಕಾರರೆಂದೂ ಪ್ರಸಿದ್ಧರಾಗಿದ್ದಾರೆ.

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಟ್ಟಾಭಿ ಸೀತಾರಾಮಯ್ಯನವರು ಸಕ್ರಿಯ ಪಾತ್ರವಹಿಸಿದ್ದರು. ತಮ್ಮಂತಹ ಅನೇಕರಿಗೆ ಚಳುವಳಿಯಲ್ಲಿ ಭಾಗವಹಿಸಲು ಸ್ಫೂರ್ತಿಯನ್ನು ನೀಡಿದ್ದರು. ಅವರಿಗೆ ದೇಶಸೇವೆಯಲ್ಲಿ ಇದ್ದ ಆಸಕ್ತಿಯನ್ನು ತಿಳಿಸುವ ಒಂದು ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆಗೆ ಹೋಗಿದ್ದ ಪಟ್ಟಾಭಿ ಅಂದು ಬಿಡುಗಡೆಯಾಗಿದ್ದರು. ಆಂಧ್ರದ ಬಂದರು ನಗರದಲ್ಲಿ ಒಂದು ಸ್ವಾಗತ ಸಮಾರಂಭ ನಡೆಯಿತು. ಆ ದಿನ ಅವರಿಗೆ ಅನೇಕ ಸಂಘ ಸಂಸ್ಥೆಗಳವರು ಹಾಕಿದ ಹೂಮಾಲೆಗಳಿಗೆ ಲೆಕ್ಕವೇ ಇರಲಿಲ್ಲ. ಪಟ್ಟಾಭಿ  ತಮಗೆ ಹಾಕಿದ ಹೂಮಾಲೆಗಳನ್ನು ಪಕ್ಕದಲ್ಲೇ ಕುಳಿತಿದ್ದ ಹತ್ತು ವರ್ಷದ ತಮ್ಮ ಮಗನಿಗೆ ಹಾಕುತ್ತಿದ್ದರಂತೆ. ಒಂದಾಯಿತು- ಎರಡಾಯಿತು- ಮೂರಾಯಿತು. ಹುಡುಗನಿಗೆ ಹಾರಗಳು ಭಾರವಾದವು.

‘ಅಪ್ಪಾ! ಇನ್ನು  ನನ್ನ ಕೈಲಾಗೊಲ್ಲ’ ಎಂದ ಆ ಬಾಲಕ.

‘ಏನಪ್ಪಾ! ಇವೇ ನಿನಗೆ ಆಗೋದಿಲ್ಲ, ಎಂದರೆ ನಾಳೆ ಮತ್ತೆ ನಾನು ಜೈಲಿಗೆ ಹೋದರೆ ಸಂಸಾರದ ಭಾರವನ್ನು ಹೇಗೆ ಭರಿಸ್ತೀಯಾ?’ ಎಂದರಂತೆ ಪಟ್ಟಾಭಿ. ದೇಶಸೇವೆಯೇ ತಮ್ಮ ಪ್ರಥಮ ಕರ್ತವ್ಯವೆಂದು ಭಾವಿಸಿದವರು ಪಟ್ಟಾಭಿ.

ಬಾಲ್ಯ, ವಿದ್ಯಾಭ್ಯಾಸ

ಪಟ್ಟಾಭಿ ಸೀತಾರಾಮಯ್ಯ ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ಗುಂಡುಗೊಲನು ಗ್ರಾಮದಲ್ಲಿ ೧೮೮೦ನೆಯ ಇಸವಿ ಡಿಸೆಂಬರ್ ೨೪ರಂದು ಜನಿಸಿದರು.  ಅವರ ತಂದೆ ಭೋಗರಾಜು ಸುಬ್ರಹ್ಮಣ್ಯಂ, ತಾಯಿ ಗಂಗಮ್ಮ. ಸುಬ್ರಹ್ಮಣ್ಯ ಗುಂಡುಗೊಲನು ಗ್ರಾಮದ ಶಾನುಭೋಗರಾಗಿದ್ದರು. ಅವರದು ಅಷ್ಟೇನೂ ಶ್ರೀಮಂತ ವಾದ ಕುಟುಂಬವಾಗಿರಲಿಲ್ಲ. ಒಂದು ಬಡ ಕುಟುಂಬದಲ್ಲಿ  ಹುಟ್ಟಿ ಕಷ್ಟನಷ್ಟಗಳನ್ನು ಅನುಭವಿಸಿದರೂ, ಜೀವನದಲ್ಲಿ ಎಷ್ಟೋ ಧ್ಯೇಯಗಳನ್ನು ಸಾಧಿಸಿದ ಮಹಾನ್ ವ್ಯಕ್ತಿತ್ವ ಪಟ್ಟಾಭಿಯವರದು, ಪಟ್ಟಾಭಿಯವರಿಗೆ ನಾಲ್ಕೈದು ವರ್ಷಗಳಾಗಿದ್ದಾಗ  ಅವರ ತಂದೆ ನಿಧನರಾದರು.

ಚಿಕ್ಕಂದಿನಲ್ಲಿ ಪಟ್ಟಾಭಿ ಅವರ ಮೊದಲ ಗುರುಗಳು ತಂದೆಯೇ ಆಗಿದ್ದರು. ಅವರು ತಮಗೆ ಬರುವ ನಾಲ್ಕು ಅಕ್ಷರಗಳನ್ನು ಮಗನಿಗೂ ಕಲಿಸಿದ್ದರು. ಪಟ್ಟಾಭಿಯವರ ಪ್ರಾಥಮಿಕ ವಿದ್ಯಾಭ್ಯಾಸ ಸ್ವಗ್ರಾಮವಾದ ಗುಂಡುಗೊಲ ನಿನಲ್ಲೇ ನಡೆಯಿತು. ಅಲ್ಲಿಂದ ಪ್ರೌಢಶಾಲಾ ವಿದ್ಯೆಗೆ ಏಲೂರು ಎಂಬ ಸಮೀಪದ ತಾಲ್ಲೂಕು ಕೇಂದ್ರಕ್ಕೆ ಪಟ್ಟಾಭಿಯವರು ಹೋಗುತ್ತಿದ್ದರು. ಅಲ್ಲಿಯ ಮಿಷನ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಅವರ ಚಿಕ್ಕಪ್ಪ ಪ್ರತಿತಿಂಗಳು ಕಳುಹಿಸುತ್ತಿದ್ದ ಏಳು ರೂಪಾಯಿಗಳನ್ನು ಬಿಟ್ಟರೆ ಬೇರೆ ಆದಾಯವಿರಲಿಲ್ಲ. ಪಠ್ಯಪುಸ್ತಕ ಹಾಗೂ ಬಟ್ಟೆಗಳನ್ನು ಬೇರೆಯವರಿಂದ ಎರವಲು ಪಡೆದು ಪಟ್ಟಾಭಿ ಕಾಲಕಳೆಯುತ್ತಿದ್ದರು. ಇವೆಲ್ಲ ಕಷ್ಟಗಳು ಇದ್ದರೂ ಅವರು ೧೮೯೪ ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು.

ಏಲೂರಿನಿಂದ ಕಾಲೇಜಿನ ವಿದ್ಯಾಭ್ಯಾಸ ಕ್ಕಾಗಿ ಪಟ್ಟಾಭಿ ಮಚಲಿಪಟ್ಟಣದ ನೋಬಲ್ ಕಾಲೇಜಿಗೆ ಸೇರಿದರು. ಆಗ ಆ ಕಾಲೇಜಿನಲ್ಲಿ ತೆಲುಗುನಾಡಿ ನಾದ್ಯಂತ ಸಮಾಜ ಸುಧಾರಕರೆಂದು ಹೆಸರುವಾಸಿಯಾಗಿದ್ದ ಮಹರ್ಷಿ ರಘುಪತಿ ವೆಂಕಟರತ್ನಂ ಅಧ್ಯಾಪಕ ರಾಗಿದ್ದರು. ಅವರು ಪಟ್ಟಾಭಿಯನ್ನು ವಿಶೇಷಾಭಿಮಾನದಿಂದ ನೋಡುತ್ತಿದ್ದರು. ವೆಂಕಟರತ್ನಂರಂತಹವರ ಸಂಪರ್ಕ ಪಟ್ಟಾಭಿ ಸೀತಾರಾಮಯ್ಯನವರಿಗೆ ವಿಶಿಷ್ಟ ವ್ಯಕ್ತಿತ್ವವನ್ನು ಅನುಗ್ರಹಿಸಿತು. ೧೮೯೬ರಲ್ಲಿ ಎಫ್.ಎ. ಪರೀಕ್ಷೆಯಲ್ಲಿಯೂ ಪಟ್ಟಾಭಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು.

ಎಫ್.ಎ. ಆದಮೇಲೆ ಬಿ.ಎ.ಗೆ ಸೇರಬೇಕೆಂದು  ಪಟ್ಟಾಭಿ ಬಯಸಿದರು. ತಾಯಿತಂದೆಯರಿಗೂ ಮಗನನ್ನು ಓದಿಸಬೇಕೆಂಬ ಆಸೆ. ಆದರೆ ಹಣದ ಕೊರತೆ. ಹಣವಿಲ್ಲದೆ ಓದುವುದಾದರೂ ಹೇಗೆ? ಆದರೆ ಅದೇ ಸಮಯಕ್ಕೆ ಸರಿಯಾಗಿ ತಿಮ್ಮರಾಜು ಶಿವರಾವು ವಿದ್ಯಾರ್ಥಿವೇತನ ಲಭಿಸಿತು. ಅದರ ಸಹಾಯದಿಂದ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ  ಪದವಿ ತರಗತಿಗೆ ಸೇರಿದರು. ಆ ವಯಸ್ಸಿನಲ್ಲಿ ಪಟ್ಟಾಭಿ ಒಳ್ಳೆಯ ವಾಗ್ಮಿಯಾಗಿದ್ದರು. ತೆಲಗು, ಇಂಗ್ಲಿಷ್, ಹಿಂದಿ, ಉರ್ದು ಭಾಷೆಗಳಲ್ಲಿ ಪರಿಣತ ರಾಗಿದ್ದರು. ಆದರೆ ಪಟ್ಟಾಭಿಯವರು  ಆವೇಶಪೂರಿತ ರಾದ ಭಾಷಣಕಾರರಲ್ಲ. ಎಲ್ಲಾ ವಿಷಯಗಳನ್ನೂ ಸಾವಕಾಶವಾಗಿ, ವಿಮರ್ಶಾತ್ಮಕವಾಗಿ ಹೇಳುವ ಜಾಣ್ಮೆ ಅವರಲ್ಲಿತ್ತು.

ಕ್ರಿಶ್ಚಿಯನ್ ಕಾಲೇಜಿನಲ್ಲಿ ಓದಿ ಪದವೀಧರರಾದ ಮೇಲೆ ಇನ್ನೂ ಉನ್ನತ ಶಿಕ್ಷಣ ಪಡೆಯುವ ಉದ್ದೇಶ ಅವರಿಗಿತ್ತು. ಆದರೆ ಅವರು ಮತ್ತೆ ಹಣದ ಅಭಾವವನ್ನು ಎದುರಿಸಬೇಕಾಗಿತ್ತು. ಆದರೆ ಆ ಸಮಯಕ್ಕೆ  ಗಂಜಾಂವೆಂಕಟರತ್ನಂ ಪಂತಲು ಅವರ ನೆರವಿಗೆ ಬಂದರು.

ಮದುವೆ

ಗಂಜಾ ವೆಂಕಟರತ್ನಂ ಆಂಧ್ರದ ಕಾಕಿನಾಡ ಪಟ್ಟಣದ ಪ್ರಸಿದ್ಧ ನ್ಯಾಯವಾದಿ ಹಾಗೂ ಶ್ರೀಮಂತ  ರಾಗಿದ್ದರು. ವೆಂಕಟರತ್ನಂ ಅವರಿಗೆ ಹೆಣ್ಣುಮಕ್ಕಳೇ ಹೊರತು ಗಂಡು ಮಕ್ಕಳಿರಲಿಲ್ಲ. ಅವರು ತಮ್ಮ ಮಕ್ಕಳನ್ನು ವಿದ್ಯಾವಂತರು ಹಾಗೂ ಶ್ರೀಮಂತರಾದವರಿಗೆ ಕೊಟ್ಟು ಮದುವೆ ಮಾಡ ಬೇಕೆಂದಿದ್ದರು. ಅವರು ಒಮ್ಮೆ ಮದರಾಸಿನ ಕ್ರಿಶ್ಚಿಯನ್ ಕಾಲೇಜಿಗೆ ಹೋಗಿದ್ದಾಗ ಪಟ್ಟಾಭಿ ಕಣ್ಣಿಗೆ ಬಿದ್ದರು. ಅವರ ಪರಿಚಯವಾದ ನಂತರ ವೆಂಕಟರತ್ನಂ ವಿದ್ಯೆ ಮತ್ತು ಶೀಲ ಮುಖ್ಯವೇ ಹೊರತು ಹಣವಲ್ಲವೆಂಬುದನ್ನು ಅರ್ಥಮಾಡಿಕೊಂಡರು. ತಮ್ಮ ಮಗಳನ್ನು ಪಟ್ಟಾಭಿ ಸೀತಾರಾಮಯ್ಯನವರಿಗೆ ಕೊಟ್ಟು ಮದುವೆ ಮಾಡಲು ನಿಶ್ಚಯಿಸಿದರು.

