ಪಟ್ಣಂಸುಬ್ರಹ್ಮಣ್ಯ ಅಯ್ಯರ್ಪ್ರಸಿದ್ಧ ಸಂಗೀತ ವಿದ್ವಾಂಸರು ಶ್ರದ್ಧೆಯಿಂದ ಸಂಗೀತ ಅಭ್ಯಾಸಮಾಡಿ ಸಂಗೀತ ಕಲೆಯನ್ನು ಒಲಿಸಿಕೊಂಡರು. ಸ್ವತಃ ಸುಂದರವಾದ ಹಾಡು ಗಳನ್ನು ರಚಿಸಿದರು. ಶಿಷ್ಯವಾತ್ಸಲ್ಯ, ತಾಳ್ಮೆ, ಶಿಸ್ತುಗಳಿಗೆ ಹೆಸರಾದವರು. ದಕ್ಷಿಣ ಭಾರತದ ಹಲವಾರು ಶ್ರೇಷ್ಠ ಸಂಗೀತಗಾರರು ಅವರ ಶಿಷ್ಯರು.

  ಪಟ್ಣಂಸುಬ್ರಹ್ಮಣ್ಯ ಅಯ್ಯರ್

 

ಕರ್ನಾಟಕ ಸಂಗೀತದ ಬೆಳವಣಿಗೆ ಮೂರು ಬಗೆಯಾಗಿ ನಡೆದು ಬಂದಿದೆ. ಮೊದಲನೆಯದು, ಹೊಸ ಸಂಗೀತವನ್ನು ಸೃಷ್ಟಿಮಾಡುವುದು. ಅಂದರೆ, ಸಂಗೀತ, ಸಾಹಿತ್ಯ ಎರಡನ್ನೂ ಒಳಗೊಂಡ ಕೃತಿಗಳನ್ನು ರಚಿಸು ವುದು. ಹೀಗೆ ಮಾಡತಕ್ಕವರಿಗೆ ವಾಗ್ಗೇಯಕಾರರೆಂದು ಹೆಸರು. ಎರಡನೆಯದು ಇವರು ರಚಿಸಿದ ಕೃತಿಗಳನ್ನು ಜನಪ್ರಿಯವಾಗಿ ಹಾಡಿ ಕೇಳುವವರ ಪ್ರೀತಿ ವಿಶ್ವಾಸಗಳನ್ನು ಗಳಿಸತಕ್ಕ ಸಾಮರ್ಥ್ಯ. ಹೀಗೆ ಮಾಡುವವರೇ ಸಂಗೀತ ವಿದ್ವಾಂಸರೆನಿಸಿಕೊಳ್ಳುವವರು. ಮೂರನೆಯದು, ವಾಗ್ಗೇಯಕಾರರಲ್ಲಿ ಮತ್ತು ಸಂಗೀತ ವಿದ್ವಾಂಸರಲ್ಲಿ ಕಂಡು ಬರುವ ಸಂಗೀತದ ರೂಪರೇಖೆಗಳನ್ನು ಚೆನ್ನಾಗಿ ಪರಿಶೀಲಿಸಿ ಫಲಿತಾಂಶವನ್ನು ಶಾಸ್ತ್ರರೂಪದಲ್ಲಿ ಬರೆದಿಡುವುದು. ಈ ಕೆಲಸ ಮಾಡುವವರಿಗೆ ‘ಲಾಕ್ಷಣಿಕ’ ರೆಂದು ಹೆಸರು. ಈ ಮೂರು ವರ್ಗಕ್ಕೂ ಸೇರಿದ ಮಹಾನು ಭಾವರು ನಮ್ಮ ಸಂಗೀತದ ಪ್ರಪಂಚದಲ್ಲಿ ಅನೇಕರಿದ್ದಾರೆ. ಅವರ ಸಾಲಿನಲ್ಲಿ ಪಟ್ಟಂ ಸುಬ್ರಹ್ಮಣ್ಯ ಅಯ್ಯರ್ ಒಬ್ಬರು. ಸುವಿಖ್ಯಾತ ಗಾಯಕರು. ಅವರು ಎಷ್ಟರ ಮಟ್ಟಿಗೆ ಜನರ ಪ್ರೀತಿ ಸಂಪಾದಿಸಿದ್ದರೆಂದರೆ, ಜನ ಅವರನ್ನು ಪೂರ್ತಿ ಹೆಸರಿಂದ ಕೂಗುತ್ತಲೇ ಇರಲಿಲ್ಲ. ಪ್ರೀತಿಯಿಂದ ಕೇವಲ ‘ಪಟ್ಣಂ’ ಎಂದೇ ಕರೆಯುತ್ತಿದ್ದರಂತೆ. ‘ಪಟ್ಣಂ’ ಎಂದು ಹೆಸರು ಬರುವುದಕ್ಕೆ ಒಂದು ಕಾರಣವಿದೆ. ತಮಿಳಿನಲ್ಲಿ ‘ಪಟ್ಣಂ’ಎಂದರೆ ‘ಮದರಾಸ್ ನಗರ’ಎಂದರ್ಥ. ಸುಬ್ರಹ್ಮಣ್ಯ ಅಯ್ಯರ್ ಕಾರಣಾಂತರದಿಂದ ಮದರಾಸಿಗೆ ಬಂದು ನೆಲೆಸಿದ್ದರಿಂದ ಈ ಹೆಸರು ಸ್ಥಾಯಿಯಾಗಿ ನಿಂತಿತು.

ಇವರು ೧೮೪೫ ರಲ್ಲಿ ಹುಟ್ಟಿದರು. ಇವರ ತಂದೆ ಭಾರತಂ ವೈದ್ಯನಾಥ ಅಯ್ಯರ್ ಅವರು. ಇವರ ತಾತಂದಿರಾದ ಭಾರತಂ ಪಂಚನದ ಶಾಸ್ತ್ರಿಗಳು ತಂಜಾ ವೂರು ಮಹಾರಾಜರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಈ ಕಾರಣದಿಂದ ಪಟ್ಟಂ ಅವರಿಗೆ ಪಾಂಡಿತ್ಯ ವಂಶ ಪಾರಂಪರ್ಯವಾಗಿ ಬಂದಿತ್ತೆಂದು ಸ್ಪಷ್ಟವಾಗುತ್ತದೆ.

ಸಂಗೀತಾಭ್ಯಾಸ

ಮೊದಲಿಗೆ ಇವರ ಸಹೋದರ ಗಣಪತಿ ಶಾಸ್ತ್ರಿಗಳಿಂದ ಆರಂಭ. ಅಷ್ಟು ಹೊತ್ತಿಗೆ ಅವರು ಒಳ್ಳೆಯ ಸಂಗೀತ ವಿದ್ವಾಂಸರಾಗಿದ್ದರು. ಅನಂತರ ಮಾನಂಬು ಚಾವಡಿ ವೆಂಕಟಸುಬ್ಬ ಅಯ್ಯರ್ ಅವರ ಬಳಿ ಮುಂದುವರೆಯಿತು. ಆಗಿನಿಂದ ಸರಿಯಾದ ಶಿಷ್ಯವೃತ್ತಿ ಪ್ರಾರಂಭವಾಯಿತು. ಆ ಕಾಲದಲ್ಲಿ ಶಿಷ್ಯನಾದವನು ಗುರುವಿನ ಮನೆಯಲ್ಲೇ ಇದ್ದು ವಿದ್ಯೆಯನ್ನು ಕಲಿಯ ಬೇಕಾಗಿತ್ತು. ಗುರುವಿಗೆ ಪ್ರತಿಫಲ ಕೇವಲ ಶಿಷ್ಯ ಮಾಡುವ ಸೇವೆಯೇ ಆಗಿತ್ತು. ಅಂದರೆ ಹಗಲು ರಾತ್ರಿ ಎನ್ನದೆ ಗುರು ಹೇಳಿದ ಕೆಲಸಗಳನ್ನೆಲ್ಲ ಮಾಡಲು ಸಿದ್ಧನಾಗಿರುವುದು. ಬಟ್ಟೆ ಒಗೆಯುವುದು, ಅಡಿಗೆ ಮಾಡುವುದು, ದನಕಾಯುವುದು, ಕಸ ಗುಡಿಸುವುದು ಇತ್ಯಾದಿ ಹಲವಾರು ಕೆಲಸಗಳಿಗೆ ಯಾವಾಗಲೂ ಸಿದ್ಧ ನಾಗಿರಬೇಕಾಗಿತ್ತು. ಎಷ್ಟೋ ದಿನಗಳು ಈ ಕೆಲಸಗಳನ್ನು ಮಾಡುವುದರಲ್ಲೆ ಕಳೆದುಹೋಗುತ್ತಿದ್ದವು. ವಿದ್ಯಾಭ್ಯಾಸಕ್ಕೆ ಅವಕಾಶವೇ ಇಲ್ಲದಂತಾಗುತ್ತಿತ್ತು. ಗುರು ಪಾಠ ಹೇಳಿಕೊಡಲು ಕರೆದಾಗಲೇ ಅದರ ಕಡೆ ಗಮನ. ಹಾಗಾಗಿ, ಅನೇಕ ಸಾರಿ ಶಿಷ್ಯನಾದವನಿಗೆ ನಿರಾಶೆ ಉಂಟಾಗುತ್ತಲ್ಲದೆ, ಅವನು ಬಿಟ್ಟು ಹೋಗುವಂತೆಯೂ ಆಗುತ್ತಿತ್ತು. ಒಟ್ಟಿನಲ್ಲಿ. ಕಷ್ಟಪಡದೆ ವಿದ್ಯೆ ಕಲಿಯುವುದಕ್ಕೆ ಆಗುತ್ತಿರಲಿಲ್ಲ. ಈ ರೀತಿಯಲ್ಲಿ ಪಟ್ಟಂ ಅವರು ಸಂಗೀತವನ್ನು ಕಲಿತರು. ಅವರಿಗೆ ಸಿಕ್ಕಿದ್ದ ಗುರುಗಳು ಬಹಳ ಒಳ್ಳೆಯವರು. ಮಹಾ ಪುರುಷ ಶ್ರೀ ತ್ಯಾಗರಾಜರಲ್ಲಿ ಶಿಷ್ಯ ವೃತ್ತಿ ಮಾಡಿ ಸಂಗೀತ ಕಲಿತವರು. ತಮ್ಮ ಗುರುಗಳಂತೆಯೇ, ಶಿಷ್ಯರಲ್ಲಿ ಪ್ರೀತಿಯುಳ್ಳವರು.

ಅಭ್ಯಾಸ ಕ್ರಮ

ಪಟ್ಣಂ ಅವರ ಶಾರೀರ ಬಹಳ ಗಡುಸಾಗಿದ್ದರಿಂದ ಅದನ್ನು ಪಳಗಿಸುವುದು ಬಹಳ ಕಷ್ಟಸಾಧ್ಯವಾಗಿತ್ತು. ಇದನ್ನರಿತ ಅವರು, ಕಠಿಣ ಸಾಧನೆಮಾಡುತ್ತಿದ್ದರು. ಮುಂಜಾನೆ ಎದ್ದು, ಕತ್ತಿನವರೆಗೆ ನೀರಿನಲ್ಲಿ ನಿಂತು ಸಂಗೀತ ಅಭ್ಯಾಸ ಮಾಡುತ್ತಿದ್ದರು. ಎಂದು ಹೇಳುತ್ತಾರೆ. ಇದರಿಂದ ಇವರ ಸಂಕಲ್ಪ ಎಷ್ಟು ದೃಡವಾದದ್ದು ಎಂಬುದು ವ್ಯಕ್ತವಾಗುತ್ತದೆ.

