ಪಡವಲಕಾಯಿ ಹಾವಿನಂತೆ ಉದ್ದನಾಗಿರುತ್ತದೆ. ಪಡವಲ ಹಣ ತರುವಂತಹ ಬೆಳೆ. ಇದನ್ನು ವಾಣಿಜ್ಯವಾಗಿ, ವ್ಯಾಪಕವಾಗಿ ಬೆಳೆದು ಲಾಭ ಹೊಂದುವುದುಂಟು. ಇದರ ಕಾಯಿ ಉತ್ತಮ ತರಕಾರಿ.

ಪೌಷ್ಟಿಕ ಗುಣಗಳು: ಪಡವಲಕಾಯಿ ಪೌಷ್ಟಿಕ ಕಾಯಿಯಾಗಿವೆ. ಅವುಗಳಲ್ಲಿ ಶರೀರಕ್ಕೆ ಅಗತ್ಯವಿರುವ ಶರ್ಕರಪಿಷ್ಟ, ಪ್ರೊಟೀನ್, ಖನಿಜ ವಸ್ತುಗಳು ಹಾಗೂ ಜೀವಸತ್ವಗಳು ಸಾಕಷ್ಟಿರುತ್ತವೆ.

೧೦೦ ಗ್ರಾಂ ಪಡವಲಕಾಯಿಯಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ ೯೪.೬ ಗ್ರಾಂ
ಶರ್ಕರಪಿಷ್ಟ ೩.೩ ಗ್ರಾಂ
ಪ್ರೊಟೀನ್ ೦.೫ ಗ್ರಾಂ
ಕೊಬ್ಬು ೦.೩ ಗ್ರಾಂ
ಒಟ್ಟು ಖನಿಜ ಪದಾರ್ಥ ೦.೬ ಗ್ರಾಂ
ರಂಜಕ ೨೦ ಮಿ.ಗ್ರಾಂ
ಕ್ಯಾಲ್ಸಿಯಂ ೫೦ ಮಿ.ಗ್ರಾಂ
ಪೊಟ್ಯಾಷ್ ೩೪
’ಎ’ ಜೀವಸತ್ವ ೧೬೦
ರೈಬೋಪ್ಲೇವಿನ್ ೦.೦೬ ಮಿ.ಗ್ರಾಂ
ಥಯಮಿನ್ ೦.೦೪ ಗ್ರಾಂ
’ಸಿ’ ಜೀವಸತ್ವ ೨ ಮಿ.ಗ್ರಾಂ
ಆಕ್ಸಾಲಿಕ್ ಆಮ್ಲ ೧ ಮಿ.ಗ್ರಾಂ
ಕಬ್ಬಿಣ ೧.೧ ಮಿ.ಗ್ರಾಂ

ಔಷಧೀಯ ಗುಣಗಳು : ಇದರ ಸೇವನೆಯಿಂದ ಹಲವಾರು ಲಾಭಗಳಿವೆ. ಸ್ಥೂಲ ಶೀರರ ಇರುವವರು ಇದನ್ನು ಯಥೇಚ್ಛವಾಗಿ ಬಳಸಬೇಕು. ಇದರಲ್ಲಿ ಶೈತ್ಯಕಾರಕ ಗುಣಗಳಿವೆ ಹಾಗಾಗಿ ಶರೀರಕ್ಕೆ ತಂಪನ್ನುಂಟು ಮಾಡುತ್ತದೆ. ಬಲಹೀನತೆಯಿಂದ ನರಳುವವರು ಇದನ್ನು ಹೆಚ್ಚಾಗಿ ಸೇವಿಸಬೇಕು. ಇದರ ಎಲೆಗಳ ರಸ ಮತ್ತು ಅರಿಶಿನಗಳನ್ನು ಮಿಶ್ರ ಮಾಡಿ ಮೈಗೆ ಹಚ್ಚಿಕೊಂಡರೆ ಕಡಿತ ದೂರಗೊಳ್ಳುತ್ತದೆ. ಇದರ ಬೀಜ ಮತ್ತು ಬೇರುಗಳಲ್ಲಿ ಸಹ ಔಷಧೀಯ ಗುಣಗಳಿವೆ.