ವೆಂಕಟರತಂರವರ ಬಳಿ ಬಹುದೊಡ್ಡ ಗ್ರಂಥಾಲಯ ಇತ್ತು. ತಮ್ಮ ಜ್ಞಾನಭಂಡಾರವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಜಾಣ್ಮೆ ಪಟ್ಟಾಭಿಗೆ ಇದೆಯೆಂದು ಅವರು ನಂಬಿದ್ದರು. ಪಟ್ಟಾಭಿಯವರನ್ನು ವೈದ್ಯಪದವಿಗೆ ಓದಿಸಬೇಕೆಂದುಕೊಂಡರು ವೆಂಕಟರತ್ನಂ. ಅವರ ಪುತ್ರಿ ರಾಜೇಶ್ವರಮ್ಮನನ್ನು ಪಟ್ಟಾಭಿ ಮದುವೆಯಾದರು. ಈ ಮದುವೆ ಪಟ್ಟಾಭಿಯವರ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯನ್ನೇ ತಂದಿತೆಂದು ಹೇಳಬಹುದು.

ವೈದ್ಯರು

ಮಾವನವರ ಸಹಾಯದಿಂದ ವೈದ್ಯಕೀಯ ಶಾಸ್ತ್ರದ ವಿದ್ಯಾರ್ಥಿಯಾದರು. ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಪಟ್ಟಾಭಿಯವರು ಡಾಕ್ಟರ್ ಪಟ್ಟಾಭಿಯಾಗಿ ೧೯೦೬ರಲ್ಲಿ ಮಚಲಿಪಟ್ಟಣಕ್ಕೆ ಬಂದರು. ಅಂದಿನಿಂದ ಹತ್ತು ವರ್ಷಗಳ ಕಾಲ ವೈದ್ಯವೃತ್ತಿಯಲ್ಲಿ ತೊಡಗಿ ಹಣವನ್ನೂ, ಕೀರ್ತಿಯನ್ನೂ, ಪಡೆದರು. ರೋಗ ನಿರ್ಣಯದಲ್ಲೂ, ಉತ್ತಮ ಔಷಧಿಗಳನ್ನು ಕೊಡುವುದರಲ್ಲೂ ಪಟ್ಟಾಭಿಯವರು ಪ್ರವೀಣರೆಂದು ಹೆಸರು ಪಡೆದರು. ವೈದ್ಯವೃತ್ತಿಯಲ್ಲಿ ತೊಡಗಿದ್ದಾಗ ಪಟ್ಟಾಭಿ ಯವರು ಹಣ ಮಾಡುವುದೇ ಮುಖ್ಯ ಎಂದು ಭಾವಿಸಿರಲಿಲ್ಲ. ರೋಗಿಗಳ ನೋವು ಕಡಿಮೆಯಾಗಬೇಕು. ಅವರ ಕಾಯಿಲೆ ಗುಣ ಆಗಬೇಕು. ಇದು ಅವರಿಗೆ ಮುಖ್ಯ. ವೃತ್ತಿಯಲ್ಲಿ ತೊಡಗಿದ ಮೇಲೂ ಅವರಿಗೆ ಪುಸ್ತಕಗಳಲ್ಲಿ ಪ್ರೀತಿ ಕಡಿಮೆಯಾಗಲಿಲ್ಲ, ವಿರಾಮಕಾಲದಲ್ಲಿ ಸಾಧ್ಯವಾದಷ್ಟು ಪುಸ್ತಕಗಳನ್ನು ಓದುತ್ತಿದ್ದರು. ಆತುರದಲ್ಲಿ ಪುಸ್ತಕವನ್ನು ಓದಿ ಮುಗಿಸುತ್ತಿರಲಿಲ್ಲ. ಗಮನವಿಟ್ಟು ಸಂಪೂರ್ಣ ಪುಸ್ತಕ ಓದುತ್ತಿದ್ದರು. ಅವರ ಜ್ಞಾಪಕ ಶಕ್ತಿಯೂ ಅದ್ಭುತವಾದದ್ದು. ಅನಂತರ ರಾಜಕೀಯ ಜೀವನದಲ್ಲಿ ಕಾಲಿಟ್ಟ ಮೇಲೂ, ಶರೀರಶಾಸ್ತ್ರದ ಯಾವ ವಿಷಯವೇ ಆಗಲಿ, ಕೇಳಿದ ತಕ್ಷಣ ಹೇಳುವ ಶಕ್ತಿ ಪಟ್ಟಾಭಿಯವರಿಗೆ ಇತ್ತಂತೆ. ಹತ್ತು ವರ್ಷದ ವೈದ್ಯವೃತ್ತಿಯ ಕಾಲದಲ್ಲಿ ನೂರಾರು ಜನರಿಗೆ ಆರೋಗ್ಯವನ್ನು ತಂದುಕೊಟ್ಟ ಪಟ್ಟಾಭಿಯವರ ಆರೋಗ್ಯವೇ ಕೆಟ್ಟು ಹೋಯಿತು. ಇದಕ್ಕೆ ಕಾರಣ ವಿರಾಮವಿಲ್ಲದೆ ದುಡಿದದ್ದು. ಇದರಿಂದ ವೈದ್ಯವೃತ್ತಿಯನ್ನು ಬೀಳ್ಕೊಟ್ಟು ವಿಶ್ರಾಂತಿಗಾಗಿ ಅವರು ಉದಕಮಂಡಲಕ್ಕೆ ಹೋಗಬೇಕಾಯಿತು.

ದೇಶಸೇವೆ

ವೈದ್ಯವೃತ್ತಿಯನ್ನು ಬಿಟ್ಟಮೇಲೆ ಪಟ್ಟಾಭಿ ತಮ್ಮ ಜನಸೇವೆಯ ಪರಿಧಿಯನ್ನು ವಿಸ್ತರಿಸಿಕೊಂಡರು. ಸ್ವಾತಂತ್ರ್ಯ ಚಳುವಳಿ ಅವರ ಮನಸ್ಸನ್ನು ಸೆಳೆಯಿತು. ಪಟ್ಟಾಭಿ ವಿದ್ಯಾರ್ಥಿಯಾಗಿದ್ದ ಕಾಲದಲ್ಲೇ ದೇಶಸೇವೆಯ ಕುತೂಹಲ ತೋರುತ್ತಿದ್ದರು. ಮದರಾಸಿನಲ್ಲಿ ೧೮೯೮, ೧೯೦೩ ಹಾಗೂ ೧೯೦೮ನೇ ಇಸವಿಗಳಲ್ಲಿ ನಡೆದ ಕಾಂಗ್ರೆಸ್ಸಿನ ವಾರ್ಷಿಕ ಮಹಾಸಭೆಗಳು ಯುವಕರಾಗಿದ್ದ ಪಟ್ಟಾಭಿ ಯನ್ನು ಬಹಳವಾಗಿ ಆಕರ್ಷಿಸಿದವು. ಈ ಸಭೆಗಳಲ್ಲಿನ ಅಧ್ಯಕ್ಷರ ಭಾಷಣಗಳು ಪಟ್ಟಾಭಿಯವರ ಮೇಲೆ ಪ್ರಭಾವ ಬೀರಿದ್ದವು. ೧೯೦೮ನೇ ಇಸವಿಯ ಸಭೆಯಲ್ಲಿ ಪಟ್ಟಾಭಿ ಪಾಲ್ಗೊಂಡು ಪ್ರಮುಖರ ಸಮ್ಮುಖದಲ್ಲಿ ತಮ್ಮ ವಾದಶಕ್ತಿಯನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾದರು. ಅದೇ ಕಾಲದಲ್ಲಿ ‘ವಂದೇಮಾತರಂ’ ಚಳುವಳಿ ಪ್ರಾರಂಭವಾಗಿತ್ತು. ಆಗ ದೇಶದ ನಾನಾ ಭಾಗಗಳಲ್ಲಿ ರಾಷ್ಟ್ರೀಯ ಕಾಲೇಜುಗಳು ಸ್ಥಾಪಿತಗೊಂಡವು. ಪಟ್ಟಾಭಿ, ಮುಟ್ನೂರು ಕೃಷ್ಣಾರಾವ್, ಕೋಪಲ್ಲೆ ಹನುಮಂತರಾವ್ ಸೇರಿ ಮಚಲಿಪಟ್ಟಣದಲ್ಲಿ ’ರಾಷ್ಟ್ರೀಯ ಕಾಲೇಜ’ನ್ನು ಸ್ಥಾಪಿಸಿದರು. ಆ ಕಾಲೇಜು ಯುವಕರಲ್ಲಿ ಉತ್ಸಾಹವನ್ನು ತುಂಬಿ, ದೇಶಕ್ಕಾಗಿ ತ್ಯಾಗಮಾಡುವ ಶಕ್ತಿಯನ್ನು ಕೊಟ್ಟಿತು.

೧೯೧೬ರಲ್ಲಿ ಕಾಂಗ್ರೆಸ್ ಸಂಸ್ಥೆಯ ಸದಸ್ಯರಾದರು. ಆ ಸಂಸ್ಥೆಯ ಏಳಿಗೆಗಾಗಿ ಪಟ್ಟಾಭಿ ನಿರಂತರವಾಗಿ ಶ್ರಮಿಸಿದರು. ಕಾಂಗ್ರೆಸ್ ಚಳುವಳಿಯನ್ನು ನಿರ್ವಹಿಸಲು ದಕ್ಷಿಣ ಭಾರತದಲ್ಲಿ ಅಪಾರ ತ್ಯಾಗ ಮಾಡಿದವರಲ್ಲಿ  ಪಟ್ಟಾಭಿಯವರೇ ಮೊದಲಿಗರು.

ಪಟ್ಟಾಭಿ ಕಾಂಗ್ರೆಸ್ಸಿನ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ೧೯೧೬ ರಿಂದ ಸ್ವಾತಂತ್ರ್ಯ ಲಭಿಸಿದ ಕಾಲದವರೆಗೂ ನಡೆದ ಮುಖ್ಯ ಘಟನೆಗಳಲ್ಲಿ ಸೀತಾರಾಮಯ್ಯನವರ ಪಾತ್ರ ಇದ್ದೇ ಇತ್ತು. ಎಷ್ಟೋ ವಿಷಯಗಳಲ್ಲಿ ಗಾಂಧೀಜಿಗೆ ಸೀತಾರಾಮಯ್ಯ ಬೆಂಬಲಿಗರಾಗಿ ನಿಂತಿದ್ದರು. ಆದುದರಿಂದ ಪಟ್ಟಾಭಿ ಸೀತಾರಾಮಯ್ಯ ಗಾಂಧಿಯವರ ತತ್ವಗಳಿಗೆ ಭಾಷ್ಯಕಾರರೆಂದು ಅನೇಕರು ಹೇಳುವುದುಂಟು.

ಕಾಂಗ್ರೆಸ್ ಸಂಸ್ಥೆಯಲ್ಲಿ ಪಟ್ಟಾಭಿಯವರು ಶ್ರಮವನ್ನು ಲೆಕ್ಕಿಸದೆ ದುಡಿದರು. ಅವರದು ನಿರ್ಭಯ ರೀತಿ. ಬಹು ಹಿರಿಯ ನಾಯಕರ ಅಭಿಪ್ರಾಯಗಳೂ ತಮಗೆ ಸರಿದೋರದಿದ್ದಾಗ ಅವನ್ನು ಅವರು ವಿರೋಧಿಸುತ್ತಿದ್ದರು. ಚಿತ್ತರಂಜನ ದಾಸ್, ಬಾಲಗಂಗಾಧರ ತಿಲಕ್ ಮೊದಲಾದ ನಾಯಕರ ಅಭಿಪ್ರಾಯಗಳನ್ನು ವಿರೋಧಿಸಿದ ಧೀರರು ಅವರು.

೧೯೨೦-೨೧ರ ಅವಧಿಯಲ್ಲಿ ಕಾಂಗ್ರೆಸ್ ಸಂಸ್ಥೆಗಾಗಿ ಪಟ್ಟಾಭಿ ಬಹಳವಾಗಿ ದುಡಿದರು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟವನ್ನು ಚುರುಕು ಗೊಳಿಸಲು ಬಯಸಿದರು. ನಾಯಕರ ಓಡಾಟ, ಕಾಂಗ್ರೆಸ್ ಕಾರ್ಯಕರ್ತರ ಓಡಾಟ, ಸಭೆಗಳು-ಇವಕ್ಕೆಲ್ಲ ಹಣ ಬೇಕಲ್ಲವೆ? ಪಟ್ಟಾಭಿಯವರು ಮಹಾತ್ಮರ ಕೋರಿಕೆಯ ಮೇರೆಗೆ ಒಂದುಕೋಟಿ ರೂಪಾಯಿಯ ನಿಧಿಯನ್ನು ಸಂಗ್ರಹಿಸಲು ಶ್ರಮಿಸಿದರು. ಚಲೇಜಾವ್ ಚಳುವಳಿ, ಅಸ್ಪೃಶ್ಯತಾ ನಿವಾರಣೆ, ಹಿಂದೂ ಮುಸ್ಲಿಮ್ ಸಖ್ಯ, ಖಿಲಾಫತ್ ಸಮಸ್ಯೆ, ಖಾದಿ ಮಾರಾಟ- ಮುಂತಾದವು ಗಳನ್ನು ಕುರಿತು ಭಾಷಣಗಳನ್ನು ಮಾಡಿ ಪ್ರಚಾರಮಾಡಿದ ರಾಷ್ಟ್ರೀಯ ಮುಖಂಡರಲ್ಲಿ ಇವರೂ ಒಬ್ಬರು. ಅನೇಕ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಗಾಂಧೀಜಿಯವರಿಗೆ  ಪಟ್ಟಾಭಿ ನೆರವಾಗಿ ನಿಂತರು. ಗಾಂಧೀಜಿಯವರ ಅಭಿಪ್ರಾಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಚಳುವಳಿಯನ್ನು ಕುರಿತಂತೆ ಮೊದಲಿದ್ದ ಅಭಿಪ್ರಾಯವನ್ನು ಕೊನೆಯವರೆಗೂ ಉಳಿಸಿಕೊಂಡ ಸ್ಥಿರಚಿತ್ತ ಪಟ್ಟಾಭಿಯವರದು.