ಗಾಯಕ ವೃತ್ತಿ

ಪಟ್ಣಂ   ಅವರು ತಮ್ಮ ೩೦ನೇ ವಯಸ್ಸಿನಲ್ಲಿ ಮದುವೆಯಾಗಿ ತಿರುವಯ್ಯಾರಿನಲ್ಲಿ ಬಂದು ನೆಲೆಸಿದರು. ಇಷ್ಟು ಹೊತ್ತಿಗೆ ಅವರ ಕೀರ್ತಿ ಅನೇಕ ಕಡೆ ಹರಡಿತ್ತು. ತಿರುವಯ್ಯಾರಿನಲ್ಲಿ ಮನೆಮನೆಗೂ ಸಂಗೀತಗಾರರಿದ್ದ ಕಾಲ. ಅಂದ ಮೇಲೆ ಸಂಗೀತ ಕಲಿತವರಿಗೆ ಪ್ರೋತ್ಸಾಹ ಚೆನ್ನಾಗಿರುತ್ತಿತ್ತು. ದೇವಸ್ಥಾನಗಳಲ್ಲಿ ಕಛೇರಿಗಳು ಆಗಿಂದಾಗ್ಗೆ ನಡೆಯುತ್ತಲೇ ಇದ್ದವು. ವಿಶೇಷ ಉತ್ಸವಗಳು ನಡೆಯುವ ಕಾಲದಲ್ಲಿ ಸಂಗೀತ ಕಛೇರಿಗಳೂ ಏರ್ಪಾಡಾಗುತ್ತಿದ್ದವು. ಆಶ್ಚರ್ಯವೆಂದರೆ. ಒಂದೇ ದೇವಸ್ಥಾನದಲ್ಲಿ ಒಂದೇ ಕಾಲದಲ್ಲಿ, ಆದರೆ ಬೇರೆ ಬೇರೆ ಕಡೆಯಲ್ಲಿ ಇಬ್ಬರು ವಿದ್ವಾಂಸರ ಕಛೇರಿಗಳು ನಡೆಯುತ್ತಿದ್ದುದೂ ಉಂಟು. ಈ ರೀತಿ ಪಟ್ಣಂ ಅವರ ಮತ್ತು ಅವರ ಸಮಕಾಲೀನರಾದ ಮಹಾವೈದ್ಯನಾಥ ಅಯ್ಯರ್ ಅವರ ಕಚೇರಿಗಳು ನಡೆದಾಗ ಉಂಟಾದ ಅನುಭವ ನಿಜಕ್ಕೂ ಬಹಳ ಅಪೂರ್ವ. ಎರಡು ಕಚೇರಿಗೂ ಜನ ಕಿಕ್ಕಿರಿದಿರುತ್ತಿದ್ದರು. ಒಂದು ಕಡೆ ಜನ ಚಪ್ಪಾಳೆ ಹಾಕಿ ಶ್ಲಾಘಿಸಿದರೆ, ಇನ್ನೊಂದು ಕಡೆ ಹಾಡುತ್ತಿದ್ದ ವಿದ್ವಾಂಸರಿಗೆ ಎಲ್ಲೂ ಇಲ್ಲದ ಸ್ಫೂರ್ತಿ. ತಾನೂ ಅದಕ್ಕಿಂತ ಚೆನ್ನಾಗಿ ಹಾಡಿ ಜನರ ಮೆಚ್ಚುಗೆ ಪಡೆಯಬೇಕೆಂಬ ಆಸೆ. ಈ ಬಗೆಯ ಪೈಪೋಟಿ, ಕೇಳುತ್ತಿದ್ದವರಿಗೆ ಒಳ್ಳೆ ರಸದೌತಣಕ್ಕೆ ದಾರಿ ಮಾಡಿಕೊಟ್ಟಿತ್ತು.

ಪಟ್ಣಂ ಅವರ ಕೀರ್ತಿ ಬಹು ಬೇಗ ದಕ್ಷಿಣ ದೇಶವನ್ನೆಲ್ಲ ವ್ಯಾಪಿಸಿತು. ಕ್ರಮೇಣ ರಾಜ ಮಹಾರಾಜರ ಮತ್ತು ಶ್ರೀಮಂತರ ಆಶ್ರಯವನ್ನು ತಂದುಕೊಟ್ಟಿತು. ವಿಜಯನಗರಂ ಮಹಾರಾಜರು ಅವರನ್ನು ಕರೆಸಿ ಗೌರವಿಸಿದರು. ಅಂತೆಯೇ ಮೈಸೂರು, ತಿರುವಾಂಕೂರು, ರಾಮನಾಥಪುರಂ ಮಹಾರಾಜರುಗಳು ಅವರನ್ನು ದಸರ ಹಬ್ಬದಲ್ಲಿ ಪ್ರತಿವರ್ಷವೂ ಕರೆಸಿಕೊಳ್ಳುತ್ತಿದ್ದರು. ಬಂದಾಗಲೆಲ್ಲ ವಿದ್ವಾಂಸರಿಗೆ ವಿಶೇಷ ಗೌರವ, ಖಿಲ್ಲತ್ತುಗಳನ್ನು ಕೊಟ್ಟು ಗೌರವಿಸುತ್ತಿದ್ದರು.

ಗಾಯನ ಶೈಲಿ

ಪಟ್ಣಂ ಅವರ ಹಾಡಿಕೆ ಬಹು ಗಂಭಿರವಾಗಿತ್ತು. ಸ್ವಭಾವತಃ ತುಂಬು ನಾದವುಳ್ಳ ಶಾರೀರ. ಅಂತ ಶಾರೀರವು ಹಾಡಿದ್ದನ್ನೆಲ್ಲ ಕೇಳುವವರ ಮನಸ್ಸನ್ನು ನಾಟುವಂತೆ ಮಾಡುತ್ತದೆ. ಕಛೇರಿ ಮುಗಿದ ಮೇಲೆ ಕಿವಿಯಲ್ಲಿ ಇನ್ನೂ ‘ಗುಂಯ್’ ಎನ್ನುತ್ತಲೇ ಇರುತ್ತದೆ. ಮೊದಲಿನಿಂದ ಕೊನೆಯವರೆಗೆ ಅವರು ಹಾಡುತ್ತಿದ್ದುದು ತ್ಯಾಗರಾಜರ ಕೃತಿಗಳನ್ನೇ. ಬಹು ಸೊಗಸಾಗಿ, ಅನುಭವಿಸಿ ಹಾಡುತ್ತಿದ್ದರಂತೆ. ಯಾರಾದರೂ ಹಾಡಲೇ ಬೇಕೆಂದಾಗ ಮಾತ್ರ ತಮ್ಮ ಸ್ವಂತ ಕೃತಿಗಳನ್ನು ಹಾಡುತ್ತಿದ್ದರಂತೆ.

ಬೇಗಡೆ’ ಎಂದು ಕರೆಯಲ್ಪಡುವ ಒಂದು ರಾಗವಿದೆ ಈ ರಾಗ ಹಾಡುವುದರಲ್ಲಿ ಪಟ್ಣಂ ಅವರದು ಅಪೂರ್ವ ಕೌಶಲ. ಅದು ಅವರಿಗೆ ಬಹು ಪ್ರಿಯವಾದ ರಾಗವೆಂದೆ ಹೇಳಬಹುದು ಒಮ್ಮೆ ಮೈಸೂರು ಆಸ್ಥಾನಕ್ಕೆ ಬಂದಿದ್ದಾಗ, ಮಹಾರಾಜರ ಸಮ್ಮುಖದಲ್ಲಿ ಮೂರು ಕಛೇರಿಗಳನ್ನು ಮಾಡಿದರಂತೆ. ಮೂರು ಕಛೇರಿಗಳನ್ನು ಬೇಗಡೆ’ ರಾಗವೊಂದನ್ನೇ ಹಾಡಿ ಕೇಳುವವರನ್ನು ವಿಸ್ಮಯಗೊಳಿಸಿದರಂತೆ. ಹೀಗೆ ಒಂದೇ ರಾಗವನ್ನು ಮೂರು ಬಾರಿ ಹಾಡಿ ಹೊಸ ಅನುಭವವನ್ನುಂಟು ಮಾಡುವುದು ಕೆಲವರಿಗೆ ಮಾತ್ರ ಸಾಧ್ಯ. ಅಂತವರಲ್ಲಿ ಪಟ್ಣಂ ಅವರು ಒಬ್ಬರೆಂದು ಈ ನಿದರ್ಶನದಿಂದ ಗೊತ್ತಾಗುತ್ತದೆ. ಮತ್ತೊಮ್ಮೆ ಅದೇ ಆಸ್ಥಾನದಲ್ಲಿ ‘ಕನ್ನಡಗೌಳ’ ಎಂಬ ರಾಗವನ್ನು ಹೃದಯಂಗಮವಾಗಿ ಹಾಡಿದ್ದರಿಂದ ಮಹಾ ರಾಜರು ಅವರಿಗೆ ಚಿನ್ನದ ಬಳೆಗಳನ್ನು ಕೊಟ್ಟು ಗೌರವಿಸಿದರಂತೆ, ಅವರಿಗೆ ಪ್ರಿಯವಾದ ಮತ್ತೊಂದು ರಾಗ ‘ಪೂರ್ಣಚಂದ್ರಿಕ’ ಈ ರಾಗದಲ್ಲಿ ಅವರೇ ಒಂದು ಸೊಗಸಾದ ಕೃತಿಯನ್ನು ರಚಿಸಿದ್ದಾರೆ ಈ ರಾಗವನ್ನು ಅವರು ಹಾಡಿದಂತೆ ಮತ್ಯಾರೂ ಹಾಡುವುದಕ್ಕಾಗಿರಲಿಲ್ಲವೆಂದು ವಿದ್ವಾಂಸರ ಅಭಿಪ್ರಾಯ. ಮತ್ತೊಂದು ವಿಶಿಷ್ಟವಾದ ಸಂಗತಿ ಏನೆಂದರೆ, ರಾಮನಾಥಪುರಂ ರಾಜರಾದ ಪಾಂಡಿದೊರೈ ಎಂಬು ವವರು ಪಟ್ಣಂ ಅವರ ಸಂಗೀತ ಕೇಳಲು ತಿರುವಯ್ಯಾರಿಗೆ ಬಂದು ಹೋಗುತ್ತಿದ್ದರಂತೆ. ಸಾಮಾನ್ಯ ವಾಗಿ, ರಾಜರಾದವರು ವಿದ್ವಾಂಸರನ್ನು ತಮ್ಮಲ್ಲಿಗೆ ಬರ ಮಾಡಿಕೊಳ್ಳುವುದು ವಾಡಿಕೆ. ಅವರ ಮನೆಗೆ ತಾವೇ ಹೋಗುವುದು ಬಹಳ ಅಪರೂಪ. ಆದರೆ ಪಟ್ಣಂ ಅವರಿಗೆ ಈ ಗೌರವವೂ ಸಂದಿತು, ಇಷ್ಟೇ ಅಲ್ಲ ತಮ್ಮ ಸಮಕಾಲೀನ ರಾದ ವಿದ್ವಾಂಸರಿಂದ ಪ್ರಶಂಸೆ ಪಡೆಯುವುದು ಇನ್ನೂ ಹೆಚ್ಚುಗಾರಿಕೆ, ಇದಕ್ಕೆ ನಿದರ್ಶನ ಮಹಾ ವೈದ್ಯನಾಥ ಅಯ್ಯಾರ್. ಪಟ್ಣಂ ಅವರ ಸಂಗೀತದ ಬಗ್ಗೆ ಇಟ್ಟುಕೊಂಡಿದ್ದ ಗೌರವ ಭಾವನೆ.  ಬರಿ ಭಾವನೆ ಮಾತ್ರ ಅಲ್ಲ. ಅವರ ಸಂಗೀತವನ್ನು ಆಗಾಗ್ಗೆ ಕೇಳುತ್ತಲೂ ಇದ್ದರಂತೆ. ಒಂದು ಅಪೂರ್ವ ಸನ್ನವೇಶ ಈ ಅಂಶವನ್ನು ಸಮರ್ಥಿಸುತ್ತದೆ. ಅದಾವುದೆಂದರೆ, ರಾಮನಾಥಪುರಂ ಸಂಸ್ಥಾನದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭ. ಬಾಸ್ಕರ ಸೇತುಪತಿ ಎಂಬವರಿಗೆ ಪಟ್ಟಾಭಿಷೇಕ ನಡೆಯ ಬೇಕಾಗಿತ್ತು. ಆ ಸಂದರ್ಭದಲ್ಲಿ ಆ ಕಾಲದಲ್ಲಿ ಸುಪ್ರಸಿದ್ದರೆನಿಸಿದ್ದ ಮೂವರು ಘನ ವಿದ್ವಾಂಸರು ಆಹ್ವಾನಿಸಲ್ಪಟ್ಟಿದ್ದರು. ಕುಂಡ್ರಕ್ಕುಡಿ ಕೃಷ್ಣಯ್ಯರ್, ಮಹಾ ವೈದ್ಯನಾಥ ಅಯ್ಯರ್, ಮತ್ತು ಪಟ್ಣಂಸುಬ್ರಮಣ್ಯಅಯ್ಯರ್. ಕಛೇರಿ ನಡಯುತ್ತಿರುವಾಗಲೇ ಕೃಷ್ಣಯ್ಯರ್ ಅವರು ಪಟ್ಣಂ ಅವರ ಕಡೆ ತಿರುಗಿ ’ಕೀರ್ತನೆಗಳನ್ನು ಅಂದವಾಗಿ ಅಚ್ಚು ಕಟ್ಟಾಗಿ ಹಾಡುವುದರಲ್ಲಿ ನಿಮ್ಮ ಸಮಾನರಾರೂ ಇಲ್ಲ’ ಎಂದು ಸಭೆಯಲ್ಲಿದ್ದವರಿಗೆಲ್ಲ ಕೇಳುವ ರೀತಿಯಲ್ಲಿ ಹೊಗಳಿದರಂತೆ. ಈ ಪ್ರಸಂಗ ಪಟ್ಣಂ ಅವರ ಯೋಗ್ಯತೆ ಯನ್ನು ಎತ್ತಿ ಹಿಡಿದಂತಿದೆ. ಯಾವ ವಿದ್ವಾಂಸನಿಗೂ ಹೆಮ್ಮೆ ಉಂಟು ಮಾಡುವಂಥದ್ದಾಗಿದೆ. ತನ್ನ ಸಮಕಾಲೀನರಾದ ಇಬ್ಬರು ಘಟಾನುಘಟಿಗಳ ಸಮ್ಮುಖದಲ್ಲಿ, ತುಂಬಿದ ರಸಿಕ ವೃಂದದ ಮಧ್ಯೆ ಈ ರೀತಿ ಹೊಗಳಿಸಿಕೊಳ್ಳುವುದೆಂದರೆ ಸಾಮಾನ್ಯವಲ್ಲ. ಅದರಲ್ಲೂ ವಿದ್ವಾಂಸರ ಬಾಯಿಂದಲೇ ಅಂತಹ ಮಾತುಗಳನ್ನು ಕೇಳುವುದೆಂದರೆ ಇನ್ನೂ ಹೆಚ್ಚಿನ ವಿಷಯ.