ಉಗಮ ಮತ್ತು ಹಂಚಿಕೆ : ಪಡವಲ ನಮ್ಮ ದೇಶದ್ದೇ; ಕೆಲವರ ಅಭಿಪ್ರಾಯದಲ್ಲಿ ಮಲೇಷ್ಯಾ ಸಹ ಇದರ ತವರೂರು ಆಗಿದೆ. ಈಗ ಜಗತ್ತಿನ ಹಲವಾರು ಕಡೆ ಇದರ ಬಳಕೆ ಇದೆ. ಭಾರತದಲ್ಲಿ ಎಲ್ಲಾ ಕಡೆ ಇದನ್ನು ಬೆಳೆಸಿ, ಬಳಸುತ್ತಾರೆ.

ಸಸ್ಯ ವರ್ಣನೆ : ಪಡವಲ ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ಬಳ್ಳಿ ಸಸ್ಯ. ಆಸರೆ ಇದ್ದರೆ ಮೇಲಕ್ಕೇರಬಲ್ಲದು, ಕಾಂಡ ಬಲಹೀನ, ಕವಲುಗಳು ಅನೇಕ. ಎಳಸಾಗಿರುವಾಗ ಹಸುರು ಬಣ್ಣವಿದ್ದು ಬಲಿತಂತೆಲ್ಲಾ ಕಂದು ಬಣ್ಣಕ್ಕೆ ಮಾರ್ಪಡುತ್ತದೆ. ಎಲೆಗಳಿಗೆ ಉದ್ದನಾದ ತೊಟ್ಟು ಇರುತ್ತದೆ. ಎಲೆಗಳು ಹಸ್ತದ ಆಕಾರವಿದ್ದು ಐದು ಮೂಲೆಗಳಿಂದ ಕೂಡಿರುತ್ತವೆ. ಅವುಗಳ ಬಣ್ಣ ಹಸುರು. ನುಲಿ ಬಳ್ಳಿಗಳು ಕವಲೊಡೆಯುತ್ತವೆ. ಹೂವು ಗೊಂಚಲುಗಳಲ್ಲಿ ಬಿಡುತ್ತವೆ. ಹೂದಳಗಳು ಬಹುವಾಗಿ ಒಡೆದಿದ್ದು ಆಕರ್ಷಕವಾಗಿರುತ್ತವೆ. ಬಣ್ಣ ಬಿಳುಪು, ಹೂವು ಏಕಲಿಂಗಿಗಳು. ಕಾಯಿ ಉದ್ದನಾಗಿ ದುಂಡಗಿದ್ದು ತುದಿಯತ್ತ ಚೂಪಾಗಿರುತ್ತವೆ. ಅವುಗಳ ಉದ್ದ ಮತ್ತು ದಪ್ಪಗಳಲ್ಲಿ ವ್ಯತ್ಯಾಸವಿರುತ್ತದೆ. ಕಾಯಿ ೩೦-೪೫ ಸೆಂ.ಮೀ. ಉದ್ದ ಹಾಗೂ ೫ ಸೆಂ.ಮೀ. ದಪ್ಪ. ಕೆಲವು ತಳಿಗಳು ೧ ರಿಂದ ೧.೫ ಮೀಟರ್ ಉದ್ದ ಹಾಗೂ ೭-೧೦ ಸೆಂ.ಮೀ. ದಪ್ಪ. ಕಾಯಿಗಳ ಬಣ್ಣದಲ್ಲಿಯೂ ಸಹ ವ್ಯತ್ಯಾಸ ಕಂಡುಬರುತ್ತದೆ. ಸಿಪ್ಪೆ ಬೆಳ್ಳಗಿದ್ದು ಹಸುರು ಪಟ್ಟಿಗಳಿರುತ್ತವೆ. ಪೂರ್ಣ ಹಣ್ಣಾದಾಗ ಹಳದಿ ಬಣ್ಣಕ್ಕೆ ಮಾರ್ಪಟ್ಟು, ಮೆತ್ತಗಾಗುತ್ತದೆ. ತಿರುಳು ರಸವತ್ತಾಗಿದ್ದು ಲೋಳೆ ಪದಾರ್ಥದಿಂದ ತುಂಬಿರುತ್ತದೆ. ಅದರಲ್ಲಿ ಬೀಜ ಹುದುಗಿರುತ್ತವೆ. ಬೀಜ ಮಾಸಲು ಬಿಳುಪು ಬಣ್ಣ, ಹಲ್ಲಿನಾಕಾರವಿರುತ್ತದೆ. ಅಂಚು ಕಚ್ಚುಗಳಿಂದ ಕೂಡಿದ್ದು ಬೀಜ ಸಿಪ್ಪೆ ಗಡುಸು.