ಬ್ರಿಟಿಷ್ ಸರ್ಕಾರ ‘ಸೈಮನ್ ಕಮಿಷನ್’ ಎಂಬ ನಿಯೋಗವನ್ನು ೧೯೨೮ ರಲ್ಲಿ ನೇಮಿಸಿತು. ಭಾರತೀಯರು ಸ್ವಾತಂತ್ರ್ಯ ಪಡೆಯಲು ಯೋಗ್ಯರೆ ಎಂದು ಪರಿಶೀಲಿಸುವುದು ನಿಯೋಗದ ಕೆಲಸ. ಇಂಥ ನಿಯೋಗ ವನ್ನು ಕಳುಹಿಸುವುದು ಭಾರತೀಯರಿಗೆ ಅಪಮಾನ ಮಾಡಿದಂತೆ ಎಂದು ಈ ದೇಶದ ಜನಕ್ಕೆ ಎನ್ನಿಸಿತು. ನಿಯೋಗ ಹೋದ ಕಡೆಯಲ್ಲೆಲ್ಲ ಪ್ರತಿಭಟನಾ ಸಭೆಗಳಾದವು. ಸೈಮನ್ ಕಮಿಷನ್ ಮದರಾಸಿಗೆ ಬಂದಾಗ ನಡೆದ ವಿರೋಧಾತ್ಮಕ ಪ್ರದರ್ಶನಗಳಲ್ಲಿ ಪಟ್ಟಾಭಿ, ಟಂಗುಟೂರಿ ಪ್ರಕಾಶಂ, ಬುಲುಸು ಸಾಂಬಮೂರ್ತಿ ಮುಂತಾದವರ ಜೊತೆ ಪಾಲ್ಗೊಂಡಿದ್ದರು. ಆ ಕಾಲದಲ್ಲಿ ನಡೆದ ಯಾವ ಚಳುವಳಿಯಲ್ಲಾಗಲೀ ಪಟ್ಟಾಭಿ ಪಾಲ್ಗೊಳ್ಳದೆ ಇರುತ್ತಿರಲಿಲ್ಲ, ೧೯೨೯ ರಲ್ಲಿ ಪಟ್ಟಾಭಿ ಕಾಂಗ್ರೆಸ್ ಕಾರ್ಯ ನಿರ್ವಾಹಕ ಸಮಿತಿಯ ಸದಸ್ಯ ರಾದರು. ಅಂದಿನಿಂದ ಅನೇಕ ಸಾರಿ ಕಾರ್ಯವರ್ಗದ ಸದಸ್ಯರಾಗಿ ಹಲವಾರು ವಿವಾದಾತ್ಮಕ ವಿಷಯಗಳನ್ನು ಪರಿಹರಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಉಪ್ಪಿನ ಸತ್ಯಾಗ್ರಹ

೧೮೩೬ರಿಂದ ಬ್ರಿಟಿಷ್ ಸರ್ಕಾರದವರು ಹಾಕುತ್ತಿದ್ದ ಉಪ್ಪಿನ ತೆರಿಗೆಯ ವಿವರಗಳನ್ನು ಪಟ್ಟಾಭಿಯವರು ತಮ್ಮ ‘ಜನ್ಮಭೂಮಿ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಅವರ ಲೇಖನಗಳ ಮಾಲೆ ಗಾಂಧೀಜಿ ೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಲು ಸೂಚನೆ ನೀಡಿತು. ದೇಶದಲ್ಲಿ ಅತ್ಯಂತ ಬಡವರಿಗೂ ಉಪ್ಪು ಬೇಕು. ಇದನ್ನು ಸರ್ಕಾರದ ಅಪ್ಪಣೆ ಇಲ್ಲದೆ ಮಾಡುವಂತಿ ರಲಿಲ್ಲ. ಬ್ರಿಟಿಷ್ ಸರ್ಕಾರವನ್ನು ವಿರೋಧಿಸಲು ಗಾಂಧೀಜಿ ಉಪ್ಪನ್ನು ಸಂಕೇತ ಮಾಡಿಕೊಂಡರು. ಸರ್ಕಾರದ ಕಾನೂನನ್ನು ಮೀರಿ ಉಪ್ಪನ್ನು ಮಾಡುವ ಚಳುವಳಿಯನ್ನು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ಪಟ್ಟಾಭಿಯವರು ಆ ಚಳುವಳಿಯಲ್ಲಿ ಪಾತ್ರವಹಿಸಿದುದಕ್ಕಾಗಿ ದಸ್ತಗಿರಿಯಾದರು. ಅಲ್ಲಿಂದ ಮುಂದೆ ಅನೇಕ ಸಾರಿ ದೇಶಕ್ಕಾಗಿ ಕಾರಾಗೃಹವನ್ನೇ ತಮ್ಮ ಮನೆಯನ್ನಾಗಿ ಭಾವಿಸಿದರು. ೧೯೩೧ರಲ್ಲಿ ಮತ್ತೆ ಅವರು ಸೆರೆಮನೆ ಸೇರಬೇಕಾಯಿತು. ಗಾಂಧಿ-ಇರ‍್ವಿನ್‌ರ ಒಪ್ಪಂದಕ್ಕೆ ವಿರೋಧವಾಗಿ ನಡೆದ ಪಿಕೆಟಿಂಗ್ ಮೇಲೆ ಸರ್ಕಾರ ಹಾಕಿದ ನಿಷೇಧಾಜ್ಞೆಯನ್ನು ಧಿಕ್ಕರಿಸಿದ್ದೇ ಇದಕ್ಕೆ ಕಾರಣ. ಆಗ ನ್ಯಾಯಾಲಯದಲ್ಲಿ ಈ ಕೆಳಗಿನಂತೆ ಹೇಳಿದರು.

‘ನ್ಯಾಷನಲ್ ಕಾಂಗ್ರೆಸ್ ಅಖಿಲಭಾರತ ರಾಷ್ಟ್ರೀಯ ಸಂಸ್ಥೆ ಎಂದು ಎಲ್ಲರಿಂದ ಅಂಗೀಕೃತ ವಾಯಿತು. ನಾನು ಆ ಸಂಸ್ಥೆಗೆ ಸೇರಿದವನಾದುದರಿಂದ ನ್ಯಾಯವಿರುದ್ಧವಾದ ಪಿಕೆಟಿಂಗ್ ಮೇಲಿನ ನಿಷೇಧಾಜ್ಞೆಯನ್ನು ಮೀರುವುದು ನನ್ನ ಪರಮಧರ್ಮವೆಂದು ಭಾವಿಸಿದೆ. ಸರ್ಕಾರದವರು ವಿಧಿಸುವ ಕಠಿಣಶಿಕ್ಷೆಗಳಾಗಲೀ, ಲಾಠಿಪ್ರಹಾರಗಳಾಗಲೀ ದೊಡ್ಡ ದೊಡ್ಡ ಜುಲ್ಮಾನೆಗಳಾಗಲೀ ಜನಸಮೂಹವನ್ನು ಶಕ್ತಿಹೀನಗೊಳಿಸಲಾರವು; ಅದು ನನ್ನ ದೃಢವಿಶ್ವಾಸ’

ವಿದೇಶಿ ವಸ್ತು ಬಹಿಷ್ಕಾರ

ಪಿಕೆಟಿಂಗ್ ಮಾಡಿ ಶಿಕ್ಷೆಗೊಳಪಟ್ಟ ಪಟ್ಟಾಬಿ ಯವರು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದರು. ಆದರೆ ಮತ್ತೆ ಅಕ್ಟೋಬರ್ ತಿಂಗಳಲ್ಲಿ ಸೆರೆಮನೆ ಸೇರಿದರು. ವಿದೇಶೀ ವಸ್ತು ಬಹಿಷ್ಕಾರದ ಚಳುವಳಿಯಲ್ಲಿ ಭಾಗವಹಿಸಿದ್ದೇ ಅವರು ಶಿಕ್ಷೆಗೊಳಗಾಗಲು ಕಾರಣ. ಅಕ್ಟೋಬರ್ ೩೦ರಂದು ಬೆಳಿಗ್ಗೆ ಮಚಲಿಪಟ್ಟಣವೆಲ್ಲಾ ಮಾರ್ಕೆಟ್‌ನಲ್ಲಿ ನಿಂತಿತ್ತು. ಅಲ್ಲಿ ವಿದೇಶಿ ವಸ್ತ್ರಗಳನ್ನು ಮಾರುವ ದೊಡ್ಡ ಅಂಗಡಿಯ ಮುಂದೆ ಎಲ್ಲರೂ ನಿಂತಿದ್ದರು. ಪಟ್ಟಾಭಿ ಆ ಅಂಗಡಿಯ ಮಾಲೀಕರನ್ನು ಕರೆದು ‘ನೋಡಪ್ಪಾ, ನಿನ್ನ ವ್ಯಾಪಾರಕ್ಕೆ ಅಡ್ಡಿ ಬರ್ತಾ ಇದೀವಿ’ ಎಂದರು. ಅಷ್ಟರಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮುಂದೆ ಬಂದು ಪಟ್ಟಾಭಿ ಯವರೊಂದಿಗೆ ‘ಸ್ವಾಮಿ ನಿಮಗಾಗಿ ಕಾರು ಕಾದಿದೆ ಬನ್ನಿ’ ಎಂದರು. ಪಟ್ಟಾಭಿ ಮಾತನಾಡದೆ ಕಾರು ಹತ್ತಿದರು. ಮತ್ತೆ ಅವರಿಗೆ ಆರು ತಿಂಗಳ ಕಠಿಣ ಶಿಕ್ಷೆ ಹಾಗೂ ಐದುನೂರು ರೂಪಾಯಿ ಜುಲ್ಮಾನೆಯನ್ನು ವಿಧಿಸಲಾಯಿತು.

ಒಮ್ಮೆ ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಪಟ್ಟಾಭಿಯವರೊಂದಿಗೆ ಲಾಠಿ ಪ್ರಹಾರವನ್ನು ಕುರಿತು ಮಾತನಾಡುತ್ತಾ, ‘ನೋಡಿ ಈ ಜನರ‍್ಗೆಲ್ಲಾ ಮೂಳೆ ಮುರಿದರೇನೇ ಬುದ್ಧಿ ಬರೋದು, ಏನಂತೀರಾ?’ ಎಂದರಂತೆ ಸೀತಾರಾಮಯ್ಯ. ಅವರನ್ನು ನೋಡಿ ಮರುಕಗೊಂಡು, ‘ಆಗಬಹುದು, ಆದರೆ ಹೊಡೆ ಯುವಾಗ ಆ ಏಟು ತಿನ್ನೋ ಮನುಷ್ಯ ನಿಮ್ಮ ಅಣ್ಣನೆಂದೋ ತಮ್ಮನೆಂದೋ ಭಾವಿಸಿ, ಅಷ್ಟೇ ಸಾಕು’ ಎಂದರಂತೆ. ಆ ಮಾತಿನ ಏಟಿಗೆ ಇನ್ಸ್‌ಪೆಕ್ಟರ್ ಗಾಬರಿಗೊಂಡರಂತೆ.