ಪಲ್ಲವಿ ಹಾಡುವುದರಲ್ಲಿ

ಪಟ್ಣಂ ಅವರ ಗಾಯನ ಬರೀ ಕೀರ್ತನೆಗಳನ್ನು ಹಾಡುವುದಕ್ಕೆ ಮಾತ್ರ ಪ್ರಸಿದ್ಧಿಯಾಗಿತ್ತೆಂದಲ್ಲ. ಪಲ್ಲವಿ ಹಾಡುವುದರಲ್ಲೂ ಬಹಳ ಗಟ್ಟಿಗರೆಂದು ಹೆಸರು ಪಡೆದಿದ್ದರು. ಪಲ್ಲವಿ ಎಂಬ ಶಬ್ದ ಸಾಮಾನ್ಯವಾಗಿ ಕೃತಿಯ ಮೊದಲ ಭಾಗವನ್ನು ಸೂಚಿಸುತ್ತದೆ. ಅದಾದ ಮೇಲೆ ಹಾಡಲ್ಪಡುವುದು ’ಅನುಪಲ್ಲವಿ’ ಅನಂತರ ’ಚರಣ’ ‘ಅನುಪಲ್ಲವಿ’ ಹಾಡಿದ ಮೇಲೆ ಮತ್ತೊಮ್ಮೆ ‘ಪಲ್ಲವಿ’ ಹಾಡಲ್ಪಡುತ್ತದೆ. ಅದೇ ರೀತಿ ಚರಣ ಹಾಡಿದ ಮೇಲೂ. ಹೀಗೆ ಮತ್ತೆ ಮತ್ತೆ ಹಾಡಲ್ಪಡುವುದರಿಂದ ‘ಪಲ್ಲವಿ’ ಎನಿಸಿಕೊಳ್ಳುತ್ತದೆ: ಈಗ ಕೃತಿಯ ಮಿಕ್ಕೆರಡು ಭಾಗಗಳನ್ನು ಬಿಟ್ಟು ಬರೀ ಪಲ್ಲವಿಯನ್ನೇ ಪ್ರತ್ಯೇಕವಾಗಿ ಹಾಡುವ ಪದ್ಧತಿ ಸಂಗೀತಗಾರರಲ್ಲಿ ಬೆಳೆದು ಬಂದಿದೆ. ಸುಮಾರು ಒಂದು ಅಥವಾ ಒಂದೂವರೆ ಘಂಟೆಗಳ ಕಾಲ ಪಲ್ಲವಿ ಹಾಡಲು ಉಪಯೋಗಿಸಲ್ಪಡುತ್ತದೆ. ಪಲ್ಲವಿಯಲ್ಲಿ ಸಾಹಿತ್ಯ ಒಂದೇ ಬಗೆಯಾದಾದರೂ, ಸಂಗೀತ ವಿಧವಿಧವಾಗಿರುತ್ತದೆ. ಆದ್ದರಿಂದ ಕೇಳುವವರಿಗೆ ಬೇಸರವಾಗುವುದಿಲ್ಲ. ಅದಲ್ಲದೆ, ಪಲ್ಲವಿಗೆ ಮುಂಚೆ ರಾಗ ಬಹಳ ವಿಸ್ತಾರವಾಗಿ ಹಾಡಲ್ಪಡುತ್ತದೆ. ಅದಾದ ನಂತರ. ‘ತಾನ’ ಹಾಡಲ್ಪಡುತ್ತದೆ. ಆಮೇಲೆ ‘ಪಲ್ಲವಿ’ ಹಾಡಲ್ಪಡುತ್ತದೆ. ಮೊದಲು ಪಲ್ಲವಿ ಮೂಲರೂಪವನ್ನು ಪರಿಚಯ ಮಾಡಿಕೊಟ್ಟು, ಅನಂತರ ಅದರ ಸಾಹಿತ್ಯವನ್ನು ಬೇರೆ ಬೇರೆ ಸ್ವರಗಳಲ್ಲಿ ಹಾಡಿ, ಕೇಳುವವರು ತಲೆದೂಗುವಂತೆ ಮಾಡಬೇಕು. ಕೊನೆಯದಾಗಿ, ಸ್ವರ ಹಾಕುವುದು, ಗಾಯಕನ ಯೋಗ್ಯತೆ ಯನ್ನು ಅಳತೆಮಾಡುವುದಕ್ಕೆ ಪಲ್ಲವಿ ಒಂದು ಸಾಧನ. ಕಾರಣವಿಷ್ಟೆ. ಪಲ್ಲವಿ ಎಂಬುದು ಗಾಯಕನ ಮನೋ ಧರ್ಮವನ್ನು ಅವಲಂಬಿಸಿರುತ್ತೆ. ಅಂದರೆ, ಬಾಯಿಪಾಠ ಮಾಡಿ ಹಾಡತಕ್ಕದ್ದಲ್ಲ. ಹಾಡುತ್ತಿರುವಂತೆಯೇ ಹೊಸ ಹೊಸ ಕಲ್ಪನೆಗಳಿಂದ ಕೂಡಿರುವಂಥದು. ಮುಂದೆ ಹಾಡುವುದು ಹಿಂದೆ ಹಾಡಿದ್ದಂತೆಯೇ ಇರಬಾರದು. ಬೇರೊಂದು ಬಗೆಯಾಗಿರಬೇಕು. ಇದು ಅನುಭವ ವುಳ್ಳವರಿಗೆ ಮಾತ್ರ ಸಾಧ್ಯ.

ಮೇಲೆ ಹೇಳಲ್ಪಟ್ಟ ವಿಷಯ ಸುಲಭವಾಗಿ ಅರ್ಥವಾಗಬೇಕಾದರೆ ಒಂದು ಉದಾಹರಣೆ ಕೊಡ ಬಹುದು. ನೀವು ಭಾಷಣ ಮಾಡುವುದನ್ನು ಬಲ್ಲಿರಿ. ಕೆಲವರು ಗಟ್ಟಿಮಾಡಿ ಒಪ್ಪಿಸಿ ಬಿಡುತ್ತಾರೆ. ಇನ್ನು ಕೆಲವರು ಯೋಚಿಸಿ ಯೋಚಿಸಿ ಮಾಡುತ್ತಾರೆ. ಮೊದಲನೆ ಪಂಗಡದವರು ಗ್ರಾಮಾಫೋನ್ ರೆಕಾರ್ಡ್‌ನಂತೆ ಎಲ್ಲವನ್ನೂ ಒದರಿಬಿಡುತ್ತಾರೆ. ಅವರ ಭಾಷಣ ಸಹಜ ವಾಗಿರುವುದೇ ಇಲ್ಲ. ಯಾರು ಬೇಕಾದರೂ ಹೇಳಿ ಬಿಡಬಹುದು ಗಟ್ಟಿಮಾಡಿದ್ದಾರೆ ಅಂತ. ಅವರಿಗೆ ಜ್ಞಾಪಕಶಕ್ತಿ ಚೆನ್ನಾಗಿದ್ದರಾಯಿತು. ಬೇರೊಬ್ಬರು ಬರೆದು ಕೊಟ್ಟ ಭಾಷಣವನ್ನೂ ಕೂಡ ಚಾಚು ತಪ್ಪದೆ ಒಪ್ಪಿಸಿಬಿಡುತ್ತಾರೆ. ಎರಡನೇ ಪಂಗಡದವರು, ತಾವೇ ಯೋಚಿಸಿ ಮಾತನಾಡುವುದರಿಂದ ಹೆಚ್ಚು ಹೊಗಳಿಸಿ ಕೊಳ್ಳತ್ತಾರೆ. ಹಾಗೆಯೇ ಸಂಗೀತ ಕ್ಷೇತ್ರದಲ್ಲೂ. ಪಲ್ಲವಿ ಯನ್ನು ಸಮರ್ಪಕವಾಗಿ  ಹಾಡಬೇಕಾದರೆ ಗಾಯಕನಿಗೆ ಸ್ವತಃ ಕಲ್ಪಿಸುವ ಸಾಮರ್ಥ್ಯವಿರಬೇಕು. ತನ್ನ ಬುದ್ಧಿಗೆ ಹೊಳೆಯುವ ಹೊಸ ಆಲೋಚನೆಯೊಂದನ್ನು ತನ್ನದೇ ಆದ ಮಾತುಗಳಿಂದ ಹೇಗೆ ನುರಿತ ಭಾಷಣಕಾರ ವ್ಯಕ್ತಪಡಿಸುತ್ತಾನೋ ಅದೇ ರೀತಿ ಸಂಗೀತಗಾರನು ಪ್ರತಿನಿಮಿಷದಲ್ಲೂ ಹೊಸ ಹೊಸದಾಗಿ ಹಾಡಬಲ್ಲನು. ಆ ಗುಣವೇ ಪಲ್ಲವಿಯಲ್ಲಿರಬೇಕಾದದ್ದು. ಆದ್ದರಿಂದಲೇ ಅದಕ್ಕೆ ಮಿಗಿಲಾದ ಸ್ಥಾನ ಕೊಟ್ಟಿರುವುದು.

ಪಲ್ಲವಿ ಹಾಡುವುದರಲ್ಲಿ ಪಟ್ಣಂ ಅವರದು ಅದ್ಭುತ ಸಿದ್ಧಿ. ಎಂಬುದಕ್ಕೆ ಉದಾಹರಣೆಯೊಂದಿದೆ. ‘ಸಿಂಹ ನಂದನ’ ಎಂಬುದು ಒಂದು ತಾಳದ ಹೆಸರು. ಇದು ಎಲ್ಲ ತಾಳಗಳಿಗಿಂತಲೂ ದೊಡ್ಡದು. ಅಂದರೆ ಒಂದು ಸಾರಿ ಈ ತಾಳಹಾಕಿ ಮುಗಿಸಬೇಕಾದರೆ ೧೨೮ರ ವರೆಗೂ ಸಂಖ್ಯೆ ಎಣಿಸಿದಷ್ಟು ಕಾಲವಾಗುತ್ತದೆ. ಅದಲ್ಲದೇ ಈ ತಾಳ ಹಾಕುವುದೂ ಕಷ್ಟಸಾಧ್ಯ. ಬರೀ ತಾಳಹಾಕುವುದನ್ನೇ ಪ್ರತ್ಯೇಕವಾಗಿ ಅಭ್ಯಾಸಮಾಡಿ, ರೂಢಿಯಾದ ಮೇಲೆ ಅದರೋಡನೆ ಹಾಡಬಹುದೇ ವಿನಾ ಬೇರೆ ಮಾರ್ಗವೇ ಇಲ್ಲ. ಇಂಥಾ ತಾಳದಲ್ಲಿ ಪಟ್ಣಂ ಅವರು ಪಲ್ಲವಿ ಹಾಡಿ ಎಲ್ಲರನ್ನೂ ಚಕಿತಗೊಳಿಸಿದ ಸಂಗತಿ ಎಂದಿಗೂ ಮರೆಯುವುದಕ್ಕಾಗುವುದೇ ಇಲ್ಲ. ಅಂದು ಪಟ್ಣಂ ಅವರು ಮಾಡಿದ ಅದ್ಭುತ ಕೆಲಸವನ್ನು ಇತ್ತೀಚಿನ ವಿದ್ವಾಂಸರು ಯಾರೂ ಮಾಡಿಯೇ ಇಲ್ಲ ಎನ್ನಬಹುದು. ಈ ನಿದರ್ಶನದಿಂದ ಪಟ್ಣಂ ಅವರಿಗೆ ಎಷ್ಟರಮಟ್ಟಿನ ಏಕಾಗ್ರತೆ ಇತ್ತೆಂಬುದು ವ್ಯಕ್ತವಾಗುತ್ತದೆ. ‘ಏಕಾಗ್ರತೆ’ ಎಂದರೆ, ನಾವು ಕೈಕೊಂಡ ಕೆಲಸ ಯಾವುದೋ ಅದನ್ನು ಬಿಟ್ಟು ಬೇರೊಂದನ್ನು ಚಿಂತಿಸದಿರುವುದು. ಹೀಗೆ ಮನಸ್ಸನ್ನು ಹಿಡಿದು ನಿಲ್ಲಿಸುವುದು ಒಂದು ಬಗೆಯ ತಪಸ್ಸು. ಅಸಾಧಾರಣ ವ್ಯಕ್ತಿಗಳಲ್ಲಿ ನಾವು ಇದನ್ನು ಕಾಣಬಹುದು. ತಪಸ್ಸು ಮಾಡುವವರು ಋಷಿಗಳು ಮಾತ್ರ ಎಂದು ತಿಳಿಯಬಾರದು. ಕಲೋಪಾಸಕನಿಗೂ ಅದು ಅಗತ್ಯ. ನಾವು ಮಾಡುವ ಅಭ್ಯಾಸ ಹೆಚ್ಚಾದಷ್ಟೂ ನಮ್ಮ ತಪಸ್ಸೂ ಹೆಚ್ಚುತ್ತದೆ.