ಹವಾಗುಣ : ಈ ಬೆಳಗೆ ಅಧಿಕ ಉಷ್ಣತೆ ಮತ್ತು ಆರ್ದ್ರತೆಗಳಿರುವ ಹವಾಗುಣ ಬೇಕು. ಮಳೆಗಾಲದಲ್ಲಿ ಫಸಲು ಹೆಚ್ಚಾಗಿರುತ್ತದೆಯಾದರೂ ರೋಗಗಳ ಬಾಧೆ ಜಾಸ್ತಿ. ಜೂನ್-ಜುಲೈನಲ್ಲಿ ಬಿತ್ತುವುದು ಸಾಮಾನ್ಯ.

ಭೂಗುಣ : ಇದಕ್ಕೆ ನೀರು ಬಸಿಯುವ ಮರಳು ಮಿಶ್ರಿತ ಗೋಡುಮಣ್ಣು ಅತ್ಯಂತ ಸೂಕ್ತವಿರುತ್ತದೆ. ಮಣ್ಣು ಫಲವತ್ತಾಗಿದ್ದರೆ ಲಾಭದಾಯಕ. ಮಣ್ಣಿನ ರಸಸಾರ ೭.೦ ಇರಬಹುದು.

ತಳಿಗಳು : ಈ ಬೆಳೆಯಲ್ಲಿ ತಳಿ ಅಭಿವೃದ್ಧಿ ಕಾರ್ಯ ಅಷ್ಟಾಗಿ ಆಗಿಲ್ಲ. ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯವು ಅಧಿಕ ಇಳುವರಿ ಕೊಡುವ ಹಾಗೂ ಉದ್ದ ಕಾಯಿಗಳಿಂದ ಕೂಡಿದ ತಳಿಯೊಂದನ್ನು ಉತ್ಪಾದಿಸಿ ಬೇಸಾಯಕ್ಕೆ ಬಿಡುಗಡೆ ಮಾಡಿದೆ. ಅಧಿಕ ಇಳುವರಿ ಕೊಡುವ ಹಾಗೂ ಉತ್ಕೃಷ್ಟ ಗುಣಗಳನ್ನು ಹೊಂದಿರುವ ತಳಿಗಳು ಬೇಕಾಗಿವೆ. ಅವುಗಳಲ್ಲಿ ಕೀಟ ಹಾಗೂ ರೋಗನಿರೋಧಕ ಸಾಮರ್ಥ್ಯವಿದ್ದರೆ ಇನ್ನೂ ಉತ್ತಮ.

ಪಡವಲದಲ್ಲಿ ಹೆಸರಿಸುವಂತಹ ತಳಿಗಳು ಕಡಿಮೆ. ಹಲವಾರು ಸ್ಥಳೀಯ ತಳಿಗಳು ಇವೆಯಾದರೂ ವಾಣಿಜ್ಯವಾಗಿ ಬೆಳೆಯುವುದಿಲ್ಲ. ವಾಣಿಜ್ಯವಾಗಿ ಬೆಳೆಯಲು ಹಾಗೂ ಅಧಿಕ ಉತ್ಪಾದನೆಗೆ ಸುಧಾರಿತ ತಳಿಗಳನ್ನೇ ಬಿತ್ತಿ ಬೆಳೆಯಬೇಕು.