ಕಾಂಗ್ರೆಸ್ಸಿನ ಇತಿಹಾಸಕಾರರು

೧೯೩೫ ರಲ್ಲಿ ಕಾಂಗ್ರೆಸ್ಸಿನ ಚಿನ್ನದ ಹಬ್ಬ ನಡೆಯಿತು. ಅದು ಸ್ಥಾಪಿತವಾದುದು ೧೮೮೫ರ ಡಿಸೆಂಬರಿನಲ್ಲಿ. ಮೊದಲ ಅಧಿವೇಶನ ಮುಂಬಯಿಯಲ್ಲಿ ನಡೆಯಿತು. ಐವತ್ತು ವರ್ಷಗಳಲ್ಲಿ ಅದು ಅದ್ಭುತವಾಗಿ ಬೆಳೆದು ಬಂದಿತ್ತು. ಪ್ರಾರಂಭದ ವರ್ಷಗಳಲ್ಲಿ ಭಾರತ ಸರ್ಕಾರ ಸಹ ಇದಕ್ಕೆ ಪ್ರೋತ್ಸಾಹ ಕೊಟ್ಟಿತು. ೧೮೮೬ ರ ಕಲ್ಕತ್ತ ಅಧಿವೇಶನಕ್ಕೆ ಬಂದ ಕಾಂಗ್ರೆಸ್ ಸದಸ್ಯರನ್ನು ಆಗಿನ ಗೌರ್ನರ್ ಜನರಲ್ ಡಫರಿನ್ ವನಭೋಜನಕ್ಕೆ ಆಹ್ವಾನಿಸಿದ್ದ. ಕಾಂಗ್ರೆಸ್ಸಿನಲ್ಲಿ ಆಸಕ್ತಿ ಇದ್ದವರು ಕೆಲವರು ವಿದ್ವಾಂಸರು ಮಾತ್ರ. ಕ್ರಮೇಣ ಎಲ್ಲ ಬದಲಾಯಿತು. ಕಾಂಗ್ರೆಸ್ ಭಾರತದ  ಸ್ವಾತಂತ್ರ್ಯದ ಹೋರಾಟವನ್ನು ತೀವ್ರಗೊಳಿಸಿತು. ಸ್ವಾತಂತ್ರ್ಯದ ಕಹಳೆಯನ್ನು ನಾಡಿನ ಮೂಲೆಮೂಲೆಯಲ್ಲಿ ಊದಿ ಜನರನ್ನು ಎಚ್ಚರಗೊಳಿಸಿತು. ಅವಿದ್ಯಾವಂತರು, ಹಳ್ಳಿಯ ಜನ ಎಲ್ಲ ಅದರ ಸೈನಿಕರೆನಿಸಿದರು. ಬ್ರಿಟಿಷ್ ಸರ್ಕಾರ ಕೋಪಿಸಿಕೊಂಡಿತು. ನಾಯಕರನ್ನು ಸೆರೆಮನೆಗೆ ದೂಡಿತು, ಅಥವಾ ದೂರದ ಅಂಡಮಾನಿನಲ್ಲಿ ಅಮಾನುಷ ರೀತಿಯಲ್ಲಿ ಸೆರೆ ಯಲ್ಲಿಟ್ಟಿತು. ಪೊಲೀಸರ ಲಾಟಿ, ಸೈನಿಕರ ಗುಂಡು ಎಲ್ಲ ದೇಶಭಕ್ತರನ್ನು ಹೆದರಿಸಲು ಯತ್ನಿಸಿದವು. ಸಾವಿರಾರು ಜನ ಸೆರೆಮನೆ ಸೇರಿದರು. ಕಾಂಗ್ರೆಸ್ ರಾಷ್ಟ್ರಧ್ವಜವನ್ನು ಅಂಗೀಕರಿಸಿತು. ಸಂಪೂರ್ಣ ಸ್ವಾತಂತ್ರ್ಯವೇ ತನ್ನ ಗುರಿ ಎಂದು ಸಾರಿತು. ಸರ್ಕಾರದ ಕೋಪ ಏರಿದಂತೆ ರಾಷ್ಟ್ರನಾಯಕರ ಮತ್ತು ಜನತೆಯ ಹೋರಾಟದ ನಿರ್ಧಾರವೂ ದೃಢವಾಯಿತು.

ಈ ರೋಮಾಂಚಕ ಇತಿಹಾಸವನ್ನು ಕಾಂಗ್ರೆಸ್ಸಿನ ಚಿನ್ನದ ಹಬ್ಬದ ಹೊತ್ತಿಗೆ ಬರೆಸಿ ಪ್ರಕಟಿಸಬೇಕೆಂದು ಕಾಂಗ್ರೆಸ್ ನಾಯಕರಿಗೆ ತೋರಿತು. ಆದರೆ ನಾಡಿನ ಮೂಲೆ ಮೂಲೆಯಲ್ಲಿ ಬೇರುಬಿಟ್ಟ ಈ ರಾಷ್ಟ್ರೀಯ ಸಂಸ್ಥೆಯ, ಅದರ ನಾಯಕತ್ವ, ಅದರ ಯೋಧರ ಐವತ್ತು ವರ್ಷಗಳ ಸಾಧನೆಗಳನ್ನು ಕುರಿತು ಎಷ್ಟೊಂದು ಸಾಮಗ್ರಿಯನ್ನು ಸಂಗ್ರಹಿಸಬೇಕು! ಅದೆಲ್ಲವನ್ನು ಸಂಗ್ರಹಿಸಿದ ನಂತರ ಅಭ್ಯಾಸ ಮಾಡಿ ಅದಕ್ಕೊಂದು ರೂಪ ಕೊಡಬೇಕು.

ಯಾವ ಲೇಖಕನಿಗಾದರೂ ಅಧೈರ್ಯವನ್ನು ಹುಟ್ಟಿಸುವ ಕೆಲಸ ಇದು. ಯಾರನ್ನು ಕೇಳುವುದು?

ಈ ಕೆಲಸಕ್ಕೆ ಪಟ್ಟಾಭಿ ಸೀತಾರಾಮಯ್ಯನವರೇ ಸಮರ್ಥರೆಂದು ಕಾಂಗ್ರೆಸ್ಸಿನ ಹಿರಿಯರು ಅಭಿಪ್ರಾಯ ಪಟ್ಟರು.

ಸ್ವಲ್ಪ ಕಾಲದಲ್ಲೇ ಪಟ್ಟಾಭಿ ಒಂದು ಸಾವಿರದ ಆರುನೂರು ಪುಟಗಳ ಕಾಂಗ್ರೆಸ್ ಚರಿತ್ರೆಯನ್ನು ಬರೆದು ತಮ್ಮ ಅಸಾಧಾರಣ ಶಕ್ತಿಯನ್ನು ತೋರಿಸಿದರು. ಅದರಲ್ಲಿ ಅವರು ಅರ್ಧ ಶತಮಾನದ ಕಾಂಗ್ರೆಸ್ ಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಸ್ವದೇಶದ ದಾಸ್ಯ ಶೃಂಖಲೆಗಳನ್ನು ಮುರಿಯಲು ಸತ್ಯ, ಅಹಿಂಸೆಗಳನ್ನು ಕಾಪಾಡಲು ಪ್ರಾಣತ್ಯಾಗ ಮಾಡಿದ ವೀರರಿಗೆ ಆ ಉದ್ಗ್ರಂಥ ವನ್ನು ಸಮರ್ಪಿಸಿದರು. ಆ ಗ್ರಂಥ ರಚನೆಗಾಗಿಯೇ ಮೀಸಲಿಟ್ಟ ಗೌರವಧನವನ್ನು ಪಟ್ಟಾಭಿಯವರು ಮುಟ್ಟಲಿಲ್ಲ, ಅವರ ಕಾಂಗ್ರೆಸ್ ಚರಿತ್ರೆ ಭಾರತದ ಅನೇಕ ಭಾಷೆಗಳಿಗೆ ಅನುವಾದವಾಯಿತು.

ನಾಯಕತ್ವ

ಎರಡನೆ ಮಹಾಯುದ್ಧ (೧೯೩೯-೪೫) ನಡೆಯುತ್ತಿದ್ದಾಗ ಇಂಗ್ಲೆಂಡಿಗೆ ಭಾರತದ ನೆರವು ಹಲವು ರೀತಿಗಳಲ್ಲಿ ಬೇಕಾಯಿತು. ಭಾರತದ ನಾಯಕರೊಡನೆ ಸಂಧಾನ ನಡೆಸಲು ಸರ್ ಸ್ಟಾಫರ್ಡ್ ಕ್ರಿಪ್ಸ್ ಎಂಬ ಮಂತ್ರಿಯನ್ನೂ ಇತರರನ್ನೂ ಇಂಗ್ಲೆಂಡು ಭಾರತಕ್ಕೆ ಕಳುಹಿಸಿತು.

ಸರ್ ಸ್ಟಾಫರ್ಡ್ ಕ್ರಿಪ್ಸ್ ಕಾಂಗ್ರೆಸ್ ಮುಖಂಡ ರೊಡನೆ ರಾಜಿ ಮಾತುಕತೆ ನಡೆಸಿದಾಗ ಪಟ್ಟಾಭಿ ಸಂಸ್ಥಾನ ಪ್ರಜಾಮಂಡಲಿಯ ಉಪಾಧ್ಯಕ್ಷರಾಗಿ ನಡೆಸಿದ ರಾಯಭಾರ ಅತ್ಯಂತ ಪ್ರಧಾನವಾದದ್ದು.  ಆದರೆ ಕ್ರಿಪ್ಸ್ ರಾಯಭಾರ ವಿಫಲವಾಯಿತು. ಆಗ ‘ಕ್ವಿಟ್ ಇಂಡಿಯ’ ಚಳುವಳಿ ಪ್ರಾರಂಭವಾಗಿ ಸೀತಾರಾಮಯ್ಯ ಹಾಗೂ ಇನ್ನಿತರ ಅನೇಕ ಮುಖಂಡರು ದಸ್ತಗಿರಿ ಆದರು. ೧೯೪೫ರವರೆಗೆ ಪಟ್ಟಾಭಿ ಸೆರೆಮನೆಯಲ್ಲೇ ಇದ್ದರು. ಅಲ್ಲಿಂದ ಬಿಡುಗಡೆಯಾದಮೇಲೆ ಯಾವ ಸ್ಥಾನಕ್ಕೂ ಆಸೆಪಡದೆ ಕೇವಲ ಕಾಂಗ್ರೆಸ್ ವಾದಿಯಾಗಿ, ದೇಶಸೇವಕರಾಗಿರಲು ಅಪೇಕ್ಷಿಸಿದರು.

೧೯೪೮ ರ ಜೈಪುರ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನಕ್ಕೆ ಪಟ್ಟಾಭಿ ಚುನಾಯಿತರಾದರು. ಅವರು ಅಧ್ಯಕ್ಷರಾಗಿದ್ದ ಎರಡು ವರ್ಷಗಳಲ್ಲಿ ದೇಶದಾದ್ಯಂತ ಸಂಚರಿಸಿ ಸಂಸ್ಥೆಯ  ದೈನಂದಿನ ಕಾರ್ಯಕ್ರಮವನ್ನು ಜಾಣ್ಮೆಯಿಂದ ಪಟ್ಟಾಭಿ ನಿರ್ವಹಿಸಿದರು. ಹೀಗೆ ಸ್ವಾತಂತ್ರ್ಯ ಬಂದಮೇಲೆ ಕಾಂಗ್ರೆಸ್ಸಿನ ಹೊಣೆಯನ್ನು ಹೊತ್ತ ಗೌರವ ಅವರಿಗೆ ಸಂದಿತು.

ಆಂಧ್ರ ರಾಜ್ಯವನ್ನು ಆಗಿನ ಮದರಾಸ್ ರಾಜ್ಯದಿಂದ ಬೇರ್ಪಡಿಸಿ, ವಿಶಾಲಾಂಧ್ರವನ್ನು ನಿರ‍್ಮಿಸ ಬೇಕೆನ್ನುವ ಚಳುವಳಿ ೧೯೦೬ರಲ್ಲೇ ಪ್ರಾರಂಭವಾಗಿತ್ತು. ೧೯೧೭ ರಲ್ಲಿ ನಡೆದ ಮುಂಬಯಿ ಕಾಂಗ್ರೆಸ್ ಅಧಿವೇಶನದಲ್ಲಿ ವಿಶಾಲಾಂಧ್ರದ ಬಗ್ಗೆ ಅನೇಕ ಚರ್ಚೆಗಳು ನಡೆದವು. ಅದರ ಫಲವಾಗಿ ಆಂಧ್ರರಿಗೆ ಪ್ರತ್ಯೇಕವಾದ ಕಾಂಗ್ರೆಸ್ ಸಮಿತಿ ಏರ್ಪಟ್ಟಿತು. ದೇಶದಲ್ಲೆಲ್ಲ ಕಾಂಗ್ರೆಸ್ ಮಂತ್ರಿಮಂಡಲಗಳು ಏರ್ಪಟ್ಟ ಕಾಲದಲ್ಲಿ ಆಂಧ್ರರಾಜ್ಯದ ಕಾಂಗ್ರೆಸ್ಸಿಗೆ ಪಟ್ಟಾಭಿ ಅಧ್ಯಕ್ಷರಾಗಿದ್ದರು. ವಿಶಾಲಾಂಧ್ರ ರೂಪುಗೊಳ್ಳುವಲ್ಲಿ ಪಟ್ಟಾಭಿಯವರ ಪಾತ್ರ ಚಿರ ಸ್ಮರಣೀಯವಾದುದು.