ಪಟ್ಟಂ ಅವರ ಶಿಷ್ಯವಾತ್ಸಲ್ಯ

ಪಟ್ಣಂ ಅವರ ಬಳಿ ಸಂಗೀತ ಕಲಿಯಲು ಬಂದವರು ಬಹುಮಂದಿ. ಅವರ ಪೈಕಿ ಸುಪ್ರಸಿದ್ಧ ರಾದವರೂ ಅನೇಕರಿದ್ದಾರೆ. ಗುರುವಿಗೆ ಒಳ್ಳೆಯ ಶಿಷ್ಯನನ್ನು ಪಡೆಯುವ ಆಸೆ ಸಹಜ. ಪಟ್ಣಂ ಅವರಿಗೆ ಮಕ್ಕಳಿಲ್ಲದಿದ್ದ ಕಾರಣ, ಶಿಷ್ಯರನ್ನೇ ಮಕ್ಕಳಂತೆ ಕಾಣುವ ಸ್ವಭಾವ. ಸರಿ, ಬಂದ ಶಿಷ್ಯರೆಲ್ಲ ಇವರ ಮನೆಯಲ್ಲೇ ಊಟ ಮಾಡಿ ಕೊಂಡು, ಇವರ ಸೇವೆಮಾಡಿ ವಿದ್ಯೆ ಕಲಿಯಬೇಕಾಗಿತ್ತು. ಶಿಷ್ಯರ ಪಾಲಿಗೆ ದೇವರ ಪಾತ್ರೆ ತೊಳೆಯುವುದರಿಂದ ದನ ಕಾಯುವವರೆಗೆ ಎಲ್ಲ ಕೆಲಸಗಳೂ ಬಂದಿದ್ದವು. ವಾಸುದೇವಾಚಾರ್ಯರು ತಮ್ಮ ಗುರುಕುಲ ವಾಸವನ್ನು ‘ನಾ ಕಂಡ ಕಲಾವಿದರು’ ಎಂಬ ಪುಸ್ತಕದಲ್ಲಿ ಸ್ವಾರಸ್ಯವಾಗಿ ವರ್ಣಿಸಿ ಬರೆದಿಟ್ಟಿದ್ದಾರೆ. ಅದರಿಂದ ಆಯ್ದ ಒಂದೆರಡು ವಿಷಯಗಳನ್ನು ಇಲ್ಲಿ ಸ್ಮರಿಸಬಹುದು.

ತಮ್ಮ ಚಿಕ್ಕವಯಸ್ಸಿನಲ್ಲೇ ಗುರುಗಳ ಹತ್ತಿರ ಕಳಿಸಲ್ಪಟ್ಟ ವಾಸುದೇವಾಚಾರ್ಯರು ಹೋಗಿ ಸುಮಾರು ಆರು ತಿಂಗಳಾದರೂ ಒಂದಕ್ಷರ ಪಾಠ ಕಲಿಯದೆಯೇ ಬರೀ ಮನೆಕಲಸಗಳನ್ನು ಮಾಡುವುದರಲ್ಲಿ ಕಳೆಯ ಬೇಕಾಯ್ತು. ಆದರೆ ಸಂಗೀತದ ಸಂಪರ್ಕ ತಪ್ಪಿರಲಿಲ್ಲ. ಬೆಳಗಿನ ಜಾವ ಎದ್ದು ಗುರುಗಳು ಸಾಧನೆಮಾಡುವಾಗ ತಂಬೂರಿ ಶ್ರುತಿ ಹಾಕುವುದು, ಪರಮೇಶ್ವರಯ್ಯ ಎಂಬ ಶಿಷ್ಯನಿಗೆ ಪಾಠ ಹೇಳುವುದನ್ನು ಕೇಳುವುದು, ಗುರುಗಳ ಕಛೇರಿ ವೇಳೆಯಲ್ಲಿ ಅವರ ಸಂಗಡ ಇರುವುದು, ಮತ್ತು ಅವರು ಕೀರ್ತನೆಗಳನ್ನು ರಚಿಸುತ್ತಿದ್ದಾಗ ಅವರ ಬಳಿ ಇರುವುದು ಇವೆಲ್ಲ ಶಿಷ್ಯನಿಗೆ ಸಂಗೀತದ ಸಂಪರ್ಕವನ್ನು ಉಂಟುಮಾಡಿ ಕೊಟ್ಟಿದ್ದಲ್ಲದೆ, ಎಷ್ಟೋ ಹೊಸ ವಿಷಯ ಗಳನ್ನು ಅರಿತುಕೊಳ್ಳಲು ಸಹಾಯಕವಾಗಿದ್ದವು. ಆದರೆ ತನಗಾಗಿಯೇ ಪಾಠ ಎಂಬುದಿರಲಿಲ್ಲ. ಎಂಥವರಿಗಾದರೂ ನಿರಾಸೆ ಆಗದೇ ಇರದು. ಹೀಗಿರುವಲ್ಲಿ, ಒಂದು ದಿನ ಮಧ್ಯಾಹ್ನ ಗುರುಗಳು ತಾವೇ ತಾವಾಗಿ ಶಿಷ್ಯನ ಮನಸ್ಸಿ ನಲ್ಲಿದ್ದ ಕೊರತೆಯನ್ನು ಪ್ರಸ್ತಾಪಿಸಿ, ಆತನಿಗೆ ತನ್ನ ಉಪದೇಶ ವನ್ನು ಬಿಚ್ಚಿ ಹೇಳಿದರು. ‘ಸಂಗೀತ ಕಲಿಯುವುದಕ್ಕೆ ಮುನ್ನ, ಸಂಗೀತ ಕೇಳುವುದು ಅಭ್ಯಾಸ ವಾಗಬೇಕು’ ಇದೇ ಮೊದಲ ಪಾಠ. ಅಲ್ಲಿಂದ ಮುಂದೆ ನೇರವಾದ ಕಲಿಕೆ. ಮಾರನೇ ದಿನದಿಂದ ಪಾಠ ಹೇಳಿ ಕೊಡುತ್ತೇನೆಂಬ ಭರವಸೆ ಕೊಟ್ಟಕೂಡಲೇ ಶಿಷ್ಯನಿಗೆ ಮಹದಾನಂದ. ಅದುವರೆಗೆ ತನ್ನನ್ನು ಗುರುಗಳು ಸಂಪೂರ್ಣವಾಗಿ ಮರೆತೇಬಿಟ್ಟಿದಾರೆಂಬ ಸಂಶಯ ಮನಸ್ಸನ್ನು ಕಾಡುತ್ತಿತ್ತು. ಆದರೆ ಪಟ್ಣಂ ಅವರು ಅಂಥ ಗುರುಗಳಲ್ಲವೆಂಬುದು ಗೊತ್ತಾಯಿತು. ಈ ರೀತಿ ಹಠಾತ್ತನೆ ಉಂಟಾಗುವ ಜ್ಞಾನೋದಯ ನಿಜಕ್ಕೂ ಬಹಳ ಸಂತೋಷ ವನ್ನುಂಟು ಮಾಡುತ್ತದೆ. ಅದಲ್ಲದೆ, ಇದುವರೆಗೂ ಗುರುಗಳು ಶಿಷ್ಯನ ಬಗ್ಗೆ ತನಗಿರಬೇಕಾದ ಜವಾಬ್ದಾರಿಯನ್ನು ಮರತೇ ಇಲ್ಲ ಎಂಬುದು ಶಿಷ್ಯನಿಗೆ ಭಯ, ಭಕ್ತಿ ಎರಡನ್ನೂ ಏಕಕಾಲದಲ್ಲಿ ಮೂಡಿಸಿತು.

ಪ್ರಾರಂಭದ ದಿನ ಬೇಗ ಎದ್ದು, ಕಾವೇರಿ ಸ್ನಾನಮಾಡಿ ಶುಚಿರ್ಭೂತರಾಗಿ ತ್ಯಾಗರಾಜರ ಸಮಾಧಿಗೆ ಹೋಗಿ ನಮಸ್ಕರಿಸಿ, ಅನಂತರ ಗುರುಗಳಿಗೆ ದೀರ್ಘದಂಡ ಪ್ರಮಾಣಮಾಡಿ ಪಾಠಕ್ಕೆ ಕುಳಿತರು. ಗುರುಗಳು ತಮಗೆ ಬಹುಪ್ರಿಯವಾದ ಬೇಗಡೆ ರಾಗದಿಂದಲೇ ಪಾಠವನ್ನು ಪ್ರಾರಂಭಿಸಿದರು. ಮೂರು ತಿಂಗಳಕಾಲ ತಾವು ರಚಿಸಿದ ಒಂದು ವರ್ಣವನ್ನೂ ಸಾಧನೆ ಮಾಡಿಸಿದರು, ಆ ವರ್ಣದಲ್ಲಿ ಬೇಗಡೆ ರಾಗ ಹೇಗೆ ರೂಪುಗೊಂಡಿದೆ, ಯಾವ ಯಾವ ಭಾಗದಲ್ಲಿ ಯಾವ ಅಪೂರ್ವ ಕಲ್ಪನೆಯಿದೆ ಎಂಬುದೆಲ್ಲವನ್ನೂ ವಿಶದಪಡಿಸಿದರು. ಬರೀ ಒಂದು ವರ್ಣ ಕಲಿತದ್ದರಿಂದಲೇ ಶಿಷ್ಯನಿಗೆ ಆ ರಾಗದ ರಹಸ್ಯಗಳೆಲ್ಲ ಗೊತ್ತಾದವು. ಅಂದಮೇಲೆ, ಪ್ರತ್ಯೇಕವಾಗಿ ರಾಗ ಹಾಡಿಸಬೇಕಾಗಿಲ್ಲ. ತಾನೇ ತಾನಾಗಿ ಸಂಪೂರ್ಣ ರಾಗಜ್ಞಾನ ಶಿಷ್ಯನಿಗೆ ಉಂಟಾಯಿತು.

ಅಲ್ಲಿಂದ ಮುಂದೆ ವಾಸುದೇವಾಚಾರ್ಯರ ಸಂಗೀತ ಶಿಕ್ಷಣ ನಿರಾತಂಕವಾಗಿ ಮುಂದೆ ಸಾಗಿತು.

ವಿನಯ ಆತ್ಮವಿಮರ್ಶೆ

ಹೀಗೆ ಹೇಳಿಸಿಕೊಂಡು ಕಲಿತ ಪಾಠದ ಜೊತೆಗೆ ಕೇಳಿ ಕಲಿತಪಾಠ ಅಷ್ಟಿಷ್ಟಲ್ಲ. ಗುರುಗಳ ಕಛೇರಿ ನಡೆದಾಗಲೆಲ್ಲ ಶಿಷ್ಯನು ಇದ್ದೇ ಇರಬೇಕು. ತಂಬೂರಿ ಮೀಟುವುದು, ಗುರುಗಳಿಗೆ ಹಾಲು ಕೊಡುವುದು ಇತ್ಯಾದಿ ಕೆಲಸಗಳನ್ನು ಮಾಡಬೇಕಾಗಿತ್ತು. ತಮ್ಮ ಶಿಷ್ಯರ ಪೈಕಿ ಪಟ್ಣಂ ಅವರಿಗೆ ವಾಸುದೇವಾಚಾರ್ಯರಲ್ಲಿ ಬಹಳ ವಿಶ್ವಾಸವಿತ್ತು. ಕಾರಣ, ಅವರ ಸಾಹಿತ್ಯ ವಿದ್ವತ್ತು. ಸಂಸ್ಕೃತ ಸಾಹಿತ್ಯದಲ್ಲಿ ವಾಸುದೇವಾಚಾರ್ಯರು ಅಷ್ಟು ಹೊತ್ತಿಗೆ ಪಾಂಡಿತ್ಯ ಸಂಪಾದಿಸಿದ್ದರು. ಈ ವಿಷಯ ಗುರುಗಳಿಗೆ ಮನವರಿಕೆ ಯಾಗಿತ್ತು. ಆದಕಾರಣ, ತಾವು ಕೃತಿ ರಚನೆ ಮಾಡುತ್ತಿದ್ದಾಗ ಶಿಷ್ಯ ವಾಸುವನ್ನು ಬಳಿಯಲ್ಲೆ ಇರುವಂತೆ ಹೇಳುತ್ತಿದ್ದರು. ಮತ್ತು ತಾವು ರಚಿಸಿದ ಕೃತಿಯ ಸಾಹಿತ್ಯ ಸರಿಯೇ ಅಲ್ಲವೇ ಎಂಬುದಕ್ಕೆ ವಾಸುವಿನ ತೀರ್ಮಾನ ಪಡೆಯುತ್ತಿದ್ದರಂತೆ. ಸಾಮಾನ್ಯವಾಗಿ ಗುರುಗಳಾದವರು ಶಿಷ್ಯರು ಯಾವ ವಿಷಯದಲ್ಲೆ ಆಗಲಿ ತಮಗಿಂತ ಸಮರ್ಥರೆಂಬುದನ್ನು ಒಪ್ಪಿಕೊಳ್ಳಲಾರರು. ಈ ಕಟ್ಟಳೆಗೆ ಪಟ್ಣಂ ಅವರು ಹೊರತಾಗಿದ್ದರು. ತಮ್ಮ ಸಾಮರ್ಥ್ಯ ಸಂಗೀತ ಕ್ಷೇತ್ರದಲ್ಲೆ ಹೊರತು ಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ಅಲ್ಲ ಎಂಬುದನ್ನು ಚೆನ್ನಾಗಿ ಮನಗಂಡಿದ್ದರಲ್ಲದೆ, ಶಿಷ್ಯರ ಸಲಹೆಯನ್ನು ಅಪೇಕ್ಷಿಸುತ್ತಿದ್ದರು. ಗುಣಕ್ಕೆ ಮತ್ಸರಪಡುವವರಾಗಿರಲಿಲ್ಲ ಎಂಬುದು ಗಮನಿಸಬೇಕಾದ ವಿಷಯ. ಇದಲ್ಲದೆ ತಾವು ಕಛೇರಿಗೆ ಹೋಗುವ ಮುನ್ನ ಶಿಷ್ಯರಿಗೆ, ಅದರಲ್ಲೂ ವಾಸುವಿಗೆ ಕೆಲವು ವಿಷಯಗಳನ್ನು ಗಮನಿಸಬೇಕೆಂದು, ಕಛೇರಿ ಮುಗಿದನಂತರ ತನಗೆ ಗೋಚರಿಸಿದ ಲೋಪ ದೋಷಗಳನ್ನು ಹೇಳಬೇಕೆಂದು ಅಪ್ಪಣೆ ಮಾಡುತ್ತಿದ್ದರಂತೆ, ಎಂಥ ಔದಾರ್ಯ, ಆತ್ಮವಿಮರ್ಶೆ ಅವರಿಗಿತ್ತೆಂಬುದು ಇದರಿಂದ ವ್ಯಕ್ತವಾಗುತ್ತದೆ.