ಸುಧಾರಿತ ತಳಿಗಳಲ್ಲಿ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆಯಾದ ಸಿಓ-೧ ಪಡವಲ ತಳಿ ಬಹುಮುಖ್ಯವಾದುದು. ಇದು ಬಹುಬೇಗ ಸುಮಾರು ೯೦ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಬಿಡಿಕಾಯಿಗಳು ಸುಮಾರು ೧.೫ ಮೀಟರ್ ಉದ್ದ, ೫೦೦ ರಿಂದ ೭೫೦ ಗ್ರಾಂ ತೂಕವಿರುತ್ತವೆ. ಬಣ್ಣ ಹಸುರು. ಉದ್ದಕ್ಕೆ ಬಿಳಿಪಟ್ಟೆಗಳಿರುತ್ತವೆ. ತಿರುಳು ಮೃದು, ತೆಳು ಹಸುರು, ಪ್ರತಿ ಬಳ್ಳಿ ೧೦ ರಿಂದ ೧೨ ಕಾಯಿಗಳನ್ನು (೪-೫ ಕಿ.ಗ್ರಾಂ) ಉತ್ಪಾದಿಸಬಲ್ಲದು. ಹೆಕ್ಟೇರಿಗೆ ೧೮ ಟನ್ನುಗಳಷ್ಟು ಅತ್ಯಧಿಕ ಇಳುವರಿ ಕೊಡಬಲ್ಲದು.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ೧.೫-೨.೫ ಮೀಟರ್ ಅಂತರದಲ್ಲಿ ದಿಂಡು ಮತ್ತು ಕಾಲುವೆಗಳನ್ನು ಸಿದ್ಧಗೊಳಿಸಿ ಪೂರ್ಣ ಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಮತ್ತು ಪೂರ್ಣ ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಕಾಲುವೆಗಳಲ್ಲಿ ಹರಡಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು. ಸಾಲಿನಲ್ಲಿ ೬೦ ರಿಂದ ೧೨೦ ಸೆಂ.ಮೀ. ಗೊಂದರಂತೆ ಆಳಕ್ಕೆ ಬಿತ್ತಬೇಕು. ಬಿತ್ತನೆಗೆ ಮೇ-ಜೂನ್ ಸೂಕ್ತ ಕಾಲ. ಹೆಕ್ಟೇರಿಗೆ ೫ ರಿಂದ ೬ ಕಿ.ಗ್ರಾಂ ಬೀಜ ಬೇಕಾಗುತ್ತದೆ. ಕೆಲವರು ಈ ಅಂತರದಲ್ಲಿ ಗುಂಡಗಿನ ಪಾತಿಗಳನ್ನು ಮಾಡಿ ತಲಾ ೨-೩ ಬೀಜ ಬಿತ್ತುವುದುಂಟು.

ಗೊಬ್ಬರ : ಹೆಕ್ಟೇರಿಗೆ ೨೫ ಟನ್ ತಿಪ್ಪೆಗೊಬ್ಬರ, ೫೦ ಕಿ.ಗ್ರಾಂ ಸಾರಜನಕ, ೫೦ ಕಿ.ಗ್ರಾಂ ರಂಜಕ ಮತ್ತು ೩೮ ಕಿ.ಗ್ರಾಂ ಪೊಟ್ಯಾಷ್ ರಸಗೊಬ್ಬರಗಳನ್ನು ಕೊಡಬೇಕು.

ನೀರಾವರಿ : ಮೊಳಕೆಯ ಹಂತದಲ್ಲಿ ಕಡಿಮೆ ನೀರು ಕೊಟ್ಟರೆ ಒಳ್ಳೆಯದು. ಸಸಿಗಳು ಬೆಳೆದು ದೊಡ್ಡವಾದಂತೆಲ್ಲಾ ಅವುಗಳಿಗೆ ಹೆಚ್ಚಿನ ತೇವಾಂಶ ಬೇಕಾಗುತ್ತದೆ. ಹದವರಿತು ನೀರು ಕೊಡುವುದು ಬಹುಮುಖ್ಯ.