ಸಂಸ್ಥಾನಗಳ ಸಮಸ್ಯೆಗಳು

ಭಾರತಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಅನೇಕ ಸಂಸ್ಥಾನಗಳು ಅರಸರ ಆಳ್ವಿಕೆಯಲ್ಲಿದ್ದವು. ಇವುಗಳದೇ ಒಂದು ಸಮಸ್ಯೆಯಾಗಿತ್ತು. ಹಲವರು ರಾಜರು, ನವಾಬರು ಜನರ ಸುಖದುಃಖಗಳಿಗೆ ಗಮನ ಕೊಡದೆ ಮನಸ್ಸು ಬಂದಂತೆ ಆಳುತ್ತಿದ್ದರು. ಖುಷಿ ಬಂದ ಹಾಗೆ ಪ್ರಜೆಗಳ ಹಣವನ್ನು ಖರ್ಚುಮಾಡುತ್ತಿದ್ದರು. ಕೆಲವರು ಬ್ರಿಟಿಷರು ಭಾರತವನ್ನು ಬಿಟ್ಟುಹೋದರೆ ತಾವು ಸ್ವತಂತ್ರ ರಾಜರಾಗಿ ಆಳುತ್ತೇವೆ ಎಂಬ ಕನಸು ಕಾಣುತ್ತಿದ್ದರು. ಲಾಲಾಲಜಪತರಾಯರು ಸ್ಥಾಪಿಸಿದ ಜನಸೇವಾ ಸಂಘ ದವರ  ಆಹ್ವಾನದ ಮೇರೆಗೆ ಪಟ್ಟಾಭಿ ಪಂಜಾಬಿಗೆ ಹೋಗಿ ಸಂಚಾರ ಕೈಗೊಂಡರು. ಆಗ ಸಂಸ್ಥಾನದ ಜನರ ಕೋರಿಕೆಗಳನ್ನು ಪರಿಶೀಲಿಸುವ ಕುತೂಹಲ ಅವರಿಗೆ ಉಂಟಾಯಿತು. ಸಂಸ್ಥಾನಗಳ ಜನರಿಗೆ ಪಟ್ಟಾಭಿಯವರು  ಮಾಡಿದ ಸೇವೆಯನ್ನು ಗುರುತಿಸಿ, ಅವರನ್ನು ಕರಾಚಿಯಲ್ಲಿ ಸಮಾವೇಶಗೊಂಡಿದ್ದ ಅಖಿಲ ಭಾರತ ಪ್ರಜಾಮಂಡಲಿಯ ಸಭೆಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಸಂಸ್ಥಾನಗಳ ಜನರ ಹಕ್ಕುಗಳನ್ನು ಕುರಿತು ವಿವರಿಸಿದರು. ಅನಂತರ ಜೋದ್ಪುರ, ಕಾಥೇವಾಡ ಮುಂತಾದ ಸಂಸ್ಥಾನಗಳಲ್ಲಿ ಸಂಚರಿಸಿ, ಪಟ್ಟಾಭಿ ಅಲ್ಲಿಯ ಜನರ ಸಮಸ್ಯೆಗಳನ್ನು ಅರಿತುಕೊಂಡರು. ತಿರುವಾಂಕೂರ್ ಸಂಸ್ಥಾನದ ಜನರಿಗೂ, ಅದರ ದಿವಾನರಾಗಿದ್ದ ಸರ್ ಸಿ.ಪಿ. ರಾಮಸ್ವಾಮಿ ಅಯ್ಯರ್ ಅವರಿಗೂ ಮನಸ್ತಾಪವುಂಟಾದಾಗ ಪಟ್ಟಾಭಿಯವರು ಮಧ್ಯವರ್ತಿಯಾಗಿ ರಾಜಿ ಮಾಡಿದರು.

ಪಟ್ಟಾಭಿಯವರೊಡನೆ ವ್ಯವಹರಿಸುತ್ತಿದ್ದವರು ಎಷ್ಟು ಹಣವಂತರಾದರೂ ಅಧಿಕಾರಿಗಳಾದರೂ, ಜಮೀನ್ದಾರರಾದರೂ ಪಟ್ಟಾಭಿಯವರ ವರ್ತನೆಯಲ್ಲಿ ಎಳ್ಳಷ್ಟೂ ಬದಲಾವಣೆ ಇರುತ್ತಿರಲಿಲ್ಲ. ಯಾವಾಗಲೂ ತಮಗೆ ಸರಿಯೆನಿಸಿದ್ದನ್ನೇ ಮಾಡುತ್ತಿದ್ದರು.

ಒಂದು ಸಾರಿ ಒಬ್ಬ ಸಂಸ್ಥಾನಾಧೀಶ್ವರರು ಪಟ್ಟಾಭಿಯವರೊಂದಿಗೆ ಮಾತನಾಡಲು ಬಂದಿದ್ದರು. ಸ್ವಲ್ಪ ಹೊತ್ತು ಅವರ ಮನೆಯ ಬಳಿ ಕಾದಮೇಲೆ ಪಟ್ಟಾಭಿಯವರು ಹೊರಬರುವುದನ್ನು ಕಂಡರು. ಪಟ್ಟಾಭಿಯವರು ಎಲ್ಲೋ ಹೋಗುವ ಆತುರದಲ್ಲಿದ್ದರು. ಇನ್ನೇನು ಗಾಡಿ ಏರುತ್ತಾರೆ ಎನ್ನುವಾಗ ಸಂಸ್ಥಾನಾಧೀಶ್ವರರು ನಮಸ್ಕಾರ ಮಾಡಿ ತಾವು ಯಾರೆಂದು ತಿಳಿಸಿದರು.

‘ಯಾಕೆ ಬಂದಿರಿ?’ ಎಂದರು ಪಟ್ಟಾಭಿ.

‘ಏನೂ ಇಲ್ಲ, ತಮ್ಮ ದರ್ಶನಕ್ಕಾಗಿ’ ಎಂದರವರು.

‘ಸರಿ ಆಯ್ತಲ್ಲ, ಇನ್ನು ನೀವು ಹೋಗಬಹುದು’ ಎಂದರು ಪಟ್ಟಾಭಿ.

ಆಗ ಪ್ರಭುಗಳ ಮುಖ ಚಿಕ್ಕದಾಯಿತು.

‘ಅದಲ್ಲಾ ಸ್ವಾಮಿ! ನಮ್ಮ ಸಂಸ್ಥಾನದ ವಿಷಯದಲ್ಲಿ ತಾವು ಮಧ್ಯವರ್ತಿಗಳಾಗಿರಬೇಕು. ಅದನ್ನು ಹೇಳಲು ಬಂದೆ’ ಎಂದರಂತೆ.

‘ಹಾಗೇನು! ಒಳಗೆ ಬನ್ನಿ’ ಎಂದು ಹೇಳಿದ ಪಟ್ಟಾಭಿ ನಾಲ್ಕು ಗಂಟೆಗಳ ಕಾಲ ಆ ರಾಜರಿಗೆ ಸಮಾಧಾನ ಆಗುವ ರೀತಿ ಮಾತನಾಡಿ ಕಳುಹಿಸಿದರು.

ವಿಮಾ ಸಂಸ್ಥೆಗಳು, ಬ್ಯಾಂಕುಗಳು

ಜನರ ಸೇವೆಗಾಗಿ ಪಟ್ಟಾಭಿ ಕೆಲವು ಬ್ಯಾಂಕುಗಳನ್ನೂ, ವಿಮಾ ಸಂಸ್ಥೆಗಳನ್ನೂ ಸ್ಥಾಪಿಸಿದರು.

ಆಗ ದೇಶದ ಪ್ರತಿರಾಜ್ಯದಲ್ಲೂ ವಿದೇಶಿಯರು ಜೀವವಿಮಾ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದರು. ಇದನ್ನು ನೋಡಿದ ಪಟ್ಟಾಭಿ ನಮ್ಮ ಹಣ ವಿದೇಶಿಯರ ಕೈಗೆ ಏಕೆ ಸೇರಬೇಕೆಂದು ಯೋಚಿಸಿ ೧೯೨೫ ರಲ್ಲಿ ‘ಆಂಧ್ರ ಇನ್ಷೂರೆನ್ಸ್ ಕಂಪೆನಿ’  ಮತ್ತು ೧೯೩೫ ರಲ್ಲಿ ‘ಹಿಂದೂಸ್ಥಾನ ಇನ್ಷೂರೆನ್ಸ್ ಕಂಪೆನಿ’ ಎಂಬ ಸಂಸ್ಥೆ ಸ್ಥಾಪಿಸಿ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ದಕ್ಷತೆಯಿಂದ ನಿರ್ವಹಿಸಿದರು.

ಪಟ್ಟಾಭಿಯವರು ಸ್ಥಾಪಿಸಿದ ಆಂಧ್ರ ಬ್ಯಾಂಕ್, ಕೃಷ್ಣಾ ಕೋ ಆಪರೇಟಿವ್ ಬ್ಯಾಂಕ್, ಭಾರತ ಲಕ್ಷ್ಮೀ ಬ್ಯಾಂಕುಗಳು ಅವರಿಗೆ ಆ ಕ್ಷೇತ್ರದಲ್ಲಿದ್ದ ಅನುಭವವನ್ನು ತೋರಿಸುತ್ತವೆ. ಪಟ್ಟಾಭಿಯವರ ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದೆರಡು ಸ್ವಾರಸ್ಯಪೂರ್ಣವಾದ ಕಥೆಗಳಿವೆ.

ಪಟ್ಟಾಭಿಯವರ ಮನೆಗೆ ಒಂದು ಸಾರಿ ಬಂಧುವರ್ಗದವರೊಬ್ಬರು ಬಂದಿದ್ದರಂತೆ. ಬ್ಯಾಂಕಿನ ವ್ಯವಹಾರಗಳಲ್ಲಿ ಪಟ್ಟಾಭಿ ತಮ್ಮವರು, ಹೊರಗಿನವರು ಎಂಬ ವ್ಯತ್ಯಾಸವನ್ನೇ ತೋರುತ್ತಿರಲಿಲ್ಲ. ಬಂದವರು ಪಟ್ಟಾಭಿಯವರೊಂದಿಗೆ, ‘ನಮ್ಮ ಊರಿನ ಬ್ಯಾಂಕಿನವರು ನಿಮ್ಮ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ತಗೊಳ್ತಿದ್ದಾರೆ. ಆದ್ದರಿಂದ ನನ್ನ ಮನೆ ಒತ್ತೆ ಇಟ್ಟುಕೊಂಡು ಸಾಲ ಕೊಡಿಸಿ’ ಎಂದರು.

ಪಟ್ಟಾಭಿ ಇಂಥ ಅನೇಕರನ್ನು ನೋಡಿದ್ದರು.

‘ನೋಡಪ್ಪಾ! ಈಗ ಇಲ್ಲಿ ಕೆಲಸ ಆಗುವುದಿಲ್ಲ. ನಿಮ್ಮ ಊರಲ್ಲೇ ಸಾಲ ತಗೋ’ ಎಂದರಂತೆ ಪಟ್ಟಾಭಿ.

ಆದರೆ ಬಂದ ನೆಂಟರು ಮಾತ್ರ ಮನೆಯಿಂದ ಹೊರಡಲಿಲ್ಲ, ದಿನಗಳು, ವಾರಗಳು, ತಿಂಗಳುಗಳು ಕೂಡ ಕಳೆಯುತ್ತಿದ್ದವು. ಒಂದು ದಿನ ಪಟ್ಟಾಭಿ ಬಂದವರನ್ನು ಕರೆದು, ಸಾವಧಾನವಾಗಿ ಕುಳ್ಳಿರಿಸಿಕೊಂಡು ‘ಅಪ್ಪಾ! ಇಗೋ ಇನ್ನೂರೈವತ್ತು ರೂಪಾಯಿ. ಬಡ್ಡಿಯಲ್ಲಿ ಏನೋ ವ್ಯತ್ಯಾಸ ಬರುತ್ತೆ ಅಂತ ಹೇಳಿದ್ದೀಯಲ್ವಾ? ಇದಕ್ಕಿಂತ ಹೆಚ್ಚು ವ್ಯತ್ಯಾಸ ಇರುವುದಿಲ್ಲ, ಈ ದುಡ್ಡು ತಗೊಂಡು ನಿಮ್ಮ ಊರಲ್ಲೇ ಮನೆ ಒತ್ತೇ ಇಡೋ ದಾರಿ ನೋಡು’ ಎಂದರಂತೆ. ಅವನಿಗೆ ಬ್ಯಾಂಕಿನಿಂದ ದುಡ್ಡು ಕೊಡಿಸಿದರೆ ಅದು ವಾಪಸ್ಸು ಬರುವುದು ಬಹಳ ಕಷ್ಟ ಎಂದು ಪಟ್ಟಾಭಿಯವರಿಗೆ ಗೊತ್ತಿತ್ತು. ಅದಕ್ಕೆ ತಮ್ಮ ಹಣ ಹೋದರೂ ಚಿಂತೆಯಿಲ್ಲವೆಂದು ಭಾವಿಸಿ ನೆಂಟರನ್ನು ಮನೆಯಿಂದ ಕಳುಹಿಸಿದರು.

ಪಟ್ಟಾಭಿಯವರು ಮಿತವ್ಯಯಿಗಳು. ಗಾಂಧೀಜಿ ಯವರ ನಿಷ್ಠ ಅನುಯಾಯಿಯಾಗಿದ್ದುದರಿಂದ ಅವರ ಅನೇಕ ಅಭ್ಯಾಸಗಳು ಪಟ್ಟಾಭಿಯವರಿಗೂ ಬಂದವು. ಮನೆ ಯಲ್ಲಿ ಊಟವಾದ ಮೇಲೆ ಎಲೆಗಳಲ್ಲಿ ಪದಾರ್ಥಗಳನ್ನು ಚೆಲ್ಲಿದ್ದರೆ ಅವರು ಸಹಿಸುತ್ತಿರಲಿಲ್ಲವಂತೆ. ಯಾವುದಾದರೂ ಪ್ರಕಟಣೆಯ ಚೀಟಿ ಇದ್ದರೂ ಅದನ್ನು ಓದಿದ ಮೇಲೆ ಚಿಕ್ಕದಾಗಿ ಹರಿದು ತಮ್ಮ ಬರೆಯುವ ಮೇಜಿನ ಮೇಲಿಟ್ಟು ಅಗತ್ಯವಾದಾಗ ಆ ಹರಿದ ಕಾಗದವನ್ನೇ ಬಳಸುತ್ತಿದ್ದರಂತೆ. ಒಂದೊಂದುಸಾರಿ ಬರೆದ ಹಾಳೆಗಳನ್ನೇ ತೆಗೆದುಕೊಂಡು, ಪಂಕ್ತಿಗಳ ನಡುವೆ ಇರುವ ಖಾಲಿ ಸ್ಥಳದಲ್ಲೇ ಇನ್ನೇನಾ ದರೂ ಬರೆಯುತ್ತಿದ್ದರಂತೆ, ಯಾವ ಚಿಕ್ಕ ವಸ್ತು ವನ್ನಾದರೂ ವ್ಯರ್ಥಮಾಡುವುದು ಒಳ್ಳೆಯದಲ್ಲವೆಂಬುದೇ ಪಟ್ಟಾಭಿಯವರ ಅಭಿಪ್ರಾಯವಾಗಿತ್ತು.