ಶಿಸ್ತು

ಅವರ ಶಿಕ್ಷಣ ಕ್ರಮದ ಇನ್ನೊಂದು ಅಂಶವನ್ನು ಈಗ ಗಮನಿಸೋಣ. ಇದು ವಾದುದೇವಾಚಾರ್ಯರ ಅನುಭವಕ್ಕೆ ಬಂದದ್ದು. ಪ್ರತಿ ದಿನವೂ ಶಿಷ್ಯ ವಾಸು ಗುರುಗಳ ಮನೆ ಜಗುಲಿಯ ಮೇಲೆ ಮಲಗುವ ಪದ್ಧತಿ. ಸೊಳ್ಳೆಗಳ ಕಾಟದಿಂದ ಬೇಗ ನಿದ್ದೆ ಬರುತ್ತಿರಲಿಲ್ಲ. ಆ ಸಮಯದಲ್ಲಿ ಹಾಸಿಗೆಯಿಂದ ಎದ್ದು, ಮೂಲೆಯಲ್ಲಿ ಗೋಡೆ ಒರಗಿಸಿಕೊಂಡು ಕುಳಿತು ದಿನದ ಪಾಠವನ್ನೆಲ್ಲ ಮನನಮಾಡಿಕೊಳ್ಳುವ ಅಭ್ಯಾಸವಾಗಿತ್ತು. ಹೀಗೆ ಕುಳಿತಿರುವ ಹೊತ್ತಿನಲ್ಲಿ ಗುರುಗಳು ಎದ್ದು ಹೊರಗೆ ಬರುತ್ತಿದ್ದರಂತೆ, ಶಿಷ್ಯ ಕುಳಿತಿರುವುದನ್ನು ನೋಡಿ ‘ಏಕೆ ವಾಸು, ಇನ್ನೂ ನಿದ್ದೆ ಬರಲಿಲ್ಲವೇ? ಬೇಗ ಎದ್ದು ಸಾಧನೆ ಮಾಡಬೇಕಲ್ಲವೆ? ನಿದ್ದೆಗೆಟ್ಟರೆ ಒಳ್ಳೆಯದಲ್ಲ. ಮಲಗಿಕೊ’ ಎನ್ನುತ್ತಿದ್ದರಂತೆ. ಹೀಗಿರುವಲ್ಲಿ, ಒಂದು ರಾತ್ರಿ ಶಿಷ್ಯನಿಗೆ ಒಂದು ಯೋಚನೆ ಹೊಳೆಯಿತು. ಅದೇ ಸಮಯದಲ್ಲಿ ದೇವಸ್ಥಾನದಲ್ಲಿ ಮಹಾ ವೈದ್ಯನಾಥ ಅಯ್ಯರವರ ಕಛೇರಿ ನಡೆಯುತ್ತಿತ್ತು. ಹೇಗಿದ್ದರೂ ನಿದ್ದೆ ಬರುವುದಿಲ್ಲ. ವೃಥಾ ಕಾಲಕ್ಷೇಪ ಮಾಡುವುದರ ಬದಲು ಕಛೇರಿಯನ್ನಾದರೂ ಕೇಳಿ ಬರೋಣವೆಂದು ತೀರ್ಮಾನಿಸಿ, ಹಾಸಿಗೆಯಲ್ಲಿ ತಾನು ಮಲಗಿರುವಂತೆಯೇ ಹೊದಿಕೆ ದಿಂಬುಗಳನ್ನು ಜೋಡಿಸಿಟ್ಟು ಹೊರಟರು. ಹೋದ ಬಳಿಕ ಅವರು ಕಂಡ ನೋಟ ಕೇಳಿದ ಗಾನ ಅವರನ್ನು ಮೈಮರೆಯುವಂತೆ ಮಾಡಿತು, ಮನಸಾರೆ ಆನಂದ ಪಟ್ಟು ಮತ್ತೆ ಮನೆಗೆ ಬಂದು ನೋಡಿದಾಗ ಹಾಸಿಗೆ ಅಸ್ತವ್ಯಸ್ತವಾಗಿತ್ತು. ಸಿಡಿಲು ಬಡಿದಂತಾಯಿತು. ಗುರುಗಳಿಗೆ ವಿಷಯ ತಿಳಿದುಬಿಟ್ಟಿದೆ ಎಂಬುದು ಗೊತ್ತಾಯಿತು. ಬೆಳಗಾದಾಗ, ಎಂದಿನಂತೆ ಗುರುಗಳು ಶಿಷ್ಯನನ್ನು ಕರೆಯಲೇ ಇಲ್ಲ. ಕಳವಳ ಇಮ್ಮಡಿಸಿತು. ಸ್ನಾನ, ಸಂಧ್ಯಾವಂದನೆ ಮುಗಿದ ನಂತರ ಗುರುಗಳಿಂದ ಕರೆಬಂತು. ಗಡಗಡನೆ ನಡುಗುತ್ತಾ ಅಪರಾಧಿ ಬಂದುನಿಂತ ಕೂಡಲೇ ‘ವಾಸು, ಇಂದಿಗೆ ನಿನ್ನ ಶಿಷ್ಯವೃತ್ತಿ ಮುಗಿಯಿತು. ಇನ್ನು ನೀನು ನಿಮ್ಮೂರಿಗೆ ಹೋಗಬಹುದು’ ಎಂದು ಬಿರುಸಾಗಿ ಮಾತನಾಡಿದರು ಗುರುಗಳು. ಶಿಷ್ಯನಿಗೆ ತಡೆಯಲಾರದಷ್ಟು ದುಃಖ ಬಂತು. ಕಾಲಿಗೆ ಬಿದ್ದು, ದೈನ್ಯದಿಂದ ಕ್ಷಮಾಪಣೆ ಬೇಡಿದನಂತರ ಸ್ವಲ್ಪ ಕೋಪ ಶಮನವಾಯಿತು. ಅನಂತರ ಹೇಳಿದರು ‘ನೋಡು ವಾಸು, ಒಬ್ಬ ಗುರುವಿನ ಹತ್ತಿರ ವಿದ್ಯೆ ಕಲಿಯುತ್ತಿರುವಾಗ ಬೇರೊಬ್ಬರ ವಿದ್ಯೆಯ ಕಡೆ ಗಮನಕೊಡಬಾರದು. ಕೊಟ್ಟಲ್ಲಿ ಇದೂ ಇಲ್ಲ, ಅದೂ ಇಲ್ಲದಂತೆ ಆಗುತ್ತದೆ. ನೀನು ನನ್ನ ಹತ್ತಿರ ಕಲಿಯಬೇಕಾದ್ದನ್ನೆಲ್ಲ ಸಂಪೂರ್ಣವಾಗಿ ಕಲಿತ ಮೇಲೆ, ಯಾರ ಸಂಗೀತವನ್ನು ಬೇಕಾದರೂ ಕೇಳು. ಬೇಡವೆನ್ನುವುದಿಲ್ಲ. ಈಗ ಮಾತ್ರ ಅದುಕೂಡದು. ಈ ಕಾರಣದಿಂದ ಮಾತ್ರ ನೀನು ಮಾಡಿದ್ದು ತಪ್ಪು.’ ಶಿಷ್ಯ ಮರು ಮಾತಾಡದೆ ತನ್ನ ತಪ್ಪನ್ನು ಒಪ್ಪಿಕೊಂಡು, ಗುರುಗಳ ಆಜ್ಞೆಯನ್ನು ಶಿರಾಸಾವಹಿಸಿ ಪಾಲಿಸುವುದಾಗಿ ಹೇಳಿದ ಮೇಲೆ ಗುರುಗಳು ಪ್ರಸನ್ನರಾದರು. ಈ ಪ್ರಸಂಗದಿಂದ ತಿಳಿಯುವ ಅಂಶ ಪಟ್ಣಂ ಅವರಲ್ಲಿದ್ದ ಕಠಿಣ ಶಿಸ್ತು. ಅದಕ್ಕೆ ಎಳ್ಳಷ್ಟೂ ಭಂಗಬರಬಾರದೆಂಬುದೇ ಅವರ ದೃಢ ಸಂಕಲ್ಪ. ಹಾಗಿದ್ದರೇನೇ ಅವರಲ್ಲಿ ಶಿಷ್ಯವೃತ್ತಿ ಸಾಧ್ಯ. ಮೇಲಾಗಿ ತಮಗೇನಾದರೂ ಆರೋಗ್ಯ ಕೆಟ್ಟಿದ್ದಲ್ಲಿ ಹಿರಿಯ ಶಿಷ್ಯರು ಕಿರಿಯರಿಗೆ ಪಾಠ ಹೇಳಬೇಕೆಂಬ ಕಟ್ಟಳೆಯೂ ಅವರಲ್ಲಿತ್ತು. ಈ ಕಾರಣದಿಂದ ಶಿಷ್ಯರು ವೃಥಾ ಕಾಲಹರಣ ಮಾಡುವಂತೆಯೇ ಇರಲಿಲ್ಲ.

ತಾಳ್ಮೆ

ಅವರಲ್ಲಿದ್ದ ಮತ್ತೊಂದು ಶ್ಲಾಘನೀಯ ಗುಣ ವೆಂದರೆ ಅವರ ತಾಳ್ಮೆ. ಶಿಷ್ಯ ಎಷ್ಟು ತಪ್ಪಾಗಿ ಹಾಡಿದರೂ ಅದನ್ನು ಸರಿಪಡಿಸದೆ ಮುಂದಕ್ಕೆ ಹೋಗುತ್ತಿರಲಿಲ್ಲವಂತೆ ಅವರು ಶಿಷ್ಯನ ಬಗ್ಗೆ ತಮಗಿದ್ದ ಜವಾಬ್ದಾರಿಯನ್ನು ಚೆನ್ನಾಗಿ ಅರಿತವರಾಗಿದ್ದರೆಂದು ಇದರಿಂದ ಸ್ಪಷ್ಟ ವಾಗುತ್ತದೆ. ಈ ಗುಟ್ಟನ್ನು ತಿಳಿದ ಶಿಷ್ಯರು ಎಷ್ಟೋಸಾರಿ ಬೇಕು ಅಂತಲೇ ತಪ್ಪಾಗಿ ಹಾಡುತ್ತಿದ್ದುದೂ ಉಂಟು. ಕಾರಣ, ಗುರುಗಳ ಬಾಯಿಂದ ಮತ್ತೆ ಮತ್ತೆ ಅದನ್ನೇ ಕೇಳಬೇಕೆಂಬ ಹಂಬಲ ತಾಳ್ಮೆ ತಪ್ಪಿದಲ್ಲಿ ಕೋಪ ಬರುವುದು ಸಹಜವಲ್ಲವೇ? ಪಟ್ಣಂ ಅವರಿಗೆ ಹಾಗೆ ಆಗುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ಇನ್ನೂ ಚೆನ್ನಾಗಿ ವಿಸ್ತಾರವಾಗಿ ಹಾಡಿ ಶಿಷ್ಯರಿಗೆ ಮಾರ್ಗ ದರ್ಶನ ಮಾಡುತ್ತಿದ್ದರಂತೆ. ಆಗ ಶಿಷ್ಯರು ಅನುಭವಿಸುತ್ತಿದ್ದ ಆನಂದ ಹೇಳತೀರದು.