ಆಸರೆ ಒದಗಿಸುವುದು : ಸಸಿಗಳು ಒಂದೆರಡು ವಾರಗಳ ವಯಸ್ಸಿನವಿರುವಾಗ ಚಪ್ಪರ ನಿರ್ಮಿಸಬೇಕು. ನೆಲಮಟ್ಟದಿಂದ ೨ ರಿಂದ ೨.೫ ಮೀಟರ್ ಎತ್ತರವಿರಬೇಕು. ಬಳ್ಳಿಗಳು ನುಲಿಬಳ್ಳಿಗಳ ನೆರವಿನಿಂದ ಮೇಲಕ್ಕೆ ಬೆಳೆದು ಚಪ್ಪರದ ಉದ್ದಗಲಕ್ಕೆ ಹಬ್ಬುತ್ತವೆ. ಆಸರೆ ಒದಗಿಸುವುದರಿಂದ ಇಳುವರಿ ಹೆಚ್ಚುವುದಲ್ಲದೆ ಫಸಲಿನ ಗುಣಮಟ್ಟ ಉತ್ತಮವಿರುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಬಿತ್ತನೆಯಾದ ಒಂದು ತಿಂಗಳ ನಂತರ ಉಳಿದ ಅರ್ಧ ಭಾಗ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಟ್ಟು ಬುಡಗಳಿಗೆ ಮಣ್ಣು ತಳ್ಳಬೇಕು. ಚಪ್ಪರದ ನೆರಳು ಇರುವಾಗ ಕಳೆಗಳು ಬೆಳೆಯಲಾರವು. ಹೀಚುಕಾಯಿ ೧೦ ರಿಂದ ೨೫ ಸೆಂ.ಮೀ. ಉದ್ದಕ್ಕೆ ಬೆಳೆದಾಗ ಭಾರ ಕಟ್ಟಿದರೆ ನೆಟ್ಟಗೆ ಬೆಳೆಯುತ್ತವೆ. ಬೆಳೆಯ ಮೇಲೆ ಸೂಕ್ತ ಚೋದಕಗಳನ್ನು ಸಿಂಪಡಿಸಿದರೆ ಅಧಿಕ ಸಂಖ್ಯೆಯಲ್ಲಿ ಕಾಯಿಕಚ್ಚಿ, ಫಸಲು ಹೆಚ್ಚುತ್ತದೆ. ಸೋರೆ ಬೆಳೆಗೆ ಸೂಚಿಸಿದ ಚೋದಕಗಳನ್ನೇ ಇದರಲ್ಲಿ ಸಹ ಬಳಸಬಹುದು.

ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ೧೦ ವಾರಗಳ ನಂತರ ಕಾಯಿಗಳನ್ನು ಕಿತ್ತು ಬಳಸಬಹುದು. ಕೊಯ್ಲುಗಾಲ ಸುಮಾರು ಒಂದು ತಿಂಗಳವರೆಗೆ ಮುಂದುವರೆಯುತ್ತದೆ. ಎಳಸಾಗಿದ್ದಷ್ಟೂ ನಾರು ಇಲ್ಲದೆ ರುಚಿಯಾಗಿರುತ್ತದೆ. ಕಾಯಿಗಳನ್ನು ತೊಟ್ಟು ಸಮೇತ ಕೊಯ್ಲು ಮಾಡಬೇಕು. ಅವು ಮುರಿಯದಂತೆ ಜಾಗ್ರತೆ ವಹಿಸಬೇಕು. ಬೆಳೆ ಚೆನ್ನಾಗಿ ಫಲಿಸಿದರೆ ಹೆಕ್ಟೇರಿಗೆ ೧೦ ಟನ್ನುಗಳಿಗೂ ಮೇಲ್ಪಟ್ಟು ಇಳುವರಿ ಸಾಧ್ಯ.

ಕೀಟ ಮತ್ತು ರೋಗಗಳು : ಕುಂಬಳ ಮತ್ತು ಸೋರೆಗಳಲ್ಲಿದ್ದಂತೆ.

ಬೀಜೋತ್ಪಾದನೆ : ಪಡವಲ ಪರಕೀಯ ಪರಾಗಸ್ಪರ್ಶದ ಬೆಳೆ. ಚೆನ್ನಾಗಿ ಫಲಿಸಿದರೆ ಹೆಕ್ಟೇರಿಗೆ ಸುಮಾರು ೧೦೦ ಕಿ.ಗ್ರಾಂ ಬೀಜ ಸಿಗುತ್ತದೆ.

* * *