ಕೆಲವು ಸಂಸ್ಥೆಗಳು

ಬ್ಯಾಂಕುಗಳನ್ನೂ, ವಿಮಾ ಸಂಸ್ಥೆಗಳನ್ನೂ ಸ್ಥಾಪಿಸಿದ್ದೇ ಅಲ್ಲದೆ ಇನ್ನೂ ಹಲವಾರು ಸಂಸ್ಥೆಗಳೊಡನೆ ಪಟ್ಟಾಭಿ ಸಂಪರ್ಕವನ್ನಿಟ್ಟುಕೊಂಡಿದ್ದರು. ೧೯೨೮ರಲ್ಲಿ ಅಖಿಲ ಭಾರತ ಚರಖಾ ಸಂಘಕ್ಕೆ ಪಟ್ಟಾಭಿ ಅಧ್ಯಕ್ಷರಾದರು. ಆಗ ಆ ಸಂಘಕ್ಕೆ ಪ್ರಚಾರ ಹೆಚ್ಚಾಗಿ ಆಗಿರಲಿಲ್ಲ, ಮಚಲಿಪಟ್ಟಣದಲ್ಲಿ ಚರಖಾ ಸಂಘದ ಪ್ರಧಾನ ಕಾರ‍್ಯಾಲಯವನ್ನು ತೆರೆದು ಅದರ ಏಳಿಗೆಗಾಗಿ ಬಹಳವಾಗಿ ಶ್ರಮಿಸಿದರು ಪಟ್ಟಾಭಿ.

ಸೀತಾರಾಮಯ್ಯನವರು ಹಿಂದೂಸ್ತಾನ್ ಪಬ್ಲಿಷಿಂಗ್ ಹೌಸ್ ಎಂಬ ಪ್ರಕಟಣಾ ಸಂಸ್ಥೆಯು ಮುಂದುವರಿಯಲು ತುಂಬ ಸಹಾಯ ಮಾಡಿದ್ದರು. ತಾವು ಬರೆದ ಅನೇಕ ಗ್ರಂಥಗಳನ್ನು ಉಚಿತವಾಗಿ ಕೊಟ್ಟು ಪ್ರಕಟಿಸುವಂತೆ ಮಾಡಿದರು. ಇದರಿಂದ ಈ ಪ್ರಕಟಣಾ ಸಂಸ್ಥೆ ದೇಶದಲ್ಲಿ ಒಳ್ಳೆಯ ಹೆಸರನ್ನು ಗಳಿಸಿತು. ಆಲ್ ಇಂಡಿಯಾ ಸ್ಪಿನ್ನರ‍್ಸ್ ಅಸೋಸಿಯೇಷನ್ ಎಂಬ ಸಂಸ್ಥೆಯ ಆಂಧ್ರದ ವಿಭಾಗವನ್ನು ತೆರೆದದ್ದು ಪಟ್ಟಾಭಿಯವರೇ. ಭಾಷಾಭಿವೃದ್ಧಿಗೂ ಇವರು ಸಲ್ಲಿಸಿದ ಸೇವೆ ಚಿರಸ್ಮರಣೀಯ ವಾದುದು. ‘ಆಂಧ್ರ ಭಾಷಾಭಿವೃದ್ಧಿ ಮಂಡಲಿ’ ಎಂಬುದನ್ನು ಸ್ಥಾಪಿಸಿ ತೆಲುಗು ಭಾಷೆಯ ಸೇವೆಗೆ ಅವಕಾಶ ಕಲ್ಪಿಸಿದರು.

ಪತ್ರಿಕಾ ಪ್ರಪಂಚ

ರಾಜಕೀಯ ಪರವಾದ ಆಸಕ್ತಿ ಇರುವವರು ನಿರ್ಭೀತಿಯಿಂದ ಸ್ವಂತ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂಬುದನ್ನು ಪಟ್ಟಾಭಿ ಮನಗಂಡಿದ್ದರು. ಆದುದರಿಂದ ಅವರು ಕೆಲವು ಪತ್ರಿಕೆಗಳನ್ನು ಪ್ರಾರಂಭಿಸಿ ಅವುಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.

‘ಜನ್ಮಭೂಮಿ’(೧೯೧೯) ಪಟ್ಟಾಭಿ ಪ್ರಾರಂಭಿಸಿದ ಪತ್ರಿಕೆಗಳಲ್ಲಿ ಪ್ರಧಾನವಾದುದು. ಇದು ಮಚಲಿಪಟ್ಟಣದಿಂದ ಹೊರಬರುತ್ತಿದ್ದ ಆಂಗ್ಲ ವಾರಪತ್ರಿಕೆ. ಈ ರಾಷ್ಟ್ರೀಯ ಪತ್ರಿಕೆಯಲ್ಲಿ ಪಟ್ಟಾಭಿ ಕೆಚ್ಚೆದೆಯ ಸಂಪಾದಕೀಯಗಳನ್ನು ಬರೆದು, ಗಾಂಧೀಜಿ ತತ್ವಗಳನ್ನು, ತಮ್ಮ ವ್ಯಾಖ್ಯಾನಗಳನ್ನು ಪ್ರಕಟಿಸುತ್ತಿದ್ದರು. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಈ ಪತ್ರಿಕೆ ಬಹಳ ಪ್ರಚಾರದಲ್ಲಿತ್ತು. ಆ ಕಾಲದಲ್ಲಿ ಮಚಲಿಪಟ್ಟಣದಿಂದ ಹೊರಬರುತ್ತಿದ್ದ ಪತ್ರಿಕೆಗಳಲ್ಲಿ ಅತ್ಯಂತ ಪ್ರಸಿದ್ಧವಾದವು ಇಂಗ್ಲಿಷಿನಲ್ಲಿ  ‘ಜನ್ಮಭೂಮಿ,’ ತೆಲುಗಿನಲ್ಲಿ ಮುಟ್ನೂರು ಕೃಷ್ಣರಾಯರ ‘ಕೃಷ್ಣಾಪತ್ರಿಕೆ’. ಆಗಿನ ಕಾಲದಲ್ಲಿ ಪತ್ರಿಕಾ ಸಂಪಾದಕರಾಗಿ ದೇಶದಲ್ಲೆಲ್ಲಾ ಪ್ರಸಿದ್ಧರಾದ ಪಟ್ಟಾಭಿಯವರನ್ನು ಮುಂಬಯಿಯ ‘ಬಾಂಬೆ ಕ್ರಾನಿಕಲ್’ ಪತ್ರಿಕೆಯ ಮಾಲೀಕರು ತಮ್ಮ ಪತ್ರಿಕೆಯನ್ನು ನಡೆಸ ಬೇಕೆಂದು ಕೋರಿದರಂತೆ. ‘ಜನ್ಮಭೂಮಿ’ಯನ್ನು ಬಿಟ್ಟು ಬರಲಾಗುವುದಿಲ್ಲವೆಂದು ವಿನಯಪೂರ್ವಕವಾಗಿ ಉತ್ತರಿಸಿದರಂತೆ ಪಟ್ಟಾಭಿ.

‘ಇಂಡಿಯನ್ ರಿಪಬ್ಲಿಕ್’ ಎಂಬ ಇಂಗ್ಲಿಷ್ ದಿನಪತ್ರಿಕೆಯನ್ನು ಪಟ್ಟಾಭಿ ಕೆಲವು ದಿವಸ ನಡೆಸಿದ್ದರು. ತಮಗೆ ಅಭಿಮಾನಪಾತ್ರವಾಗಿದ್ದ ಸಹಕಾರ ಚಳುವಳಿ ಯನ್ನು ಪ್ರಚಾರಗೊಳಿಸುವ ಉದ್ದೇಶದಿಂದ ‘ತೆಲುಗು ಸಹಕಾರ ಪತ್ರಿಕೆ’ ಎಂಬುದನ್ನು ಪ್ರಾರಂಭಿಸಿದರು. ೧೯೧೭ ರಲ್ಲಿ ನಡೆದ ಆಂಧ್ರ ರಾಜ್ಯದ ಸಹಕಾರ ಸಮ್ಮೇಳನಕ್ಕೆ ಅವರು ಅಧ್ಯಕ್ಷರೂ ಆಗಿದ್ದರು. ಆ ಸಂದರ್ಭದಲ್ಲಿ ಸಹಕಾರ ಚಳುವಳಿಯ ಪ್ರಾಧಾನ್ಯವನ್ನು ಕುರಿತು ಪಟ್ಟಾಭಿ ಮಾಡಿದ ಭಾಷಣ ಚಿರಸ್ಮರಣೀಯವಾದುದು. ವಿವಿಧ ಸಂಸ್ಥಾನಗಳ ಜನರ ಏಳಿಗೆಗಾಗಿ ಶ್ರಮಿಸಿದ ಪಟ್ಟಾಭಿ ’ಸ್ಟೇಟ್ಸ್ ಪೀಪಲ್’ ಎಂಬ ಆಂಗ್ಲ ಪಕ್ಷ ಪತ್ರಿಕೆಯ ಸಂಪಾದಕರಾಗಿದ್ದು ಜನ ಸಾಮಾನ್ಯರ ಮೆಚ್ಚುಗೆಯನ್ನು ಪಡೆದರು.

ಗ್ರಂಥಕರ್ತರು

ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿರು ವವರಿಗೆ ಸಾಹಿತ್ಯ ರಚನಾವ್ಯಾಸಂಗಕ್ಕೆ ಕೈಹಾಕುವುದು ಕಷ್ಟದ ಕೆಲಸ. ಚಿಕ್ಕವಯಸ್ಸಿನಿಂದ ಪಟ್ಟಾಭಿ ಪುಸ್ತಕಪಠನ ಮತ್ತು ಭಾಷಣಕಲೆಗಳಲ್ಲಿ ಆಸಕ್ತಿ ತೋರುತ್ತಿದ್ದರು. ಅನಂತರದ ಕಾಲದಲ್ಲಿ ಪುಸ್ತಕ ರಚನೆಗೂ ತೊಡಗಿ ವಿವಿಧ ಕ್ಷೇತ್ರಗಳಲ್ಲಿ ಪರಿಣತರೆಂಬ ಪ್ರಶಂಸೆಗೆ ಪಾತ್ರರಾದರು.

ವೃತ್ತಿಯಿಂದ ವೈದ್ಯರೂ ಪ್ರವೃತ್ತಿಯಿಂದ ರಾಜಕಾರಣಿಗಳೂ ಆಗಿದ್ದ ಪಟ್ಟಾಭಿ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಹತ್ತು ವರ್ಷ ವೈದ್ಯವೃತ್ತಿಯಲ್ಲಿ ತೊಡಗಿದ್ದಾಗ ಆ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಗ್ರಂಥಗಳನ್ನು ಅಭ್ಯಸಿಸಿ ಪಟ್ಟಾಭಿಯವರು ತೆಲುಗಿನಲ್ಲಿ ‘ಆರೋಗ್ಯಶಾಸ್ತ್ರ’ವೆಂಬ ಗ್ರಂಥವನ್ನು ಬರೆದರು(೧೯೧೧). ಅನಂತರದ ಕಾಲದಲ್ಲಿ ಭಾರತದ ರಾಜಕೀಯ ಪರಿಸ್ಥಿತಿಗಳ ಬಗೆಗೆ ಪಟ್ಟಾಭಿಯವರು ತಳೆದಿದ್ದ ನಿಲುವನ್ನು ಅವರ ವಿವಿಧ ರಚನೆಗಳಲ್ಲಿ ಕಾಣಬಹುದು. ರಾಷ್ಟ್ರೀಯ ವಿದ್ಯಾವಿಧಾನ (೧೯೧೨), ಭಾರತದ ರಾಷ್ಟ್ರೀಯತೆ (೧೯೧೩), ಆರ್ಥಿಕರಂಗದಲ್ಲಿ ಭಾರತದ ಮುನ್ನಡೆ (೧೯೩೬) ಮುಂತಾದ ಗ್ರಂಥಗಳು ಕೆಲವು ರಾಷ್ಟ್ರೀಯ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತವೆ. ಪಟ್ಟಾಭಿಯವರಿಗೆ ಸಹಕಾರ ಚಳುವಳಿಯಲ್ಲಿರುವ ಆಸಕ್ತಿಯನ್ನು ತೋರುವಂತಹದು, ಅವರ ‘ಸಹಕಾರೋದ್ಯಮ’ವೆಂಬ ಪುಸ್ತಕ. ಕಾಂಗ್ರೆಸ್ಸಿನ ಚಿನ್ನದ ಹಬ್ಬದ ಸಂದರ್ಭದಲ್ಲಿ ಅವರು ರಚಿಸಿದ ಕಾಂಗ್ರೆಸ್ ಸಂಸ್ಥೆಯ ಇತಿಹಾಸ ಐವತ್ತು ವರ್ಷಗಳ ಕಾಲದ ಭಾರತದ ಸ್ವರೂಪವನ್ನು ಮನದಟ್ಟು ಮಾಡಿಕೊಡುತ್ತದೆ. ಸೆರೆಮನೆಯಲ್ಲಿದ್ದಾಗಲೂ ಪಟ್ಟಾಭಿಯವರು ಐದಾರು ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಒಂದು ಗ್ರಂಥ ಖಾದಿಗೆ ಸಂಬಂಧಿಸಿದ್ದು. ‘ಗಾಂಧಿ ಮತ್ತು ಸಮಾಜವಾದ, ‘ಪ್ರಪಂಚದ ರಾಜ್ಯಾಂಗಗಳು, ‘ಫೆದರ‍್ಸ್ ಅಂಡ್ ಸ್ಟೋನ್ಸ್’ ಎಂಬ ಪುಸ್ತಕಗಳನ್ನು ಅವರು ಸೆರೆಮನೆಯಲ್ಲೇ ರಚಿಸಿದರು.