ಶಿಷ್ಯರು

ಮೇಲೆ ಹೇಳಿದ ದೊಡ್ಡ ಗುಣಗಳು ಪಟ್ಣಂ ಅವರು ಪ್ರಖ್ಯಾತ ಸಂಗೀತ ಶಿಕ್ಷಕರಾಗುವುದಕ್ಕೆ ಕಾರಣವಾದವು.

ಅವರಿಂದ ಸಂಗೀತ ಶಿಕ್ಷಣವನ್ನು ಪಡೆದವರ ಹೆಸರುಗಳನ್ನು ಪಟ್ಟಿಮಾಡಬಹುದು.

೧. ರಾಮನಾಥಪುರಂ ಶ್ರೀನಿವಾಸಯ್ಯಂಗಾರ್,
(‘ಪೊಚ್ಚಿ’ ಶ್ರೀನಿವಾಸಯ್ಯಂಗಾರ್ ಎಂದೂ ಕರೆಯಲ್ಪಡು ತ್ತಿದ್ದರು.)

೨. ತಿರುವಾಡಿಯ ಜಿ. ನಾರಾಯಣಸ್ವಾಮಿ ಅಯ್ಯರ್

೩. ಕಾಕಿನಾಡ ಸಿ. ಎಸ್. ಕೃಷ್ಣಸ್ವಾಮಿ ಅಯ್ಯರ್.
(ಇವರು ಸಂಗೀತ ಗ್ರಂಥಗಳನ್ನು ರಚಿಸಿರುತ್ತಾರೆ.)

೪. ಮೈಸೂರು ವಾಸುದೇವಾಚಾರ್ಯರು.

೫. ಗುರುಸ್ವಾಮಿ ಅಯ್ಯರ್.

೬. ಟೈಗರ್ ವರದಾಚಾರ್ಯರು.

೭. ಮುತ್ಯಾಲಪೇಟೆ ಶೇಷ ಅಯ್ಯರ್.

೮. ಎಂ.ಎಸ್. ರಾಮಸ್ವಾಮಿ ಅಯ್ಯರ್.

೯. ಏನಡಿ ಲಕ್ಷ್ಮಿ, ನಾರಾಯಣಿ.

೧೦. ಸೇಲಂ ಮೀನಾಕ್ಷಿ ಮಕ್ಕಳು ಪಾಪಾ ಮತ್ತು ರಾಧಾ.

ಮೇಲ್ಕಂಡ ಶಿಷ್ಯರ ಪೈಕಿ ಸಂಗೀತ ಕ್ಷೇತ್ರದಲ್ಲಿ ಶ್ರೇಷ್ಠ ಗಾಯಕರಾಗಿ ಅಪಾರ ಕೀರ್ತಿಗಳಿಸಿದವರು ಮೂವರು ಎನ್ನಬಹುದು. ಅವರ‍್ಯಾರೆಂದರೆ, ಪೂಚ್ಚಿ ಶ್ರೀನಿವಾಸ ಯ್ಯಂಗಾರ್, ಮೈಸೂರು ವಾಸುದೇವಾ ಚಾರ್ಯರು ಮತ್ತು ಟೈಗರ್ ವರದಾಚಾರ್ಯರು. ಮೊದಲನೆಯವರು ಘನ ವಿದ್ವಾಂಸರಾದ ಅರಿಯಕುಡಿ ರಾಮಾನುಜಯ್ಯಂಗಾರ‍್ಯರ ಗುರುಗಳು. ‘ಪೊಚ್ಚಿ’ ಎಂದು ಅಡ್ಡ ಹೆಸರು ಅವರಿಗೆ ಬರಲು ಕಾರಣ, ಅವರ ಶಾರೀರ ದುಂಬಿಯ ಝೇಂಕಾರ ವನ್ನುಳ್ಳದ್ದು. ಆದರೆ ಬಹು ಕೃಶವಾದದ್ದು. ಅವರು ಸ್ವತಃ ವಾಗ್ಗೇಯಕಾರರು. ಇಂದಿಗೂ ಸಂಗೀತ ಕಚೇರಿಗಳಲ್ಲಿ ವಿದ್ವಾಂಸರು ಹಾಡುವ ಅನೇಕ ಕೃತಿಗಳನ್ನು ರಚಿಸಿದವರು. ಉದಾಹರಣೆ, ತೋಡಿರಾಗದ ‘ಶ್ರೀ ವೆಂಕಟೇಶಂ’ ದೇವ ಮನೋಹರಿಯ ‘ನಿಕಲೇನಾ’ ಇತ್ಯಾದಿ. ಇನ್ನು ಮೈಸೂರು ವಾಸುದೇವಾಚಾರ್ಯರು ಕನ್ನಡ ಜನತೆಗೆ ಚಿರಪರಿಚಿತರು. ದೀರ್ಘಕಾಲ ಸಂಗೀತ ಪ್ರಪಂಚದಲ್ಲಿ ತಮ್ಮ ಪ್ರತಿಭೆಯನ್ನು ಬೆಳಗಿದವರು ನೂರಾರು ಕೃತಿಗಳನ್ನು ರಚಿಸಿ ಕರ್ಣಾಟಕ ಸಂಗೀತ ಸಂಪತ್ತನ್ನು ಹೆಚ್ಚಿಸಿದವರು. ಅನೇಕ ಶಿಷ್ಯರಿಗೆ ವಿದ್ಯಾದಾನ ಮಾಡಿದವರು. ೯೫ ವರ್ಷಗಳು ಜೀವಿಸಿ ಗುರುಗಳಿಗೆ ಗುರುಗಳೆನಿಸಿಕೊಂಡವರು. ಮೂರನೆ ಯವರಾದ ಟೈಗರ್ ವರದಾಚಾರ್ಯರು ಸಂಗೀತ ಸೀಮಾ ಪುರುಷರೆನಿಸಿಕೊಂಡರು. ಅವರಿಗೆ ‘ಟೈಗರ್’ ಎಂಬ ಅಡ್ಡ ಹೆಸರು ಬರಲು ಕಾರಣ ಅವರು ಹಾಡುವಾಗ ಇದ್ದ ಮುಖಭಾವ. ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ಪ್ರಾಚಾರ್ಯರಾಗಿ ಬಹುಮಂದಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದರು. ಮೈಸೂರಿನಲ್ಲಿಯೇ ಅನೇಕ ವರ್ಷಗಳು ನೆಲೆಸಿ ಕನ್ನಡ ಜನತೆಗೆ ದಕ್ಷಿಣಾದಿ ಸಂಗೀತದ ಸವಿಯೂಟವನ್ನುಣಿಸಿದರು.

ಹೀಗೆ ಸಂಗೀತ ಕ್ಷೇತ್ರದ ಭೀಷ್ಮ ದ್ರೋಣರಂತೆ ಶೋಭಿಸಿದ ಉದ್ಧಾಮಶಿಷ್ಯರನ್ನು ಪಡೆದ ಗುರು ಪಟ್ಣಂ ನಿಜಕ್ಕೂ ಭಾಗ್ಯಶಾಲಿಯೆನ್ನಬಹುದು. ಅವರಂತೆಯೇ ಶಿಷ್ಯರು ಶ್ರೇಷ್ಠಗಾಯಕರೆನಿಸಿದ್ದಲ್ಲದೆ, ಶ್ರೇಷ್ಠ ವಾಗ್ಗೇಯ ಕಾರರೂ ಆದರು. ಇನ್ನೊಂದು ಸ್ವಾರಸ್ಯವೆಂದರೆ, ಮೇಲೆ ಹೇಳಿದ ಗುರುಶಿಷ್ಯ ಪರಂಪರೆ ತ್ಯಾಗರಾಜರಿಂದ ಪ್ರಾರಂಭ ವಾಗಿ ಇಂದಿನವರೆಗೂ ನಡೆದು ಬಂದಿದೆ. ಈಗ ಹೆಸರಿಸಿದ ಪಟ್ಣಂ ಅವರ ಮುಖ್ಯ ಶಿಷ್ಯರು ಇಂದಿಗೂ ಸಂಗೀತ ಕ್ಷೇತ್ರದಲ್ಲಿ ಪ್ರಭಾವಶಾಲಿಗಳಾಗಿದ್ದಾರೆ. ಕೆ.ವಿ. ನಾರಾಯಣ ಸ್ವಾಮಿ (ಇವರು ಅರಿಯಕುಡಿ ರಾಮಾನುಜಯ್ಯಂಗಾರರ ಪಟ್ಟ ಶಿಷ್ಯರು. ಇಂದಿನ ಪ್ರಸಿದ್ಧ ಗಾಯಕರಲ್ಲೊಬ್ಬರು); ಎಂ. ಡಿ. ರಾಮನಾಥನ್ (ಇವರು ಟೈಗರ್ ವರದಾಚಾರ್ಯರರ ಶಿಷ್ಯರು. ಈಗ ಬಹಳ ಹೆಸರುಗಳಿಸಿರುವ ಗಾಯಕರು); ಡಿ. ಪಶುಪತಿ (ಇವರು ವಾಸುದೇವಾಚಾರ್ಯರ ಶಿಷ್ಯರು. ಅವರ ಕೀರ್ತನೆಗಳನ್ನು ಅವರಿಂದಲೇ ಹೇಳಿಸಿಕೊಂಡು ಅಂದವಾಗಿ ಹಾಡುವ ಸಾಮರ್ಥ್ಯವನ್ನು ಪಡೆದು ಸಂಗೀತಕ್ಕೆ ಸೇವೆಸಲ್ಲಿಸುತ್ತಿದಾರೆ.) ಹೀಗೆ ತ್ಯಾಗರಾಜರ ಮಾರ್ಗದರ್ಶನ ಈ ಪರಂಪರೆಯಲ್ಲಿ ಅವಿಚ್ಛಿನ್ನವಾಗಿ ನಮ್ಮ ಕಾಲದವರೆಗೂ ಎಷ್ಟು ಸಂಪ್ರದಾಯಬದ್ಧವಾಗಿ ಬೆಳೆದು ಬಂದಿದೆ ಎಂಬುದು ಗೊತ್ತಾಗುತ್ತದೆ.

ಕೃತಿ ರಚನಾ ಪ್ರತಿಭೆ

ಇದುವರೆಗೆ ನಾವು ಪಟ್ಣಂ ಅವರ ಪ್ರತಿಭೆಯ ಕೆಲವು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದೆವು. ಈ ಪ್ರತಿಭೆಯ ಇನ್ನೊಂದು ಮುಖವನ್ನು ಪರಿಚಯ ಮಾಡಿ ಕೊಳ್ಳೋಣ. ಅದಾವುದೆಂದರೆ, ಅವರ ಕೃತಿ ರಚನಾ ಸಾಮರ್ಥ್ಯ. ಸುಮಾರು ಒಂದು ನೂರರಷ್ಟು ವಿಧವಿಧವಾದ ಕೃತಿಗಳನ್ನು ಪಟ್ಣಂ ಅವರು ರಚಿಸಿದ್ದಾರೆಂದು ತಿಳಿದು ಬರುತ್ತದೆ. ಅವುಗಳ ಪೈಕಿ ಕೆಲವು ವರ್ಣಗಳು (ಕಛೇರಿಯ ಪ್ರಾರಂಭದಲ್ಲಿ ಹಾಡಲ್ಪಡುವುವು) ಪದವರ್ಣಗಳು (ಭರತನಾಟ್ಯಕ್ಕೆ ಹೊಂದತಕ್ಕವು) ಕೀರ್ತನೆಗಳು, ಜಾವಳಿಗಳು, ಮತ್ತು ತಿಲ್ಲಾನಗಳು (ಕಛೇರಿ ಕೊನೆಯಲ್ಲಿ ಹಾಡಲ್ಪಡತಕ್ಕವು) ಇವೆ. ಕೃತಿರಚನೆಗೆ ಇವರು ತೆಲುಗು ಮತ್ತು ಸಂಸ್ಕೃತ ಭಾಷೆಗಳನ್ನು ಬಳಸಿದ್ದಾರೆ. ಬೇರೆ ಬೇರೆ ತಾಳಗಳನ್ನೂ ಬಳಸಿದ್ದಾರೆ, ಅವುಗಳ ಪೈಕಿ ಮುಖ್ಯ ವಾದವುಗಳನ್ನು ಇಲ್ಲಿ ಕಾಣಬಹುದು.