೧೯೫೨ ರಲ್ಲಿ ಮಧ್ಯಪ್ರದೇಶದ ರಾಜ್ಯಪಾಲರಾಗಿ ಪಟ್ಟಾಭಿಯವರು ನೇಮಕಗೊಂಡರು. ಆ ಪದವಿಯನ್ನು ನಿರ್ವಹಿಸುವುದರಲ್ಲಿ ಅವರು ತೋರಿದ ಜಾಣ್ಮೆ ಎಲ್ಲರ ಪ್ರಶಂಸೆಯನ್ನೂ ಗಳಿಸಿತು. ನಾಗಪುರದ ಲಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಅವರ ಭಾಷಣ, ಆ ಶಾಸ್ತ್ರದಲ್ಲಿ ನುರಿತವರಿಗೂ ಆಶ್ಚರ್ಯವನ್ನುಂಟುಮಾಡಿತು. ಭಿನ್ನ ಭಿನ್ನ ವಿಷಯಗಳಲ್ಲಿದ್ದ ಅವರ ವಿದ್ವತ್ತಿಗೆ ಇದೊಂದು ಉದಾಹರಣೆ.

ವ್ಯಕ್ತಿತ್ವ

ಪಟ್ಟಾಭಿಯವರದು ನಿರಾಡಂಬರ ಜೀವನ. ಒಮ್ಮೆ ಅವರು ಮೈಸೂರಿಗೆ ಭೇಟಿ ನೀಡಿದ್ದರು. ಅವರಿಗೆ ಕನ್ನಂಬಾಡಿಕಟ್ಟೆಯನ್ನು ನೋಡಬೇಕೆಂದೆನಿಸಿತು. ಅವರು ಅಲ್ಲಿಗೆ ಹೋದಾಗ ಇಂಜಿನಿಯರ್‌ಗಳೆಲ್ಲ ರಜೆಯ ವಿಶ್ರಾಂತಿಯನ್ನನುಭವಿಸುತ್ತಿದ್ದರು. ಮಾಮೂಲಿ ಪಂಚೆ, ಜುಬ್ಬ, ಉತ್ತರೀಯ ಇವೇ ಅವರ ಉಡುಪುಗಳು. ಇಂತಹ ನಿರಾಡಂಬರ ವ್ಯಕ್ತಿಯೊಂದಿಗೆ ಆ ಅಧಿಕಾರಿಗಳು ಮಾತನಾಡುವರೇ! ‘ನಾನು ಪಟ್ಟಾಭಿ ಸೀತಾರಾಮಯ್ಯ’ ಎಂದು ಇವರೂ ಹೇಳಿಕೊಳ್ಳಲಿಲ್ಲ. ಅಧಿಕಾರಿಗಳೊಡನೆ ಮಾತನಾಡುತ್ತ ಪಟ್ಟಾಭಿಯವರು ಕೆಲವು ಪ್ರಶ್ನೆಗಳನ್ನು ಕೇಳಿದರು. ಹಿರಿಯ ಇಂಜಿನಿಯರುಗಳಿಗೆ ಮಾತ್ರ ಹೊಳೆಯಬಹುದಾದ ಪ್ರಶ್ನೆಗಳು ಅವು. ಅದನ್ನು ಕೇಳಿದ ಕೂಡಲೇ ‘ಇವರು ಯಾರೋ ದೊಡ್ಡವರೇ’ ಎಂದುಕೊಂಡು ಇಂಜಿನಿಯರ್‌ಗಳು ಆ ಪರಿಸರಗಳನ್ನೆಲ್ಲ ತೋರಿಸಿದರಂತೆ. ಆ ದಾರಿಯಲ್ಲಿ ಒಬ್ಬ ಪರಿಚಯಸ್ಥರು ಸಿಕ್ಕಿ, ‘ಪಟ್ಟಾಭಿಯವರೇ, ಯಾವಾಗ ಬಂದಿರಿ?’ ಎಂದು ಆಶ್ಚರ್ಯದಿಂದ ಕೇಳಿದರಂತೆ. ಇವರು ಪಟ್ಟಾಭಿ ಎಂದು ತಿಳಿದ ಅಧಿಕಾರಿಗಳು ಆ ದಿನ ಭಾನುವಾರವೆಂಬುದನ್ನೇ ಮರೆತು ಎಲ್ಲಾ ಕಚೇರಿಗಳನ್ನೂ ತೆರೆದರಂತೆ.

ರಾಜಕೀಯದ ಅನೇಕ ಚಟುವಟಿಕೆಗಳಲ್ಲಿಯೂ ಪಟ್ಟಾಭಿ ತಾವು ಮಾಡುತ್ತಿರುವುದು ಘನವಾದ ಕಾರ‍್ಯವೆಂದು ಎಂದೂ ಹೇಳಿಕೊಂಡವರಲ. ತಾವು ಮಾಡಬೇಕಾದು ದನ್ನು ಬೇರೆಯವರಿಗೆ ತಿಳಿಯದಂತೆಯೇ ಪೂರ್ತಿ ಮಾಡುವ ಸ್ವಭಾವ ಅವರದು, ‘ನಾನು ದೇಶೋದ್ಧಾರಕ’ ಎಂದು ಹೇಳಿಕೊಳ್ಳುವುದು, ‘ನೀನು ದೇಶದ್ರೋಹಿ’ ಎಂದು ನಿಂದಿಸುವುದು ಇವೆರಡೂ ಪಟ್ಟಾಭಿಗೆ ಹಿಡಿಸುತ್ತಿರಲಿಲ್ಲ.

ಹೊಗಳಿಕೆಗೆ ಮಣಿದು ತನ್ನ ಮನಸ್ಸಿಗೆ ಹಿಡಿಸದ ಕೆಲಸಗಳನ್ನು ಪಟ್ಟಾಭಿ ಎಂದೂ ಮಾಡುತ್ತಿರಲಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಚಳುವಳಿಗಳಲ್ಲಿ ಭಾಗವಹಿಸಿ ಗಣ್ಯವ್ಯಕ್ತಿ ಎಂದೆನಿಸಿಕೊಂಡ ಮೇಲೂ ಪಟ್ಟಾಭಿ ದರ್ಪವನ್ನು ಪ್ರದರ್ಶಿಸುತ್ತಿರಲಿಲ್ಲ. ಒಂದು ಸಾರಿ ಅವರಿಂದ ಸಹಾಯವನ್ನು ಪಡೆಯಲು ಬಂದವರೊಬ್ಬರು ಹೀಗೆಂದರಂತೆ: ‘ನಾವು ನಿಮ್ಮ ಅನುಯಾಯಿಗಳು. ಒಂದು ಆದರ್ಶವನ್ನಿಟ್ಟುಕೊಂಡು ಈ ಚಳುವಳಿಯನ್ನು ಶುರುಮಾಡಿದ್ದೇವೆ. ಅದಕೋಸ್ಕರ ನಿಮ್ಮ ಬ್ಯಾಂಕಿನಲ್ಲಿ ತಗುಲುಹಾಕಿರುವ ನಿಮ್ಮ ಭಾವಚಿತ್ರವನ್ನು ಕೊಟ್ಟರೆ ಬ್ಲಾಕ್ ಮಾಡಿಸಿಕೊಳ್ಳುತ್ತೇವೆ’. ಅದಕ್ಕೆ ಪಟ್ಟಾಭಿಯವರು ಹೀಗೆಂದರಂತೆ: ‘ಹೌದೆ? ನಾನು ಯಾವ ದೊಡ್ಡ ಸೇವೆ ಮಾಡಿದ್ದೇನೆ? ನನ್ನ ಭಾವಚಿತ್ರ ನಿಮಗೇಕೆ?’  ಈ ಮಾತಿನ ವರಸೆಗೆ ಬಂದವರೆಲ್ಲ ತಬ್ಬಿಬ್ಬಾದರಂತೆ.

ಪಟ್ಟಾಭಿಯವರದು ಯಾವಾಗಲೂ ಸ್ಪಷ್ಟವಾದ, ಖಂಡಿತವಾದ ಮಾತು. ಒಂದು ಸಾರಿ ಯಾರೋ ಒಬ್ಬರು ಇವರೊಂದಿಗೆ ಬೀಗತನ ನಡೆಸಲು ಬಂದಾಗ, ಪಟ್ಟಾಭಿ ಹೀಗೆಂದರಂತೆ: ‘ನೋಡಿ ನನಗೆ ದೊಡ್ಡ ಆಸ್ತಿ ಇದೆ ಅಂತ, ನನ್ನ ಮಕ್ಕಳು ಅದನ್ನು ಅನುಭವಿಸ್ತಾರೆ ಅಂತ ಅಂದುಕೋಬೇಡಿ, ನಾನೊಬ್ಬರಿಗೆ ಕೊಡಬೇಕಾಗಿಲ್ಲ ಬೇರೆಯವರೂ ನನಗೆ ಕೊಡಬೇಕಾಗಿಲ್ಲ. ಇದೇ ನನ್ನ ಸ್ಥಿತಿ’.

ಭಾಷಣಕಾರರು

ಪತ್ರಿಕೆಗಳಲ್ಲಿ ಬರೆದರೂ, ಭಾಷಣವನ್ನು ಮಾಡಿದರೂ ಪಟ್ಟಾಭಿ ಪ್ರತಿ ವಿಷಯವನ್ನೂ ಚೆನ್ನಾಗಿ ಯೋಚಿಸಿ ತಮ್ಮ ಅಭಿಪ್ರಾಯಗಳನ್ನು ಜನರ ಮುಂದಿಡುತ್ತಿದ್ದರು.

ಅವರ ಮಾತುಗಳು ಆಸಕ್ತಿಕರವಾದ ಉಪಾಖ್ಯಾನ ಗಳಿಂದ, ಹಾಸ್ಯೋಕ್ತಿಗಳಿಂದ, ಲೋಕಜ್ಞಾನದಿಂದ ಕೂಡಿರುತ್ತಿದ್ದವು. ಮೊದಲು ತಾವು ಹೇಳಬೇಕಾದ ವಿಷಯವನ್ನು ಅನೇಕ ಭಾಗಗಳಾಗಿ ಮಾಡಿಕೊಂಡು ಅದನ್ನು ಕುರಿತು ಮತ್ತೆ ಮತ್ತೆ ಯೋಚಿಸಿ, ಬೇರೆಯವರು ಹಾಕಬಹುದಾದ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಮಾಡಿ ಕೊಂಡು ಅವರು ಭಾಷಣ ಮಾಡುತ್ತಿದ್ದರು. ಅವರ ಮಾತು ಮೃದು; ಅಲ್ಲಲ್ಲಿ ಹಾಸ್ಯ ಮಿಂಚುತ್ತಿತ್ತು.

ಅನೇಕ ಕಾಂಗ್ರೆಸ್ ಅಧಿವೇಶನಗಳಲ್ಲಿ ಮಹಾ ನಾಯಕರ ವಾದಗಳನ್ನೂ ಪ್ರತಿಭಟಿಸಿ ಪಟ್ಟಾಭಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು.  ಆದರೆ ಸಾಕಷ್ಟು ಯೋಚಿಸದೆ ಉದ್ವೇಗದಿಂದ ಎಂದೂ ಅವರು ಟೀಕೆ ಮಾಡುತ್ತಿರಲಿಲ್ಲ. ಬೇರೆಯವರ ಮಾತುಗಳನ್ನು ಶ್ರದ್ಧೆಯಿಂದ ಕೇಳಿ ತಮ್ಮ ವಾದದೊಂದಿಗೆ ಅದನ್ನು ಹೋಲಿಸಿ ಎಲ್ಲ ಸಂದೇಹಗಳನ್ನೂ ಪರಿಹರಿಸಿಕೊಂಡು ಕೊನೆಗೆ ’ನಿಮ್ಮ ತಪ್ಪು ಇಲ್ಲಿದೆ’ ಎಂದು ಹೇಳುತ್ತಿದ್ದರು. ಪಟ್ಟಾಭಿಯವರ ವಾದವೈಖರಿ, ಪ್ರತಿವಾದ ಖಂಡನೆ ಎರಡೂ ಸಹೃದಯರ ಪ್ರಶಂಸೆಯನ್ನು ಪಡೆಯುತ್ತಿದ್ದವು.