ಹಾಡು ರಾಗ ತಾಳ
ನಿನ್ನುಜೂಚಿ ಸೌರಾಷ್ಟ್ರ ಆದಿ
ವರಮುಲೊಸಗಿ ಕೀರವಾಣಿ ರೂಪಕ
ಸಂಕಲ್ಪಮೆಟ್ಟಿದೊ ಖರಹರಪ್ರಿಯ ಆದಿ
ಪರಿದಾನಮಿಚ್ಚಿತೆ ಬಿಲಹರಿ ಝಂಪ
ಎಂತನೇರ್ಚಿನ ಸಾವೇರಿ ಆದಿ
ಮನಸುನ ನೆರ ಬೇಗಡೆ ರೂಪಕ
ಅಭಿಮಾನ ಮೆನ್ನಡುಗಲ್ಕು ಬೇಗಡೆ ಆದಿ
ಮನಸುಕರಗ ಹಂಸಧ್ವನಿ ರೂಪಕ
ನೇಜೇಸಿನಿ ಪೂರ್ಣಚಂದ್ರಿಕ ಆದಿ
೧೦ ರಘುವಂಶ ಸುಧಾಂಬುಧಿಚಂದ್ರ ಕಥನಕುತೂಹಲ ಆದಿ
೧೧ ಇಂತಕಂಟೆ ಕನ್ನಡ ರೂಪಕ
೧೨ ಮರಚಿಟ್ಲುಂಡೆ(ವರ್ಣ) ಬೇಗಡೆ
೧೩ ನಿಜದಾಸವರದ ಕಲ್ಯಾಣಿ ಆದಿ

ಪ್ರತಿಯೊಬ್ಬ ಕೃತಿ ರಚನಾಕಾರನೂ ತಾನು ರಚಿಸಿದ ಕೃತಿ ತನ್ನದೆಂದು ಗೊತ್ತಾಗುವುದಕ್ಕೆ ಒಂದು ಸಂಕೇತವನ್ನು ಬಳಸುತ್ತಾರೆ. ಇದನ್ನು ‘ಅಂಕಿತ’ ಅಥವಾ ‘ಮುದ್ರೆ’ ಎಂದು ಕರೆಯುತ್ತಾರೆ, ಪಟ್ಣಂ ಅವರ ಅಂಕಿತ ’ಶ್ರೀ ವೆಂಕಟೇಶ’  ‘ವೆಂಕಟೇಶ’ ‘ಆದಿ ವೆಂಕಟೇಶ’ ‘ವರದ ವೆಂಕಟೇಶ್ವರ’ ಎಂಬುದಾಗಿ ಇರುತ್ತದೆ, ಇದು ಕೇವಲ ‘ವೆಂಕಟೇಶ’ ದೇವರಲ್ಲಿದ್ದ ಭಕ್ತಿಸೂಚಕವೋ, ಅಥವಾ ತಮ್ಮ ಗುರುಗಳಾದ ಮಾನಂಬುಚಾವಡಿ ವೆಂಕಟಸುಬ್ಬ ಅಯ್ಯರ್ ಅವರಲ್ಲಿದ್ದ ಭಕ್ತಿ ಸೂಚಕವೋ ಗೊತ್ತಿಲ್ಲ. ಅಂತೂ ಈ ಅಂಕಿತವನ್ನು ಅವರ ಕೃತಿಗಳಲ್ಲೆಲ್ಲ ನಾವು ಕಾಣಬಹುದು.

ಪಟ್ಣಂ ಅವರ ಕೃತಿ ರಚನೆಯಲ್ಲಿ ಅಸಾಧಾರಣ ಕೌಶಲವಿದೆ, ಅಪೂರ್ವ ಕಲ್ಪನೆಯಿದೆ, ಕೆಲವು ಕೃತಿಗಳು ಭಗವಂತನ ನಾಮ ಸಂಕೀರ್ತನ ರೂಪವಾಗಿವೆ.

ಉದಾಹರಣೆ:

ಪ: ನಿನ್ನೂಜೂಚಿ ಧನ್ಯುಡೈತ್ಮಿ | ನೀರಜ ನೇತ್ರ|

ಅಪ: ವನಜಾಸನಾದಿ ವಂದಿತ ಚರಣ| ವನಜನಯನ ದೇವ

ಚರಣ: ಸಕಲಲೋಕಧಾರ| ಸಾಧುಹೃದಯ ವಿಹಾರ
ಸಕಲಜೀವೇಶ್ವರ| ಸರ್ವೇಶ್ವರ
ಸಕಲಪಾಪಹರ| ಸಾಧುಹೃದಯ ವಿಹಾರ
ಸಕಲ ವರದಾಯಕ| ಶ್ರೀ ವೆಂಕಟೇಶ

ತಾತ್ಪರ್ಯ: ಕಮಲದಂತೆ ಕಣ್ಣುಗಳುಳ್ಳ ನಿನ್ನನ್ನು ನೋಡಿ ಧನ್ಯನಾದೆ, ಬ್ರಹ್ಮಾದಿದೇವತೆಗಳಿಂದ ನಮಸ್ಕರಿಸಲ್ಪಟ್ಟ ಪಾದಗಳುಳ್ಳವನು ನೀನು, ಎಲ್ಲ ಲೋಕಗಳಿಗಳೂ ಆಧಾರ ವಾಗಿರುವವನು, ಸತ್ಯಸ್ವರೂಪನು, ಎಲ್ಲ ಜೀವಗಳಿಗೂ ಒಡೆಯನಾದವನು, ಎಲ್ಲ ಪಾಪಗಳನ್ನೂ ಹೋಗಲಾಡಿ ಸುವವನು, ಸಜ್ಜನರ ಹೃದಯದಲ್ಲಿ ವಿಹಾರ ಮಾಡು ವವನು, ವೆಂಕಟೇಶ ನಿನ್ನ ದರ್ಶನದಿಂದ ಧನ್ಯನಾದೆ.

ಈ ಕೃತಿಯನ್ನು ಪ್ರತಿಯೊಂದು ಭಾಗದಲ್ಲೂ ‘ಸಂಗತಿ’ ಗಳನ್ನು ಕ್ರಮವರಿತು ಜೋಡಿಸಿದ್ದಾರೆ. ಪ್ರಾಸ, ಅನುಪ್ರಾಸಗಳು, ಸಾಹಿತ್ಯವನ್ನು ಅಂದಪಡಿಸಿವೆ, ಹಾಡು ವವನಿಗೆ ಉತ್ಸಾಹವನ್ನುಂಟುಮಾಡುವಂಥ ರಚನೆ ಯಾಗಿದೆ, ಅವರ ಇನ್ನೊಂದು ಕೃತಿಯಲ್ಲಿ ಭಗವಂತನ ನಾಮಸ್ಮರಣೆಯಲ್ಲದೆ, ಅವನಿಗೆ ಮೊರೆಯಿಡುವ ರೀತಿ ಹೊಸದಾಗಿದೆ.

ಪ: ಪರಿದಾನ ಮಿಚ್ಚಿತೆ ಪಾರಿಂಪುವಯ್ಯ

ಅನುಪಲ್ಲವಿ: ಪರಮಪುರುಷ ಶ್ರೀಪತಿನಾಪೈ ನೀಕು ಕರುಣಗಲ್ಕಗಯುನ್ನಕಾರಣಮೇಮಯ್ಯ

ಚರಣ: ರೊಕ್ಕ ಮಿಚ್ಚುಟಕು ನಾಮುಕ್ಕಂಟಿ ಚೆಲಿಗಾನು
ಚಕ್ಕ ನಿಚೆಲಿಯೊಸಗ ಜನಕರಾಜುಡುಗಾನು
ಮಿಕ್ಕಿಲಿ ಸೈನ್ಯ ಮೀಲಾವ ಮರ್ಕಟೇಂದ್ರುಡುಗಾನ
ಅಕ್ಕಟಿಕಾಮೆಟುಗಲ್ಕು ಆದಿವೆಂಕಟೇಶ್ವರ||

ತಾತ್ಪರ್ಯ: ಯಾವುದಾದರೊಂದು ಅಮೂಲ್ಯ ಕಾಣಿಕೆ ಯನ್ನು ಕೊಟ್ಟೇ ನಿನ್ನ ಕೃಪೆ ಪಡೆಯಬೇಕೆ? ವೆಂಕಟೇಶ್ವರ! ಪರಮಪುರುಷ, ಲಕ್ಷ್ಮೀಪತಿಯಾದ ನಿನಗೆ ನನ್ನ ಮೇಲೆ ಕರುಣೆಯಿಲ್ಲದಿರುವುದಕ್ಕೆ ಕಾರಣವೇನು? ನಿನಗೆ ಅಪಾರ ಹಣವನ್ನು ಕೊಡಲು ನಾನು ಕುಬೇರನಲ್ಲ, ಸುಂದರಿಯಾದ ಮಗಳನ್ನು ಕೊಟ್ಟು ವಿವಾಹಮಾಡಲು, ಜನಕ ರಾಜನಲ್ಲ (ಸೀತೆ ಜನಕರಾಜನ ಮಗಳು ಇಲ್ಲಿ ವೆಂಕಟೇಶ, ರಾಮ ಎಂಬ ಭೇದವಿಲ್ಲ) ಹೋಗಲಿ ಎಂದರೆ, ದೊಡ್ಡ ಕಪಿಸೈನ್ಯ ವನ್ನು ಒದಗಿಸಿಕೊಡಲು ನಾನು ಸುಗ್ರೀವನಲ್ಲ, ಇದೊಂದೂ ನನ್ನಿಂದ ಸಾಧ್ಯವಿಲ್ಲವೆಂದು ನನ್ನನ್ನು ಅಲಕ್ಷ್ಯ ಮಾಡಬೇಡ. ಬೇಗ ಕರುಣ ತೋರಿ ಕಾಪಾಡು ಎಂದು ಮೊರೆಯಿಟ್ಟಿದ್ದಾರೆ.

ಈ ಕೃತಿ ಬಹಳ ಪ್ರಚಲಿತವಾಗಿದೆ, ಸಂಗೀತ ಕಲಿಯುವವರಿಂದ ಹಿಡಿದು, ದೊಡ್ಡ ವಿದ್ವಾಂಸರವರೆಗೆ ಎಲ್ಲರೂ ತಮ್ಮ ತಮ್ಮ ಶಕ್ತ್ಯನುಸಾರ ಹಾಡಿ ಕೃತಿಯನ್ನು ಪೋಷಿಸಬಹುದುದಾಗಿದೆ.

ಮೇಲ್ಕಂಡ ಪಟ್ಟಿಯಲ್ಲಿ ಬೇಗಡೆ ರಾಗದ ರಚನೆಗಳು ಮೂರು ಕಂಡುಬರುತ್ತವೆ. ಇದಕ್ಕೆ ಕಾರಣ, ಪಟ್ಣಂ ಅವರಿಗೆ ಈ ರಾಗದ ಮೇಲಿದ್ದ ಪ್ರೀತಿ, ಆ ರಾಗವನ್ನು ಹಾಡುವುದರಲ್ಲಿ ಅವರ ಸಮಾನರಾರೂ ಇರಲಿಲ್ಲ. ಬಹು ಪ್ರಿಯವಾದ್ದರಿಂದ ಆ ರಾಗದಲ್ಲಿ ಹೆಚ್ಚಿಗೆ ರಚನೆಗಳನ್ನು ಮಾಡಿದ್ದಾರೆ, ಇವರಿಗೆ ಪ್ರಿಯವಾದ ಇನ್ನೊಂದು ರಾಗವೆಂದರೆ, ಪೂರ್ಣಚಂದ್ರಿಕ,  ಈ ರಾಗದಲ್ಲಿ ಅವರು ರಚಿಸಿದ ಕೃತಿ ‘ನೇಜೇಸಿನ’, ಇದನ್ನು ತಾವೇ ಆಗಾಗ್ಗೆ ತಮ್ಮ ಕಛೇರಿಗಳಲ್ಲಿ ಹಾಡುತ್ತಿದ್ದರಂತೆ, ಈ ಕೃತಿಯ ಅನುಪಲ್ಲವಿಯಲ್ಲಿ ಬರುವ ‘ಶ್ರೀ ಜಾನಕಿಪ್ರಾಣನಾಯಕ” ಎಂಬ ಸಾಹಿತ್ಯ ಭಾಗವನ್ನು ಬಹುಸ್ವಾರಸ್ಯವಾಗಿ ಹಾಡಿ ಎಲ್ಲರನ್ನೂ ತಲೆದೂಗಿಸುತ್ತಿದ್ದರಂತೆ. ಈ ರಾಗವನ್ನು ಹಾಡುವುದೂ ಕಷ್ಟಸಾಧ್ಯವೇ, ಅದನ್ನು ನಿರಾಯಾಸವಾಗಿ ನೆಮ್ಮದಿಯಾಗಿ ಹಾಡುವ ಸಾಮರ್ಥ್ಯ ಅವರೊಬ್ಬರಿಗೇ ಇದ್ದಿತೆಂದು ತಿಳಿದವರು ಹೇಳುವ ಮಾತು.

ಬಹಳ ಕಾಲದವರಿಗೂ ಪಟ್ಣಂ ಅವರು ಕಲ್ಯಾಣಿ ರಾಗದಲ್ಲಿ ಕೃತಿರಚನೆ ಮಾಡಿಯೇ ಇರಲಿಲ್ಲ. ಇದನ್ನರಿತ ಕೆಲವು ಶಿಷ್ಯರು ಇದಕ್ಕೆ ಕಾರಣವನ್ನು ತಿಳಿಯ ಬಯಸಿದರಂತೆ. ಆಗ ಅವರು ಕೊಟ್ಟ ಉತ್ತರ ಈ ರೀತಿ ಇದೆ. ‘ಶ್ರೀತ್ಯಾಗರಾಜರು ಆ ರಾಗದಲ್ಲಿ ಎಷ್ಟು ರಚನೆಗಳನ್ನು ಮಾಡಬಹುದೋ ಅಷ್ಟನ್ನೂ ಮಾಡಿ ಮುಗಿಸಿದ್ದಾರೆ. ಇನ್ನೊಬ್ಬರು ಆ ರಾಗದಲ್ಲಿ ಕೃತಿ ರಚನೆ ಮಾಡುವುದಕ್ಕೇ ಸಾಧ್ಯವಿಲ್ಲದಂತೆ ಮಾಡಿಬಿಟ್ಟಿದ್ದಾರಲ್ಲ, ಇನ್ನು ನಮ್ಮಂತಹ ವರು ಆ ಸಾಹಸ ಮಾಡಬಹುದೆ?’ ಶಿಷ್ಯರು ಸುಮ್ಮನಾಗಿ ಬಿಟ್ಟರು. ಅದಾದ ಕೆಲವು ದಿನಗಳ ಮೇಲೆ ಕಲ್ಯಾಣಿ ರಾಗದಲ್ಲಿ ಪಟ್ಣಂ ಅವರ ಕೃತಿ ಹೊರಬಂತು, ಯಾವ ವಿಧದಲ್ಲೂ ತ್ಯಾಗರಾಜರ ರಚನೆಗಳಿಗೆ ಕಮ್ಮಿಯಿಲ್ಲ ಎನ್ನುವಂತಹ ಕೃತಿ, ಹೊಸ ನಿಲುವು, ಹೊಸ ತಿರುವು ರೂಪುಗೊಂಡಿದೆ.

ಇವರ ಕೃತಿಗಳ ಬಗ್ಗೆ ಒಂದು ಪ್ರತೀತಿಯುಂಟು, ಒಮ್ಮೆ ಯಾರಿಂದಲೋ ಸಾಲ ತೆಗೆದುಕೊಂಡು ಬಿಟ್ಟಿದ್ದರಂತೆ ಅವರು. ಅದನ್ನು ಹಿಂದಕ್ಕೆ ಕೊಡುವುದು ಸಾಧ್ಯವಾಗಿರಲಿಲ್ಲ. ಆದರೆ, ಅವನು ಪದೇ ಪದೇ ಬಂದು ಪೀಡಿಸ ತೊಡಗಿದ್ದನಂತೆ, ಆ ಸಮಯದಲ್ಲಿ, ಇವರಿಗೆ ಮನಸ್ಸಿಗೆ ಬಹಳ ನೋವಾಗಿ, ಆ ವೇದನೆಯಲ್ಲೇ ‘ಇಂತ ಕಂಟೆ ಕಾವಲೆನಾ’ ಎಂಬ ಕನ್ನಡ ರಾಗದ ಕೃತಿಯನ್ನು ರಚಿಸಿ ಪರಮಾತ್ಮನನ್ನು ಪ್ರಾರ್ಥಿಸಿದರಂತೆ, ಆಗ ಹಣ ಒದಗಿ ಬಂದು, ಋಣಮುಕ್ತರಾದರೆಂಬ ವಿಷಯವನ್ನು ಅವರ ಶಿಷ್ಯರಾದ ವಾಸುದೇವಾಚಾರ್ಯರೇ ಹೇಳಿ ಕೊಂಡಿದ್ದಾರೆ.

ಹೊಸ ರಾಗದ ಸೃಷ್ಟಿ

ಇನ್ನೊಂದು ಗಮನಾರ್ಹ ಅಂಶವೆಂದರೆ, ಹೊಸ ರಾಗವನ್ನು ಸೃಷ್ಟಿಮಾಡತಕ್ಕ, ಜಾಣ್ಮೆ ಪಟ್ಣಂ ಅವರಲ್ಲಿತ್ತು, ಇದಕ್ಕೆ ಸಾಕ್ಷಿ, ಅವರೇ ಕಂಡುಹಿಡಿದಂಥ ‘ಕಥನ ಕುತೂಹಲ’ ಎಂಬ ರಾಗ, ಆ ಹೆಸರನ್ನು ಕೊಟ್ಟಿರುವವರೂ ಅವರೆ, ‘ಕಥನ’ ಎಂದರೆ ಹೇಳಲು ಅಥವಾ ಹಾಡಲು, ಕುತೂಹಲವನ್ನುಂಟುಮಾಡುವ ರಾಗವೆಂದರ್ಥ. ಆ ರಾಗದಲ್ಲಿ ಅವರೇ ರಚಿಸಿರುವ ‘ರಘುವಂಶ ಸುಧಾಂಬುಧಿಚಂದ್ರ’ ಎಂಬ ಶ್ರೀರಾಮನನ್ನು ಕುರಿತ ಕೃತಿ ಬಹಳ ಪ್ರಚಾರವನ್ನು ಪಡೆದಿದೆ. ಅದು ಪಂಡಿತ ಪಾಮರರೆಲ್ಲರೂ ಒಪ್ಪತಕ್ಕ ಒಂದು ಹೊಸ ಸೃಷ್ಟಿಯಾಗಿದೆ, ವಾದ್ಯವೃಂದದವರಿಗೂ ಸೂಕ್ತವಾಗಿರುವ ರಚನೆಯಾಗಿದೆ. ಹೀಗೆ ಹಲವಾರು ಹೊಸ ಕೃತಿಗಳನ್ನು ರಚಿಸಿ ಸಂಗೀತ ಸಂಪತ್ತನ್ನು ಅಭಿವೃದ್ಧಿಗೊಳಿಸಿದ ಕೀರ್ತಿ ಪಟ್ಣಂ ಅವರಿಗೆ ಸಲ್ಲುತ್ತದೆ, ಒಂದು ಕಡೆ ಜನಪ್ರಿಯ ಗಾಯಕರೆಂಬ ಕೀರ್ತಿ, ಇದರ ಜೊತೆಗೆ, ಉತ್ತಮ ಸಂಗೀತ ಶಿಕ್ಷಕರೆಂಬ ಕೀರ್ತಿಯೂ ಸೇರಿದ್ದರಿಂದ ಸಂಗೀತ ಕ್ಷೇತ್ರದಲ್ಲಿ ಅವರ ಸ್ಥಾನಮಾನ ಬಹಳ ಹಿರಿದಾಗಿದ್ದುದರಲ್ಲಿ ಆಶ್ಚರ್ಯವೇನಿಲ್ಲ.

ಪಟ್ಣಂ ಅವರ ವಿಷಯದಲ್ಲಿ ಪ್ರಚಲಿತವಾಗಿರುವ ಕೆಲವು ಪ್ರಸಂಗಗಳು ಜನಗಳ ಬಾಯಿಂದ ಕೇಳಬರತಕ್ಕವೇ ವಿನಾ ಎಲ್ಲೂ ಬರೆದಿಡಲ್ಪಟ್ಟಿಲ್ಲ. ಅಂತಹ ಪ್ರಸಂಗಗಳ ಲ್ಲೊಂದು ಬಹಳ ಆಶ್ಚರ್ಯವನ್ನುಂಟುಮಾಡುವುದಲ್ಲದೆ ಅವರ ಗಾಯನ ಎಷ್ಟು ಅದ್ಭುತವಾಗಿತ್ತೆಂಬುದನ್ನು ವಿಷದ ಪಡಿಸುತ್ತದೆ.

ಒಮ್ಮೆ ಅವರು ಮದರಾಸಿಗೆ ಹೋಗಿದ್ದಾಗ ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ತಂಗಿದ್ದರಂತೆ, ಆ ಸಮಯದಲ್ಲಿ ಒಂದು ದಿನ ಮನೆಯ ಹಜಾರದಲ್ಲಿ ಕುಳಿತು ಪಟ್ಣಂ ಅವರು ಸಂಗೀತಸಾಧನೆ ಮಾಡುತ್ತಿದ್ದರಂತೆ, ತಗ್ಗು ಸ್ಥಾಯಿಯಲ್ಲಿ ತಾನವನ್ನು ಹಾಡುತ್ತಿದ್ದಾಗ ಹಜಾರದಲ್ಲಿದ್ದ ಕಂಭಗಳೆಲ್ಲ ಗಡಗಡನೆ ನಡುಗುತ್ತಿದ್ದುದು ಕಂಡು ಬಂತು. ಅದನ್ನು ಕಂಡು ಮನೆಯ ಯಜಮಾನರು ಪಟ್ಣಂ ಅವರನ್ನು ಸಾಧನೆಯನ್ನು ನಿಲ್ಲಿಸುವಂತೆ ಪ್ರಾರ್ಥಿಸಿದರಂತೆ, ಈ ಪ್ರಸಂಗದಿಂದ ತಿಳಿಯಬಹುದಾದ ಅಂಶವೆಂದರೆ, ಪಟ್ಣಂ ಅವರ ಶಾರೀರ ಎಷ್ಟು ಘನ ಗಂಭೀರ ವಾಗಿತ್ತೆಂಬುದು.

ಧಾರ್ಮಿಕ ತಳಹದಿ

ಇದುವರೆಗೆ ನಾವು ಪಟ್ಣಂ ಅವರನ್ನು ಸಂಗೀತದ ದೃಷ್ಟಿಯಿಂದ ನೋಡುತ್ತಾ ಬಂದಿದ್ದೇವೆ. ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನೂ ಪರಿಚಯ ಮಾಡಿಕೊಳ್ಳುವುದು ಅಗತ್ಯ. ಅವರು ಒಳ್ಳೆ ಆಚಾರಶೀಲರಾಗಿದ್ದರೆಂಬುದರಲ್ಲಿ ಸಂದೇಹವಿಲ್ಲ. ಸಂಧ್ಯಾವಂದನೆ, ದೇವಾತಾರ್ಚನೆ ಇತ್ಯಾದಿ ನಿತ್ಯಕರ್ಮಗಳನ್ನು ತಪ್ಪದೆ ಮಾಡುತ್ತಿದ್ದರು, ಸಂಗೀತಾ ಭ್ಯಾಸವೂ ನಿತ್ಯಕರ್ಮಗಳಲ್ಲಿ ಒಂದಾಗಿದ್ದು ಅದು ಕೇವಲ ಹಣ ಸಂಪಾದನೆಗೆ ಅಲ್ಲದೆ ಮೋಕ್ಷ ಸಾಧನೆಗೂ ಇರುವ ದಾರಿ ಎಂಬುದನ್ನು ಅವರು ಅರಿತವರಾಗಿದ್ದರು, ಇದಲ್ಲದೆ ಗಣಪತಿ ಉಪಾಸನೆಯನ್ನೂ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ, ಇದು ಒಂದು ಬಗೆಯ ವಿಶೇಷಪೂಜೆ, ಹೀಗೆ ಒಂದು ದೇವತೆಯನ್ನು ಅವಿಚ್ಛಿನ್ನವಾಗಿ ಧ್ಯಾನ, ಜಪ, ತಪಾದಿಗಳಿಂದ, ವರ್ಷವೆಲ್ಲ ಪೂಜಿಸಿ, ಗಣೇಶ ಚೌತಿಯಲ್ಲಿ ಎಂದಿಗಿಂತಲೂ ವೈಭವಯುತವಾಗಿ ಪೂಜೆ ಮಾಡುವುದು ಬಹಳ ಶ್ರೇಯಸ್ಕರವೆಂಬುದು ನಮ್ಮ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ, ಈ ಬಗ್ಗೆ ಉಪಾಸನೆಯಿಂದ ಆತ್ಮಬಲ ವೃದ್ಧಿಯಾಗುತ್ತದೆ, ದೈವಿಕವಾದ ಸಂಗೀತಕಲೆಗೆ ದೈವೀ ಸಂಪತ್ತೂ ಸೇರಿದಲ್ಲಿ ಅದರ ತೇಜಸ್ಸು ಹೆಚ್ಚುವುದು ಖಂಡಿತ. ಈ ಸತ್ಯಾಂಶವನ್ನು ಚೆನ್ನಾಗಿ ಮನಗಂಡವರಾದ್ದರಿಂದ ಪಟ್ಣಂ ಅವರು ತಮ್ಮ ಗಾಯಕವೃತ್ತಿಯನ್ನು ಧಾರ್ಮಿಕ ತಳಹದಿಯ ಮೇಲೆ ರೂಪಿಸಿಕೊಂಡರೆಂದರೆ ಆಶ್ಚರ್ಯ ವೇನಿಲ್ಲ, ಅಂತಹ ಗಾಯಕರು ಎಲ್ಲರ ಗೌರವಕ್ಕೂ ಪಾತ್ರರಾಗುತ್ತಾರೆ. ಪಟ್ಣಂ ಅವರಿಗೆ ಆ ಬಗ್ಗೆ ಗೌರವ ಸಂಪೂರ್ಣವಾಗಿ ಸಲ್ಲುತ್ತದೆ.