ಪಟ್ಟಾಭಿಯವರ ವಾದ ನೈಪುಣ್ಯ ಒಂದು ಭಾಷೆಗೇ ಸೀಮಿತವಾಗಿರಲಿಲ್ಲ. ಅವರು ತೆಲುಗಿನಲ್ಲಿ ಪ್ರಚಂಡ ಭಾಷಣಕಾರರಾಗಿದ್ದರು. ಮುಂಬಯಿಯ ಕಾಂಗ್ರೆಸ್ ಅಧಿವೇಶನದಲ್ಲಿ ಪಟ್ಟಾಭಿ ಉರ್ದು ಭಾಷೆಯಲ್ಲಿ ಮಾತನಾಡಿದ್ದರು. ದಕ್ಷಿಣ ಭಾರತದ ಹಿಂದೀ ಪ್ರಚಾರ ಸಭೆಯ ಘಟಿಕೋತ್ಸವದ ಭಾಷಣವನ್ನು ಹಿಂದಿಯಲ್ಲಿ ಮಾಡಿದರು. ಕಾಕಿನಾಡದ ಕಾಂಗ್ರೆಸ್ ಸಮ್ಮೇಳನದಲ್ಲಿ ಇನ್ನೂ ಅನೇಕ ಕಡೆ ಇಂಗ್ಲಿಷಿನಲ್ಲಿ ಭಾಷಣ ಮಾಡಿದ್ದರು. ಹೀಗೆ ಅನೇಕ ಭಾಷೆಗಳಲ್ಲಿ ಒಂದೇ ರೀತಿಯ ವಿದ್ವತ್ತನ್ನು ತೋರಿದ ವಿದ್ವಾಂಸರು ಪಟ್ಟಾಭಿ.

ಮೇಧಾವಿ

ಪಟ್ಟಾಭಿಯವರ ಜ್ಞಾಪಕಶಕ್ತಿ ಬೆರಗು ಗೊಳಿಸು ವಂಥದು. ಅವರು ಕೋಟಿಗಟ್ಟಲೆ ರೂಪಾಯಿಯ ವ್ಯವಹಾರವನ್ನು ಚಾಕಚಕ್ಯತೆಯಿಂದ ನಡೆಸುತ್ತಿದ್ದರು. ಹಲವಾರು ಸಂಸ್ಥೆಗಳ ಹೊಣೆಯನ್ನು ಹೊತ್ತಿದ್ದರು. ರಾಜಕೀಯದಲ್ಲಿ ಖಾದಿ ಪ್ರಚಾರದಿಂದ ದುಂಡುಮೇಜಿನ ಪರಿಷತ್ತಿನವರೆಗೆ ಎಲ್ಲಾ ವಿಷಯಗಳಲ್ಲೂ ಭಾಗಿ ಯಾಗಿದ್ದರು. ಸಹಕಾರ ಚಳುವಳಿಯನ್ನು ಪ್ರಾರಂಭಿಸಿದ ವರಲ್ಲಿ ಇವರೂ ಒಬ್ಬರು. ಬ್ಯಾಂಕುಗಳನ್ನು ಸ್ಥಾಪಿಸಿದರು. ಕಾಲೇಜುಗಳನ್ನು ಕಟ್ಟಿಸಿದರು. ವಿಮಾ ಸಂಸ್ಥೆಗಳನ್ನು ಪ್ರಾರಂಭಿಸಿದರು. ಇಷ್ಟೆಲ್ಲಾ ಕೆಲಸಗಳಲ್ಲಿ ತೊಡಗಿದ್ದರೂ ಬೀದಿಯಲ್ಲಿ ಹೋಗುತ್ತಿದ್ದಾಗ ತಮಗೆ ಎಂದೋ ಪರಿಚಿತನಾಗಿದ್ದ ಸಾಮಾನ್ಯ ವ್ಯಕ್ತಿಯನ್ನು ಕಂಡರೂ ನಿಲ್ಲುತ್ತಿದ್ದರು. ‘ನಿನ್ನನ್ನೆಲ್ಲೋ ನೋಡಿದ್ದೆ, ಅಲ್ಲವೆ?’ ಎಂದು ಜ್ಞಾಪಿಸಿಕೊಂಡು ಅವನು ಯಾರು, ಯಾವ ಸಂದರ್ಭದಲ್ಲಿ ತಾವು ಅವನನ್ನು ನೋಡಿದ್ದು ಎಂಬುದನ್ನೆಲ್ಲ ಹೇಳುತ್ತಿದ್ದರು. ವೈದ್ಯವೃತ್ತಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳು ಅವರ ಬಾಯಲ್ಲೇ ಇರುತ್ತಿದ್ದವು.

ಪಟ್ಟಾಭಿಯವರ ನಿಶಿತಮತಿಯನ್ನು ಕುರಿತು ಒಂದೆರಡು ಪ್ರಸಂಗಗಳಿವೆ. ಒಂದು ದಿನ ಒಬ್ಬ ಮುದುಕ ಪಟ್ಟಾಭಿಯವರನ್ನು ನೋಡಲು ಬಂದು, ಹೊರಗಡೆ ಕುಳಿತಿರುವ ಪಟ್ಟಾಭಿಯವರನ್ನು ನೋಡದೆಯೇ ಒಳಗೆ ಹೋದನಂತೆ. ಆತನನ್ನು ಕರೆದು ಪಟ್ಟಾಭಿ, ‘ಏನಪ್ಪಾ ಕಣ್ಣು ಸರಿಯಾಗಿ ಕಾಣಿಸೋದಿಲ್ವಾ? ತೋರಿಸೋಕೆ ಬಂದಿ ದ್ದೀಯಾ!’ ಎಂದರಂತೆ. ‘ಹೌದು ಸ್ವಾಮಿ ಸ್ವಲ್ಪ ನನ್ನ ಕಣ್ ನೋಡಿ’ ಎಂದರಂತೆ ಆ ಮುದುಕ.

ಹೆಣಿಗೆಯಲ್ಲಿ ನುರಿತವನೊಬ್ಬ ಪಟ್ಟಾಭಿಯವರಿಗೆ ಒಂದು ಸಲ ಒಂದು ಅಂದವಾದ ಹೆಣಿಗೆಯನ್ನು ಬಹುಮಾನವಾಗಿ ಕೊಟ್ಟನಂತೆ, ಬಾಗಿದ ತಲೆಯನ್ನೆತ್ತದೆ, ತಂದಿದ್ದು ಯಾರೆಂದು ತಿಳಿದುಕೊಳ್ಳದೆ, ‘ಏನಪ್ಪಾ ನಿನಗೆ ಒಂದು ಕಣ್ಣಿಲ್ಲವೆ’ ಎಂದರಂತೆ ಪಟ್ಟಾಭಿ.

‘ಹೌದು ಬುದ್ಧಿ, ಚಿಕ್ಕ ವಯಸ್ಸಿನಲ್ಲೇ ಹೋಯ್ತು’ ಎಂದನಂತೆ ಬಂದವನು.

ಅಲ್ಲೇ ಇದ್ದ ಪಟ್ಟಾಭಿಯ ಮಿತ್ರರೊಬ್ಬರು ‘ಏನು ಪಟ್ಟಾಭಿ, ಮಂತ್ರವಿದ್ಯೆ ಕಲ್ತಿದ್ದೀಯಾ?’  ಎಂದರಂತೆ. ಅದಕ್ಕೆ ಪಟ್ಟಾಭಿ ‘ಮಂತ್ರಾನೂ ಇಲ್ಲ ಗಿಂತ್ರಾನೂ ಇಲ್ಲ, ಅವನ ಎರಡೂ ಕಣ್ಣು ಕೆಲಸ ಮಾಡುತ್ತಿದ್ದರೆ ಇಷ್ಟು ಚೆನ್ನಾಗಿ ಅವನು ಹೆಣೆಯುತ್ತಿರಲಿಲ್ಲ. ಕಣ್ಣೊಂದು ಇಲ್ಲದ್ದರಿಂದಲೇ ದೇವರು ಅವನಿಗೆ ಈ ಪ್ರತಿಭೆಯನ್ನು ಕೊಟ್ಟಿದ್ದಾನೆ. ಪ್ರಕೃತಿಯನ್ನು ಪರಿಶೀಲಿಸಿದರೆ ಇದೆಲ್ಲ ಗೊತ್ತಾಗುತ್ತೆ’ ಎಂದರಂತೆ.

ಕುಟುಂಬ

ಪಟ್ಟಾಭಿ ಸೆರೆಮನೆಯಲ್ಲಿದ್ದ ಏಳೂವರೆ ವರ್ಷಗಳ ಕಾಲ ಅವರ ಪತ್ನಿ ರಾಜೇಶ್ವರಮ್ಮ ಜಾಣ್ಮೆಯಿಂದ, ಧೈರ್ಯದಿಂದ ಸಂಸಾರವನ್ನು ನಿರ್ವಹಿಸುತ್ತಿದ್ದರು. ಉದಾರಚಿತ್ತ, ಧರ‍್ಮಚಿಂತನೆ, ಕಾರ್ಯದಕ್ಷತೆಗಳಿಂದ ಸಂಸಾರ ರಥವನ್ನು ಸಾಗಿಸುತ್ತಿದ್ದರು.

ಪಟ್ಟಾಭಿಯವರ ಮಕ್ಕಳಲ್ಲಿ ಕೃಷ್ಣಸ್ವಾಮಿ, ಕಾಮೇಶ್ವರಮ್ಮ ಎಂಬುವರು ಅವರ ಜೀವಿತಕಾಲದಲ್ಲೇ ಸಾವಿಗೆ ಈಡಾದರು. ಪಟ್ಟಾಭಿಯವರು ತಮ್ಮ ಜೀವನದ ಕಡೆಯ ವರ್ಷಗಳನ್ನು ರಾಧಾಕೃಷ್ಣನೆಂಬ ಮಗನ ಜತೆ ಕಳೆದರು. ೧೯೫೯ರ ಡಿಸೆಂಬರ್ ೧೭ರಂದು ತಮ್ಮ ಎಂಬತ್ತನೆ ವಯಸ್ಸಿನಲ್ಲಿ ಪಟ್ಟಾಭಿ ಸೀತಾರಾಮಯ್ಯ ಕೀರ್ತಿಶೇಷರಾದರು. ಭಾರತ ಒಬ್ಬ ಪ್ರಜ್ಞಾವಂತ ರಾಜಕಾರಣಿ, ದೇಶಭಕ್ತ, ಪರಿಣತಲೇಖಕ, ವಿವಿಧ ಸಂಸ್ಥೆಗಳ ನಿರ್ವಾಹಕ ಹಾಗೂ ಪ್ರಸಿದ್ಧ ಪತ್ರಿಕೋದ್ಯಮಿ ಯನ್ನು ಕಳೆದುಕೊಂಡಿತು.

ಪಟ್ಟಾಭಿ ಮಹಾ ಮೇಧಾವಿಗಳು. ರಾಜಕೀಯ ದಲ್ಲಾಗಲಿ ವ್ಯಾಪಾರದಲ್ಲಾಗಲೀ, ರಚನಾ ವ್ಯಾಸಂಗಗಳ ಲ್ಲಾಗಲೀ ತಮ್ಮ ಬುದ್ಧಿವಂತಿಕೆಯನ್ನು ತೋರಿದರು.  ಗಂಭೀರವಾದ ಅನೇಕ ಚಟುವಟಿಕೆಗಳ ನಡುವೆ ಕೆಲವು ವೈನೋದಿಕ ಕಾರ್ಯಗಳಲ್ಲೂ ಅವರು ತೊಡಗಿದ್ದುಂಟು. ಹಕ್ಕಿಗಳ ಗರಿಗಳನ್ನು ಸಂಗ್ರಹಿಸುವುದರಲ್ಲಿ ಅವರಿಗೆ ಆಸಕ್ತಿ ಇತ್ತು. ಅಹಮದ್‌ನಗರದ ಕೋಟೆಯಲ್ಲಿ ಬಂದಿ ಆಗಿದ್ದಾಗ ಅನೇಕ ಗರಿಗಳನ್ನು ಸಂಗ್ರಹಿಸಿ ಒಂದು ದಿಂಬನ್ನು ತಯಾರಿಸಿದ್ದರಂತೆ. ಈ ಹಕ್ಕಿಯ ಪುಕ್ಕಗಳ ಸಂಗ್ರಹ ಕಾರ್ಯವೇ ‘ಫೆದರ‍್ಸ್ ಅಂಡ್ ಸ್ಟೋನ್ಸ್’ ಎಂಬ ವಿನೋದ ಗ್ರಂಥದ ರಚನೆಗೆ ದಾರಿ ಮಾಡಿಕೊಟ್ಟಿತೆಂದೂ ಹೇಳುವರು.  ಗಂಭೀರವಾದ ವಿಷಯಗಳನ್ನೂ ಹಾಸ್ಯೋಕ್ತಿಗಳನ್ನೂ ಜೋಡಿಸಿ ಆಸಕ್ತಿಕರವಾಗಿ ಹೇಳುವುದರಲ್ಲಿ ಪಟ್ಟಾಭಿ ಚತುರರು.

ದೇಶಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಪಟ್ಟಾಭಿಯವರ ನಿಃಸ್ವಾರ್ಥ ಜೀವನ ಎಲ್ಲರಿಗೂ ಮಾರ್ಗದರ್ಶಕವಾದುದು.